ಕಾರ್ಯಾಂಗ, ನ್ಯಾಯಾಂಗದ ನಡುವಣ ಇರಿಸುಮುರಿಸು ‘ಪಂಚತಾರಾ ಹೋರಾಟಗಾರ’ರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ವಿವಾದಾಸ್ಪದ. ನ್ಯಾಯಾಲಯದ ತೀರ್ಪುಗಳು ಹಾಗೂ ಆದೇಶಗಳು ತಾರಾ ವರ್ಚಸ್ಸಿನ ಅರ್ಜಿದಾರರಿಂದ ಪ್ರಭಾವಿತವಾಗುತ್ತವೆ ಎಂಬರ್ಥ ಧ್ವನಿಸುವ ಪ್ರಧಾನಿಯವರ ಮಾತುಗಳು ಹಲವು ವಲಯಗಳಲ್ಲಿ ಟೀಕೆಗಳಿಗೆ ಕಾರಣವಾಗಿದೆ. ವಾಸ್ತವ ವಿಚಾರಗಳಿಗಿಂತ ಈ ‘ಪಂಚತಾರಾ ಹೋರಾಟಗಾರರ’ ದೃಷ್ಟಿಕೋನಗಳಿಂದ ನ್ಯಾಯಮೂರ್ತಿಗಳು ಪ್ರಭಾವಿತಗೊಳ್ಳುತ್ತಾರೆ ಎಂಬಂಥ ಅಭಿಪ್ರಾಯವನ್ನು ಈ ಮಾತುಗಳು ಧ್ವನಿಸುತ್ತವೆ. ನಿಜ ಹೇಳಬೇಕೆಂದರೆ ಪ್ರಧಾನಿ ಅವರು ವ್ಯಕ್ತಪಡಿಸಿರುವ ಈ ಅಭಿಪ್ರಾಯಕ್ಕೆ ಯಾವುದೇ ಆಧಾರ ಇಲ್ಲ. ನ್ಯಾಯಾಂಗದ ಪರಿಧಿಯನ್ನು ಆವರಿಸಿಕೊಳ್ಳಲು ಕಾರ್ಯಾಂಗ ಯತ್ನಿಸುತ್ತಿದೆ ಎಂಬಂಥ ಭಾವನೆ ಸೃಷ್ಟಿಯಾಗಿರುವ ಸಂದರ್ಭ ಇದು. ಇದಕ್ಕೆ ಕಾರಣ ನ್ಯಾಯಮೂರ್ತಿಗಳ ನೇಮಕದಲ್ಲಿ ಕೊಲಿಜಿಯಂ ವಿಧಾನಕ್ಕೆ ಬದಲಿಗೆ ಸರ್ಕಾರದ ದನಿಗೆ ಪ್ರಾಧಾನ್ಯ ಇರುವ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ (ಎನ್ ಜೆಎಸಿ) ಜಾರಿಗೆ ಸರ್ಕಾರ ಮುಂದಾಗಿರುವುದು. ಈಗ ಈ ಆಯೋಗವನ್ನು ವಿರೋಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ­ನಡೆಸುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಪ್ರಧಾನಿಯವರು ಸೂಕ್ಷ್ಮತೆ ಪ್ರದರ್ಶಿಸಬಹುದಿತ್ತು. ಪ್ರಧಾನಿಯವರ ಈ ಬಗೆಯ ಅನಿರೀಕ್ಷಿತ ಮಾತುಗಳು ಯಾರನ್ನು ಉದ್ದೇಶಿಸಿದ್ದು ಎಂಬಂಥ ಪ್ರಶ್ನೆಗಳನ್ನು ಇದು ಹುಟ್ಟು ಹಾಕಿರುವುದೂ ನಿಜ. ಏಕೆಂದರೆ ಹಣದುರುಪಯೋಗ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಬಂಧನ ಸಾಧ್ಯತೆಗೆ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ತಡೆ ನೀಡಿತ್ತು. ಅಷ್ಟೇ ಅಲ್ಲ, ತೀಸ್ತಾ ಸೆಟಲ್‌ವಾಡ್ ಜಾಮೀನು ಅರ್ಜಿ ವಿಚಾರಣೆ ನಡೆಸಬೇಕಾಗಿದ್ದ ಇಬ್ಬರು ನ್ಯಾಯಮೂರ್ತಿಗಳನ್ನೂ ಬದಲಿಸಲಾಗಿತ್ತು. ಸುಪ್ರೀಂಕೋರ್ಟ್‌ನ ಈ ಇಬ್ಬರು ನ್ಯಾಯಮೂರ್ತಿಗಳೂ ತಮ್ಮ ಮಕ್ಕಳ ಮದುವೆಗೆ ಪ್ರಧಾನಿಯವರನ್ನು ಆಹ್ವಾನಿಸಿದ್ದರು ಎಂಬುದು ಈ ಬದಲಾವಣೆಗಳಿಗೆ ಕಾರಣವಾಗಿತ್ತು. ಹಾಗೆಯೇ ಆಯ್ದ ಬ್ರಿಟಿಷ್ ಸಂಸದರ ಎದುರು ವಿಚಾರಗಳ ಮಂಡನೆಗೆ ಲಂಡನ್‌ಗೆ ತೆರಳಬೇಕಾಗಿದ್ದ ಪರಿಸರ ಕಾರ್ಯಕರ್ತೆ ಪ್ರಿಯಾ ಪಿಳ್ಳೈ ಅವರಿಗೆ ತಡೆ ಒಡ್ಡಿದ ಸರ್ಕಾರದ ಕ್ರಮವನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿತ್ತು ಎಂಬುದನ್ನು ಸ್ಮರಿಸಬಹುದು. ಹತ್ತು ವರ್ಷಗಳ ಹಿಂದೆ ಇದ್ದಷ್ಟು ಮಟ್ಟಿಗೆ ನ್ಯಾಯಾಂಗ ಈಗ ನಿರ್ಭೀತಿ ಪ್ರದರ್ಶಿಸುತ್ತಿಲ್ಲ ಎಂಬಂಥ ಪ್ರಧಾನಿ ಮೋದಿ ಅವರ ಮಾತುಗಳೂ ವಿವಾದಾಸ್ಪದ. ರಾಜ್ಯ ಮುಖ್ಯಮಂತ್ರಿಗಳು ಹಾಗೂ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನದಲ್ಲಿ ನೀಡಿದ ಈ ಹೇಳಿಕೆಯನ್ನು ಅದೇ ಸಭೆಯಲ್ಲಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರು ಒಪ್ಪದೆ ನ್ಯಾಯಾಂಗವನ್ನು ಸಮರ್ಥಿಸಿಕೊಂಡಿದ್ದಾರೆ. ನ್ಯಾಯಮೂರ್ತಿಗಳು ಯಾವಾಗಲೂ ಇದ್ದಂತೆಯೇ ಈಗಲೂ ನಿರ್ಭೀತರಾಗಿಯೇ ಇದ್ದಾರೆ ಎಂದು ನ್ಯಾಯಮೂರ್ತಿ ದತ್ತು ಪ್ರತಿಪಾದಿಸಿದ್ದಾರೆ. ತರಂಗಾಂತರ ಹಾಗೂ ಕಲ್ಲಿದ್ದಲು ಹಂಚಿಕೆ ರದ್ದು, ಮಾಹಿತಿ ತಂತ್ರಜ್ಞಾನ ಕಾಯಿದೆಯ 66 ಎ ಸೆಕ್ಷನ್ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್ ನೀಡಿದಂತಹ ತೀರ್ಪುಗಳು ಕಾರ್ಯಾಂಗದ ಮರ್ಜಿ ಹಿಡಿಯುವಂತಹದ್ದೇನಾಗಿರಲಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಗಮನಿಸಬೇಕು. ಜೊತೆಗೆ ಈ ಪ್ರಕರಣಗಳಲ್ಲಿ ಹೋರಾಡಿದವರು ಸಾಮಾಜಿಕ ಕಾರ್ಯಕರ್ತರು ಅಥವಾ ಮೋದಿಯವರು ಹೇಳಿದಂತಹ ‘ಪಂಚತಾರಾ ಹೋರಾಟಗಾರರೇ’. ನ್ಯಾಯಾಧೀಶರೂ ದೋಷಾತೀತರೇನೂ ಅಲ್ಲ ಎಂಬುದೂ ನಿಜವೇ. ಅವರಲ್ಲಿ ಕೆಲವರ ವರ್ತನೆಗಳಂತೂ ಟೀಕೆಗಳಿಗೆ ಒಳಗಾಗುವಂತಹದ್ದಾಗಿರುವುದೂ ನಿಜ. ಇತ್ತೀಚೆಗೆ ನಿವೃತ್ತರಾದ ಮುಖ್ಯ ನ್ಯಾಯಮೂರ್ತಿಗಳೊಬ್ಬರು ರಾಜ್ಯವೊಂದರ ರಾಜ್ಯಪಾಲರ ಹುದ್ದೆ ಒಪ್ಪಿಕೊಂಡಿದ್ದು ಪಥ್ಯವಾಗದ ಸಂಗತಿ. ಆದರೆ ದೋಷಗಳು, ಕುಂದುಕೊರತೆಗಳ ನಡುವೆಯೂ ಪ್ರಜಾಪ್ರಭುತ್ವದ ಯಾವುದೇ ಅಂಗಕ್ಕಿಂತಲೂ ಹೆಚ್ಚಾಗಿ ನ್ಯಾಯಾಂಗದ ಮೇಲೆ ಜನಸಾಮಾನ್ಯರು ವಿಶ್ವಾಸವಿಟ್ಟಿದ್ದಾರೆ ಎಂಬುದೂ ಅಷ್ಟೇ ನಿಜ. ನ್ಯಾಯಾಂಗದ ಸ್ವಾತಂತ್ರ್ಯಕ್ಕಾಗಿ ಆಂತರಿಕವಾಗಿ ನಿಯಂತ್ರಣ ವ್ಯವಸ್ಥೆಯು ಪರಿಶೀಲನಾರ್ಹ. ನ್ಯಾಯಾಂಗದ ನಿರ್ಧಾರಗಳು ಸಾಕ್ಯ್ಷಗಳನ್ನು ಆಧರಿಸಿರಬೇಕೆ ಹೊರತು ಹೊರಗಿನ ಗ್ರಹಿಕೆಗಳಿಂದ ಪ್ರಭಾವಿತವಾಗಬಾರದು ಎಂಬುದೂ ನಿಜ. ಇದಕ್ಕಾಗಿ ನ್ಯಾಯಾಂಗದ ಉತ್ತರದಾಯಿತ್ವ ಬಲಗೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ನ್ಯಾಯಾಂಗ ಮಾನದಂಡಗಳುgಹಾಗೂ mಉತ್ತರದಾಯಿತ್ವ ಮಸೂದೆ 2010 ಜಾರಿಗೊಳಿಸಲು ಸರ್ಕಾರ ಯತ್ನಿಸಬೇಕು. ಈ ಮಸೂದೆ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗಕ್ಕೆ ಪೂರಕವಾಗಿಯೇ ಇರುತ್ತದೆ. ಇದರಿಂದ ನ್ಯಾಯಾಂಗದ ಮೇಲೆ ಜನರಿಗಿರುವ ವಿಶ್ವಾಸ ಮತ್ತಷ್ಟು ಬಲಗೊಳ್ಳುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.