ವಸತಿ ಸಮಸ್ಯೆ ಬಗೆಹರಿಸಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನಸಂಖ್ಯೆಯ ಹೆಚ್ಚಳ ಆಗುತ್ತಿದೆ. ಅದಕ್ಕೆ ತಕ್ಕಂತೆ ವಸತಿ ಸಮಸ್ಯೆಯೂ ಇಮ್ಮಡಿಯಾಗುತ್ತಿದೆ.ಜನರ ವಸತಿ ಬೇಡಿಕೆಯನ್ನು ಈಡೇರಿಸಲು ಬೆಂಗಳೂರಿನ ಬಿಡಿಎ ಮತ್ತು ಉಳಿದ ನಗರಗಳ ನಗರಾಭಿವೃದ್ಧಿ ಪ್ರಾಧಿಕಾರಗಳು ಸಂಪೂರ್ಣ ವಿಫಲಗೊಂಡಿವೆ. ಸಣ್ಣಪುಟ್ಟ ಪಟ್ಟಣ ಪ್ರದೇಶಗಳಲ್ಲಿಯೂ ನಿವೇಶನ ಪಡೆಯುವುದು ಮರೀಚಿಕೆಯಾಗಿದೆ. ಬೆಂಗಳೂರಿನಲ್ಲಿ ಕಳೆದ ಆರು ವರ್ಷಗಳಿಂದ ಬಿಡಿಎ ಜನಸಾಮಾನ್ಯರಿಗೆ ಒಂದು ನಿವೇಶನವನ್ನೂ ಹಂಚಿಲ್ಲ. ಹೊಸ ಬಡಾವಣೆಗಳನ್ನು ಮಾಡುವುದಾಗಿ ಕೇವಲ ಪ್ರಕಟಣೆಗಳು ಮಾತ್ರ ಹೊರಬೀಳುತ್ತಿವೆಯಷ್ಟೆ. ಈ ಮಧ್ಯೆ ಬೆಂಗಳೂರಿನ ಒಳಗೆ ಮತ್ತು ಹೊರಗೆ ಸಾವಿರಾರು ಅಪಾರ್ಟ್‌ಮೆಂಟ್‌ಗಳು ಮತ್ತು ಖಾಸಗಿ ಬಡಾವಣೆಗಳು ತಲೆ ಎತ್ತುತ್ತಿವೆ. ಇವುಗಳು ಕಾಯ್ದೆ ಪ್ರಕಾರ ಇವೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಲು ಆಗದೆ ಅವಶ್ಯಕತೆ ಪೂರೈಸಿಕೊಳ್ಳುವುದಕ್ಕಾಗಿ ಜನರು ಅನಿವಾರ್ಯವಾಗಿ ಅಧಿಕ ಹಣ ತೆತ್ತು ಅವುಗಳನ್ನು ಖರೀದಿಸುತ್ತಾರೆ. ಈ ಪರಿಸ್ಥಿತಿಗೆ ಬಿಡಿಎ ಆಡಳಿತದ ಅದಕ್ಷತೆ ಮತ್ತು ಬೇಜವಾಬ್ದಾರಿಯೇ ಕಾರಣ. ಬಿಡಿಎ ಜನರ ಅವಶ್ಯಕತೆಗೆ ತಕ್ಕಂತೆ ಕಾಲಕಾಲಕ್ಕೆ ಹೊಸ ಹೊಸ ಬಡಾವಣೆಗಳನ್ನು ನಿರ್ಮಿಸಿ ನಿವೇಶನಗಳನ್ನು ಹಂಚಿದ್ದರೆ ಜನರು ಖಾಸಗಿ ಬಡಾವಣೆಗಳತ್ತ ಹೋಗುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ರಾಜ್ಯದಲ್ಲಿನ ಇತರೆ ನಗರಗಳ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿಯೂ ಬಿಡಿಎ ಪರಿಸ್ಥಿತಿಗಿಂತ ಬದಲಾವಣೆ ಏನಿಲ್ಲ. ಒಟ್ಟು 29 ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ 18 ಪ್ರಾಧಿಕಾರಗಳು ಎರಡು ವರ್ಷಗಳಿಂದ ಒಂದು ನಿವೇಶನವನ್ನೂ ಹಂಚಿಲ್ಲ. ಈ ಪ್ರಾಧಿಕಾರಗಳು ಹೆಸರಿಗಷ್ಟೇ ಇದ್ದು, ಜನರ ವಸತಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾ ಕೇಂದ್ರಗಳು ಅಭಿವೃದ್ಧಿಯಾಗುತ್ತಿದ್ದು, ಅಂತಹ ಕಡೆಗಳಲ್ಲಿ ವಸತಿ ಬೇಡಿಕೆಯೂ ಹೆಚ್ಚುತ್ತಿದೆ. ಬೇಡಿಕೆ ಇರುವ ಕಾರಣ ಖಾಸಗಿ ಬಡಾವಣೆಗಳು ತಲೆ ಎತ್ತುತ್ತಿವೆ. ಲಾಭದ ಉದ್ದೇಶದಿಂದ ನಿರ್ಮಾಣಗೊಂಡಿರುವ ಇಂತಹ ಬಡಾವಣೆಗಳಲ್ಲಿ ಕುಡಿಯುವ ನೀರು ಮತ್ತು ಇತರೆ ಸೌಲಭ್ಯಗಳಿಲ್ಲದೆ ಜನರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಪರಿಸ್ಥಿತಿ ಹೀಗಿದ್ದರೂ, ಪ್ರಾಧಿಕಾರಗಳು ಆಯಾ ನಗರಗಳಲ್ಲಿ ವಸತಿಯ ಬೇಡಿಕೆ ಎಷ್ಟಿದೆ ಮತ್ತು ಅದನ್ನು ಪೂರೈಸಲು ಏನು ಮಾಡಬೇಕು ಎನ್ನುವ ಬಗೆಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕರ್ನಾಟಕ ಗೃಹ ಮಂಡಳಿಯು ಇಂತಹ ಕಡೆಗಳಲ್ಲಿ ಹೊಸ ಬಡಾವಣೆಗಳನ್ನು ನಿರ್ಮಿಸಬೇಕು. ಆದರೆ ಈ ಮಂಡಳಿ ಸಹಾ ಕೆಲವೇ ಕಡೆಗಳಲ್ಲಿ ಬಡಾವಣೆಗಳನ್ನು ನಿರ್ಮಿಸಿದ್ದು, ಉಳಿದ ಕಡೆಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳುವಲ್ಲಿ ಸೋತಿದೆ. ಸಣ್ಣಪುಟ್ಟ ಪಟ್ಟಣ ಪ್ರದೇಶ ಮತ್ತು ನಗರಗಳಲ್ಲಿನ ವಸತಿ ಸಮಸ್ಯೆಯನ್ನು ನಿವಾರಿಸಲು ಅವಶ್ಯಕತೆಗೆ ತಕ್ಕಂತೆ ನಿವೇಶನ ಹಂಚಲು ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು. ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗಳು ಈ ನಗರಗಳ ವಸತಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಿಷ್ಕ್ರಿಯವಾಗಿರುವ ನಗರಾಭಿವೃದ್ಧಿ ಪ್ರಾಧಿಕಾರಗಳು ಚುರುಕಾಗಿ ಕೆಲಸ ಮಾಡುವಂತೆ ಅವುಗಳ ಅಧ್ಯಕ್ಷರ ಸಭೆ ಕರೆದು ನಿವೇಶನ ಹಂಚಿಕೆಗೆ ಇರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.