ಮರಳಿನ ಅಕ್ರಮ ಗಣಿಗಾರಿಕೆ ಮರಳಿನ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಸರ್ಕಾರ ಮರಳು ನೀತಿಯನ್ನು ಪ್ರಕಟಿಸಿದೆಯಾದರೂ ಅದರಿಂದ ಮರಳು ದಂಧೆಯ ಮೇಲೆ ಯಾವುದೇ ಪರಿಣಾಮವಾಗಿಲ್ಲ. ಬದಲಾಗಿ ಸರ್ಕಾರಕ್ಕೆ ಸವಾಲು ಹಾಕುವಷ್ಟು ಪ್ರಬಲವಾಗಿ ಮರಳಿನ ಅಕ್ರಮ ದಂಧೆ ಬೇರು ಬಿಟ್ಟಿರುವಂತೆ ತೋರುತ್ತದೆ. ಮರಳಿನ ಅಕ್ರಮ ಗಣಿಗಾರಿಕೆಯನ್ನು ಪತ್ತೆಹಚ್ಚಲು ಹೋದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಲಾರಿಯನ್ನು ನುಗ್ಗಿಸಲು ಯತ್ನಿಸಲಾಗಿದೆ. ಪರವಾನಗಿ ದಾಖಲೆಗಳಿಲ್ಲದೆ, ಮರಳನ್ನು ಸಾಗಿಸುತ್ತಿದ್ದ 19 ಲಾರಿಗಳನ್ನು ವಶಕ್ಕೆ ತೆಗೆದುಕೊಂಡರೂ ಪೊಲೀಸ್ ಅಧಿಕಾರಿಯ ಮೇಲೆ ಲಾರಿ ನುಗ್ಗಿಸಿ ಹತ್ಯೆಗೆ ಯತ್ನಿಸಿದ ಚಾಲಕನನ್ನು ಘಟನೆ ನಡೆದ ಎರಡು ದಿನಗಳ ನಂತರವೂ ಬಂಧಿಸಲು ಆಗದೇ ಇರುವುದನ್ನು ಗಮನಿಸಿದರೆ ಮರಳು ದಂಧೆ ಸರ್ಕಾರದ ಆಡಳಿತ ಯಂತ್ರದ ಮೇಲೆ ಹೊಂದಿರುವ ಪ್ರಭಾವದ ಅರಿವಾಗುತ್ತದೆ. ರಾಜಕೀಯ ಅಧಿಕಾರದ ರಕ್ಷಣೆಯಿಲ್ಲದೆ ಹೀಗೆ ಪೊಲೀಸು ಮತ್ತು ಜಿಲ್ಲಾಡಳಿತವನ್ನು ನಿಷ್ಕ್ರಿಯಗೊಳಿಸುವುದು ಸಾಧ್ಯವಿಲ್ಲ. ಮರಳಿನ ಅಕ್ರಮ ಗಣಿಗಾರಿಕೆ ವಿರುದ್ಧ ನಡೆದ ಸಚಿವರ ನೇರ ಕಾರ್ಯಾಚರಣೆಗೆ ವ್ಯಕ್ತವಾದ ಈ ಮಟ್ಟದ ಪ್ರತಿಕ್ರಿಯೆ ಸರ್ಕಾರಕ್ಕೆ ಹಾಕಿದ ಸವಾಲು. ಈ ಘಟನೆಯನ್ನು ರಾಜ್ಯ ಸರ್ಕಾರ ಲಘುವಾಗಿ ಪರಿಗಣಿಸಲಾಗದು. ತಕ್ಷಣ ಕಾರ್ಯೋನ್ಮುಖವಾಗಿ ಮರಳು ದಂಧೆಯ ಹಿಂದೆ ಇರುವ ಪಟ್ಟಭದ್ರರನ್ನು ಹಿಡಿದು ಕಾನೂನು ಕ್ರಮಕ್ಕೆ ಒಳಪಡಿಸುವ ದಿಟ್ಟತನವನ್ನು ಪ್ರದರ್ಶಿಸಬೇಕು. ಕಟ್ಟಡ ನಿರ್ಮಾಣದಲ್ಲಿ ಅನಿವಾರ್ಯ ಘಟಕವಾಗಿರುವ ಮರಳಿಗೆ ಯಾವತ್ತೂ ಬೇಡಿಕೆ ಇದೆ. ಬೆಂಗಳೂರು ಮತ್ತು ರಾಜ್ಯದ ಇತರ ನಗರಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ನಿರ್ಮಾಣ ಚಟುವಟಿಕೆಯ ಕಾರಣ ಮರಳು ಗಣಿಗಾರಿಕೆ ಲಾಭದ ಉದ್ಯಮ. ಆದ್ದರಿಂದಲೇ ಎಲ್ಲ ರಾಜಕೀಯ ಪಕ್ಷಗಳಲ್ಲಿನ ಪ್ರಭಾವಿ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಇದರಲ್ಲಿ ಆಸಕ್ತರು. ಮರಳಿನ ಉದ್ಯಮದಲ್ಲಿ ಲಾಭವೊಂದೇ ಇವರ ದೃಷ್ಟಿಯಾಗಿರುವ ಕಾರಣ ಕೆಲವು ನದೀತಟಗಳ ಮರಳಿನ ನಿಕ್ಷೇಪವೆಲ್ಲ ಸೂರೆಯಾಗಿ ಹೋಗುತ್ತಿದೆ. ಮರಳು ಗಣಿಗಾರಿಕೆ ನಡೆಯುವ ಗ್ರಾಮಗಳಿಗೆ ಅದರಿಂದ ಬರುವ ಆದಾಯದಲ್ಲಿ ಅರ್ಧದಷ್ಟು ಪಾಲು ಇರಬೇಕೆಂದು ಸರ್ಕಾರ ಮರಳು ನೀತಿಯನ್ನು ಪ್ರಕಟಿಸಿದೆ. ಗ್ರಾಮಪಂಚಾಯತ್‌ಗಳಲ್ಲಿ ರಸ್ತೆ ಸುಧಾರಣೆ, ದುರಸ್ತಿ ಕಾಮಗಾರಿ ಮೊದಲಾದ ಕೆಲಸಗಳಿಗೆ ಈ ಆದಾಯ ಬಳಕೆಯಾಗಬೇಕು ಎಂಬುದು ಸರ್ಕಾರದ ಚಿಂತನೆ. ಇದೇ ಏಪ್ರಿಲ್‌ನಿಂದ ಹೊಸ ಮರಳುನೀತಿಯ ಜಾರಿಗೆ ಸರ್ಕಾರ ಪ್ರಕಟಿಸಿದೆ. ಆದರೆ ಗ್ರಾಮ ಪಂಚಾಯತ್ ಹಂತಕ್ಕೂ ಇಳಿದಿರುವ ಭ್ರಷ್ಟಾಚಾರದ ಕಾರಣ ಮರಳು ಗಣಿಗಾರಿಕೆಗೆ ಸ್ಥಳೀಯರ ಪರೋಕ್ಷ ಪ್ರೋತ್ಸಾಹ ಸಿಗುತ್ತಿರುವ ದುರದೃಷ್ಟಕರ ಬೆಳವಣಿಗೆ ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಂದ ವರದಿಯಾಗಿದೆ. ನೈಸರ್ಗಿಕ ಸಂಪತ್ತನ್ನು ಸಂಪೂರ್ಣ ಲೂಟಿಯಾಗಲು ಬಿಡದೆ ಅದನ್ನು ಮುಂದಿನ ಪೀಳಿಗೆಗೂ ಉಳಿಸುವ ಜಾಗೃತಿ ಜನತೆಯಲ್ಲಿ ಮೂಡಬೇಕು. ಇಂಥ ಪ್ರಯತ್ನ ಸರ್ಕಾರದ ಉನ್ನತ ಅಧಿಕಾರ ಸ್ಥಾನದಿಂದ ನಡೆಯಬೇಕು. ಆಗ ಮಾತ್ರ ಅಕ್ರಮ ಚಟುವಟಿಕೆಗಳಿಗೆ ತೆರೆ ಬೀಳುವುದು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.