ಅನಾಗರಿಕ ನ್ಯಾಯಪದ್ಧತಿ ಉತ್ತರ ಭಾರತದ ಕೆಲವೆಡೆ, ಅದರಲ್ಲಿಯೂ ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ‘ಕುಟುಂಬದ ಗೌರವ’ ರಕ್ಷಣೆಯ ಹೆಸರಲ್ಲಿ ವಿವಾಹಿತರ ಹತ್ಯೆ ನಡೆಸುವ ‘ಖಾಪ್ ಪಂಚಾಯತ್’ಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಈ ‘ಅರಣ್ಯನ್ಯಾಯ’ ಪದ್ಧತಿಯ ಅಂತ್ಯದ ಭರವಸೆ ಮೂಡಿದೆ. ಒಂದೇ ಗೋತ್ರಕ್ಕೆ ಸೇರಿದವರು ಪರಸ್ಪರ ಪ್ರೀತಿಸಿ ಮದುವೆಯಾದರೆ ಅವರನ್ನು ಕುಟುಂಬ ಗೌರವ ರಕ್ಷಣೆಯ ಹೆಸರಲ್ಲಿ ಹತ್ಯೆ ನಡೆಸುವಂಥ ಅನಾಗರಿಕ ನ್ಯಾಯಪದ್ಧತಿ ಈಚಿನ ವರ್ಷಗಳಲ್ಲಷ್ಟೆ ಬೆಳಕಿಗೆ ಬರುತ್ತಿದೆ. ಈ ಅನಿಷ್ಟ ಪದ್ಧತಿಯನ್ನು ಊಳಿಗಮಾನ್ಯ ಮನಃಸ್ಥಿತಿಯ ಸಂಕೇತವೆಂದು ಬಣ್ಣಿಸಿರುವ ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಖಟ್ಜು ಮತ್ತು ಜ್ಞಾನ ಸುಧಾ ಮಿಶ್ರ ಅವರ ಸಂವಿಧಾನ ಪೀಠ, ಕಾನೂನುಬಾಹಿರವೂ, ಬರ್ಬರವೂ ಆದ ಈ ‘ನ್ಯಾಯ ಪಂಚಾಯಿತಿ’ಯಲ್ಲಿ ಪಾಲ್ಗೊಳ್ಳುವವರು ಉಗ್ರ ಶಿಕ್ಷೆಗೆ ಅರ್ಹರು ಎಂದು ಸಾರಿದೆ. ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ ಪರಸ್ಪರ ಒಪ್ಪಿ ಮದುವೆಯಾಗುವವರ ವೈಯಕ್ತಿಕ ಬದುಕಿನಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಅಧಿಕಾರವಿಲ್ಲ ಎಂಬುದನ್ನು ಸಂವಿಧಾನಪೀಠ ಸ್ಪಷ್ಟಪಡಿಸಿದೆ. ಸಾಮಾಜಿಕ ಕಟ್ಟಳೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಇಂಥ ದುಷ್ಕರ್ಮಿಗಳ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸರು ಕ್ರಿಮಿನಲ್ ಮೊಕದ್ದಮೆ ಹೂಡಬೇಕು; ‘ಖಾಪ್ ಪಂಚಾಯತ್’ ಕುರಿತ ಮಾಹಿತಿ ಇದ್ದರೂ ‘ಮರ್ಯಾದಾ ಹತ್ಯೆ’ಯ ಪ್ರಕರಣಗಳನ್ನು ತಡೆಯದಿದ್ದರೆ ಅದಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಅಮಾನತು ಮಾಡಿ ಕ್ರಮ ಜರುಗಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಹಿಂದುಳಿದ ಜಾಟ್ ಸಮುದಾಯದಲ್ಲಿ ಪರಂಪರೆಯ ಹೆಸರಿನಲ್ಲಿ ಉಳಿದುಕೊಂಡು ಬಂದಿರುವ ಈ ಕ್ರೂರ ನ್ಯಾಯಪದ್ಧತಿ ನಡೆಸುವ ‘ಮರ್ಯಾದಾ ಹತ್ಯೆ’, ಆಪರಾಧ ಸಂಹಿತೆಯಲ್ಲಿ ಸೇರ್ಪಡೆಯಾಗಿಲ್ಲದಿರುವುದೇ ‘ಖಾಪ್ ಪಂಚಾಯತ್’ಗಳ ವಿರುದ್ಧ ಯಾವುದೇ ಕಾನೂನು ಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಇದಕ್ಕಾಗಿಯೇ ಭಾರತೀಯ ಅಪರಾಧ ಸಂಹಿತೆಯಲ್ಲಿ ತಿದ್ದುಪಡಿ ತರಲು ಕೇಂದ್ರ ಸಚಿವರ ತಂಡವೊಂದನ್ನು ರಚಿಸಿ ಕಾನೂನು ಕರಡನ್ನು ಸಿದ್ಧಪಡಿಸಿದೆ. ಎಲ್ಲ ರಾಜ್ಯಗಳ ಸಹಮತದೊಂದಿಗೆ ಕರಡು ಮಸೂದೆಯನ್ನು ಮಂಡಿಸಿ ಸಂಸತ್ತಿನಲ್ಲಿ ಅಂಗೀಕಾರ ಪಡೆದ ನಂತರ ಈ ಅನಿಷ್ಟ ಪದ್ಧತಿಯನ್ನು ಕೊನೆಗಾಣಿಸಬಹುದೆಂಬ ನಿರೀಕ್ಷೆ ಇದೆ. ‘ಖಾಪ್ ಪಂಚಾಯತ್’ ಎಂಬುದು ನ್ಯಾಯಪದ್ಧತಿಯ ಅಣಕ; ಅದು ಪೂರ್ವನಿರ್ಧಾರಿತ ತೀರ್ಮಾನವನ್ನು ಸಾರ್ವಜನಿಕಗೊಳಿಸಿ ಶಿಕ್ಷೆ ನೀಡುವ ಅನಾಗರಿಕ ವಿಧಾನ ಎಂಬುದನ್ನು ಅರ್ಥ ಮಾಡಿಕೊಂಡ ದೆಹಲಿ, ರಾಜಸ್ತಾನ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ಮರ್ಯಾದಾ ಹತ್ಯೆಯನ್ನು ಅಪರಾಧ ಸಂಹಿತೆಯಲ್ಲಿ ಸೇರಿಸಲು ಒಪ್ಪಿಕೊಂಡಿದ್ದರೂ ಹರಿಯಾಣ ರಾಜ್ಯ ಮಾತ್ರ ವಿರೋಧಿಸುತ್ತಿದೆ. ಇದಕ್ಕೆ ಮತ ಬ್ಯಾಂಕ್ ರಾಜಕಾರಣವೇ ಕಾರಣ. ರಾಜಕೀಯ ಲಾಭಕ್ಕಾಗಿ ಸಂವಿಧಾನದ ಆಶಯಗಳಿಗೆ ಅಪಚಾರ ಎಸಗುವುದು ಯಾವ ಪಕ್ಷಕ್ಕೂ ಸಲ್ಲದ ವರ್ತನೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಕ್ರಮವಾದ ಖಾಪ್ ಪಂಚಾಯತ್ ವ್ಯವಸ್ಥೆಯನ್ನು ಸಂಪೂರ್ಣ ನಿಷೇಧಿಸಲು ತ್ವರಿತವಾಗಿ ಮುಂದಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.