ಸುರಕ್ಷತೆಯೇ ಮುಖ್ಯ ಮಹಾರಾಷ್ಟ್ರದ ಜೈತಾಪುರದಲ್ಲಿ ಸ್ಥಾಪನೆಯಾಗಲಿರುವ ಅಣುವಿದ್ಯುತ್ ಸ್ಥಾವರಕ್ಕೆ ವ್ಯಕ್ತವಾಗಿರುವ ಜನರ ಪ್ರತಿಭಟನೆಯನ್ನು ಸರ್ಕಾರ ನಿರ್ಲಕ್ಷಿಸುವುದು ಸರಿಯಲ್ಲ.ಪ್ರತಿಭಟನೆಗೆ ಕಾರಣವಾಗಿರುವ ತಾತ್ವಿಕ ಅಂಶಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈವರೆಗೆ ಅದನ್ನೊಂದು ಕಾನೂನು ಸಮಸ್ಯೆಯಂತೆ ಪರಿಗಣಿಸಿ ಜನರನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಹಾರಾಷ್ಟ್ರ ಸರ್ಕಾರದಿಂದ ಆಗಿದೆ. ಜನರ ಪ್ರತಿಭಟನೆ ತೀವ್ರಗೊಂಡಾಗ ಪೊಲೀಸರು ಗುಂಡು ಹಾರಿಸಿ ಒಬ್ಬನ ಸಾವಿಗೆ ಕಾರಣರಾಗಿದ್ದಾರೆ. ಇದು ಸರ್ಕಾರದ ಅತಿರೇಕದ ಪ್ರತಿಕ್ರಿಯೆ. ಇದಕ್ಕೆ ಕಾರಣರಾದವರ ವಿರುದ್ಧ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಮುಂದಾಗಬೇಕು. ಸುನಾಮಿ ಮತ್ತು ಭೂಕಂಪದ ಪರಿಣಾಮ ಸ್ಫೋಟಗೊಂಡ ಜಪಾನಿನ ಫುಕುಶಿಮಾ ಅಣು ಸ್ಥಾವರದಿಂದ ಹೊರಹೊಮ್ಮುತ್ತಿರುವ ಅಪಾಯಕಾರಿ ವಿಕಿರಣ ಅಣುವಿದ್ಯುತ್ ಸ್ಥಾವರಗಳ ಸುರಕ್ಷತೆ ಕುರಿತಾಗಿ ಜಗತ್ತಿನಾದ್ಯಂತ ಮರುಚಿಂತನೆಗೆ ಆಸ್ಪದ ನೀಡಿದೆ. ನೈಸರ್ಗಿಕ ವಿಕೋಪಗಳಿಗೆ ಅಣುಸ್ಥಾವರಗಳು ಗುರಿಯಾದಾಗ ಉಂಟಾಗುವ ಪರಿಣಾಮಗಳನ್ನು ಎದುರಿಸಲು ಸರ್ಕಾರ ಸಮರ್ಥವಾಗಿದೆ ಎಂಬುದು ಭಾರತದ ಮಟ್ಟಿಗೆ ಇದುವರೆಗೆ ಸಾಬೀತಾಗಿಲ್ಲ. ಆದರೆ ಅಣುವಿದ್ಯುತ್ ಸ್ಥಾವರಗಳ ಪರಿಸರದಲ್ಲಿ ವಿಕಿರಣ ಪರಿಣಾಮದಿಂದ ಜನರಿಗೆ ಮತ್ತು ಜೀವಿ ಸಂಕುಲಕ್ಕೆ ಯಾವ ಹಾನಿಯೂ ಆಗುವುದಿಲ್ಲವೆಂದು ಅಣುವಿದ್ಯುತ್ ಸ್ಥಾವರಗಳ ಸುರಕ್ಷತೆ ಬಗ್ಗೆ ಪ್ರತಿಪಾದಿಸುವ ವಿಜ್ಞಾನಿಗಳೇ ಹೇಳಲಾಗುತ್ತಿಲ್ಲ. ಆದ್ದರಿಂದಲೇ ಸರ್ಕಾರ ಇನ್ನಷ್ಟು ಎಚ್ಚರದಿಂದ ಅಣುವಿದ್ಯುತ್ ಯೋಜನೆಗಳ ಬಗ್ಗೆ ಮರುಚಿಂತನೆ ನಡೆಸಬೇಕಾಗಿದೆ. ಜಪಾನಿನ ಫುಕುಶಿಮಾ ಅಣುಸ್ಥಾವರ ಸ್ಫೋಟದ ಹಿನ್ನೆಲೆಯಲ್ಲಿ ದೇಶದ ಅಣುವಿದ್ಯುತ್ ಸ್ಥಾವರ ಸುರಕ್ಷತೆಯ ಬಗ್ಗೆ ಸಾರ್ವತ್ರಿಕವಾಗಿ ಮೂಡಿದ ಆತಂಕಕ್ಕೆ ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಧ್ವನಿಗೂಡಿಸಿದ್ದು ಈ ಕುರಿತ ಮರುಚಿಂತನೆಯ ಬಗ್ಗೆ ಭರವಸೆ ಮೂಡಿಸಿದೆ. ಅಣುಸ್ಥಾವರಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಸಂಬಂಧಿಸಿ ಅಮೆರಿಕ, ಫ್ರಾನ್ಸ್ ಮತ್ತು ರಷ್ಯದ ಜೊತೆ ಮಾಡಿಕೊಂಡ ಒಪ್ಪಂದಗಳು ಕೂಡ ಸುರಕ್ಷತೆಯ ಮಟ್ಟಿಗೆ ಮರುಪರಿಶೀಲನೆಗೆ ಒಳಗಾಗಬೇಕಿದೆ. ದೇಶದ ವಿದ್ಯುತ್ ಬೇಡಿಕೆಯ ಪ್ರಶ್ನೆಯನ್ನು ನಿರ್ಲಕ್ಷಿಸುವಂತಿಲ್ಲ ಎಂಬುದು ನಿಜ. ಅಣುವಿದ್ಯುತ್ ಇತರೆಲ್ಲ ಮೂಲಗಳಿಗಿಂತ ಅಗ್ಗವೆಂಬುದೂ ನಿಜವೇ. ಆದರೆ, ಜೀವಿ ಪರಿಸರದ ಸುರಕ್ಷತೆ ದೃಷ್ಟಿಯಿಂದ ಅಣುವಿದ್ಯುತ್ ಉತ್ಪಾದನಾ ತಾಂತ್ರಿಕತೆ ಇನ್ನಷ್ಟು ಸುರಕ್ಷತೆಯ ಭರವಸೆಯನ್ನು ನೀಡಬೇಕಾಗಿದೆ. ಜೈತಾಪುರ ವಿಶ್ವದ ಅತ್ಯಂತ ದೊಡ್ಡ ಅಣುವಿದ್ಯುತ್ ಸ್ಥಾವರವಾಗಲಿದೆ ಎಂಬ ಸಂಗತಿಯೇ ಪರಮಾವಧಿ ಸುರಕ್ಷತಾ ಕ್ರಮಗಳ ಭರವಸೆಯನ್ನು ನಿರೀಕ್ಷಿಸುತ್ತದೆ. ದೇಶದಲ್ಲಿ ಪಾರದರ್ಶಕವಾದ ಪರಮಾಣು ನೀತಿಯೊಂದು ರೂಪುಗೊಳ್ಳುವವರೆಗೆ ಇಂಥ ಸ್ಥಾವರಗಳ ಸ್ಥಾಪನೆಯ ಕಾರ್ಯದಲ್ಲಿ ನಿಲುಗಡೆಯಾಗಬೇಕು ಎಂದು ಜೈರಾಮ್ ರಮೇಶ್ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಸರ್ಕಾರ ಪರಿಗಣಿಸಬೇಕು. ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ಅಣುವಿದ್ಯುತ್ ಸ್ಥಾವರಗಳ ಪರಿಸರದಲ್ಲಿ ವಿಕಿರಣ ಪ್ರಸರಣದ ಸಾಧ್ಯತೆಯನ್ನು ಪರಾಮರ್ಶಿಸುವ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.