ಬಲಿಷ್ಠ ಲೋಕಪಾಲರು ಬೇಕು ಭ್ರಷ್ಟಾಚಾರವೆಂಬುದು ಮೇಲಿನಿಂದ ಕೆಳಕ್ಕೆ ಹರಿದು ಬರುವ ಕೊಳಚೆ. ಇದನ್ನು ನಿರ್ಮೂಲನೆ ಮಾಡಬೇಕಾದರೆ ಅದರ ಮೂಲ ಹರಿವು ಬತ್ತಬೇಕು.ಈ ಉದ್ದೇಶದಿಂದಲೇ ನಾಲ್ಕು ದಶಕಗಳ ಹಿಂದೆಯೇ ಪ್ರಾರಂಭವಾದ ಲೋಕಪಾಲರ ನೇಮಕದ ಪ್ರಯತ್ನ ಸಾಕಾರಗೊಳ್ಳಲು ಕಾಲ ಇನ್ನೂ ಕೂಡಿ ಬಂದಿಲ್ಲ. ಒಂಬುಡ್ಸ್‌ಮನ್ ರೂಪದ ಲೋಕಪಾಲರನ್ನು ನೇಮಿಸಬೇಕೆಂದು ಮೊರಾರ್ಜಿ ದೇಸಾಯಿ ಅಧ್ಯಕ್ಷತೆಯ ಮೊದಲ ಆಡಳಿತ ಸುಧಾರಣಾ ಆಯೋಗ 1967ರಲ್ಲಿಯೇ ಶಿಫಾರಸು ಮಾಡಿತ್ತು. ಮರುವರ್ಷ ಲೋಕಸಭೆಯಲ್ಲಿ ಮಸೂದೆಯ ಮಂಡನೆಯೂ ಆಗಿತ್ತು. ಅದರ ನಂತರ ಎಂಟು ಬಾರಿ ಬೇರೆಬೇರೆ ಲೋಕಪಾಲ ಮಸೂದೆಗಳು ಸಂಸತ್‌ನಲ್ಲಿ ಮಂಡನೆಯಾಗಿವೆ. ಕೊನೆಯ ಬಾರಿ ಮಂಡನೆಯಾಗಿದ್ದು 2008ರಲ್ಲಿ. ಆದರೆ ಪ್ರತಿಬಾರಿಯೂ ಆಡಳಿತಾರೂಢ ಪಕ್ಷ ವಿರೋಧ ಪಕ್ಷಗಳ ಸಹಕಾರದೊಡನೆ ಒಂದಲ್ಲ ಒಂದು ಕುಂಟುನೆಪವೊಡ್ಡಿ ಮಸೂದೆ ಕಾನೂನಿನ ರೂಪ ಪಡೆಯದಂತೆ ನೋಡಿಕೊಂಡಿವೆ. ಮಸೂದೆಯನ್ನು ದುರ್ಬಲಗೊಳಿಸುವ ಹುನ್ನಾರಗಳು ಸತತವಾಗಿ ನಡೆದಿವೆ. ಈ ಬಾರಿ ರಚನೆಗೊಂಡ ಕರಡು ಲೋಕಪಾಲ ಮಸೂದೆ ಬಗ್ಗೆಯೂ ಇಂತಹದ್ದೇ ಆರೋಪಗಳಿವೆ. ಹೊರಗಿನವರು ಮಾತ್ರವಲ್ಲ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ ಕೂಡಾ ಪ್ರಸ್ತಾಪಿತ ಮಸೂದೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಭ್ರಷ್ಟಾಚಾರದ ನಿಯಂತ್ರಣದ ಬಗ್ಗೆ ಹೋರಾಟ ನಡೆಸುತ್ತಿರುವ ಸಾಮಾಜಿಕ ಸೇವಾ ಕಾರ್ಯಕರ್ತರ ಗುಂಪೊಂದು ಪರ್ಯಾಯವಾಗಿ ‘ಜನ ಲೋಕಪಾಲ ಮಸೂದೆ’ಯನ್ನು ರಚಿಸಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಈ ಜನಾಭಿಪ್ರಾಯದ ದನಿಯಾಗಿ ಆಮರಣಾಂತ ಉಪವಾಸ ಪ್ರಾರಂಭಿಸಿರುವ ಪ್ರಸಿದ್ಧ ಸಾಮಾಜಿಕ ಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಈ ವರೆಗಿನ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡಲು ಹೊರಟಿದ್ದಾರೆ. ಲೋಕಪಾಲರು ಸರ್ಕಾರದ ನಿಯಂತ್ರಣದಿಂದ ಸಂಪೂರ್ಣವಾಗಿ ಮುಕ್ತರಾಗಬೇಕಾದರೆ ಅವರಿಗೆ ಸುಪ್ರೀಂ ಕೋರ್ಟ್ ಇಲ್ಲವೇ ಕೇಂದ್ರ ಚುನಾವಣಾ ಆಯೋಗದ ರೀತಿಯಲ್ಲಿ ಸ್ವಾಯತ್ತ ಸ್ಥಾನಮಾನ ನೀಡಬೇಕು, ಉನ್ನತ ಸ್ಥಾನಗಳಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಿದರಷ್ಟೇ ಸಾಲದು, ಸರ್ಕಾರದ ಬಗ್ಗೆ ಜನರ ದೂರುಗಳನ್ನೂ ಸ್ವೀಕರಿಸಿ ಅವುಗಳನ್ನು ಪರಿಹರಿಸುವ ಅಧಿಕಾರವನ್ನೂ ಲೋಕಪಾಲರಿಗೆ ನೀಡಬೇಕು. ತನಿಖೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು, ತನಿಖೆಯ ವಿವರವನ್ನು ಸಾರ್ವಜನಿಕರಿಗೆ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಹೋರಾಟಗಾರರು ಸರ್ಕಾರದ ಮುಂದಿಟ್ಟಿದ್ದಾರೆ. ಇವೆಲ್ಲವೂ ಸಾರ್ವಜನಿಕ ಜೀವನವನ್ನು ಸ್ವಚ್ಛಗೊಳಿಸಲು ಅಗತ್ಯವಾದ ನ್ಯಾಯಬದ್ಧ ಬೇಡಿಕೆಗಳು. ಆದರೆ ತಮ್ಮ ನಿಯಂತ್ರಣ ಮೀರಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯದ ಲೋಕಪಾಲರು ಯಾವ ಸರ್ಕಾರಕ್ಕೂ ಬೇಕಿಲ್ಲ. ಭ್ರಷ್ಟಾಚಾರದ ಹಗರಣಗಳಲ್ಲಿ ಮುಳುಗಿಹೋಗಿರುವ ಯುಪಿಎ ಸರ್ಕಾರ ಕೂಡಾ ಹಿಂದಿನ ಸರ್ಕಾರಗಳ ದಾರಿಯಲ್ಲಿ ಹೊರಟಿದೆ. ಅಣ್ಣಾ ಹಜಾರೆ ಅವರು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದ್ದರೂ ಪ್ರಧಾನಿ ಮನಮೋಹನ್‌ಸಿಂಗ್ ಅವರು ಕಿವಿಗೊಟ್ಟಿಲ್ಲ. ಈಗ ಉಳಿದಿರುವ ದಾರಿ ಎಂದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರ ಮಧ್ಯಪ್ರವೇಶ. ಅವರು ತಕ್ಷಣ ಸರ್ಕಾರದ ಮೇಲೆ ತನ್ನ ಪ್ರಭಾವ ಬೀರಿ ದೇಶದ ಸಾಮಾನ್ಯ ಜನತೆಯ ಆತ್ಮಸಾಕ್ಷಿಯಂತೆ ಇರುವ ಅಣ್ಣಾ ಹಜಾರೆ ಅವರ ಬೇಡಿಕೆಗಳನ್ನು ಒಪ್ಪುವಂತೆ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.