ಮಠಾಧೀಶರಿಗೆ ಸಲ್ಲದ ಉಸಾಬರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನವೇ ಆಧಾರ. ಸಂವಿಧಾನದ ಆಶಯದಂತೆ ಆಡಳಿತ ವ್ಯವಸ್ಥೆ ಜನತೆಯ ಹಿತಕ್ಕಾಗಿ ಶ್ರಮಿಸಬೇಕು. ಜನರಿಗೆ ಉಪಯುಕ್ತವಾಗುವ ಕಾನೂನುಗಳನ್ನು ಜನರಿಂದ ಆಯ್ಕೆಯಾದ ಜನ ಪ್ರತಿನಿಧಿಗಳ ವೇದಿಕೆಗಳಾದ ಸಂಸತ್ತು ಮತ್ತು ರಾಜ್ಯ ವಿಧಾನ ಮಂಡಲಗಳು ರಚಿಸಬೇಕು. ಇಂಥ ಕಾನೂನುಗಳನ್ನು ಶಾಸನಬದ್ಧವಾಗಿ ನೇಮಕಗೊಂಡ ಕಾರ್ಯಾಂಗವು ಜಾರಿಗೊಳಿಸಬೇಕು. ಜನಪ್ರತಿನಿಧಿಗಳ ಶಾಸಕಾಂಗ ಮತ್ತು ನೌಕರ ಸಿಬ್ಬಂದಿಯ ಕಾರ್ಯಾಂಗಗಳಲ್ಲಿ ಲೋಪಗಳಾದಾಗ ಅವೆರಡನ್ನು ಸರಿದಾರಿಗೆ ತರುವ ಕೆಲಸವನ್ನು ನ್ಯಾಯಾಂಗ ಮಾಡಬೇಕು. ವಿವಿಧ ಬಗೆಯ ಮತ, ಧರ್ಮ, ಜಾತಿ, ನಂಬಿಕೆ, ಸಾಮಾಜಿಕ ಜೀವನ ಪದ್ಧತಿ, ಭಕ್ತಿ, ಶ್ರದ್ಧೆ ಇರುವ ವೈವಿಧ್ಯಮಯ ಸ್ವರೂಪದ ಸಂಕೀರ್ಣವಾದ ಸಮಾಜದಲ್ಲಿ ಕಾನೂನಿನ ಎದುರು ಎಲ್ಲರೂ ಸಮಾನರು ಎಂಬುದು ಸಂವಿಧಾನವು ನೀಡಿದ ಅವಕಾಶ. ಸರ್ವ ಸಮಾನತೆಯ ಸಮಾಜವಾದಿ ಆಶಯ ಪ್ರಜಾಪ್ರಭುತ್ವ ಆಡಳಿತದ ಸೂತ್ರ. ಜನಪ್ರತಿನಿಧಿಗಳಲ್ಲಿ ಬಹುಮತ ಇರುವ ವ್ಯಕ್ತಿ ರಾಜ್ಯದ ಆಡಳಿತ ಮುಖ್ಯಸ್ಥನಾಗಿ ಸಂವಿಧಾನದ ರಕ್ಷಣೆಗಾಗಿ ಇರುವ ರಾಜ್ಯಪಾಲರ ವಿಶ್ವಾಸ ಇರುವವರೆಗೆ ಅಧಿಕಾರ ನಡೆಸುವಂಥ ರಾಜಕೀಯ ವ್ಯವಸ್ಥೆಯೇ ಪ್ರಜಾಸತ್ತೆ. ಇಂಥ ಪ್ರಜಾಸತ್ತೆಯ ಸುಗಮ ನಿರ್ವಹಣೆಗಾಗಿ ರಾಜಕೀಯ ಪಕ್ಷಗಳೂ, ಅವುಗಳನ್ನು ನಿಯಂತ್ರಿಸುವ ಕಾನೂನುಗಳೂ ಅಸ್ತಿತ್ವದಲ್ಲಿವೆ. ಆರು ದಶಕಗಳಿಂದ ಇಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂವಿಧಾನಕ್ಕೆ ಹೊರತಾದ ಯಾವ ಶಕ್ತಿಗಳೂ ರಾಜ್ಯಾಡಳಿತವನ್ನು ನಿಯಂತ್ರಿಸುವುದಕ್ಕೆ ದೇಶದ ಕಾನೂನಿನಲ್ಲಿ ಅವಕಾಶವೇ ಇಲ್ಲ. ಪ್ರಜಾಸತ್ತೆಯ ವ್ಯವಸ್ಥೆಯಲ್ಲಿ ಪ್ರಾಥಮಿಕವೆನಿಸಿದ ಈ ಅಂಶಗಳ ಪ್ರಸ್ತಾಪಕ್ಕೆ ಕಾರಣವಾದದ್ದು ಈಚೆಗೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ನಡೆದ 22ನೇ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನದಲ್ಲಿ ಭಾಗವಹಿಸಿದ ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರ ಮುಂದುವರಿಕೆಗೆ ನೀಡಿದ ಭರವಸೆ. ಇದು, ಭ್ರಷ್ಟಾಚಾರದ ಆರೋಪಗಳಿಗಾಗಿ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಎದುರಿಸುತ್ತಾ, ಪಕ್ಷದ ಆಂತರಿಕ ಭಿನ್ನಮತದ ನಡುವೆ ಅಧಿಕಾರದಲ್ಲಿ ಮುಂದುವರಿದಿರುವ ಮುಖ್ಯಮಂತ್ರಿ ಅವರನ್ನು, ತಮ್ಮ ಜಾತಿಗೆ ಸೇರಿದವರೆಂಬ ಕಾರಣಕ್ಕೆ ಬೆಂಬಲ ನೀಡುವ ಮೂಲಕ ತಾವು ಪ್ರತಿನಿಧಿಸುವ ಧಾರ್ಮಿಕ ಸಂಸ್ಥೆಗಳ ಸಮಾಜ ಸುಧಾರಣಾ ಆಶಯಕ್ಕೆ ವಿರುದ್ಧವಾದ ನಡವಳಿಕೆ. ಜನತೆಯ ನಿಷ್ಕಾಮ ದೇಣಿಗೆಯಿಂದ ಕಾರ್ಯನಿರ್ವಹಿಸುವ ಯಾವುದೇ ಧರ್ಮಪೀಠ, ತನು ಮನ ಧನಗಳಿಂದ ಸಮಾಜದಲ್ಲಿ ಅಧ್ಯಾತ್ಮ ಭಾವವನ್ನು ನೆಲೆಗೊಳಿಸಬೇಕೆಂಬ ಜನತೆಯ ನಿರೀಕ್ಷೆಗೆ ವ್ಯತಿರಿಕ್ತವಾದ ವರ್ತನೆ. ಕಾಯಾ ವಾಚಾ ಮನಸಾ ಸಮಾಜೋದ್ಧಾರದ ಸಂದೇಶವನ್ನು ಸಾರುವ ಧರ್ಮಪೀಠಗಳ ಮುಖಂಡರು, ವ್ಯಕ್ತಿಯೊಬ್ಬರ ರಾಜಕೀಯ ಸ್ಥಾನಕ್ಕಾಗಿ ಬೆಂಬಲ ನೀಡುವ ಹೇಳಿಕೆ ಈ ಧರ್ಮಪೀಠಗಳು ಲೌಕಿಕ ಅನುಕೂಲಕ್ಕಾಗಿ ಯಾವ ಹಂತಕ್ಕಾದರೂ ಇಳಿಯಬಲ್ಲವು ಎಂಬುದನ್ನಷ್ಟೇ ತೋರಿಸುತ್ತದೆ. ರಾಜಕೀಯ ವ್ಯವಸ್ಥೆ ಜನರಿಂದ ಆಯ್ಕೆಯಾದವರಿಂದ ನಡೆಯುವ ಪ್ರಕ್ರಿಯೆ. ಇದರಲ್ಲಿ ಧರ್ಮಪೀಠಗಳಿಗೆ ಯಾವ ಪಾತ್ರವೂ ಇಲ್ಲ. ಶತಮಾನಗಳ ಕಾಲದಿಂದ ಸಕಲ ಜೀವರಾಶಿಗಳಲ್ಲಿ ಲೇಸನ್ನು ಕಂಡಂಥ ಉದಾರ ಚಿಂತನೆಯನ್ನು ಹೊಂದಿದ್ದ ಧರ್ಮಪೀಠಗಳು ಲೌಕಿಕ ಲಾಭಕ್ಕಾಗಿ ಸಂವಿಧಾನಕ್ಕೆ ಹೊರತಾದ ಅಧಿಕಾರ ಕೇಂದ್ರಗಳಾಗಲು ನಡೆಸಿರುವ ಇಂಥ ಕಸರತ್ತು ಅಪ್ರಸ್ತುತ. ಧರ್ಮಪೀಠಗಳು ಸಮಾಜದಲ್ಲಿ ಧಾರ್ಮಿಕತೆ ನೆಲೆಗೊಳ್ಳುವಂತೆ ಮಾಡುವ ತಮ್ಮ ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು ರಾಜಕೀಯ ಉಸಾಬರಿಗೆ ಇಳಿಯುವುದು ಅನವಶ್ಯಕ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.