ರೈಲುಗಳಲ್ಲಿ ಹೆಚ್ಚಿದ ದರೋಡೆ ದೂರದ ಪ್ರಯಾಣಕ್ಕೆ ಜನರು ರೈಲನ್ನೇ ಅವಲಂಬಿಸುತ್ತಾರೆ. ರೈಲು ಪ್ರಯಾಣ ದರ ಕಡಿಮೆ ಮತ್ತು ಸುರಕ್ಷಿತ ಎನ್ನುವ ನಂಬಿಕೆ ಜನರದ್ದು. ಬೇರೆ ಬೇರೆ ರಾಜ್ಯಗಳ ನಗರ ಮತ್ತು ಪಟ್ಟಣಗಳಿಗೆ ಹೋಗಲು ಜನಸಾಮಾನ್ಯರಿಗೆ ರೈಲು ಬಿಟ್ಟರೆ ಬೇರೆ ದಾರಿಯಿಲ್ಲ. ಅವರಿಗೆಲ್ಲ ವಿಮಾನ ಸಂಚಾರ ಕನಸಿನ ಮಾತು. ಹಾಗಾಗಿ ದೇಶದಾದ್ಯಂತ ಲಕ್ಷಾಂತರ ಜನರು ರೈಲನ್ನೇ ಅವಲಂಬಿಸುವುದು ಅನಿವಾರ್ಯ. ಆದರೆ ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ರಾತ್ರಿ ವೇಳೆಯ ರೈಲು ಪ್ರಯಾಣ ಪ್ರಾಣಕ್ಕೇ ಕುತ್ತು ತರುತ್ತಿರುವುದು ಆತಂಕಕಾರಿ. ದೂರದ ರೈಲುಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿರುವುದು ಗಾಬರಿ ಉಂಟು ಮಾಡಿದೆ. ಕೇಂದ್ರ ಸರ್ಕಾರದ ನೌಕರಿಗಾಗಿ ಪರೀಕ್ಷೆ ಬರೆಯಲು ಲಖನೌದಿಂದ ದೆಹಲಿಗೆ ರೈಲು ಪ್ರಯಾಣ ಮಾಡುತ್ತಿದ್ದ ರಾಷ್ಟ್ರೀಯ ಫುಟ್‌ಬಾಲ್ ಮತ್ತು ವಾಲಿಬಾಲ್ ಆಟಗಾರ್ತಿ ಅರುಣಿಮಾ ಸಿನ್ಹಾ ದರೋಡೆಕೋರರ ದಾಳಿಯಿಂದ ಕಾಲು ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ರಾತ್ರಿ ಸಂಚರಿಸುವ ರೈಲುಗಳಲ್ಲಿ ದಾಳಿ ನಡೆಯುವುದು ಮಾಮೂಲಿ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ರಾಜ್ಯಗಳಲ್ಲಿ ಸಂಚರಿಸುವ ರೈಲುಗಳಲ್ಲಿಯೂ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಅರಸೀಕೆರೆಯಿಂದ ಹುಬ್ಬಳ್ಳಿಗೆ ಹೋಗಲು ರೈಲು ಹತ್ತಿದ ದಂಪತಿಯ ಮೇಲೆ ಇದೇ ಬಗೆಯ ದರೋಡೆ ನಡೆದಿತ್ತು. ದರೋಡೆಗೆ ಒಳಗಾದ ಮಹಿಳೆಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ನೂಕಲಾಗಿತ್ತು. ಇದೀಗ ಬುಧವಾರ ರಾತ್ರಿ ಚೆನ್ನೈನಿಂದ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕರ ದರೋಡೆ ನಡೆದು ಚಿನ್ನ ಮತ್ತು ಹನ್ನೊಂದು ಲಕ್ಷ ರೂಪಾಯಿ ನಗದನ್ನು ದೋಚಲಾಗಿದೆ. ರೈಲುಗಳಲ್ಲಿ ಕೇವಲ ದರೋಡೆಯಲ್ಲದೆ, ಕಳ್ಳತನ, ಅಪಹರಣ ಮತ್ತು ಅತ್ಯಾಚಾರ ಪ್ರಕರಣಗಳೂ ಹೆಚ್ಚುತ್ತಿವೆ. ಹಾಗೆಯೇ ರೈಲು ನಿಲ್ದಾಣಗಳಲ್ಲೂ ಇದೇ ರೀತಿಯ ಪ್ರಕರಣಗಳು ಘಟಿಸುತ್ತಿವೆ. ಪ್ರಯಾಣಿಕರ ಮತ್ತು ರೈಲುಗಳ ಸುರಕ್ಷತೆಗಾಗಿ ರೈಲ್ವೆ ಪೊಲೀಸ್ ಸಿಬ್ಬಂದಿಯೇ ಇದೆ. ಜೊತೆಗೆ ಸ್ಥಳೀಯ ಪೊಲೀಸರ ನೆರವು ಇದೆ. ಪೊಲೀಸ್ ಸಿಬ್ಬಂದಿ ಇದ್ದೂ ದರೋಡೆ ನಡೆಯುತ್ತಿರುವುದನ್ನು ಗಮನಿಸಿದರೆ ಅವರ ದಕ್ಷತೆಯನ್ನು ಸಂಶಯದಿಂದ ನೋಡುವಂತಾಗಿದೆ. ಬೆಂಗಳೂರು ವಿಭಾಗದಲ್ಲಿ ಈ ತಿಂಗಳು ಎರಡು ದರೋಡೆ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ರಾತ್ರಿ ಹತ್ತು ಗಂಟೆಯ ಮೇಲೆ ಬೆಂಗಳೂರಿಗೆ ಬರುವ ಮತ್ತು ಹೊರಡುವ ಎಲ್ಲ ರೈಲುಗಳಿಗೆ ರೈಲ್ವೆ ಸುರಕ್ಷತಾ ಪಡೆಯ ಸಿಬ್ಬಂದಿಯನ್ನು ನೇಮಿಸಲು ನಿರ್ಧರಿಸಿರುವುದು ಶ್ಲಾಘನೀಯ. ಈ ಕಾರ್ಯ ಈ ಹಿಂದೆಯೇ ಆಗಬೇಕಿತ್ತು. ದರೋಡೆಕೋರರ ಮೇಲೆ ಕಣ್ಗಾವಲಿದ್ದು ಅವರನ್ನು ಸಮರ್ಥವಾಗಿ ಎದುರಿಸುವಂತಹ ಸಿಬ್ಬಂದಿಯ ನೇಮಕ ಮಾಡಬೇಕು. ಹೆಚ್ಚು ಜನರು ರೈಲನ್ನೇ ಅವಲಂಬಿಸುವುದರಿಂದ ಇನ್ನಾದರೂ ರೈಲು ಪ್ರಯಾಣ ಸುರಕ್ಷಿತ ಎನ್ನುವ ಭಾವನೆ ಉಂಟು ಮಾಡುವತ್ತ ರೈಲ್ವೆ ಇಲಾಖೆ ಗಮನ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.