ಪ್ರಶಸ್ತಿಯ ಗುರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಬಿಟ್ಟರೆ ಕನ್ನಡ ಚಿತ್ರಗಳ ಸಾಧನೆ ಶೂನ್ಯ. ಈ ಬಗ್ಗೆ ಕನ್ನಡ ಚಿತ್ರರಂಗದಲ್ಲೇ ಜಿಜ್ಞಾಸೆ ಇದೆ. ತೀರ್ಪುಗಾರರ ಸಮಿತಿ ಕನ್ನಡ ಚಿತ್ರಗಳಿಗೆ ನ್ಯಾಯ ಒದಗಿಸಿಲ್ಲ ಎಂಬ ವಾದವಿದೆ. ಪ್ರಶಸ್ತಿಗಾಗಿ ನಡೆಯುವ ಲಾಬಿಯಿಂದ ಅನ್ಯಾಯವಾಗುತ್ತಿದೆ ಎನ್ನುವ ಕೂಗು ಪ್ರತಿಬಾರಿಯೂ ಇರುತ್ತದೆ. ಮೊನ್ನೆ ತಾನೇ ಪ್ರಕಟವಾದ ರಾಜ್ಯ ಸರ್ಕಾರದ ಪ್ರಶಸ್ತಿ ಬಗ್ಗೆಯೂ ಅಸಮಾಧಾನಗೊಂಡವರಿದ್ದಾರೆ. ಆದರೆ ರಾಷ್ಟ್ರೀಯ ಪ್ರಶಸ್ತಿಗೆ ಕನ್ನಡವನ್ನು ಪ್ರತಿನಿಧಿಸಿದ್ದ ಚಲನಚಿತ್ರಗಳು ಗುಣಮಟ್ಟದವಾಗಿರಲಿಲ್ಲ ಎಂದು ತೀರ್ಪುಗಾರರ ಸಮಿತಿ ಸದಸ್ಯರೊಬ್ಬರು ಹೇಳಿರುವುದನ್ನು ಗಮನಿಸಿದರೆ, ನಾವು ಎಲ್ಲಿ ಎಡವಿದ್ದೇವೆ ಎನ್ನುವುದು ಅರ್ಥವಾಗುತ್ತದೆ. ಅತ್ಯುತ್ತಮ ಚಿತ್ರವಾಗಿ ಹಿಂದಿ ಚಿತ್ರ ಪಾನ್‌ಸಿಂಗ್ ತೋಮರ್‌ ಆಯ್ಕೆಯಾಗಿದೆ. ಮಲಯಾಳಂ ಮತ್ತು ಮರಾಠಿ ಭಾಷೆಯ ಚಿತ್ರಗಳು ಅಸಾಧಾರಣ ಸಾಧನೆ ಮೆರೆದಿರುವುದು ಈ ಬಾರಿಯ ವೈಶಿಷ್ಟ್ಯ. ಒಂದು ಕಾಲದಲ್ಲಿ ರಾಷ್ಟ್ರೀಯ ಪ್ರಶಸ್ತಿಗಳೆಂದರೆ ಮಲಯಾಳದ್ದೇ ಮೇಲುಗೈ ಆಗಿತ್ತು, ಬಂಗಾಳಿ, ಕನ್ನಡ ಚಿತ್ರಗಳು ಆ ಸ್ಥಾನವನ್ನು ಗಳಿಸಲಾರಂಭಿಸಿದಂತೆ ದೂರ ಸರಿದಿದ್ದ ಮಲಯಾಳಂ ಚಿತ್ರರಂಗ ಮತ್ತೆ ಸದಭಿರುಚಿಯ ಕಡೆ ಹೊರಳಿರುವುದು, ಸ್ಪರ್ಧಾತ್ಮಕವಾಗಿ ಪುಟಿದೆದ್ದಿರುವುದು ಗುಣಾತ್ಮಕ ಸಾಧನೆ. ಹಿಂದೀ ಚಿತ್ರರಂಗದ ಆರ್ಭಟದಿಂದಾಗಿ ಮಂಕು ಬಡಿದಿದ್ದ ಮರಾಠಿ ಚಿತ್ರರಂಗ ಚೇತರಿಸಿಕೊಳ್ಳುತ್ತಿರುವುದೂ ಆಶಾದಾಯಕ ಬೆಳವಣಿಗೆ. ಭಾರತೀಯ ಸಿನಿಮಾ, ನೂರು ವರ್ಷಗಳ ನಡೆದುಬಂದ ದಾರಿಯಲ್ಲಿ ಸಮಕಾಲೀನ ತುಡಿತಗಳಿಗೆ ತನ್ನನ್ನು ತೆರೆದುಕೊಂಡಿದೆ. ಪ್ರಶಸ್ತಿಯ ಉದ್ದೇಶ ಕೂಡ, ಚಲನಚಿತ್ರಗಳು ಅಂದಂದಿನ ಸಾಮಾಜಿಕ ತುಡಿತಗಳಿಗೆ ಹೇಗೆ ಸ್ಪಂದಿಸಿವೆ ಎನ್ನುವುದನ್ನು ಗುರುತಿಸುವುದೇ ಆಗಿದೆ. ಈ ಬಾರಿ ಪ್ರಶಸ್ತಿ ಪಡೆದಿರುವ ಚಲನಚಿತ್ರಗಳ ಕಥಾವಸ್ತುವನ್ನು ಗಮನಿಸಿದರೆ ಬಹುತೇಕ ಚಿತ್ರಗಳು ಸಮಕಾಲೀನ ಸಂವೇದನೆಗೆ ತುಡಿಯುವ ಚಿತ್ರಗಳೇ ಆಗಿರುವುದು ಗಮನಾರ್ಹ. ಕ್ರೀಡಾಪಟು ಡಕಾಯಿತನಾಗುವ ಕತೆ, ಕೃತಕ ಗರ್ಭಧಾರಣೆ, ಎಸ್‌ಎಂಎಸ್‌ನಿಂದ ಕಾಲೇಜು ಯುವಕ ಯುವತಿಯರ ಜೀವನದಲ್ಲಿ ಏಳುವ ಬಿರುಗಾಳಿ, ಎಫ್‌ಡಿಐ, ದೇಸೀ ಸಂಸ್ಕೃತಿ ಮೊದಲಾದ ಜ್ವಲಂತ ಸಮಸ್ಯೆಗಳು ಅನಾವರಣಗೊಂಡಿವೆ. ಇದು ಸಿನಿಮಾ ಮಾಧ್ಯಮದ ದಾಪುಗಾಲು. ಬಹುತೇಕ ಹೊಸಬರು ಈ ಬಾರಿ ಪ್ರಶಸ್ತಿ ಗಳಿಸಿಕೊಂಡಿರುವುದೂ ಕೂಡ ಬದಲಾಗುತ್ತಿರುವ ದಿನಗಳ ಸೂಚನೆಯಂತಿದೆ. ನಮ್ಮ ದೇಶದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿರುವ ಸಿನಿಮಾ, ಜನಸಾಮಾನ್ಯರ ಏಕೈಕ ಜನಪ್ರಿಯ ಮನರಂಜನಾ ಮಾಧ್ಯಮ. ಚಲನಚಿತ್ರಗಳನ್ನು ನಿರ್ಮಿಸುವುದೇ ಜನರಿಗಾಗಿ. ಪ್ರಶಸ್ತಿ ಪಡೆದ ಚಲನಚಿತ್ರಗಳು ಸಾಮಾನ್ಯ ಜನರ ವೀಕ್ಷಣೆಗಾಗಿ ಪ್ರದರ್ಶನಗೊಳ್ಳುವುದಿಲ್ಲ ಎನ್ನುವ ಆಪಾದನೆಯೊಂದು ಮೊದಲಿನಿಂದಲೂ ಇದೆ. ಪ್ರಶಸ್ತಿಗಾಗಿಯೇ ವರ್ಷಕ್ಕೊಂದು ಚಲನಚಿತ್ರವನ್ನು ನಿರ್ಮಿಸುವ ಗುಂಪಿನಿಂದಾಗಿ ಕನ್ನಡದಲ್ಲಿ ಪರ್ಯಾಯ ಸಿನಿಮಾ ಚಳವಳಿ ಬೆಳೆಯಲಿಲ್ಲ. ಇನ್ನೂ ಎಪ್ಪತ್ತರ ದಶಕದ ಚಿತ್ರನಿರ್ಮಾಣ ಶೈಲಿಯನ್ನೇ ಅನುಸರಿಸುತ್ತಿರುವ ಕನ್ನಡ ಚಲನಚಿತ್ರ ನಿರ್ದೇಶಕರು ಇಂದು ಸಿನಿಮಾ ವ್ಯಾಕರಣವೇ ಬದಲಾಗಿರುವುದನ್ನು ಗಮನಿಸಬೇಕು. ಜನ ನೋಡುವಂತಹ ಚಿತ್ರಗಳನ್ನು ನಿರ್ಮಿಸಬೇಕು. ರಾಷ್ಟ್ರಪ್ರಶಸ್ತಿ ಸ್ಪರ್ಧೆಯಲ್ಲಿ ಕಳಪೆ ಕನ್ನಡ ಚಿತ್ರಗಳ ಪ್ರದರ್ಶನ ಮಾಡಿ, ಅದಕ್ಕೆ ತೀರ್ಪುಗಾರರನ್ನು ಹೊಣೆ ಮಾಡುವುದಕ್ಕಿಂತ ನಿರ್ದೇಶಕರು ತಮ್ಮ ಜವಾಬ್ದಾರಿಯನ್ನು ಅರಿಯುವುದು ಒಳಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.