ದೈವೀಪುರುಷನ ಅಸ್ತಮಾನ ಅಸಾಧಾರಣ ಸಾಮರ್ಥ್ಯ ಪ್ರದರ್ಶಿಸುವವರನ್ನು ಆರಾಧಿಸುವುದು ಭಾರತೀಯರ ಪದ್ಧತಿ. ಚರಿತ್ರೆಯಲ್ಲಿದ್ದ ಗೌತಮ ಬುದ್ಧನನ್ನು ಮಹಾವಿಷ್ಣುವಿನ ಅವತಾರವೆಂದು ಪರಿಗಣಿಸಿದ ಭಾರತೀಯ ಮನೋಧರ್ಮ ಇಂಥದು. ತಮ್ಮ ಕಾಲಕ್ಕಿಂತ ಮುಂದೆ ಸಾಗಿದವರನ್ನು ಯುಗಪುರುಷರೆಂದು ಆರಾಧಿಸುವ ಪ್ರವೃತ್ತಿ ಭಾರತೀಯರಿಗಷ್ಟೇ ಸೀಮಿತವಾಗಿಲ್ಲ. ಲೌಕಿಕ ಬದುಕಿನಲ್ಲಿ ಮರೀಚಿಕೆಯಂತಾಗಿರುವ ಮಾನಸಿಕ ಶಾಂತಿಯನ್ನು ಯಾರಾದರೂ ನೀಡುವಂತಾದರೆ ಅವರನ್ನು ಆರಾಧಿಸುವ ಪ್ರವೃತ್ತಿ ಜಗತ್ತಿನ ಎಲ್ಲ ಸಮುದಾಯಗಳಲ್ಲಿಯೂ ವ್ಯಕ್ತವಾಗುತ್ತದೆ. ನೊಂದ ಮನಸ್ಸುಗಳಿಗೆ ಶಾಂತಿಯನ್ನೂ, ಬದುಕಿನಲ್ಲಿ ಭರವಸೆಯನ್ನೂ ನೀಡುವ ವ್ಯಕ್ತಿ ತಾನೇ ದೇವರ ಅವತಾರ ಎಂದು ಘೋಷಿಸಿಕೊಂಡರೆ ಶ್ರದ್ಧಾಳುಗಳಿಗೆ ಅದು ಇನ್ನಷ್ಟು ಸ್ವಾಂತನ ನೀಡುವ ಸಂಗತಿ. ನೊಂದವರು ‘ಅನ್ಯಥಾ ಶರಣಂ ನಾಸ್ತಿ, ತ್ವ ಮೇವ ಶರಣಂ ಮಮ’ ಎಂದುಕೊಳ್ಳುವ ಶರಣಾಗತಿಯ ಭಾವವನ್ನು ಯಶಸ್ವಿಯಾಗಿ ಬಳಸಿಕೊಂಡ ದೈವೀ ಪುರುಷ, ‘ಸತ್ಯಸಾಯಿ ಬಾಬಾ’ ಹೆಸರಿನಲ್ಲಿ ಜಗತ್ತಿನಾದ್ಯಂತ ಭಕ್ತರನ್ನು ಪಡೆದ ಸತ್ಯನಾರಾಯಣ ರಾಜು (1926- 2011). ದೇಶದ ಹಿಂದೂ ಮುಸ್ಲಿಮರಿಂದ ಸಮಾನ ರೀತಿಯ ಶ್ರದ್ಧಾಭಕ್ತಿಯ ಸೇವೆಯನ್ನು ಪಡೆದಿದ್ದ ಇನ್ನೊಬ್ಬ ಸಂತ ಶಿರಡಿ ಸಾಯಿಬಾಬಾ ಅವರ ಅವತಾರವೇ ತಾವೆಂದು ಘೋಷಿಸಿಕೊಂಡ ಸಾಯಿಬಾಬಾ ತಮ್ಮ ಸಾರ್ವಜನಿಕ ಬದುಕಿನ ಪ್ರಾರಂಭದಲ್ಲಿ ಶೂನ್ಯದಲ್ಲಿ ವಿಭೂತಿ, ಕುಂಕುಮ, ಪವಿತ್ರಜಲ, ಶಿವಲಿಂಗ, ಚಿನ್ನದ ಉಂಗುರ, ಸರ ಮೊದಲಾದವುಗಳನ್ನು ‘ಸೃಷ್ಟಿಸಿ’ ತಮ್ಮ ಪ್ರಭಾವಳಿಯನ್ನು ವಿಸ್ತರಿಸಿಕೊಂಡದ್ದುಂಟು. ಅವರ ‘ಪವಾಡ’ ಚಮತ್ಕಾರಗಳನ್ನು ವೈಚಾರಿಕ ಮನೋಧರ್ಮದವರು ಪ್ರಶ್ನಿಸಲು ಆರಂಭಿಸತೊಡಗಿದ ಮೇಲೆ ತಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಂಡ ಬಾಬಾ ತಮ್ಮ ಪ್ರಭಾವಳಿಯನ್ನು ಸಾಮಾಜಿಕ ಸೇವೆಗೆ ಮುಡಿಪಿಟ್ಟರು. ಜಗತ್ತಿನ 166 ದೇಶಗಳಲ್ಲಿ ವ್ಯಾಪಿಸಿದ ಭಕ್ತ ಸಮುದಾಯವನ್ನು ಶಿಕ್ಷಣ, ಆರೋಗ್ಯ ಮತ್ತು ಇನ್ನಿತರ ಧಾರ್ಮಿಕ ಸೇವೆಯಲ್ಲಿ ತೊಡಗುವಂತೆ ಮಾಡಿದರು. ಭಕ್ತರ ದೇಣಿಗೆಯಿಂದ ಅತ್ಯಾಧುನಿಕ ಆಸ್ಪತ್ರೆಗಳನ್ನು ತೆರೆದು ಬಡವರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ಮಾಡಿದರು. ಯಾವೊಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗದಂತೆ ಸಮಾಜದ ಎಲ್ಲ ವರ್ಗದ ಜನತೆಗಾಗಿ ತೆರೆದುಕೊಂಡ ಈ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಯಾವುದೇ ಧಾರ್ಮಿಕ ಕೇಂದ್ರಕ್ಕೆ ಮಾದರಿಯಾಗುವಂಥದ್ದು. ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಿಗೆ ಕುಡಿಯುವ ಶುದ್ಧ ನೀರಿನ ಪೂರೈಕೆಗೆ ಸತ್ಯಸಾಯಿ ಟ್ರಸ್ಟ್ ಕೈಗೊಂಡ ಯೋಜನೆ ಆದರ್ಶಪ್ರಾಯವಾದದ್ದು. ಉಚಿತ ವೈದ್ಯಕೀಯ ಸೌಲಭ್ಯ, ಕುಡಿಯುವ ನೀರಿನ ಯೋಜನೆಗಳಲ್ಲದೆ, ಸುಮಾರು 33 ದೇಶಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಸಂಸ್ಥೆಗಳನ್ನು ತೆರೆದು ಉಚಿತ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಿದ್ದು ಮನುಕುಲಕ್ಕೆ ಬಾಬಾ ಅವರ ಮಹತ್ವದ ಸೇವೆ. ಸತ್ಯಸಾಯಿಬಾಬಾ ಅವರು ತಾವು ದೇವರ ಅವತಾರ ಎಂದು ಘೋಷಿಸಿಕೊಂಡುದನ್ನಾಗಲೀ, ಭಕ್ತರ ಎದುರು ತೋರಿಸುತ್ತಿದ್ದ ಪವಾಡಗಳನ್ನಾಗಲೀ ಒಪ್ಪದಿರಬಹುದು. ಆದರೆ ಅವರು ಕೈಗೊಂಡ ಸಮಾಜಸೇವಾ ಕಾರ್ಯಗಳನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ದೇವರ ಅವತಾರವೆಂದು ಘೋಷಿಸಿಕೊಂಡಿದ್ದರೂ ಎಲ್ಲ ಮರ್ತ್ಯ ಜೀವಿಗಳಂತೆ ಅನಾರೋಗ್ಯದಿಂದ ಬಳಲಬೇಕಾಗಿ ಬಂದುದು ವಿಧಿಯ ವಿಪರ್ಯಾಸ. ಬಾಬಾ ಅಸ್ತಂಗತರಾಗಿದ್ದರೂ ಅವರು ಆರಂಭಿಸಿದ ಸಾಮಾಜಿಕ ಸೇವಾ ಕಾರ್ಯಗಳನ್ನು ಯಥಾರೀತಿಯಲ್ಲಿ ಮುಂದುವರಿಸುವ ಮೂಲಕ ಅವರನ್ನು ಆರಾಧಿಸುವ ಹೊಣೆ ಅವರ ಭಕ್ತ ಜನತೆಯದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.