ಒತ್ತಡಕ್ಕೆ ಮಣಿಯಬಾರದು ಯುಪಿಎ ಸರ್ಕಾರಕ್ಕೆ ಬೆಂಬಲವನ್ನು ಹಿಂದೆಗೆದುಕೊಳ್ಳುವ ನಿರ್ಧಾರದ ಮೂಲಕ ಒತ್ತಡತಂತ್ರ ರಾಜಕೀಯದ ಹಳೆಯ ಚಾಳಿಯನ್ನು ಡಿಎಂಕೆ ಪುನರಾವರ್ತಿಸಿದೆ. ಡಿಎಂಕೆಯ ರಾಜಕೀಯ ನಡವಳಿಕೆಗಳ ಇತಿಹಾಸ ಗೊತ್ತಿದ್ದವರು ‌ಯಾರೂ ಈ ನಿರ್ಧಾರ ಅಂತಿಮವಾದುದು ಎಂದು ಭಾವಿಸಲಾರರು. ಶ್ರಿಲಂಕಾ ತಮಿಳರ ಮೇಲೆ ಅಲ್ಲಿನ ಸರ್ಕಾರ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಎಚ್‌ಆರ್‌ಸಿ) ಅಮೆರಿಕ ಮಂಡಿಸಲು ಉದ್ದೇಶಿಸಿರುವ ನಿರ್ಣಯವನ್ನು ಭಾರತ ಬೆಂಬಲಿಸಬೇಕೆಂಬುದು ಡಿಎಂಕೆ ಬೇಡಿಕೆ. ಈ ಬಗ್ಗೆ ಸಂಸತ್ ಕೂಡಾ ನಿರ್ಣಯವನ್ನು ಕೈಗೊಳ್ಳಬೇಕೆಂದು ಅದು ಆಗ್ರಹ ಪಡಿಸಿದೆ. ಭಾಷೆ, ಪ್ರದೇಶ ಮತ್ತು ಜನಾಂಗದ ಮೇಲಿನ ತಮಿಳರ ಅಂಧಾಭಿಮಾನ ಹಲವಾರು ಬಾರಿ ರಾಜಕೀಯ ಬಿಕ್ಕಟ್ಟುಗಳಿಗೆ ಕಾರಣವಾಗಿದ್ದುಂಟು. ತಮಿಳರಲ್ಲಿನ ಈ ಅತಿರೇಕದ ಅಭಿಮಾನದ ದೌರ್ಬಲ್ಯವನ್ನು ಆ ರಾಜ್ಯವನ್ನು ಆಳಿದ ಎಲ್ಲ ಸರ್ಕಾರಗಳು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡು ಬಂದಿವೆ. ಡಿಎಂಕೆ ನಾಯಕ ಎಂ.ಕರುಣಾನಿಧಿ ಈಗ ಅದನ್ನೇ ಮಾಡುತ್ತಿದ್ದಾರೆ. ತಮಿಳರ ಮೇಲೆ ಅಲ್ಲಿನ ಸೇನೆ ನಡೆಸಿದ್ದ ದೌರ್ಜನ್ಯ ಅಕ್ಷಮ್ಯ. ಮಕ್ಕಳು,ಮಹಿಳೆಯರೆಂಬ ಕರುಣೆಯನ್ನೂ ತೋರದ ಸಿಂಹಳೀಯ ಸೈನಿಕರು ಕೊಲೆಗಡುಕರಂತೆ ವರ್ತಿಸಿರುವುದು ಬಯಲಾಗಿದೆ. ಇದನ್ನು ಖಂಡಿಸಬೇಕಾಗಿರುವುದು ಎಲ್ಲ ದೇಶ,ವ್ಯಕ್ತಿಗಳ ಕರ್ತವ್ಯವೂ ಹೌದು. ಆದರೆ ಇದರ ವಿರುದ್ಧ ಪ್ರತೀಕಾರವೆಂಬಂತೆ ತಮಿಳುನಾಡಿನಲ್ಲಿರುವ ಮತ್ತು ಅಲ್ಲಿಗೆ ಭೇಟಿ ನೀಡುವ ಶ್ರಿಲಂಕಾದ ಪ್ರಜೆಗಳ ಮೇಲೆ ನಡೆಸಲಾಗುತ್ತಿರುವ ಹಲ್ಲೆ ಖಂಡನೀಯ. ಈ ರೀತಿಯ ಜನಾಂಗೀಯ ದ್ವೇಷದ ನಡವಳಿಕೆಯನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯ ಇಲ್ಲ. ಇದೇ ಅವಕಾಶವನ್ನು ಬಳಸಿಕೊಂಡು ನೆಲೆ ಕಳೆದುಕೊಂಡಿರುವ ಕೆಲವು ತಮಿಳು ಉಗ್ರಗಾಮಿ ಸಂಘಟನೆಗಳು ತಲೆ ಎತ್ತಲು ಪ್ರಯತ್ನಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಡಿಎಂಕೆ ಒತ್ತಡಕ್ಕೆ ಈಗಾಗಲೇ ಮಣಿದಿರುವಂತೆ ವರ್ತಿಸುತ್ತಿರುವ ಯುಪಿಎ ಸರ್ಕಾರ ಸಂಸತ್‌ನಲ್ಲಿ ನಿರ್ಣಯ ಕೈಗೊಳ್ಳಲು ಒಪ್ಪಿದೆ. ಯುಎನ್‌ಎಚ್‌ಆರ್‌ಸಿಯಲ್ಲಿ ಅಮೆರಿಕ ಮಂಡಿಸಲಿರುವ ನಿರ್ಣಯವನ್ನು ಬೆಂಬಲಿಸುವ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ತಿಳಿಸಿದೆ. ಶ್ರಿಲಂಕಾದ ಸಿಂಹಳೀಯರು ಮತ್ತು ತಮಿಳರ ನಡುವೆ ಬಹಳ ಕಾಲದಿಂದ ನಡೆದುಕೊಂಡು ಬಂದಿರುವ ಘರ್ಷಣೆಯ ಹೊರತಾಗಿಯೂ ಭಾರತ ಆ ದೇಶದ ಜತೆ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಉಳಿಸಿಕೊಂಡು ಬಂದಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಯುಪಿಎ ಸರ್ಕಾರದ ಮೇಲಿದೆ. ಅಧಿಕಾರ ಉಳಿಸುವ ಸ್ವಾರ್ಥಕ್ಕೆ ಸಿಕ್ಕಿ ಮತ್ತೊಂದು ದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಹೊರಡುವುದು ಸರಿ ಅಲ್ಲ. ಶ್ರಿಲಂಕಾ ತಮಿಳರ ಮೇಲಿನ ದೌರ್ಜನ್ಯದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ತನಿಖೆ ನಡೆಸಬೇಕೆಂಬ ನಿಲುವು ತಿರುಗುಬಾಣವಾಗಿ ನಮ್ಮನ್ನೇ ಚುಚ್ಚುವ ಅಪಾಯ ಇದೆ. ಭಾರತದೊಳಗೆ ಕೂಡಾ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂಬ ಆರೋಪವನ್ನು ಬೇರೆ ಯಾರಾದರೂ ಎತ್ತಿಕೊಳ್ಳಲೂಬಹುದು. ಡಿಎಂಕೆ ಬೆಂಬಲ ಹಿಂತೆಗೆದುಕೊಂಡದ್ದರಿಂದ ಸರ್ಕಾರಕ್ಕೆ ತಕ್ಷಣದ ಅಪಾಯ ಇಲ್ಲದೆ ಇರುವುದರಿಂದ ಬಿಗಿ ನಿಲುವು ಕೈಗೊಳ್ಳಲು ಅವಕಾಶ ಇದೆ. ಇದನ್ನು ಬಳಸಿಕೊಂಡು ಯುಪಿಎ ದಿಟ್ಟತನದಿಂದ ಬಿಕ್ಕಟ್ಟನ್ನು ಎದುರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.