ಸರ್ಕಾರಕ್ಕೆ ಹೆಚ್ಚಿದ ಹೊಣೆ ಜನಸಂಖ್ಯೆಯಲ್ಲಿ ಭಾರತ ವಿಶ್ವದ ಎರಡನೇ ದೊಡ್ಡ ರಾಷ್ಟ್ರ ಎನ್ನುವುದು ಮತ್ತೆ ಸಾಬೀತಾಗಿದೆ. 2001ರಲ್ಲಿ ಇದ್ದ 102 ಕೋಟಿ ಜನಸಂಖ್ಯೆ ಈಗ 121 ಕೋಟಿ ಮುಟ್ಟಿದೆ. ಆದರೆ, ಹಿಂದಿನ ಜನಗಣತಿಗೆ ಹೋಲಿಸಿದರೆ ಜನಸಂಖ್ಯೆಯ ವೃದ್ಧಿ ದರ ಗಣನೀಯವಾಗಿ ಇಳಿಮುಖವಾಗಿರುವುದು ಸಮಾಧಾನಕರ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರವನ್ನು ಹೊರತು ಪಡಿಸಿದರೆ, ಉತ್ತರ ಭಾರತದ ರಾಜ್ಯಗಳಲ್ಲಿನ ಜನಸಂಖ್ಯೆಯ ವೃದ್ಧಿದರದಲ್ಲಿ ಕುಸಿತ ಕಂಡಿರುವುದು ಜನಸಂಖ್ಯೆ ನಿಯಂತ್ರಣದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಕರ್ನಾಟದ ಜನಸಂಖ್ಯೆಯ ಪ್ರಮಾಣವೂ ಈಗ ಆರು ಕೋಟಿ ಮುಟ್ಟಿದೆ. ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ಮತ್ತೆ ಅಂತರ ಕಂಡು ಬಂದಿದೆ. ಒಂದು ಸಾವಿರ ಗಂಡು ಮಕ್ಕಳಿಗೆ 914 ಹೆಣ್ಣು ಮಕ್ಕಳಿರುವುದು ಆತಂಕಕಾರಿ ಬೆಳವಣಿಗೆ. ಈ ವ್ಯತ್ಯಾಸಕ್ಕೆ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯೇ ಕಾರಣ. ಆದ್ದರಿಂದ ಹೆಣ್ಣು ಭ್ರೂಣ ಹತ್ಯೆ ಕಾಯ್ದೆಗೆ ವಿರುದ್ಧವಾಗಿದ್ದರೂ, ಅದು ದೇಶದಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವುದು ರಹಸ್ಯದ ಸಂಗತಿಯೇನಲ್ಲ. ಇದಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿನ ಅನೈತಿಕ ವ್ಯವಹಾರ ಕಾರಣವಾದರೂ, ಹೆಣ್ಣು ಮಕ್ಕಳ ಬಗೆಗೆ ಪೋಷಕರಲ್ಲಿರುವ ನಕಾರಾತ್ಮಕ ಭಾವನೆ ಬದಲಾಗಬೇಕಿದೆ. ಇನ್ನು ಸಾಕ್ಷರತೆಯ ಪ್ರಮಾಣವು ಗಣನೀಯವಾಗಿ ಏರಿಕೆ ಆಗಿರುವುದು ಪ್ರಗತಿಯ ಸೂಚನೆ. ರಾಷ್ಟ್ರಮಟ್ಟದಲ್ಲಿನ ಸಾಕ್ಷರತಾ ಪ್ರಮಾಣ ಶೇ 74.04 ಇದ್ದು, ಕರ್ನಾಟಕದಲ್ಲಿ ಈ ಹಿಂದೆ ಇದ್ದ ಶೇ 66.6 ಈಗ 75.60ಕ್ಕೆ ಮುಟ್ಟಿರುವುದು ಸಮಾಧಾನಕರ. ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಆದ್ಯತೆಯನ್ನು ನೋಡಿದರೆ ಸಾಕ್ಷರತೆಯ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ. ಆ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಹೆಚ್ಚಿನ ಗಮನ ನೀಡುವ ಅಗತ್ಯವನ್ನು ಈ ಜನಗಣತಿಯ ಮಾಹಿತಿಯಿಂದ ತಿಳಿಯಬೇಕಿದೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಸಾಕ್ಷರತೆಯ ಪ್ರಮಾಣಕ್ಕೆ ತಕ್ಕಂತೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಮತ್ತು ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವತ್ತ ಗಂಭೀರವಾಗಿ ಚಿಂತಿಸಲು ಇದು ಸಕಾಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.