ತಂಬಾಕು ಬಳಕೆ ನಿಗ್ರಹಕ್ಕೆ ವಿಳಂಬ ನೀತಿ ಸಲ್ಲ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುವ ಎಚ್ಚರಿಕೆಯನ್ನು ತಂಬಾಕು ಉತ್ಪನ್ನಗಳ ಮೇಲೆ ಅಕ್ಷರಗಳಲ್ಲಿ ಹಾಗೂ ಚಿತ್ರದ ಮೂಲಕ ದೊಡ್ಡದಾಗಿ ಪ್ರಕಟಿಸುವ ವಿಚಾರವನ್ನು ಕೇಂದ್ರ ಆರೋಗ್ಯ ಸಚಿವಾಲಯ ಮುಂದೂಡಿದೆ. ಸಾಕಷ್ಟು ಪರಿಶೀಲನೆಯ ನಂತರ ಕೈಗೊಳ್ಳಲಾಗಿದ್ದ ಈ ನಿರ್ಧಾರದ ಮುಂದೂಡಿಕೆ ಅಸಂಗತವಾದದ್ದು. ಜೊತೆಗೆ ಈ ನಿರ್ಧಾರ ದುರುದ್ದೇಶಪೂರಿತ. ತಪ್ಪು ಪ್ರತಿಪಾದನೆಗಳ ಮೂಲಕ ಸಾರ್ವಜನಿಕ ನೀತಿಯನ್ನು ಕ್ಷುಲ್ಲಕೀಕರಣಗೊಳಿಸಲು ನಡೆಸಿದ ಪ್ರಯತ್ನ ಸರಿಯಲ್ಲ. ಈ ವಿಚಾರದ ಪರಿಶೀಲನೆ ನಡೆಸಿದ ಸಂಸದೀಯ ಸಮಿತಿಯ ಅಧ್ಯಕ್ಷರಾದ ದಿಲೀಪ್‌ ಗಾಂಧಿ ಹಾಗೂ ಸದಸ್ಯರಾದ ಶ್ಯಾಮಚರಣ್‌ ಗುಪ್ತ ಅವರು, ‘ತಂಬಾಕಿನಿಂದ ಕ್ಯಾನ್ಸರ್‌ ಬರುತ್ತದೆ ಎನ್ನುವುದಕ್ಕೆ ಆಧಾರಗಳಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಇವು ಜವಾಬ್ದಾರಿ ಸ್ಥಾನದಲ್ಲಿ ಇರುವವರು ಹಾಗೂ ಜನಪ್ರತಿನಿಧಿಗಳು ಆಡುವ ಮಾತುಗಳಲ್ಲ. ಅಲಹಾಬಾದ್‌ನ ಸಂಸದರಾಗಿರುವ ಗುಪ್ತ ಅವರು, ಬೀಡಿ ಉದ್ಯಮದ ಜೊತೆಗೆ ನಿಕಟ ಸಂಪರ್ಕ ಹೊಂದಿರುವುದು ಗುಟ್ಟಿನ ವಿಷಯವೇನೂ ಅಲ್ಲ. ‘ತಂಬಾಕು ಸೇವನೆಯಿಂದ ಉಂಟಾಗುವ ವಿವಿಧ ಕಾಯಿಲೆಗಳಿಗಾಗಿ ಪ್ರತಿವರ್ಷ ದೇಶದಲ್ಲಿ ಅಂದಾಜು ₹1 ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಹೇಳಿರುವ ‘ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ’ದ ಹೇಳಿಕೆಯನ್ನು ಇಲ್ಲಿ ಗಮನಿಸಬಹುದು. ವಾಸ್ತವ ಹೀಗಿರುವಾಗ, ತಂಬಾಕು ಸೇವನೆಗೂ ಕ್ಯಾನ್ಸರ್‌ಗೂ ಸಂಬಂಧವಿಲ್ಲ ಎನ್ನುವುದು ಮೂರ್ಖತನದ ಮಾತಷ್ಟೇ ಅಲ್ಲ, ಅದು ತಂಬಾಕು ಲಾಬಿಯ ಮಾತಾಗಿರಲಿಕ್ಕಷ್ಟೇ ಸಾಧ್ಯ. ಭಾರತೀಯರ ಆರೋಗ್ಯದ ಮೂಲಭೂತ ಹಕ್ಕನ್ನು ತಂಬಾಕು ಲಾಬಿಗೆ ಬಲಿಕೊಡುವ ಪ್ರಯತ್ನವನ್ನು ಎಲ್ಲ ಪ್ರಜ್ಞಾವಂತರು ವಿರೋಧಿಸಬೇಕಾಗಿದೆ. ತಂಬಾಕು ಕಂಪೆನಿಗಳ ಜತೆ ನಂಟು ಹೊಂದಿರುವವರು ಹಾಗೂ ಆ ಕಂಪೆನಿಗಳ ಪರ ಲಾಬಿಯಲ್ಲಿ ತೊಡಗಿರುವವರನ್ನು ಸಂಸದೀಯ ಸಮಿತಿಗೆ ನೇಮಿಸುವುದರಿಂದ ಹಿತಾಸಕ್ತಿಯ ಸಂಘರ್ಷ ಉಂಟಾಗುತ್ತದೆ. ಈ ಸಮಿತಿಯ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಡೆಗಣಿಸಿರುವುದು ಸೂಕ್ತವಾಗಿಯೇ ಇದೆ. ಹಿತಾಸಕ್ತಿ ಸಂಘರ್ಷ ಇರುವ ಎಂ.ಪಿ.ಗಳು, ಸಂಸದೀಯ ಸಮಿತಿಗಳ ಸದಸ್ಯರಾಗುವುದನ್ನು ತಪ್ಪಿಸಬೇಕು ಎಂದು ಪ್ರಧಾನಿ ಹೇಳಿರುವುದು ಸರಿಯಾಗಿಯೇ ಇದೆ. ಈ ಬಗ್ಗೆ ಎಚ್ಚರ ವಹಿಸಬೇಕಾದ ಹೊಣೆಯೂ ಪ್ರಧಾನಿಯವರ ಮೇಲಿದೆ. ದೇಶದಲ್ಲಿ ತಂಬಾಕು ಬಳಕೆದಾರರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು, ಇವರಲ್ಲಿ ಅನೇಕ ಮಂದಿ ಅನಕ್ಷರಸ್ಥರೂ ಬಡವರೂ ಆಗಿದ್ದಾರೆ. ಅವರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಚಿತ್ರಗಳ ಸಂಕೇತಗಳನ್ನು ದೊಡ್ಡದಾಗಿ ಪ್ರಕಟಿಸಬೇಕಿದೆ. ಅಂದಹಾಗೆ, ಸಿಗರೇಟ್‌ಗಳನ್ನು ಬಿಡಿ ಬಿಡಿಯಾಗಿ ಮಾರುವುದನ್ನು ನಿರ್ಬಂಧಿಸುವ ಹಾಗೂ ತಂಬಾಕು ಉತ್ಪನ್ನಗಳ ಪೊಟ್ಟಣಗಳ ಮೇಲೆ ಎಚ್ಚರಿಕೆ ಚಿತ್ರ ಮತ್ತು ಸಂದೇಶವನ್ನು ದೊಡ್ಡದಾಗಿ ಬಿಂಬಿಸುವ ಚಿಂತನೆ ಹೊಸತೇನೂ ಅಲ್ಲ. ಎಚ್ಚರಿಕೆ ಸಂದೇಶಗಳಿಗಾಗಿ ತಂಬಾಕು ಉತ್ಪನ್ನಗಳ ಪೊಟ್ಟಣಗಳ ಮೇಲೆ ಪ್ರಸ್ತುತ ಇರುವ ಜಾಗವನ್ನು ದುಪ್ಪಟ್ಟುಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಕೂಡ ಒಲವು ತೋರಿರುವುದು ಸರಿಯಾದದ್ದೇ. ಏಪ್ರಿಲ್‌ 1ರಿಂದ ಇದು ಜಾರಿಯಾಗಬೇಕಿತ್ತು. ಆದರೆ ಈಗ ಮುಂದಕ್ಕೆ ಹಾಕಲಾಗಿದೆ. ‘ತಂಬಾಕು ಲಾಬಿಗೆ ಕೇಂದ್ರ ಸರ್ಕಾರ ಮಣಿಯುವ ಪ್ರಶ್ನೆಯೇ ಇಲ್ಲ’ ಎಂದು ಪ್ರಧಾನಿ ಹೇಳಿಕೆ ನೀಡಿದ್ದಾರೆ. ಇದು ಅನುಷ್ಠಾನದಲ್ಲಿ ಕಾಣಬೇಕು. ಇಂತಹ ಕ್ರಮದಿಂದ ಆಸ್ಟ್ರೇಲಿಯಾ ಹಾಗೂ ಮಾರಿಷಿಸ್‌ಗಳಲ್ಲಿ ತಂಬಾಕು ಬಳಕೆಯನ್ನು ಸಾಕಷ್ಟು ಕಡಿಮೆ ಮಾಡುವುದು ಸಾಧ್ಯವಾಗಿದೆ. ತಂಬಾಕು ಬೆಳೆಗಾರರಿಗೆ ಪರ್ಯಾಯ ಬೆಳೆಯ ಅವಕಾಶಗಳನ್ನು ರೂಪಿಸುವ ಕುರಿತು ಕೂಡ ಚಿಂತನೆಗಳು ನಡೆದಿವೆ. ‘ಸ್ವಚ್ಛ ಭಾರತ’ ಆಂದೋಲನಕ್ಕೆ ತೋರಿದ ಉತ್ಸಾಹವನ್ನು, ತಂಬಾಕು ಬಳಕೆ ವಿರೋಧಿ ಆಂದೋಲನಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿಯೂ ಪ್ರಧಾನಿ ತೋರಬೇಕಾಗಿದೆ. ಈ ಹಿಂದೆ ಆರೋಗ್ಯ ಸಚಿವರ ಆಯ್ಕೆ ಹಾಗೂ ಅವರ ಅಧಿಕಾರಾವಧಿ ಮುಂದುವರಿಕೆ ಬಗ್ಗೆ ಪ್ರಭಾವ ಬೀರುವಷ್ಟು ತಂಬಾಕು ಲಾಬಿ ಪ್ರಬಲವಾಗಿದ್ದುದು ಸುಳ್ಳಲ್ಲ. ಇಂತಹ ಲಾಬಿಗಳಿಗೆ ಸರ್ಕಾರ ಮಣಿಯಬಾರದು. ಸಾರ್ವಜನಿಕ ಆರೋಗ್ಯದ ಹಿತ ರಕ್ಷಿಸುವುದು ಸರ್ಕಾರದ ಆದ್ಯತೆಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.