ಅಂಗವಿಕಲರಿಗೆ ಮೀಸಲಾತಿ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಂಗವಿಕಲರಿಗೆ ಇಂತಿಷ್ಟು ಹುದ್ದೆಗಳನ್ನು ಮೀಸಲಿಡಬೇಕು ಎಂಬ ಆದೇಶವನ್ನು ಕೆಲವು ಇಲಾಖೆಗಳು ಉಪೇಕ್ಷಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ. ಸರ್ಕಾರಿ ಉದ್ಯೋಗಗಳಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಹುದ್ದೆಗಳನ್ನು ನೀಡುವುದನ್ನು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಬಹಳ ಹಿಂದೆಯೇ ನಿಯಮ ರೂಪಿಸಿದೆ. ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳಲ್ಲೂ ಈ ನಿಯಮ ಪಾಲಿಸುವುದು ಕಡ್ಡಾಯ ಎಂದು ಕರ್ನಾಟಕ ಅಡಳಿತ ಮಂಡಳಿ 2006ರಲ್ಲಿ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಸಹ ಅಂಗವಿಕಲರಿಗೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ನೀಡುವ ಅಗತ್ಯವನ್ನು ಹಲವಾರು ತೀರ್ಪುಗಳಲ್ಲಿ ಎತ್ತಿ ಹಿಡಿದಿದೆ. ಆದರೂ ಕೆಲವು ಇಲಾಖೆಗಳು ನೇಮಕಾತಿಗೆ ಅಧಿಸೂಚನೆ ಹೊರಡಿಸುವ ಸಂದರ್ಭದಲ್ಲಿ ಅಂಗವಿಕಲರನ್ನು ಮರೆತುಬಿಡುತ್ತಿವೆ. 2010ರ ಮಾರ್ಚ್ ತಿಂಗಳಲ್ಲಿ ಲೋಕಸೇವಾ ಆಯೋಗದ ಮೂಲಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ನೇಮಕಾತಿಯಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಹುದ್ದೆಗಳನ್ನು ಮೀಸಲಿರಿಸಿಲ್ಲ ಎಂಬ ಕಾರಣಕ್ಕಾಗಿ ರಾಜ್ಯ ಹೈಕೋರ್ಟಿನ ವಿಭಾಗೀಯ ಪೀಠ ಅಧಿಸೂಚನೆಯನ್ನೇ ಅನೂರ್ಜಿತಗೊಳಿಸಿದೆ. ಅಂಗವಿಕಲರಿಗೆ ಪ್ರಾತಿನಿಧ್ಯ ನೀಡಿ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ನಿರ್ದೇಶನ ನೀಡಿದೆ. ಇದರಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಲಿದೆ. ಇದರಿಂದ ಅನೇಕರಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಯನ್ನು ತಪ್ಪಿಸಲು ಸಾಧ್ಯವಿತ್ತು. ಮೀಸಲಾತಿ ನಿಯಮಗಳ ಪಾಲನೆ ಆಗಿಲ್ಲವೆಂದು ನೇಮಕಾತಿ ಪ್ರಕ್ರಿಯೆಯನ್ನೇ ನ್ಯಾಯಾಲಯ ರದ್ದು ಮಾಡಿದ ಹಲವಾರು ಉದಾಹರಣೆಗಳಿವೆ. ಆದರೂ ಅಧಿಕಾರಿಗಳು ಪಾಠ ಕಲಿತಿಲ್ಲ. ನಿಯಮ ಉಲ್ಲಂಘನೆ ಆದಾಗಲೆಲ್ಲ ಅಂಗವಿಕಲರು ನ್ಯಾಯಾಲಯಗಳಿಗೆ ಹೋಗಿ ತಮ್ಮ ಹಕ್ಕನ್ನು ಪಡೆಯುವಂತೆ ಆಗಬಾರದು. ಇನ್ನು ಮುಂದಾದರೂ ಸರ್ಕಾರಿ ಇಲಾಖೆಗಳು ಅಂಗವಿಕಲರ ಉದ್ಯೋಗ ಹಕ್ಕು ತಪ್ಪಿಸುವ ದುಸ್ಸಾಹಸಕ್ಕೆ ಕೈಹಾಕಬಾರದು. ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗ. ಅಂಗವಿಕಲತೆ ಎನ್ನುವುದು ವೈಯಕ್ತಿಕವಾದದು. ಅಂಗವಿಕಲರ ಬಗ್ಗೆ ಮಾತಿನ ಅನುಕಂಪ ತೋರಿಸುವ ಬದಲು ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಮುಕ್ತ ಅವಕಾಶಕೊಡಬೇಕು.ಅಂಗವಿಕಲರು ಸಮಾಜಕ್ಕೆ ಹೊರೆಯಾಗಬಾರದು. ಅವರ ಪ್ರತಿಭೆ ಹಾಗೂ ಮಾನವ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು ಎಂಬ ಆಶಯದಿಂದ ಅವರಿಗೆ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ನಿರ್ಧಾರ ಸರ್ಕಾರ ತೆಗೆದುಕೊಂಡಿದೆ. ಆದರೆ ಕೆಲವು ಇಲಾಖೆಗಳ ಹಿರಿಯ ಅಧಿಕಾರಿಗಳು ಸರ್ಕಾರ ಉದ್ದೇಶಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಬಿಡಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಸಂದರ್ಭಗಳಲ್ಲಿ ಅಂಗವಿಕಲರನ್ನು ಪರಿಗಣಿಸುವುದಿಲ್ಲ. ಅಂಗವಿಕಲರಿಗೆ ಕೆಲ ನಿರ್ದಿಷ್ಟ ಇಲಾಖೆಗಳಲ್ಲಿ ಮಾತ್ರ ಉದ್ಯೋಗ ಕೊಡಬಹುದು ಎನ್ನುವ ಧೋರಣೆ ಕೆಲವರಲ್ಲಿದೆ. ಸೇನೆ, ಪೊಲೀಸ್ ಮತ್ತಿತರ ಸದೃಢ ದೇಹದಾರ್ಢ್ಯತೆ ಬಯಸುವ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಹುದ್ದೆಗಳಿಗೆ ಅಂಗವಿಕಲರು ಅರ್ಹರು. ಸರ್ಕಾರಿ ಹುದ್ದೆಗಳಲ್ಲದೆ ಖಾಸಗಿ ವಲಯದ ಕೈಗಾರಿಕೆ ಮತ್ತಿತರ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಉದ್ಯೋಗ ಮೀಸಲಾತಿ ಸೌಲಭ್ಯ ಸಿಗಬೇಕು. ಅದಕ್ಕಾಗಿ ಕಾನೂನು ತಿದ್ದುಪಡಿ ಆಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.