ತೋರಿಕೆಯ ಬದಲಾವಣೆ ಮ್ಯಾನ್ಮಾರ್‌ನಲ್ಲಿ ಕಳೆದ 50 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಸೇನೆ, ನಾಗರಿಕ ಸರ್ಕಾರಕ್ಕೆ ಅಧಿಕಾರ ಹಸ್ತಾಂತರ ಮಾಡಿರುವುದು ತೋರಿಕೆಯ ಬದಲಾವಣೆಯಷ್ಟೆ. ಮಧ್ಯಪ್ರಾಚ್ಯದ ಸರ್ವಾಧಿಕಾರಿಗಳಲ್ಲಿ ಅಭದ್ರತೆ ಮೂಡಿಸಿದ ಪ್ರಜಾಸತ್ತೆ ಪರವಾದ ಜನರ ಹೋರಾಟದ ಅಲೆಯ ವಿಸ್ತರಣೆಯ ಸಾಧ್ಯತೆ ಮತ್ತು ಮಾನವ ಹಕ್ಕು ಉಲ್ಲಂಘನೆಗಾಗಿ ವಿಶ್ವಸಂಸ್ಥೆ ಹಾಗೂ ಕೆಲವು ಶ್ರೀಮಂತ ದೇಶಗಳಿಂದ ಎದುರಿಸುತ್ತಿರುವ ವಾಣಿಜ್ಯ ಮತ್ತು ಆರ್ಥಿಕ ದಿಗ್ಬಂಧನಗಳಿಂದ ಪಾರಾಗುವ ಹುನ್ನಾರವಾಗಿ ಈ ಅಧಿಕಾರ ಹಸ್ತಾಂತರ ನಡೆಸಿರುವಂತೆ ತೋರುತ್ತದೆ. ಶಾಂತಿ ಮತ್ತು ಅಭಿವೃದ್ಧಿ ಮಂಡಲಿಯ (ಸ್ಟೇಟ್ ಪೀಸ್ ಅಂಡ್ ಡೆವಲೆಪ್‌ಮೆಂಟ್ ಕೌನ್ಸಿಲ್- ಎಸ್‌ಪಿಡಿಸಿ) ಹೆಸರಿನಲ್ಲಿ ಅಧಿಕಾರ ಹಿಡಿದುಕೊಂಡಿದ್ದ ಸೇನೆಯ ಕೂಟ ಈಗ ಅಧಿಕಾರವನ್ನು ಬಿಟ್ಟುಕೊಟ್ಟಿರುವುದು ಅದೇ ಸೇನಾಧಿಕಾರಿಗಳ ನಿಯಂತ್ರಣದಲ್ಲಿಯೇ ಅಸ್ತಿತ್ವಕ್ಕೆ ಬಂದ ಸಂಸತ್ತಿಗೆ. ಕಳೆದ ನವೆಂಬರ್‌ನಲ್ಲಿ, ಸುಮಾರು ಇಪ್ಪತ್ತು ವರ್ಷಗಳ ನಂತರ ನಡೆಸಿದ ಚುನಾವಣೆಯಲ್ಲಿ ಸಂಸತ್ತಿನ 489 ಸ್ಥಾನಗಳಲ್ಲಿ ಶೇ.25ರಷ್ಟನ್ನು ಸೇನೆಗೆ ಮೀಸಲಿಡಲಾಗಿತ್ತು. ಮ್ಯಾನ್ಮಾರ್‌ನಲ್ಲಿ ಪ್ರಜಾಸತ್ತೆಯ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿದ್ದ ಅಂಗ್ ಸಾನ್ ಸೂಕಿ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷ ಈ ಚುನಾವಣೆಯಲ್ಲಿ ಭಾಗವಹಿಸದಂತೆ ಸೇನೆಯ ಕೂಟ ನಿರ್ಬಂಧ ಹೇರಿದ್ದರಿಂದ ಹೊಸ ಸಂಸತ್ತಿನಲ್ಲಿ ಪ್ರಜಾಸತ್ತೆ ಪರವಾದಿಗಳಿಗೆ ಪ್ರಾತಿನಿಧ್ಯವೇ ಇರಲಿಲ್ಲ. ಸೇನೆಯ ಆಡಳಿತವೇ ಸಂಸತ್ತಿನ ರೂಪದಲ್ಲಿ ನಾಗರಿಕ ಆಡಳಿತವಾಗಿ ಅಸ್ತಿತ್ವಕ್ಕೆ ಬಂದಂತೆ ಆಗಿದೆ. ಭಾರತ, ಬಾಂಗ್ಲಾದೇಶ, ಚೀನಾ, ಥಾಯ್ಲೆಂಡ್ ದೇಶಗಳೊಂದಿಗೆ ಗಡಿ ಇರುವ ಮ್ಯಾನ್ಮಾರ್ ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗ ಭಾರತದ ಭಾಗವೇ ಆಗಿದ್ದ ಆಯಕಟ್ಟಿನ ದೇಶ. ಭಾರತ ಸ್ವಾತಂತ್ರ್ಯ ಗಳಿಸಿದ ಮರುವರ್ಷವೇ ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾದ ಮ್ಯಾನ್ಮಾರ್ (ಆಗಿನ ಹೆಸರು ಬರ್ಮಾ) ಹದಿನಾಲ್ಕೇ ವರ್ಷಗಳಲ್ಲಿ ಸೇನೆಯ ಆಡಳಿತಕ್ಕೆ ಒಳಗಾಯಿತು. ಬರ್ಮಾದ ಉ ಥಾಂಟ್ ಅವರು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿದ್ದಾಗ ಅಲ್ಲಿ ಕೆಲಸ ಮಾಡಿದ್ದ ಅಂಗ್ ಸಾನ್ ಸೂಕಿ ಸ್ವದೇಶಕ್ಕೆ ಹಿಂತಿರುಗಿ ಪ್ರಜಾಸತ್ತೆಗಾಗಿ ಹೋರಾಟ ಆರಂಭಿಸಿದರು. ಈ ಹೋರಾಟ 1990ರಲ್ಲಿ ನಡೆದ ಮುಕ್ತ ಚುನಾವಣೆಯಲ್ಲಿ ಶೇ 80 ರಷ್ಟು ಜನಬೆಂಬಲ ಗಳಿಸುವ ಮೂಲಕ ಯಶಸ್ವಿಯಾಗಿತ್ತು. ಸಂಸತ್ತಿನ 489 ಸ್ಥಾನಗಳಲ್ಲಿ 392 ಸ್ಥಾನ ಪಡೆದರೂ ಸೇನಾಕೂಟ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ ಕಾರಣ ಸೂಕಿ ಹೋರಾಟ ವ್ಯರ್ಥವಾಯಿತು. ರಾಜಕೀಯ ಚಟುವಟಿಕೆಗಳ ಮೇಲೆ ನಿರ್ಬಂಧ, ಪ್ರಜಾಸತ್ತೆ ಪರ ಹೋರಾಟಗಾರರಿಗೆ ಜೈಲು, ಜೀತ ಪದ್ಧತಿಯಂಥ ಮಾನವ ಹಕ್ಕು ಉಲ್ಲಂಘನೆಯಲ್ಲಿ ತೊಡಗಿರುವ ಸೇನೆಯ ಆಡಳಿತದಲ್ಲಿ ಜನದನಿಗೆ ಆಸ್ಪದವಿಲ್ಲ. ಈಗ ರಚಿಸಲಾದ ಸರ್ಕಾರದಲ್ಲಿ ಜನತೆಯ ನೈಜ ಪ್ರತಿನಿಧಿಗಳಿಲ್ಲವಾದ್ದರಿಂದ ಸೇನಾಡಳಿತ ಹೋಗಿ ಅಲ್ಲಿ ಪ್ರಜಾಸತ್ತೆ ನೆಲೆಗೊಂಡಿದೆ ಎಂದು ಭಾವಿಸಲಾಗದು. ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ ಮುಕ್ತ ವಾತಾವರಣದಲ್ಲಿ ಚುನಾವಣೆ ನಡೆದಾಗ ಮಾತ್ರ ಜನತೆಯ ಸರ್ಕಾರ ಅಲ್ಲಿ ಅಸ್ತಿತ್ವಕ್ಕೆ ಬರುವುದು ಸಾಧ್ಯ. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆಗಳ ಮರುಸ್ಥಾಪನೆಯಾಗದೆ ಅಧಿಕಾರ ಹಸ್ತಾಂತರವಷ್ಟೆ ಪ್ರಜಾಸತ್ತೆಯನ್ನು ಸ್ಥಾಪಿಸಲಾರದು. ವಿಶ್ವಸಂಸ್ಥೆಯೇ ಇಂಥ ಕ್ರಮಕ್ಕೆ ಮುಂದಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.