ಕರಾಳ ಶಾಸನ ಬೇಡ ಪೊಲೀಸ್ ದಕ್ಷತೆ ಹೆಚ್ಚಲಿ ಭಯೋತ್ಪಾದನೆ ಹಾಗೂ ಸಂಘಟಿತ ಅಪರಾಧ ನಿಯಂತ್ರಣದ ಗುಜರಾತ್ ಮಸೂದೆ- 2015ಕ್ಕೆ (ಜಿಸಿಟಿಒಸಿ) ಗುಜರಾತ್ ವಿಧಾನಮಂಡಲ ಮತ್ತೊಮ್ಮೆ ಅನುಮೋದನೆ ನೀಡಿದೆ. ಪ್ರತಿಪಕ್ಷಗಳ ವಿರೋಧವನ್ನು ಲೆಕ್ಕಿಸದೆ, ಈ ಹಿಂದೆ ರಾಷ್ಟ್ರಪತಿಗಳಿಂದ ಮೂರು ಬಾರಿ ತಿರಸ್ಕೃತಗೊಂಡಿದ್ದ ಈ ವಿವಾದಾತ್ಮಕ ಮಸೂದೆಯನ್ನು ಗುಜರಾತ್‌ನ ಬಿಜೆಪಿ ಸರ್ಕಾರ ಅಂಗೀಕರಿಸಿದೆ. ಜಿಸಿಟಿಒಸಿ ಬಗ್ಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದ್ದು ಇದು ಈ ಹಿಂದಿನ ಭಯೋತ್ಪಾದನೆ ಹಾಗೂ ವಿಧ್ವಂಸಕ ಚಟುವಟಿಕೆಗಳ (ತಡೆ) ಕಾಯಿದೆ (ಟಾಡಾ) ಹಾಗೂ ಭಯೋತ್ಪಾದನೆ ತಡೆ ಕಾಯಿದೆಯನ್ನು (ಪೋಟಾ) ನೆನಪಿಸುತ್ತಿದೆ. ಈಗ ಅಸ್ತಿತ್ವದಲ್ಲಿ ಇಲ್ಲದ ಈ ಎರಡೂ ಕಾಯಿದೆಗಳು ಅಪಾರ ದುರ್ಬಳಕೆಗೆ ಕಾರಣವಾಗಿದ್ದವು ಎಂಬುದನ್ನು ಮರೆಯಲಾಗದು. ಗುಜರಾತ್ ಸರ್ಕಾರದ ಹೊಸ ಮಸೂದೆ, ನ್ಯಾಯಶಾಸ್ತ್ರದ ಮೂಲತತ್ವವನ್ನೇ ಗಾಳಿಗೆ ತೂರುವಂತಹದ್ದು. ‘ಅಪರಾಧ ಸಾಬೀತಾಗುವವರೆಗೆ ಎಲ್ಲರೂ ನಿರಪರಾಧಿಗಳು’ ಎಂಬುದು ನ್ಯಾಯಶಾಸ್ತ್ರದ ಮೂಲತತ್ವ. ಆದರೆ ಈ ಮಸೂದೆಯ ಪ್ರಕಾರ ಪೊಲೀಸ್ ಅಧಿಕಾರಿ ಪಡೆದುಕೊಳ್ಳುವ ತಪ್ಪೊಪ್ಪಿಗೆ ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸ್ವೀಕಾರಾರ್ಹವಾಗುತ್ತದೆ ಎಂಬುದು ಆತಂಕಕಾರಿ. ಇದು ಈವರೆಗೆ ಪಾಲಿಸಿಕೊಂಡುಬಂದಿರುವ ಪದ್ಧತಿಗೆ ತದ್ವಿರುದ್ಧವಾದದ್ದು. ಇದರಿಂದ ಆರೋಪಿಗೆ ಜಾಮೀನು ಸಿಗುವುದು ಕ್ಲಿಷ್ಟಕರವಾಗುತ್ತದೆ. ಅಲ್ಲದೆ ಶಂಕಿತರ ವಿರುದ್ಧ ಗೂಢಚರ್ಯೆ ನಡೆಸಲು ಪೊಲೀಸರಿಗೆ ಅಪಾರ ಅಧಿಕಾರ ನೀಡಲಾಗಿರುವುದೂ ಆತಂಕಕಾರಿಯೇ. ಕದ್ದಾಲಿಸಿದ ಟೆಲಿಫೋನ್ ಸಂಭಾಷಣೆಗಳೂ ಸಾಕ್ಷಿಗಳಾಗಬಹುದು ಎಂಬುದು ಖಾಸಗಿತನದ ಹಕ್ಕಿಗೆ ಧಕ್ಕೆ ತರುವಂತಹದ್ದು. ಪೊಲೀಸ್ ಅತಿರೇಕಗಳಿಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರ ಇತಿಹಾಸ ಅಷ್ಟೇನೂ ತೃಪ್ತಿಕರವಾಗಿಲ್ಲ ಎಂಬುದು ಸರ್ವವಿದಿತ. ಈಗಾಗಲೇ ಗುಜರಾತ್ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರು ಕೆಲವು ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವುದೂ ಗೊತ್ತಿರುವಂತಹದ್ದೇ. ಇಂತಹ ಸಂದರ್ಭದಲ್ಲಿ ಈಗಿನ ಮಸೂದೆಯಲ್ಲಿ ಪೊಲೀಸರಿಗೆ ನೀಡಲಾಗಿರುವ ಅತಿಯಾದ ಅಧಿಕಾರ ದುರ್ಬಳಕೆಯಾಗಬಹುದು ಎಂಬ ಭೀತಿ ಸಕಾರಣವಾದದ್ದು. ಹೀಗಾಗಿ ಕಾನೂನಿನ ದುರ್ಬಳಕೆ ತಡೆಯಲು ಹೆಚ್ಚಿನ ರಕ್ಷಣಾಕ್ರಮಗಳು ಮಸೂದೆಯಲ್ಲಿ ಇಲ್ಲದಿರುವುದು ದೊಡ್ಡ ಲೋಪ. ಯಾವುದೇ ಆರೋಪ ಇಲ್ಲದೆ ಬಂಧನದ ಅವಧಿಯನ್ನು 90ರಿಂದ 180 ದಿನಗಳವರೆಗೆ ಏರಿಸಿರುವುದಂತೂ ಅಸಮರ್ಥನೀಯ. ಒಳ್ಳೆಯ ಉದ್ದೇಶದಿಂದ ಮಾಡಿದ ಯಾವುದೇ ಕೆಲಸವೂ ಈ ಮಸೂದೆಯ ಪ್ರಕಾರ, ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಪೊಲೀಸರಿಗೆ ಸ್ವೇಚ್ಛೆಯ ಅಧಿಕಾರ ದಕ್ಕಿದಂತಾಗಿದೆ. ಇಂತಹದೊಂದು ಅವಕಾಶ ನ್ಯಾಯಶಾಸ್ತ್ರದ ಆಶಯವನ್ನೇ ತಲೆಕೆಳಗು ಮಾಡುವಂತಹದ್ದು. ಅಷ್ಟೇ ಅಲ್ಲ, ತಪ್ಪೊಪ್ಪಿಗೆ ಹೇಳಿಕೆ ಹೊರಡಿಸಲು ಪೊಲೀಸರು ಅನುಸರಿಸುವ ಕ್ರಮಗಳ ಅರಿವಿದ್ದವರಿಗೆ ಈ ಅಂಶದ ಕರಾಳತೆ ಅರಿವಾಗುತ್ತದೆ. ಜಿಸಿಟಿಒಸಿ ಮಸೂದೆ 2004 ಅನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಿರಸ್ಕರಿಸಿದ್ದರು. ಆಗ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತ ಇತ್ತು. ನಂತರ ಯುಪಿಎ ಆಡಳಿತ ಕಾಲದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರೂ 2008ರಲ್ಲಿ ಇದೇ ಕ್ರಮ ಅನುಸರಿಸಿದ್ದರು. ಹೀಗಿದ್ದೂ 2009ರಲ್ಲಿ ಮೂರನೇ ಬಾರಿಗೆ ಇದೇ ಮಸೂದೆಯ ಹೊಸ ಆವೃತ್ತಿಯನ್ನು ಗುಜರಾತ್ ಸರ್ಕಾರ ಸಲ್ಲಿಸಿದ್ದರೂ ಏನೂ ಆಗಿರಲಿಲ್ಲ. ಹೀಗಾಗಿ ಮೂರು ಬಾರಿ ರಾಷ್ಟ್ರಪತಿಗಳಿಂದ ತಿರಸ್ಕೃತಗೊಂಡ ಮಸೂದೆಯ ಹೊಸ ಆವೃತ್ತಿಯ ಬಗ್ಗೆ ಈಗ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತೀರ್ಮಾನ ಕೈಗೊಳ್ಳಬೇಕಿದೆ. ದೇಶಿ ಹಾಗೂ ವಿದೇಶಿ ಭಯೋತ್ಪಾದಕರಿಂದ ಭಾರತ ಸಾಕಷ್ಟು ಸಮಸ್ಯೆ ಎದುರಿಸಿದೆ ಎಂಬುದು ನಿಜ. ಭಯೋತ್ಪಾದನೆ ನಿಗ್ರಹಕ್ಕೆ ಬಿಗಿಯಾದ ಕಾನೂನು ಅಗತ್ಯ ಎಂಬ ವಾದ ಸರಿಯಾದುದೆ. ಆದರೆ ಇದು ಸಾಂವಿಧಾನಿಕ ಹಕ್ಕುಗಳನ್ನು ದುರ್ಬಲಗೊಳಿಸುವಂತಾಗಬಾರದು. ಏಕೆಂದರೆ ಅನೇಕ ಸಂದರ್ಭಗಳಲ್ಲಿ ಇಂತಹ ಕಾನೂನಿನ ಹಿಡಿತದಲ್ಲಿ ಸಿಲುಕಿದ ಅಮಾಯಕರು ಆರೋಪಮುಕ್ತರಾಗಲು ವರ್ಷಗಳೇ ಹಿಡಿದಿರುವುದೂ ಉಂಟು. ನಿಜಕ್ಕೂ ನಮಗೆ ಬೇಕಾಗಿರುವುದು ವ್ಯಾಪಕ ನೆಲೆಯ ಪೊಲೀಸ್ ಸುಧಾರಣೆ. ಗೂಢಚರ್ಯೆ ಕೌಶಲ ಹೆಚ್ಚುವುದು ಮುಖ್ಯ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯೂ ಹೆಚ್ಚಬೇಕು. ಸರಿಯಾದ ರೀತಿಯ ಪೊಲೀಸ್ ಕಾರ್ಯಾಚರಣೆ ಭಯೋತ್ಪಾದಕರನ್ನು ದೂರ ಇಡುತ್ತದೆ. ಕರಾಳ ಶಾಸನಗಳಲ್ಲ ಎಂಬುದನ್ನು ಮೊದಲಿಗೆ ನಾವು ಅರಿತುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.