ಮಳೆ ಅನಾಹುತ ತಪ್ಪಿಸಿ ಬೆಂಗಳೂರಿನಲ್ಲಿ ಕಳೆದ ಶುಕ್ರವಾರ ಮತ್ತು ಶನಿವಾರ ಬಿದ್ದ ಭಾರಿ ಮಳೆಗೆ ನಗರದ ಜನಜೀವನ ತತ್ತರಿಸಿಹೋಗಿದೆ. ಕೆಲವೇ ಗಂಟೆಗಳಲ್ಲಿ ಕೆಲ ಪ್ರದೇಶಗಳ ಜನರ ಬದುಕು ನರಕಸದೃಶವಾಗಿದ್ದನ್ನು ಗಮನಿಸಿದರೆ ನಗರದಲ್ಲಿನ ಅವ್ಯವಸ್ಥೆಯ ಕರಾಳ ಮುಖ ಪುನಃ ಅನಾವರಣಗೊಂಡಿದೆ. ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಅಂದರೆ, 2001ರಲ್ಲಿ 108 ಮಿ.ಮೀ ಮಳೆ ಆಗಿತ್ತು. ಈ ಏಪ್ರಿಲ್‌ನಲ್ಲಿ 103 ಮಿ.ಮೀ. ಮಳೆಯಾಗಿದೆ. ಎಷ್ಟೇ ಮಳೆ ಆದರೂ ಆಗ ಯಾವುದೇ ಅನಾಹುತ ಆಗುತ್ತಿದ್ದದ್ದು ಕಡಿಮೆ. ಈಗ ಅಲ್ಪ ಸ್ವಲ್ಪ ಮಳೆ ಬಿದ್ದರೂ ಅನಾಹುತಗಳು ಸಂಭವಿಸುತ್ತಿವೆ. ನಗರ ಯದ್ವಾತದ್ವಾ ಬೆಳೆದಿದೆ. ಬಿದ್ದ ಮಳೆ ನೀರು ಸುಲಭವಾಗಿ ಹರಿದುಹೋಗುತ್ತಿದ್ದ ರಾಜ ಕಾಲುವೆಗಳು ಕಾಣುತ್ತಿಲ್ಲ. ಕೆರೆ ಕಟ್ಟೆಗಳು ಮಾಯವಾಗಿವೆ. ಅಲ್ಲೆಲ್ಲ ಗಗನಚುಂಬಿ ಕಟ್ಟಡಗಳು ತಲೆ ಎತ್ತಿವೆ. ಶಾಲೆಗಳ ಆಟದ ಮೈದಾನ ಮತ್ತು ಸರ್ಕಾರಿ ಭೂಮಿಯೆಲ್ಲ ಒತ್ತುವರಿಯಾಗಿದೆ. ಐದಾರು ದಶಕಗಳ ಹಿಂದಿನ ಜನಸಂಖ್ಯೆಗೆ ತಕ್ಕಂತೆ ನಿರ್ಮಿಸಿದ್ದ ಒಳಚರಂಡಿಗಳೇ ಈಗಲೂ ಇವೆ. ಆಗ ಎಷ್ಟೇ ಪ್ರಮಾಣದಲ್ಲಿ ಮಳೆ ಆದರೂ, ಕೆರೆ ಕಟ್ಟೆಗಳು ತುಂಬಿದ ನಂತರ ಮಳೆ ನೀರು ರಾಜಕಾಲುವೆ ಮೂಲಕ ನಗರದ ಹೊರಗಿನ ಸಣ್ಣಪುಟ್ಟ ನದಿಗಳಿಗೆ ಸೇರುತಿತ್ತು. ಈಗ ಜನಸಂಖ್ಯೆಯ ಒತ್ತಡ ಜಾಸ್ತಿಯಾಗಿದೆ. ವಸತಿ ಪ್ರದೇಶ ಹೆಚ್ಚಿದೆ. ಹಿಂದೆ ನಿರ್ಮಿಸಿದ್ದ ಚರಂಡಿಗಳೇ ಈಗ ಇನ್ನಷ್ಟು ಕಿರಿದಾಗಿರುವುದರಿಂದ ಮಳೆ ನೀರು ಚರಂಡಿಗಳನ್ನು ಸೇರದೆ ರಸ್ತೆಗಳಲ್ಲಿಯೇ ನಿಲ್ಲುವಂತಾಗಿದೆ. ಈಗಿನ ಜನವಸತಿಗೆ ಅನುಗುಣವಾಗಿ ಒಳಚರಂಡಿಗಳು ನಿರ್ಮಾಣವಾಗದಿರುವುದೇ ಈಗಿನ ಅನಾಹುತಗಳಿಗೆ ಕಾರಣ. ಈ ಎರಡು ದಿನಗಳ ಮಳೆಯ ಅನಾಹುತದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಹಳೆ ಜೈಲಿನ ಗೋಡೆ ಕುಸಿದು ಏಳು ಕಾರುಗಳು ಜಖಂಗೊಂಡು, ಒಬ್ಬರ ಪ್ರಾಣ ಹಾನಿಯಾಗಿದೆ. ಹಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಗಾಳಿ ಆಂಜನೇಯ ದೇವಸ್ಥಾನಕ್ಕೆ ಮತ್ತೆ ಚರಂಡಿ ನೀರು ಹೊಕ್ಕಿದೆ. ಇಲ್ಲಿನ ಚರಂಡಿಯ ನೀರು ದೇವಸ್ಥಾನಕ್ಕೆ ನುಗ್ಗದಂತೆ ತಡೆಗೋಡೆ ಕಟ್ಟುವುದಾಗಿ ಈ ಹಿಂದೆಯೇ ಭರವಸೆ ನೀಡಲಾಗಿತ್ತು. ಜನರಿಗೆ ಮಳೆಯಿಂದಾದ ತೊಂದರೆಯನ್ನೆಲ್ಲ ಪರಿಶೀಲಿಸಿದ ಸಚಿವರಾದ ಆರ್.ಅಶೋಕ್ ಮತ್ತು ಸುರೇಶ್ ಕುಮಾರ್ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವ ಮತ್ತು ಇದೇ ರೀತಿಯ ಅನಾಹುತ ಮರುಕಳಿಸದಂತೆ ಮಾಡುವುದಾಗಿ ಪುನರುಚ್ಚರಿಸಿದ್ದಾರೆ. ಮಳೆ ನಿಂತ ಮೇಲೆ ಈ ಎಲ್ಲ ಭರವಸೆಗಳು ಅವರಿಗೆ ಮರೆತು ಹೋಗುತ್ತವೆ. ‘ಮಳೆ ಬಂದಾಗ ಹೊರಗೆ ಬಾರದೆ ಮನೆಗಳಲ್ಲಿಯೇ ಇರಿ’ ಎಂದು ಪಾಲಿಕೆ ಆಯುಕ್ತ ಸಿದ್ದಯ್ಯ ಜನರಿಗೆ ಬುದ್ಧಿವಾದ ಹೇಳಿದ್ದಾರೆ. ಇದು ಅರ್ಥಹೀನ ಮತ್ತು ಹಾಸ್ಯಾಸ್ಪದ ಹೇಳಿಕೆಯಲ್ಲದೆ ಮತ್ತೇನೂ ಅಲ್ಲ! ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಯವು ಸೇರಿದಂತೆ ಪಾಲಿಕೆ ತನ್ನ ಕಾರ್ಯವನ್ನು ದಕ್ಷತೆಯಿಂದ ನಿರ್ವಹಿಸಿದರೆ ಮಳೆಯಿಂದಾಗುವ ಅನಾಹುತಗಳನ್ನು ತಪ್ಪಿಸುವುದು ಕಷ್ಟವೇನಲ್ಲ. ಮುಂಗಾರು ಮಳೆ ಆರಂಭವಾಗುವ ಮುನ್ನ ಎಚ್ಚರಿಕೆಯ ಕ್ರಮಗೊಳ್ಳುವುದಕ್ಕೆ ಪಾಲಿಕೆ ಆಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.