ಸಿಬಿಐ ಕೈಕಟ್ಟಿ ಹಾಕಬೇಡಿ `ವಿಳಂಬವಾಯಿತು~, `ಭ್ರಷ್ಟಾಚಾರದ ಪ್ರಮಾಣಕ್ಕೆ ಹೋಲಿಸಿದರೆ ಕೈಗೊಂಡ ಕ್ರಮ ಸಾಲದು~ ಎನ್ನಬಹುದು; ಭ್ರಷ್ಟಾಚಾರ ವಿರುದ್ದದ ಆಕ್ರೋಶ ದೇಶದಾದ್ಯಂತ ಆಂದೋಲನದ ರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲು ಹೋಗದೆ, ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಪೂರ್ಣ ಸ್ವಾತಂತ್ರ ನೀಡಿರಬಹುದು ಎಂದೂ ಹೇಳಿ ಬಿಡಬಹುದು. ಇವೆಲ್ಲವನ್ನು ಒಪ್ಪಿಕೊಂಡರೂ ಕಾಮನ್‌ವೆಲ್ತ್‌ ಕ್ರೀಡಾಕೂಟ ಮತ್ತು 2ಜಿ ತರಂಗಾಂತರ ಹಗರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಈ ವರೆಗೆ ಕೈಗೊಂಡಿರುವ ಕ್ರಮಗಳು ಸಣ್ಣವೇನೂ ಅಲ್ಲ. ರಾಜಕಾರಣಿಗಳಿಂದ ನಿರಂತರವಾಗಿ ಚಾರಿತ್ರಹನನಕ್ಕೊಳಗಾಗುತ್ತಾ ಬಂದಿರುವ ಸಿಬಿಐಗೆ ಈ ಎರಡು ಹಗರಣಗಳ ತನಿಖೆ ಸ್ವಲ್ಪಮಟ್ಟಿಗೆ ವಿಶ್ವಾಸಾರ್ಹತೆಯನ್ನು ತಂದುಕೊಟ್ಟಿದೆ. ಸಿಬಿಐನಿಂದ ಈ ವರೆಗೆ ಬಂಧಿತರಾದವರು ಸಣ್ಣ ಮಿಕಗಳೇನಲ್ಲ. 2ಜಿ ತರಂಗಾಂತರ ಹಗರಣದಲ್ಲಿ ಸಚಿವ ಎ.ರಾಜಾ ಅವರಲ್ಲದೆ ಮೂವರು ಅಧಿಕಾರಿಗಳು ಮತ್ತು ನಾಲ್ವರು ಉದ್ಯಮಿಗಳು ಸೆರೆಮನೆ ಸೇರಿದ್ದಾರೆ. ಈಗ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಮಗಳು ಕನಿಮೊಳಿ ಮತ್ತಿತರ ಮೂವರ ಹೆಸರುಗಳನ್ನು ಎರಡನೇ ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದ ಹಗರಣಕ್ಕೆ ಸಂಬಂಧಿಸಿ ಒಲಿಂಪಿಕ್ಸ್‌ ಸಮಿತಿಯ ಏಳು ಪದಾಧಿಕಾರಿಗಳು ಮತ್ತು ಇಬ್ಬರು ಉದ್ಯಮಿಗಳು ಹಿಂದೆಯೇ ಬಂಧನಕ್ಕೊಳಗಾಗಿದ್ದರು. ಈಗ ಹಗರಣದ ಕೇಂದ್ರ ವ್ಯಕ್ತಿ ಸುರೇಶ್‌ ಕಲ್ಮಾಡಿಯವರನ್ನು ಬಂಧಿಸಲಾಗಿದೆ. ಇವೆಲ್ಲವೂ ಮೊದಲ ಹಂತದ ಕ್ರಮಗಳು. ಮುಂದಿನ ಹಂತ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯ ಆಧಾರದಲ್ಲಿ ನ್ಯಾಯಾಲಯ ನಡೆಸುವ ವಿಚಾರಣೆ. ಆ ಸಂದರ್ಭದಲ್ಲಿ ಸಿಬಿಐ ಪ್ರಬಲ ಪುರಾವೆಗಳ ಮೂಲಕ ತನ್ನ ಕ್ರಮಗಳನ್ನು ಎಷ್ಟು ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳುತ್ತದೆ ಎನ್ನುವುದರ ಮೇಲೆ ಈ ಹಗರಣಗಳ ಹಣೆಬರಹ ಇತ್ಯರ್ಥವಾಗುತ್ತದೆ. ಅಂತಿಮವಾಗಿ ಆರೋಪಿಗಳಿಗೆ ಶಿಕ್ಷೆಯಾದಾಗಲೇ ತನಿಖೆಗೆ ತಾರ್ಕಿಕ ಅಂತ್ಯ. ಸಾಮಾನ್ಯವಾಗಿ ವೀರಾವೇಶದಿಂದ ಮುನ್ನುಗ್ಗುವ ಸಿಬಿಐ ನಂತರದ ದಿನಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು ಈವರೆಗಿನ ಅನುಭವ. ಇದಕ್ಕೆ ಮುಖ್ಯ ಕಾರಣ ರಾಜಕೀಯ ಒತ್ತಡ. ರಾಜಕೀಯವಾಗಿ ಸೂಕ್ಷ್ಮವಾದ ಈಗಿನ ಎರಡು ಹಗರಣಗಳಲ್ಲಿ ಇಂತಹ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಎರಡೂ ಹಗರಣಗಳ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿದರೆ ಸಿಬಿಐ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳನ್ನೂ ಪ್ರಶ್ನಿಸಬೇಕಾಗಬಹುದು. ಕಾಮನ್‌ವೆಲ್ತ್‌ ಕ್ರೀಡಾಕೂಟದ ಅವ್ಯವಹಾರದ ಬಗ್ಗೆ ಶುಂಗ್ಲು ಸಮಿತಿ ನೀಡಿರುವ ವರದಿ ದೆಹಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮೇಲೆಯೂ ದೋಷಾರೋಪ ಮಾಡಿದೆ. ರಾಜ್ಯಸಭಾ ಸದಸ್ಯೆ ಕನಿಮೊಳಿ ಮೇಲಿನ ಆರೋಪಪಟ್ಟಿಯಿಂದಾಗಿ ಕಾಂಗ್ರೆಸ್‌ನ ಮಿತ್ರ ಪಕ್ಷ ಡಿಎಂಕೆ ತಳಮಳಕ್ಕೀಡಾಗಿದೆ. ಇವೆಲ್ಲವೂ ಸಿಬಿಐ ತನಿಖೆ ಹಾದಿ ತಪ್ಪುವಂತೆ ಮಾಡುವ ಸಾಧ್ಯತೆಗಳಿವೆ. 2ಜಿ ತರಂಗಾಂತರ ಹಗರಣದಲ್ಲಿ ಕರುಣಾನಿಧಿ ಅವರ ಪತ್ನಿ ದಯಾಳು ಅಮ್ಮನ ವಿರುದ್ಧ ಆರೋಪಪಟ್ಟಿ ಸಲ್ಲಿಸದೆ ರಿಯಾಯಿತಿ ತೋರಿಸಿರುವುದು ಈಗಾಗಲೇ ಸಂಶಯಕ್ಕೆಡೆಮಾಡಿದೆ. ಈ ರೀತಿಯ ಯಾವುದೇ ರಾಜಕೀಯ ಒತ್ತಡಕ್ಕೆ ಬಲಿಯಾಗದೆ ನಿಷ್ಪಕ್ಷಪಾತ ತನಿಖೆ ನಡೆಸಿ ಲೂಟಿಕೋರರಿಗೆ ಶಿಕ್ಷೆಯಾಗುವಂತೆ ಸಿಬಿಐ ನೋಡಿಕೊಳ್ಳಬೇಕು. ನ್ಯಾಯನಿಷ್ಠುರ ನಿಲುವಿನ ಮೂಲಕ ಇದಕ್ಕೆ ಪೂರಕವಾದ ವಾತಾವರಣವನ್ನು ಯುಪಿಎ ಸರ್ಕಾರ ಸೃಷ್ಟಿಸಬೇಕು. ಡಿಎಂಕೆ ಕೂಡಾ ಯುಪಿಎ ಸರ್ಕಾರವನ್ನು ರಾಜಕೀಯವಾಗಿ ಬ್ಲಾಕ್‌ಮೇಲ್‌ ಮಾಡಲು ಹೋಗದೆ ಕಾನೂನು ತನ್ನ ದಾರಿಯನ್ನು ಕಂಡುಕೊಳ್ಳಲು ಅವಕಾಶ ಮಾಡಿಕೊಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.