ಮೆಟ್ರೊ ಸುರಕ್ಷತೆ ಮುಖ್ಯ ಬೆಂಗಳೂರು ಮೆಟ್ರೊ ರೈಲು ಮಹಾತ್ಮ ಗಾಂಧಿ ರಸ್ತೆಯ ಅನಿಲ್‌ಕುಂಬ್ಳೆ ವೃತ್ತ- ಬಯ್ಯಪ್ಪನಹಳ್ಳಿವರೆಗಿನ ಸಂಚಾರವನ್ನು ಬರುವ ಯುಗಾದಿ ಹಬ್ಬದಂದು (ಏ. 4) ಆರಂಭಿಸುವ ಮುಖ್ಯಮಂತ್ರಿ ಅವರ ಕನಸು ಎರಡನೇ ಬಾರಿಗೆ ಭಗ್ನವಾಗುತ್ತಿದೆ. ಈ ಹಿಂದೆ ಡಿಸೆಂಬರ್ ಕೊನೆಯ ವಾರದಲ್ಲಿಯೇ ಈ ಮಾರ್ಗದ ಸಂಚಾರ ಆರಂಭವಾಗುವುದಾಗಿ ಘೋಷಿಸಿದ್ದರು. ಪದೇ ಪದೇ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಆದಷ್ಟು ಬೇಗನೆ ತಮ್ಮಿಂದಲೇ ಮೆಟ್ರೊ ರೈಲು ಉದ್ಘಾಟನೆ ಆಗಲಿ ಎಂಬ ಧಾವಂತ ಕಾಣುತ್ತಿದೆ. ಇವರ ಒತ್ತಡದಿಂದಾಗಿ ಯುಗಾದಿ ಹಬ್ಬದಂದು 6.7 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಸಂಚಾರ ಆರಂಭಿಸುವ ತರಾತುರಿಯಲ್ಲಿ ಅಂತಿಮ ಹಂತದ ಕಾಮಗಾರಿ ಭರದಿಂದ ನಡೆಯುತ್ತಿದೆಯಾದರೂ, ನಿಗದಿತ ದಿನದಂದು ಉದ್ಘಾಟನೆಗೊಳ್ಳುವ ಸೂಚನೆ ಇಲ್ಲ. ಮೆಟ್ರೊ ರೈಲು ಯೋಜನೆಗೆ ನಿರ್ಧಾರ ತೆಗೆದುಕೊಳ್ಳುವುದರಲ್ಲಿಯೇ ಹಿಂದಿನ ಮುಖ್ಯಮಂತ್ರಿಗಳಿಂದ ಸಾಕಷ್ಟು ವಿಳಂಬವಾಗಿದ್ದು ಅದಕ್ಕಾಗಿ ಈಗ ಆತುರಪಡುವುದು ಅನಗತ್ಯ. ಈಗಾಗಲೇ ಈ ಮಾರ್ಗದಲ್ಲಿ ಮೆಟ್ರೊ ರೈಲು ಪ್ರಾಯೋಗಿಕ ಸಂಚಾರ ಆರಂಭಿಸಿದೆಯಾದರೂ, ಈ ಮಾರ್ಗದಲ್ಲಿನ ಕೆಲವು ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್, ಎಸ್ಕಲೇಟರ್ ಮುಂತಾದ ಕಾಮಗಾರಿಗಳು ಇನ್ನೂ ಅಪೂರ್ಣವಾಗಿವೆ. ಜೊತೆಗೆ ಪ್ರಾಯೋಗಿಕವಾಗಿ ರೈಲು ಓಡಾಟ ಇದುವರೆಗೆ ಒಂದು ಸಾವಿರ ಕಿ.ಮೀ ಮಾತ್ರ ಆಗಿರುವುದಾಗಿ ಹೇಳಲಾಗುತ್ತಿದೆ. ಪ್ರಾಯೋಗಿಕ ಸಂಚಾರ ಎರಡೂವರೆ ಸಾವಿರ ಕಿ.ಮೀ ಆಗಬೇಕು. ಈ ಅಪೂರ್ಣ ಕಾಮಗಾರಿಯಿಂದಾಗಿ ರೈಲ್ವೆ ಸುರಕ್ಷತಾ ಕಮೀಷನರ್ ಅವರಿಂದ ಮೆಟ್ರೊ ರೈಲುಸಂಚಾರಕ್ಕೆ ಇನ್ನೂ ಹಸಿರು ನಿಶಾನೆ ಸಿಕ್ಕಿಲ್ಲ. ಮೆಟ್ರೊ ಕಾಮಗಾರಿಯಿಂದ ನಗರದಲ್ಲಿ ಸಂಚಾರ ಅವ್ಯವಸ್ಥೆ ಎದುರಿಸುತ್ತಿರುವ ನಾಗರಿಕರಿಗೆ ಈ ಯೋಜನೆ ಎಷ್ಟೊತ್ತಿಗೆ ಮುಗಿದೀತು ಎಂದು ಕಾಯುತ್ತಿದ್ದಾರೆ ಎನ್ನುವುದು ನಿಜ. ಆದರೆ ನಗರದ ಒಂದು ಭಾಗದಲ್ಲಿನ ಮೆಟ್ರೊ ರೈಲು ಸೌಲಭ್ಯದಿಂದ ನಗರದಲ್ಲಿನ ಸಂಚಾರ ಸಮಸ್ಯೆಗೆ ಪರಿಹಾರ ಸಿಗುವುದಾಗಿ ಯಾರೂ ನಿರೀಕ್ಷಿಸಿರಲಾರರು. ಆದ್ದರಿಂದ ಪ್ರಯಾಣಿಕರ, ರೈಲು ಮತ್ತು ರೈಲು ಮಾರ್ಗದ ಸುರಕ್ಷತೆ ಮುಖ್ಯ. ಮೊದಲ ಹಂತದ ರೈಲು ಮಾರ್ಗ ಸುರಕ್ಷಿ ತ ಮತ್ತು ಉಪಯುಕ್ತ ಎನ್ನುವ ವಿಶ್ವಾಸವನ್ನು ನಾಗರಿಕರಲ್ಲಿ ಉಂಟು ಮಾಡಬೇಕು. ಈ ದೃಷ್ಟಿಯಿಂದ ಈಗ ಸಿದ್ಧವಾಗುತ್ತಿರುವ ಮಹಾತ್ಮ ಗಾಂಧಿ ರಸ್ತೆ- ಬಯ್ಯಪ್ಪನಹಳ್ಳಿ ಮಾರ್ಗದ ಎಲ್ಲ ನಿಲ್ದಾಣಗಳು ಸೇರಿದಂತೆ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳುವುದು ಅವಶ್ಯ. ಮೆಟ್ರೊ ಬಂದು ನಮಗೀಗ ನಗರ ಸಂಚಾರ ಸುರಕ್ಷಿತವಾಯಿತು ಎನ್ನುವ ಸಂತೃಪ್ತಿ ಬೆಂಗಳೂರಿನ ನಾಗರಿಕರಲ್ಲಿ ಬಂದಾಗ ಮಾತ್ರ ಅದು ‘ನಮ್ಮ ಮೆಟ್ರೊ’ ಎನ್ನುವ ಅನ್ವರ್ಥ ನಾಮ ಸಾರ್ಥಕವಾದೀತು. ಈ ದೃಷ್ಟಿಯಿಂದ ಬಿಎಂಆರ್‌ಸಿಎಲ್ ರಾಜಕೀಯ ಒತ್ತಡಗಳಿಗೆ ಮಣಿಯದೆ ತನ್ನ ಯೋಜನೆಯನ್ನು ಕ್ರಮಬದ್ಧವಾಗಿ ಮುಗಿಸಿ ಜನರ ಸೇವೆಗೆ ಅರ್ಪಿಸುವುದು ಮುಖ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.