ಸ್ಮರಣೀಯ ವಿಶ್ವಕಪ್ ವಿಜಯ ಭಾರತ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಮತ್ತೆ ವಿಶ್ವ ಚಾಂಪಿಯನ್. ಕಷ್ಟದ ಹಾದಿಯಲ್ಲಿ ನಡೆದು ಇಷ್ಟವಾಗುವಂಥ ಆಟವಾಡಿದ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡವು ಹೊಸದೊಂದು ಅಧ್ಯಾಯ ಬರೆಯಿತು. ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಪಡೆದ ಜಯ ಸುಲಭವಾದದ್ದಲ್ಲ. ವಿಶ್ವಕಪ್ ಇತಿಹಾಸ ಕಂಡ ಅತ್ಯಂತ ರೋಮಾಂಚಕ ವಿಜಯಗಳಲ್ಲಿ ಒಂದೆಂದು ಇದು ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದುಕೊಂಡಿತು. ಕಪಿಲ್ ದೇವ್ ಮುಂದಾಳತ್ವದಲ್ಲಿ ವೆಸ್ಟ್ ಇಂಡೀಸ್ ಎದುರು ಗೆದ್ದು ಟ್ರೋಫಿ ಎತ್ತಿಹಿಡಿದಿದ್ದು ಪ್ರಬಲ ಪೈಪೋಟಿಯ ನಂತರವಲ್ಲ. ವಿಂಡೀಸ್ ನಿಕಟ ಹೋರಾಟ ನಡೆಸಿರಲೇ ಇಲ್ಲ. ಆದರೆ ದೋನಿ ಬಳಗಕ್ಕೆ ಜಯ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಕುಮಾರ ಸಂಗಕ್ಕಾರ ಮುಂದಾಳತ್ವದ ಸಿಂಹಳೀಯರ ಪಡೆಯು ಸುಲಭವಾಗಿ ಶರಣಾಗದೆ ಹೋರಾಡಿತು. ಎರಡನೇ ಬಾರಿಗೆ ಚಾಂಪಿಯನ್ ಆಗಬೇಕೆನ್ನುವ ಉಭಯ ತಂಡಗಳ ಈ ಹಣಾಹಣಿಯಲ್ಲಿ ಯಶಸ್ಸು ಸಿಕ್ಕಿದ್ದು ಭಾರತಕ್ಕೆ. ರಿಕಿ ಪಾಂಟಿಂಗ್ ತಂಡವನ್ನು ಮಣಿಸಿದಾಗಲೇ ವಿಶಿಷ್ಟವಾದ ಸಾಧನೆಯ ಶ್ರೇಯವೊಂದು ಭಾರತದ್ದಾಗಿತ್ತು. ವೆಸ್ಟ್ ಇಂಡೀಸ್ ಸತತ ಗೆಲುವಿನ ಓಟಕ್ಕೆ 1983ರಲ್ಲಿ ಅಂತ್ಯ ಹಾಡಿದ್ದರು ಕಪಿಲ್ ದೇವ್ ನಾಯಕತ್ವದ ತಂಡದವರು. ಆಸ್ಟ್ರೇಲಿಯಾಕ್ಕೆ ಕೂಡ ಇಂಥ ಆಘಾತ ನೀಡಿ, ಹತ್ತನೇ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿಯೇ ಹೊರಗೆ ಅಟ್ಟಿದ್ದು ದೋನಿ ನೇತೃತ್ವದ ತಂಡದ ಹಿರಿಮೆ. ಇದೆಲ್ಲವೂ ನಾಯಕನ ವಿವೇಚನೆ ಹಾಗೂ ತಂಡವನ್ನು ಮುನ್ನಡೆಸುವ ಸಾಮರ್ಥ್ಯದ ಫಲ. ಅದೆಲ್ಲಕ್ಕಿಂತ ಮುಖ್ಯವಾಗಿ ಅಂತಿಮ ಪಂದ್ಯದಲ್ಲಿ ‘ಮಹಿ’ ತಮ್ಮ ಜವಾಬ್ದಾರಿ ಅರಿತು ಆಡಿ, ತಂಡವನ್ನು ಗೆಲುವಿನ ದಡ ಸೇರಿಸಿದ್ದು ಸ್ಮರಣೀಯ. ಚಾಂಪಿಯನ್‌ಷಿಪ್‌ನುದ್ದಕ್ಕೂ ತಂಡಕ್ಕೆ ಬಲವಾಗಿದ್ದು ಯುವರಾಜ್ ಸಿಂಗ್. ಆದರೆ ಫೈನಲ್ ಗೆಲುವಿನ ಆಸೆಯ ಅರಮನೆಗೆ ಭದ್ರ ಬುನಾದಿ ಹಾಕಿದ್ದು ಗೌತಮ್ ಗಂಭೀರ್. ಪಂದ್ಯಕ್ಕೆ ರೋಮಾಂಚಕ ಅಂತ್ಯ ಸಿಗುವಂತೆ ಮಾಡಿದ್ದು ನಾಯಕ ದೋನಿ. ಆದರೆ ‘ಯುವಿ’ ಲೀಗ್ ಹಂತದಿಂದಲೇ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ಬೌಲಿಂಗ್‌ನಲ್ಲಿಯೂ ತಂಡಕ್ಕೆ ಭಾರಿ ಪ್ರಯೋಜನಕಾರಿ ಎನಿಸಿದರು. ಶ್ರೀಲಂಕಾ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿತ್ತು. ಕೊನೆಯ ಹಣಾಹಣಿಯಲ್ಲಿಯೂ ಅದು ಭಾರತಕ್ಕೆ ಸುಲಭದ ತುತ್ತಾಗಲಿಲ್ಲ. ಅಂಥದೊಂದು ಬಲಾಢ್ಯ ಕ್ರಿಕೆಟ್ ಶಕ್ತಿಯ ಪ್ರಶಸ್ತಿಯ ಕನಸನ್ನು ನುಚ್ಚುನೂರು ಮಾಡಿದ್ದೇ ದೊಡ್ಡ ಸಾಧನೆ. ಅಂತು ಇಪ್ಪತ್ತೆಂಟು ವರ್ಷಗಳ ನಂತರ ಚಾಂಪಿಯನ್ ಪಟ್ಟ ಸಿಕ್ಕಿತು. ಇದು ದೋನಿ ನಾಯಕತ್ವದ ಮಹಿಮೆಯೇ ಸರಿ. ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ದೊರಕಿಸಿಕೊಟ್ಟ, ಮೊಟ್ಟ ಮೊದಲ ಟ್ವೆಂಟಿ-20 ವಿಶ್ವಕಪ್ ಜಯಿಸಿಕೊಟ್ಟ ಮಹೇಂದ್ರ ಸಿಂಗ್ ಈಗ ಏಕದಿನ ಕ್ರಿಕೆಟ್‌ನಲ್ಲಿಯೂ ಯಶಸ್ವಿ ನಾಯಕ. ಸಚಿನ್ ತೆಂಡೂಲ್ಕರ್ ಅವರಂಥ ಅನುಭವಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ, ಕ್ರಿಕೆಟ್ ದಂತಕಥೆ ಎನಿಸಿರುವ ಸಚಿನ್‌ಗಾಗಿ ಟ್ರೋಫಿ ಕೂಡ ಗೆದ್ದಾಯಿತು. ಭಾರತದ ಈ ವಿಜಯದೊಂದಿಗೆ ಕ್ರಿಕೆಟ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಬಲ ಪಡೆಯಿತೆಂದೇ ಹೇಳಬೇಕು. ಕಾರಣ ಚೆಂಡು-ದಾಂಡಿನ ಈ ಆಟವು ಆರ್ಥಿಕವಾಗಿ ಬಲವಾಗಿರುವುದೇ ಭಾರತ ಇರುವ ಕಾರಣ. ಭಾರಿ ಸಂಖ್ಯೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಇರುವ ದೇಶದ ತಂಡವು ವಿಶ್ವಕಪ್‌ನಿಂದ ಬೇಗ ನಿರ್ಗಮಿಸಿ, ಟೂರ್ನಿಯೇ ವಿಫಲವಾಗಬಾರದು ಎನ್ನುವ ಕಾರಣಕ್ಕಾಗಿಯೇ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಈ ಬಾರಿಯ ವಿಶ್ವಕಪ್ ಸ್ವರೂಪವನ್ನು ಬದಲಿಸಿದ್ದು ಮುಚ್ಚಿಟ್ಟ ಗುಟ್ಟೇನು ಅಲ್ಲ. ಭಾರತ ಮತ್ತೆ ಗೆದ್ದಾಯಿತು; ಈಗ ಈ ವಿಜಯದ ಪ್ರಯೋಜನ ಆಟಗಾರರಿಗೆ ಹಾಗೂ ದೇಶದ ಕ್ರಿಕೆಟ್‌ಗೆ ಆಗಬೇಕು. ಕೆಲವರಿಗೇ ಲಾಭ ತರುವ ಕ್ರೀಡೆ ಇದಾಗಿ ಉಳಿಯದೆಯೇ ಕೆಳಮಟ್ಟದಲ್ಲಿ ಪ್ರತಿಭೆಗಳನ್ನು ರೂಪಿಸುವಂಥ ಚಟುವಟಿಕೆಗೆ ಪ್ರೇರಣೆ ಎನಿಸಿದರೆ ಒಳಿತು. ಆಗಲೇ ಮತ್ತೆ ಮತ್ತೆ ಇಂಥ ಯಶಸ್ಸಿಗಾಗಿ ಸಂಭ್ರಮಿಸುವ ಅವಕಾಶ ಸಿಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.