ವಿಶ್ವಾಸಾರ್ಹತೆ ಮರುಗಳಿಸುವ ಯತ್ನ ಅಭಿವೃದ್ಧಿಯ ದಿಕ್ಸೂಚಿಯನ್ನು ದುರ್ಬಲ ವರ್ಗಗಳ ಕಡೆಗೆ ತಿರುಗಿಸುವ ಇಂಗಿತ, ಬೆಂಗಳೂರಿನಲ್ಲಿ ಜರುಗಿದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಿಂದ ಹೊರಬಿದ್ದಿದೆ. ‘ಬಡವರಿಗಾಗಿ ಜೀವಿಸುತ್ತೇವೆ, ಬಡವರಿಗಾಗಿ ದುಡಿಯುತ್ತೇವೆ’ ಎಂದು ಸಮಾರೋಪ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿರುವ ಮಾತೇ ಇಂತಹದೊಂದು ಸುಳಿವು ನೀಡುತ್ತದೆ. ಕಾಂಗ್ರೆಸ್‌ ಇದೇ ಮಾತನ್ನು ‘ಗರೀಬಿ ಹಠಾವೊ’ ರೂಪದಲ್ಲಿ ಹೇಳಿತ್ತು. ಆದರೆ ಬಡವರ ಬದುಕಿನ ಸ್ಥಿತಿಯಲ್ಲಿ ಹೆಚ್ಚು ಸುಧಾರಣೆ ಆಗಿಲ್ಲ. ಅದನ್ನು ಎನ್‌ಡಿಎ ಸರ್ಕಾರ ಹೇಗೆ ಸಾಧ್ಯವಾಗಿಸಲಿದೆಯೋ? ಅಂತೂ ಬಡವರಲ್ಲಿ ಹೊಸ ಕನಸು ಬಿತ್ತುವ ಕೆಲಸವಂತೂ ಆಗಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿನ ಸೋಲು ಹಾಗೂ ಭೂಸ್ವಾಧೀನ ತಿದ್ದುಪಡಿ ಮಸೂದೆ ವಿಚಾರದಲ್ಲಿ ಪಕ್ಷದ ವರ್ಚಸ್ಸಿಗೆ ಆಗಿರುವ ಕುಂದನ್ನು ಸರಿದೂಗಿಸಲು ಬಿಜೆಪಿ ಈ ಕಾರ್ಯತಂತ್ರಕ್ಕೆ ಮಾರುಹೋಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಭೂಸ್ವಾಧೀನ ಮಸೂದೆ ವಿಷಯದಲ್ಲಿ ವಿರೋಧ ಪಕ್ಷಗಳು ಎತ್ತಿರುವ ಆಕ್ಷೇಪಗಳಿಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿರುವ ಬೆಂಬಲ, ಪಕ್ಷದ ವರಿಷ್ಠರನ್ನು ಚಿಂತೆಗೀಡುಮಾಡಿದೆ. ಬಿಜೆಪಿಯು ಮೇಲ್ವರ್ಗ ಹಾಗೂ ಕಾರ್ಪೊರೇಟ್‌ ಹಿತಾಸಕ್ತಿ ಪರವಾಗಿದೆ ಎಂದು ಪ್ರತಿಪಕ್ಷಗಳು ಮಾಡಿರುವ ಆಪಾದನೆಯಲ್ಲಿ ನಿಜವಿರಬಹುದೇ ಎಂಬ ಅನುಮಾನ ಜನಸಾಮಾನ್ಯರನ್ನೂ ಕಾಡಲಾರಂಭಿಸಿದೆ. ಈ ಅನುಮಾನಗಳನ್ನು ದೂರಮಾಡಲು ಹೊಸ ಕಾರ್ಯತಂತ್ರ ರೂಪಿಸಿದಂತಿದೆ. ಅದರ ಭಾಗವಾಗಿಯೇ ಹೊರಡುತ್ತಿವೆ ರೈತರು ಹಾಗೂ ಬಡವರ ಓಲೈಕೆಯ ಮಾತುಗಳು. ಸಂಪತ್ತು ತೆರಿಗೆಯಿಂದ ಬೊಕ್ಕಸಕ್ಕೆ ವಾರ್ಷಿಕ ₨900 ಕೋಟಿ ಆದಾಯ ಬರುತ್ತಿತ್ತು. ತೆರಿಗೆ ಸಂಗ್ರಹದಲ್ಲಿ ಸಣ್ಣ ಬದಲಾವಣೆ ಮಾಡಿದ ಪರಿಣಾಮವಾಗಿ ಅದರ ಪ್ರಮಾಣ ₨ 9 ಸಾವಿರ ಕೋಟಿಗೆ ಏರಿದೆ ಎಂದು ಹೇಳುವ ಮೂಲಕ ತಾವು ಶ್ರೀಮಂತರ ಪರ ಅಲ್ಲ ಎಂದು ಪ್ರಧಾನಿ ಸಮರ್ಥಿಸಿಕೊಂಡಿದ್ದಾರೆ. ಬಡವರ ಪರವಾದ ಕಾಳಜಿ ಹಿಂದೆ ಪಕ್ಷದ ನೆಲೆ ವಿಸ್ತರಿಸಿಕೊಳ್ಳುವ ಉದ್ದೇಶವೂ ಅಡಗಿದೆ. ಕಾಂಗ್ರೆಸ್‌ಮುಕ್ತ ಭಾರತವನ್ನಾಗಿಸುವ ಪ್ರಯತ್ನಗಳನ್ನು ತೀವ್ರಗೊಳಿಸುವ ಶಪಥ ಧ್ವನಿಸುವುದು ಇದನ್ನೇ. ಮಹತ್ವದ ಭೂಸ್ವಾಧೀನ ತಿದ್ದುಪಡಿ ಮಸೂದೆ ಬಗ್ಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಸುದೀರ್ಘ ಚರ್ಚೆಯಾಗಿದೆ ಎಂದು ವರದಿಯಾಗಿದೆ. ಇಂತಹದೊಂದು ಚರ್ಚೆಯನ್ನು ಸುಗ್ರೀವಾಜ್ಞೆ ಹೊರಡಿಸುವ ಮೊದಲೇ ಮಾಡಿದ್ದಿದ್ದರೆ ಬಿಜೆಪಿ ಈಗಿನಂತೆ ಪೇಚಿಗೆ ಸಿಲುಕುವ ಪ್ರಮೇಯ ಒದಗುತ್ತಿರಲಿಲ್ಲವೇನೊ? ಈ ಮಸೂದೆಯಿಂದ ಆಗುವ ಅನುಕೂಲಗಳ ಬಗ್ಗೆ ರೈತರಲ್ಲಿ ತಿಳಿವಳಿಕೆ ಮೂಡಿಸಲು ಜಾಗೃತಿ ಅಭಿಯಾನ ನಡೆಸಲು ತೀರ್ಮಾನಿಸಿರುವುದು ಪಕ್ಷದ ವರ್ಚಸ್ಸಿಗೆ ಆಗಿರುವ ಹಾನಿ ಸರಿಪಡಿಸುವ ಪ್ರಯತ್ನವೇ ಆಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಜಮೀನು ಅಗತ್ಯ. ಆದರೆ ಅದರಿಂದ ರೈತ ಸಮುದಾಯದ ಹಿತಕ್ಕೆ ಬಾಧಕವಾಗಬಾರದು. ಈ ವಿಚಾರದಲ್ಲಿ ರಾಜಕೀಯ ಬೆರಸದೆ, ಮಸೂದೆಯ ಗುಣಾವಗುಣಗಳ ಬಗ್ಗೆ ಚರ್ಚೆ ಆಗಬೇಕು. ಕಾರ್ಯಕಾರಿಣಿಯಲ್ಲಿ ರಾಮಜನ್ಮಭೂಮಿ, ಗೋಹತ್ಯೆ ನಿಷೇಧದಂತಹ ವಿವಾದಾತ್ಮಕ ಅಂಶಗಳು ನೇಪಥ್ಯಕ್ಕೆ ಸರಿದು, ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳೇ ಮುನ್ನೆಲೆಗೆ ಬಂದದ್ದು ಶುಭಸೂಚಕ. ಪಾರದರ್ಶಕ ಹಾಗೂ ಭ್ರಷ್ಟಾಚಾರರಹಿತ ಆಡಳಿತ ನೀಡುವ ಬದ್ಧತೆಯನ್ನು ಪುನರುಚ್ಚರಿಸಿರುವುದು ಒಳ್ಳೆಯದೇ. ಅದು ಪಂಚಾಯ್ತಿಯಿಂದ ಪಾರ್ಲಿಮೆಂಟ್‌ವರೆಗೂ ಆಡಳಿತದ ಬೀಜಮಂತ್ರವಾದಾಗ ಮಾತ್ರ ಅಭಿವೃದ್ಧಿ ವೇಗ ಪಡೆಯಲು ಹಾಗೂ ಸೋರಿಕೆ ತಪ್ಪಲು ಸಾಧ್ಯ. ಇವೆಲ್ಲವೂ ಸರಿ. ಆದರೆ ನಾಲಗೆ ಸಡಿಲಬಿಡುವ ಚಟಕ್ಕೆ ಕಡಿವಾಣ ಇಲ್ಲದಂತಾಗಿರುವುದು ದುರದೃಷ್ಟಕರ ಸಂಗತಿ. ಒಳ್ಳೆಯದೆಲ್ಲವನ್ನೂ ಮಸಿ ನುಂಗಿತು ಎಂಬಂತೆ ಮೋದಿ ನೇತೃತ್ವದ ಸರ್ಕಾರದ ಒಳ್ಳೆಯ ಕೆಲಸಗಳನ್ನು ಬೇಕಾಬಿಟ್ಟಿ ಹೇಳಿಕೆಗಳು ಶೂನ್ಯವಾಗಿಸುವ ಸಾಧ್ಯತೆ ಇದೆ. ಸಚಿವ ಗಿರಿರಾಜ್‌ ಸಿಂಗ್‌, ಸಂಸದ ಸಾಕ್ಷಿ ಮಹಾರಾಜ್‌ ಅಂಥವರ ವಿವಾದಾತ್ಮಕ ಹೇಳಿಕೆಗಳು ಪಕ್ಷವನ್ನು ಮುಜುಗರಕ್ಕೆ ಈಡುಮಾಡಿದ್ದು ಸುಳ್ಳಲ್ಲ. ಆದರೆ ಹದ್ದುಮೀರಿದ ಮಾತು ಹಾಗೂ ಸೌಹಾರ್ದ ಕದಡುವ ಹೇಳಿಕೆಗಳನ್ನು ನೀಡಿದ ಯಾರ ವಿರುದ್ಧವೂ ಕಠಿಣ ಕ್ರಮ ಕೈಗೊಂಡ ನಿದರ್ಶನ ಇಲ್ಲ. ಇದು ಸರ್ಕಾರದ ಇಬ್ಬಂದಿ ನೀತಿಯ ದ್ಯೋತಕ. ಈಗ ಪಕ್ಷದ ಶಿಸ್ತು ಸಮಿತಿಯನ್ನು ಪುನರ್‌ ರಚಿಸಲಾಗಿದೆ. ಈ ಸಮಿತಿಯಾದರೂ ವಿವಾದಾತ್ಮಕ ಹೇಳಿಕೆಗಳಿಗೆ ಕಡಿವಾಣ ಹಾಕಲಿ. ಬಿಜೆಪಿ ಕಟ್ಟಿದವರಲ್ಲಿ ಎ.ಬಿ. ವಾಜಪೇಯಿ ಹಾಗೂ ಎಲ್‌.ಕೆ. ಅಡ್ವಾಣಿ ಪ್ರಮುಖರು. ಪಕ್ಷದ ಕಾರ್ಯಕಾರಿಣಿಯಲ್ಲಿ ಹಾಜರಿದ್ದ ಪ್ರತಿ ಬಾರಿಯೂ ಅಡ್ವಾಣಿ ಮಾತನಾಡಿದ್ದಾರೆ. ಆದರೆ ಈ ಸಲ ಮೌನಕ್ಕೆ ಶರಣಾಗುವಂಥ ಸ್ಥಿತಿ ಉಂಟಾಗಿದ್ದು ಪಕ್ಷದ ಕಾರ್ಯಕರ್ತರಲ್ಲಿ ಪ್ರಶ್ನೆಗಳನ್ನು ಮೂಡಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.