ಸಚಿವರಿಗೆ ಬೇಕಿದೆ ಸೌಜನ್ಯ ಬೆಳಗಾವಿಯಲ್ಲಿ ಸಚಿವರೊಬ್ಬರು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರ ಮೇಲೆ ಕೈ ಮಾಡಿರುವ ಆರೋಪ ಕೇಳಿ ಬಂದಿದೆ. ಅದೇ ರೀತಿ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಪುರಸಭೆಯ ಆಯುಕ್ತರನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿರುವ ವರದಿಗಳಿವೆ. ಸಚಿವರುಗಳ ಈ ವರ್ತನೆ ಸಲ್ಲದ ನಡವಳಿಕೆ. ಈ ಇಬ್ಬರು ಸಚಿವರುಗಳು ಅಧಿಕಾರಿಗಳ ಮೇಲೆ ಕೈ ಮಾಡುವುದು ಮತ್ತು ಮನಸ್ಸಿಗೆ ಬಂದಂತೆ ನಿಂದಿಸುವುದು ಹೊಸದೇನಲ್ಲ. ಈ ಹಿಂದೆಯೂ ಇಂತಹ ಪ್ರಕರಣಗಳು ನಡೆದಿವೆ. ಇವರಂತೆಯೇ ಈ ಹಿಂದೆಯೂ ಕೆಲವು ಸಚಿವರು ಅಧಿಕಾರಗಳ ಮೇಲೆ ಇದೇ ಪ್ರತಾಪವನ್ನು ತೋರಿದ್ದಾರೆ. ಕರ್ತವ್ಯ ಲೋಪ ಮಾಡುವ ಅಧಿಕಾರಿಗಳ ವಿರುದ್ಧ ಸೇವಾ ನಿಯಮಾವಳಿಗಳ ಮೂಲಕ ಕ್ರಮ ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ.ಅಂತಹವರ ವಿರುದ್ಧ ಕ್ರಮಕ್ಕೆ ಇಲಾಖೆಯ ಮುಖ್ಯಸ್ಥರಿಗೆ ಆದೇಶಿಸಬಹುದು. ಆದರೆ, ವಿಧಾನಸೌಧದಲ್ಲಿ ಕುಳಿತು ಆಡಳಿತ ನಡೆಸುವ ಮತ್ತು ವಿಧಾನ ಮಂಡಲದಲ್ಲಿ ಕಾಯ್ದೆ ರೂಪಿಸುವವರು ತಾವೇ ಕಾನೂನನ್ನು ಕೈಗೆತ್ತಿಕೊಳ್ಳುವುದು ಮತ್ತು ಅವಾಚ್ಯ ಪದಗಳಿಂದ ನಿಂದಿಸುವುದು ಅಪರಾಧ. ಬಾಯಿ ಜೋರಾಗಿದೆ ಎಂದು ನೌಕರ ಸಿಬ್ಬಂದಿಯನ್ನು ಬೈಯುವ ಮೂಲಕ ತಾವು ದಕ್ಷ ಸಚಿವರೆಂದು ತೋರಿಸಿಕೊಳ್ಳಬೇಕೆನ್ನುವ ಚಪಲ ಕೆಲವರಿಗೆ ಇದ್ದಂತಿದೆ. ಇಂತಹ ವರ್ತನೆ ಅವಿವೇಕತನದಿಂದ ಕೂಡಿದ್ದು. ನಿಜ. ಹಲವು ಕಡೆ ಅಧಿಕಾರಶಾಹಿ ಜಡ್ಡುಗಟ್ಟಿ ಹೋಗಿದೆ. ಯಾರು ಏನೇ ಹೇಳಿದರೂ ಅವರು ಬದಲಾಗುವುದಿಲ್ಲ. ಮನುಷ್ಯರಿಗೆ ಇರಬೇಕಾದ ಸಹಜ ಸೂಕ್ಷ್ಮವನ್ನು ಅವರು ಕಳೆದುಕೊಂಡಿರುತ್ತಾರೆ. ಇಂತಹವರಿಗೆ ಬುದ್ಧಿ ಕಲಿಸಲು ಬೈಯುವುದು ಮತ್ತು ಕೈ ಮಾಡುವುದು ಪಾಳೇಗಾರಿಕೆ ಪ್ರವೃತ್ತಿ. ಆದರೆ ಜನತಂತ್ರದಲ್ಲಿ ಇದಕ್ಕೆಲ್ಲಾ ಅವಕಾಶವಿಲ್ಲ. ತಪ್ಪು ಮಾಡುವ ಸಿಬ್ಬಂದಿಯನ್ನು ಶಿಕ್ಷಿಸಲು ನಮ್ಮ ಕಾನೂನು ವ್ಯವಸ್ಥೆಯೇ ಸಮರ್ಥವಾಗಿದೆ. ಸಚಿವರಾದವರು ಮೊದಲು ನಮ್ಮ ಕಾಯ್ದೆ ಕಾನೂನುಗಳನ್ನು ತಿಳಿದುಕೊಂಡು ಅವುಗಳನ್ನು ಗೌರವಿಸುವುದನ್ನು ಕಲಿಯಬೇಕು. ಎರಡು ಮೂರು ದಶಕಗಳ ಹಿಂದೆ ರಾಜ್ಯದ ಬಹುತೇಕ ರಾಜಕಾರಣಿಗಳಿಗೆ ವಿಶೇಷವಾಗಿ ಸಚಿವರಾಗಿದ್ದವರಿಗೆ ಆಡಳಿತದ ಬಗೆಗೆ ಹೆಚ್ಚಿನ ಕಾನೂನು ತಿಳುವಳಿಕೆ ಇತ್ತು. ಅವರು ತಮ್ಮ ಕಾನೂನು ಅಸ್ತ್ರದಿಂದಲೇ ಅಧಿಕಾರಶಾಹಿಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಿದ್ದರು. ಆದರೆ ಅಂತಹ ತಿಳುವಳಿಕೆ ಇರುವವರು ಇತ್ತೀಚಿನ ಮಂತ್ರಿ ಮಂಡಲಗಳಲ್ಲಿ ಕಾಣದಿರುವುದು ದುರದೃಷ್ಟಕರ. ಜನ ಸಾಮಾನ್ಯರು ಕಾಯ್ದೆ ಕಾನೂನಿಗೆ ಹೆದರಿ ನಡೆದರೆ ನಮ್ಮ ಈಗಿನ ಜನಪ್ರತಿನಿಧಿಗಳು ಕಾನೂನು ಮಾರ್ಗವನ್ನು ಬಿಟ್ಟು ಅಡ್ಡ ಮಾರ್ಗವನ್ನೇ ಹುಡುಕಿ ಅದರಲ್ಲಿಯೇ ರಾಜಾರೋಷವಾಗಿ ನಡೆಯುವ ಮೂಲಕ ಆಡಳಿತ ವ್ಯವಸ್ಥೆ ಹಳಿತಪ್ಪುವಂತೆ ಮಾಡಿದ್ದಾರೆ. ಇದು ದುರದೃಷ್ಟಕರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.