ಅಂತರ್ಜಾಲದ ತಟಸ್ಥ ನೀತಿಗೆ ಧಕ್ಕೆ ತರುವ ಯತ್ನ ಬೇಡ ಅಂತರ್ಜಾಲವನ್ನು ಯಾವುದೇ ನಿರ್ಬಂಧ ಮತ್ತು ಅಡೆತಡೆ ಇಲ್ಲದೆ ಮುಕ್ತವಾಗಿ ಬಳಸಲು ನಾಗರಿಕರಿಗೆ ಇರುವ ಸ್ವಾತಂತ್ರ್ಯಕ್ಕೆ ಕುತ್ತು ತರುವ ಪ್ರಯತ್ನಗಳು ರಾಷ್ಟ್ರದಲ್ಲಿ ಆರಂಭವಾಗಿವೆ. ಲಾಭಕೋರತನ ಮತ್ತು ಹಣದಾಸೆಯಿಂದ ಕೆಲ ಮೊಬೈಲ್‌ ಹಾಗೂ ಅಂತರ್ಜಾಲ ಸೇವಾ ಸಂಸ್ಥೆಗಳು ಬಳಕೆದಾರರ ಹಕ್ಕಿಗೇ ಚ್ಯುತಿ ತರುವ ಹುನ್ನಾರದಲ್ಲಿ ತೊಡಗಿವೆ. ಈಗಿರುವ ವ್ಯವಸ್ಥೆಯ ಪ್ರಕಾರ, ಗ್ರಾಹಕರು ಅಂತರ್ಜಾಲವನ್ನು ಹೇಗೆ ಬೇಕಾದರೂ ಬಳಸಬಹುದು. ಅದರಲ್ಲಿನ ಯಾವುದೇ ತಾಣವನ್ನು, ವೆಬ್‌ಸೈಟ್‌ಗಳನ್ನು ವೀಕ್ಷಿಸಬಹುದು. ಅದರಿಂದ ತಮಗೆ ಬೇಕಾದ ಮಾಹಿತಿಯನ್ನು ಅನಿರ್ಬಂಧಿತವಾಗಿ ಪಡೆದುಕೊಳ್ಳಬಹುದು. ವಾಣಿಜ್ಯ ವಹಿವಾಟುಗಳನ್ನು ತಮ್ಮಿಷ್ಟದಂತೆ ನಡೆಸಬಹುದು. ಇದರ ಮೇಲೆ ಮೊಬೈಲ್‌ ಮತ್ತು ಅಂತರ್ಜಾಲ ಸೇವಾ ಸಂಸ್ಥೆಗಳಿಗೆ ಯಾವುದೇ ನಿಯಂತ್ರಣ ಇಲ್ಲ. ಉದಾಹರಣೆಗೆ ಗ್ರಾಹಕರು ಗೂಗಲ್‌, ವಾಟ್ಸ್‌ ಆ್ಯಪ್‌ , ವೈಬರ್‌, ಫ್ಲಿಪ್‌ಕಾರ್ಟ್‌ ಹೀಗೆ ತಮಗೆ ಬೇಕಾದ ಯಾವುದೇ ತಾಣವನ್ನು ಜಾಲಾಡಲು ಮುಕ್ತ ಅವಕಾಶವಿದೆ. ಅದಕ್ಕಾಗಿ ಹೆಚ್ಚಿನ ಶುಲ್ಕವನ್ನೇನೂ ಪಾವತಿಸಬೇಕಾಗಿಲ್ಲ. ಅಂತರ್ಜಾಲ ಬಳಕೆಗೆ ತೆರಬೇಕಾದ ಹಣ ತೆತ್ತರೆ ಸಾಕು. ಅಲ್ಲದೆ ಇದರಲ್ಲಿ ಯಾವುದೇ ಜಾಲತಾಣ ಅಥವಾ ಆ್ಯಪ್‌ಗೆ ವಿಶೇಷ ಆದ್ಯತೆ ಇಲ್ಲ. ಎಲ್ಲವೂ ಒಂದೇ ವೇಗದಲ್ಲಿ ಡೌನ್‌ಲೋಡ್‌ ಆಗುತ್ತವೆ. ಆದರೆ, ಗ್ರಾಹಕರಿಗೆ ಅನುಕೂಲ ಮಾಡುತ್ತೇವೆ ಎಂಬ ನೆಪದಲ್ಲಿ ಕೆಲವು ಆ್ಯಪ್‌ಗಳಿಗಷ್ಟೇ ಆದ್ಯತೆ ನೀಡುವ ಅಥವಾ ಈ ಆ್ಯಪ್‌ಗಳನ್ನು ಬಳಸಿದರೆ ಅಂತರ್ಜಾಲ ಶುಲ್ಕ ಕೊಡಬೇಕಾಗಿಲ್ಲ ಎಂಬ ಆಮಿಷವನ್ನು ಬಳಕೆದಾರರಿಗೆ ಒಡ್ಡುವ ತಂತ್ರವನ್ನು ಕೆಲ ಅಂತರ್ಜಾಲ ಸೇವಾ ಸಂಸ್ಥೆಗಳು ಶುರು ಮಾಡಿವೆ. ಈ ಆ್ಯಪ್‌ಗಳಿಂದ ಮಾಹಿತಿಗಳು ವೇಗವಾಗಿ ಡೌನ್‌ಲೋಡ್‌ ಆಗುತ್ತವೆ. ಸಮಸ್ಯೆಯ ಮೂಲ ಇರುವುದೇ ಇಲ್ಲಿ. ಏಕೆಂದರೆ ಇವು ಗ್ರಾಹಕರಿಗೆ ಉಚಿತವಾಗಿ ದಕ್ಕಿದರೂ ಸೇವಾ ಸಂಸ್ಥೆಗಳು ಆ್ಯಪ್‌ ಕಂಪೆನಿಗಳಿಂದಲೇ ಅಂತರ್ಜಾಲ ಶುಲ್ಕವನ್ನು ಸಂಗ್ರಹಿಸುತ್ತವೆ. ಇಲ್ಲಿ ಸಹಜವಾಗಿಯೇ ವ್ಯಾಪಾರಿ ಹಿತಾಸಕ್ತಿ ಕೆಲಸ ಮಾಡುತ್ತದೆ. ಬಲಿಷ್ಠ ಕಂಪೆನಿಗಳು ತಮ್ಮ ದುರ್ಬಲ ಎದುರಾಳಿಗಳನ್ನು ಹಣಿಯಲು ಅವಕಾಶ ಸಿಗುತ್ತದೆ. ಬಳಕೆದಾರರಿಗೆ ಆಯ್ಕೆ ಸ್ವಾತಂತ್ರ್ಯ ಸೀಮಿತ ಗೊಳ್ಳುತ್ತದೆ. ಇಂಥ ನಿರ್ಬಂಧ, ಒತ್ತಡ ಹೇರುವುದು ಅತ್ಯಂತ ಖಂಡನೀಯ. ಅಂತರ್ಜಾಲದ ಮೂಲ ಉದ್ದೇಶಕ್ಕೇ ಇದರಿಂದ ಅಪಚಾರವಾಗುತ್ತದೆ. ಆದರೆ ಇದರ ವಿರುದ್ಧ ಅಷ್ಟೇ ಜೋರಾಗಿ ನಾಗರಿಕರು ಕೂಡ ದನಿಯೆತ್ತುತ್ತಿದ್ದಾರೆ. ತಮ್ಮ ಜತೆ ಒಪ್ಪಂದ ಮಾಡಿಕೊಂಡು ಶುಲ್ಕ ಪಾವತಿಸುವ ಕಂಪೆನಿಗಳ ಆ್ಯಪ್‌ಗಳಿಗಷ್ಟೇ ಆದ್ಯತೆ ನೀಡುವ ಅಂತರ್ಜಾಲ ಸೇವಾ ಸಂಸ್ಥೆಗಳ ಹುನ್ನಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಲಕ್ಷಾಂತರ ಬಳಕೆದಾರರು ಈಗ ಫೇಸ್‌ಬುಕ್‌, ಟ್ವಿಟರ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಭಟನೆ ದಾಖಲಿಸುತ್ತಿದ್ದಾರೆ. ಇದರ ಫಲವಾಗಿಯೇ ‘ಏರ್‌ಟೆಲ್‌ ಝೀರೊ’ ಅಂತರ್ಜಾಲ ವೇದಿಕೆಯಿಂದ ಫ್ಲಿಪ್‌ಕಾರ್ಟ್‌ ಹೊರಬಂದಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಇಲ್ಲಿ ಚಿಂತೆಗೀಡು ಮಾಡುವ ಇನ್ನೊಂದು ಸಂಗತಿಯೂ ಇದೆ.ಮೊಬೈಲ್‌ ಬಳಕೆದಾರರ ಹಿತ ಕಾಯಬೇಕಾದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಕೂಡ ದುರಾಸೆಯ ಮೊಬೈಲ್‌ ಸಂಸ್ಥೆಗಳ ತಾಳಕ್ಕೆ ತಲೆಯಾಡಿಸುತ್ತಿದೆಯೇನೋ ಎಂಬ ಅನುಮಾನ ದಟ್ಟವಾಗುತ್ತಿದೆ. ಒಟಿಟಿ ಅಥವಾ ‘ಓವರ್‌ ದ ಟಾಪ್‌ ಸರ್ವಿಸ್‌’ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಅಭಿಪ್ರಾಯ ಕೇಳುವ ನೆಪದಲ್ಲಿ ಸಾರ್ವಜನಿಕರಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾದ ಪಾರಿಭಾಷಿಕ ಪದಗಳೇ ತುಂಬಿರುವ 118 ಪುಟಗಳ ದಾಖಲೆಯೊಂದನ್ನು ಅದು ಬಿಡುಗಡೆ ಮಾಡಿದೆ. ಇಂಗ್ಲಿಷ್‌ನಲ್ಲಿ ಇರುವ ಈ ದಾಖಲೆ ಏನನ್ನು ಒಳಗೊಂಡಿದೆ ಎಂದು ತಿಳಿದುಕೊಳ್ಳಲು ಟೆಲಿಕಾಂ ವ್ಯವಹಾರ ಮತ್ತು ತಂತ್ರಜ್ಞಾನ ಗೊತ್ತಿರುವವರಿಗೆ ಮಾತ್ರ ಸಾಧ್ಯ. ಭಾರತದ 93 ಕೋಟಿ ಮೊಬೈಲ್‌ ಬಳಕೆದಾರರಲ್ಲಿ ಎಷ್ಟು ಜನ ಈ ಬಗೆಯ ತಾಂತ್ರಿಕ ಜ್ಞಾನ ಹೊಂದಿದ್ದಾರೆ? ಲಾಭದ ಮೇಲೆಯೇ ಕಣ್ಣಿಟ್ಟಿರುವ ಮೊಬೈಲ್‌, ಅಂತರ್ಜಾಲ ಸೇವಾ ಕಂಪೆನಿಗಳ ಲಾಬಿಗೆ ಅದು ಏಕೆ ಮಣೆ ಹಾಕಬೇಕು? ಇಂಟರ್‌ನೆಟ್‌ ಬಳಕೆ ಮೇಲೆ ಯಾವುದೇ ಕಡಿವಾಣ ಹೇರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ವಿಶ್ವಸಂಸ್ಥೆ 2011ರಷ್ಟು ಹಿಂದೆಯೇ ಹೇಳಿತ್ತು. ಪ್ರಯೋಗಶೀಲತೆ, ಸೃಜನಶೀಲತೆ ಹಾಗೂ ಹೊಸತನ ಸೃಷ್ಟಿಯಲ್ಲಿ ಅಂತರ್ಜಾಲದ ಕೊಡುಗೆ ಅಪಾರ. ಅದಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ನಾಗರಿಕ ಸಮಾಜ ವಿರೋಧಿಸಲೇಬೇಕು. ಸರ್ಕಾರ ಕೂಡ ಜನಾಭಿಪ್ರಾಯ ಕಡೆಗಣಿಸುವ ದುಸ್ಸಾಹಸಕ್ಕೆ ಇಳಿಯಬಾರದು. ಅಂತರ್ಜಾಲದ ತಟಸ್ಥ ನೀತಿ ರಕ್ಷಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.