ಮುಂದುವರಿದ ಅಸಮಾನತೆ ಬೆಂಗಳೂರಿನ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಬೆಳವಣಿಗೆಯಾಗಿರುವುದನ್ನು ಇತ್ತೀಚಿನ ಜನಗಣತಿಯ ವಿವರಗಳು ಬೆಳಕು ಚೆಲ್ಲಿವೆ. ರಾಜ್ಯದ ಒಟ್ಟು ಜನಸಂಖ್ಯೆ 6.11ಕೋಟಿ. ಇವರಲ್ಲಿ 95.88 ಲಕ್ಷ ಜನರು ಬೆಂಗಳೂರಿನಲ್ಲೇ ಇದ್ದಾರೆ. ಆದರೆ ರಾಜ್ಯದ ರಾಜಧಾನಿಯಾಗಿದ್ದು ಭಾರಿ ಬೆಳವಣಿಗೆ ಸಾಧಿಸುತ್ತಿರುವ ಬೆಂಗಳೂರು ನಗರದ ಲಿಂಗಾನುಪಾತ ಮಾತ್ರ ಆತಂಕ ಹುಟ್ಟಿಸುವಂತಿದೆ. ಲಿಂಗಾನುಪಾತ ಪಟ್ಟಿಯಲ್ಲಿ ರಾಜ್ಯದಲ್ಲೇ ಕಟ್ಟಕಡೆಯ ಸ್ಥಾನ ಬೆಂಗಳೂರಿಗೆ ಸಿಕ್ಕಿದೆ. 1000 ಮಂದಿ ಪುರುಷರಿಗೆ ಬೆಂಗಳೂರಿನಲ್ಲಿರುವ ಮಹಿಳೆಯರ ಪ್ರಮಾಣ ಕೇವಲ 908. ನಂತರದ ಸ್ಥಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯದ್ದು. ಇಲ್ಲಿರುವ ಮಹಿಳೆಯರ ಅನುಪಾತ 945. ವಿಪರ್ಯಾಸವೆಂದರೆ ಅತ್ಯಂತ ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಯಾದಗಿರಿ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲೇ ಸುಧಾರಿತ ಲಿಂಗಾನುಪಾತವಿದೆ. ಆದರೆ ಮಹಿಳಾ ಸಾಕ್ಷರತೆ ಪ್ರಮಾಣ ಬೆಂಗಳೂರು ನಗರದಲ್ಲಿ ಶೇ 84.80ರಷ್ಟಿದ್ದು ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸಿದೆ ಎಂದು ಹೆಮ್ಮೆ ಪಡಬಹುದು. ಮಹಿಳೆಯರ ಪ್ರಗತಿಗೆ ಇದು ಸೂಚಕ ಎಂದೂ ಹೇಳಬಹುದು. ಆದರೆ ಇದೇ ಪ್ರಗತಿ ಮಹಿಳೆಯ ಅಸ್ತಿತ್ವಕ್ಕೇ ಮುಳುವಾಗುತ್ತಿದೆಯೆ? ಎಂಬಂತಹ ಪ್ರಶ್ನೆಯನ್ನು ಲಿಂಗಾನುಪಾತದ ಅಂಕಿಅಂಶಗಳು ಎತ್ತಿವೆ. ವರದಕ್ಷಿಣೆ ಕೊಲೆಗಳು, ಆತ್ಮಹತ್ಯೆ, ಇತ್ಯಾದಿ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲೇ ವರದಿಯಾಗುತ್ತಿವೆ. 0-6 ವಯೋಮಾನದ ಮಕ್ಕಳಲ್ಲೂ ಲಿಂಗಾನುಪಾತ ರಾಜ್ಯದಲ್ಲಿ ಕುಸಿದಿದೆ. 2001ರಲ್ಲಿ 946 ಇದ್ದ ಹೆಣ್ಣುಮಕ್ಕಳ ಅನುಪಾತ 2011ರಲ್ಲಿ 943ಕ್ಕೆ ಕುಸಿದಿದೆ. ವಿಶೇಷವಾಗಿ ಚಾಮರಾಜನಗರ, ದಾವಣಗೆರೆ, ರಾಯಚೂರು, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಇಳಿಕೆಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ಗಂಡು- ಹೆಣ್ಣಿನ ನಡುವಿನ ತಾರತಮ್ಯದ ಈ ಅಂಕಿಅಂಶಗಳು ಆಘಾತಕಾರಿ.ಅದರಲ್ಲೂ ಸಾಕ್ಷರತೆ ವಿಚಾರಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಜಿಲ್ಲೆಗಳಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಇನ್ನೂ ಶೇ 60 ಮೀರಿಲ್ಲ ಎಂಬುದಂತೂ ನಾವಿನ್ನೂ ಸಾಧಿಸಬೇಕಿರುವತ್ತ ಬೆರಳು ಮಾಡುತ್ತದೆ. ಲಿಂಗಾನುಪಾತದಲ್ಲಿ ಸುಧಾರಿತ ಅಂಕಿಅಂಶ ತೋರಿರುವ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಈಗಲೂ ಶೇ 50ಕ್ಕಿಂತ ಕಡಿಮೆ ಇರುವುದು ಆತಂಕಕಾರಿ. ಬಡತನದಿಂದ ಉದ್ಯೋಗ ಅರಸಿ ಬೇರೆ ಊರುಗಳಿಗೆ ವಲಸೆ ಹೋಗುವ ಪದ್ಧತಿ, ಬಾಲ್ಯವಿವಾಹ ಇತ್ಯಾದಿ ಅಂಶಗಳೆಲ್ಲಾ ಹೆಣ್ಣುಮಕ್ಕಳ ಅಕ್ಷರ ಕಲಿಕೆಗೆ ಅಡ್ಡಗಾಲಾಗಿರಬಹುದು. ಬೆಂಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ- ಈ ಮೂರು ಜಿಲ್ಲೆಗಳಲ್ಲಿ ಮಾತ್ರ ಮಹಿಳಾ ಸಾಕ್ಷರತೆ ಪ್ರಮಾಣ ಶೇ 80ಕ್ಕಿಂತ ಹೆಚ್ಚಿದೆ. ಕಳೆದ 10 ವರ್ಷಗಳಲ್ಲಿ ಒಟ್ಟು ರಾಜ್ಯದಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಶೇ 76.10ಯಿಂದ 2011ರಲ್ಲಿ ಶೇ 82.85ಕ್ಕೆ ಏರಿದೆ. ಮಹಿಳಾ ಸಾಕ್ಷರತೆ ಪ್ರಮಾಣ ಶೇ 56.86ರಿಂದ ಶೇ 68.13ಕ್ಕೆ ಮಾತ್ರ ಏರಿದೆ. ಅಭಿವೃದ್ಧಿ ಪಥದಲ್ಲಿ ಮಹಿಳೆಯರೂ ಸಮಾನ ಪಾಲುದಾರರು. ಲಿಂಗ ತಾರತಮ್ಯವನ್ನು ಧ್ವನಿಸುತ್ತಿರುವ ಈ ಅಂಕಿಅಂಶಗಳು ನಮಗೆ ಎಚ್ಚರಿಕೆಯ ಗಂಟೆಯಾಗಬೇಕು. ಈ ತಾರತಮ್ಯಗಳನ್ನು ಸರಿಪಡಿಸಲು ನೀತಿ ನಿಯಮಾವಳಿಗಳ ಮಟ್ಟದಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಹಾಗೆಯೇ ಸಾಮಾಜಿಕ ಬದಲಾವಣೆಗಳಿಗೆ ನಾಗರಿಕ ಸಮಾಜವೂ ಆಂದೋಲನ ರೂಪಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.