ಉದ್ಯಮ ವಲಸೆ ತಡೆಗೆ ಬೇಕು ಹೊಸ ನೀತಿ ವಿದ್ಯುನ್ಮಾನ ವಾಣಿಜ್ಯದ (ಇ-ಕಾಮರ್ಸ್) ಬಹುರಾಷ್ಟ್ರೀಯ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಅಮೆರಿಕ ಮೂಲದ ಅಮೆಜಾನ್, ತನ್ನ ವಹಿವಾಟು ವಿಸ್ತರಣೆಯ ದೊಡ್ಡ ಮೊತ್ತದ ಬಂಡವಾಳ ಹೂಡಿಕೆಯನ್ನು ಕರ್ನಾಟಕದ ಬದಲಿಗೆ ನೆರೆಯ ತೆಲಂಗಾಣಕ್ಕೆ ವರ್ಗಾಯಿಸಲು ನಿರ್ಧರಿಸಿರುವುದು ಅನಪೇಕ್ಷಿತ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರಕ್ಕೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಪಾವತಿಸುವುದಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಸಿಲುಕಿದ್ದ ಸಂಸ್ಥೆಯು ತನ್ನ ವಹಿವಾಟಿಗೆ ಪೂರಕವಾದ ಸರಕು ಸಂಗ್ರಹ, ಪ್ಯಾಕೇಜಿಂಗ್‌ ಮತ್ತು ವಿತರಣೆಯ ಬೃಹತ್‌ ಸಾಮರ್ಥ್ಯದ ಕೇಂದ್ರ ನಿರ್ಮಾಣಕ್ಕೆ ನೆರೆಯ ತೆಲಂಗಾಣವನ್ನು ಆಯ್ಕೆ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಉದ್ಭವಿಸಿರುವ ತೆರಿಗೆ ಪಾವತಿ ಸಮಸ್ಯೆ ಇತ್ಯರ್ಥವಾಗುವವರೆಗೂ ಭವಿಷ್ಯದಲ್ಲಿನ ಇಲ್ಲಿನ ಬಂಡವಾಳ ಹೂಡಿಕೆ ವಿಚಾರ ತಡೆಹಿಡಿಯಲೂ ನಿರ್ಧರಿಸಿರುವುದು ರಾಜ್ಯದ ಪಾಲಿಗೆ ಹಿನ್ನಡೆ ಎಂದೇ ಅರ್ಥೈಸಬಹುದು. ಡಿಜಿಟಲ್‌ ಅರ್ಥ ವ್ಯವಸ್ಥೆಯ ಹೊಸ ವಹಿವಾಟಿನ ರೂಪದಲ್ಲಿ ‘ಇ–ಕಾಮರ್ಸ್‌’ ದಿನೇ ದಿನೇ ವಿಸ್ತರಣೆಗೊಳ್ಳುತ್ತಿರುವ ಸದ್ಯದ ಸಂದರ್ಭದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದು ತನ್ನ ಹೂಡಿಕೆ ನಿರ್ಧಾರವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವುದು ಉದ್ಯಮ ಲೋಕಕ್ಕೆ ರಾಜ್ಯ ಸರ್ಕಾರದ ಕೈಗಾರಿಕಾ ನೀತಿ ಬಗ್ಗೆಯೇ ತಪ್ಪು ಸಂದೇಶ ನೀಡುತ್ತದೆ. ಬೆಂಗಳೂರು ಹೊರವಲಯದಲ್ಲಿ ಅಸ್ತಿತ್ವಕ್ಕೆ ಬರಬೇಕಾಗಿದ್ದ ಈ ಬೃಹತ್‌ ಸರಕು ಸಂಗ್ರಹ ಕೇಂದ್ರವು ಹೈದರಾಬಾದ್‌ ಹೊರವಲಯದ ಕೊಟ್ಟೂರಿಗೆ ವಲಸೆ ಹೋಗುತ್ತಿರುವುದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯೂ ಆಗಬೇಕಾಗಿದೆ. ಅಮೆಜಾನ್‌ ಸಂಸ್ಥೆಯು ರಾಜ್ಯದಲ್ಲಿ ವ್ಯಾಪಕವಾಗಿ ಬೇರೂರಲು ಯತ್ನಿಸುತ್ತಿರುವಾಗಲೇ ಇಂತಹ ನಿರ್ಧಾರ ಕೈಗೊಂಡಿರುವುದು ರಾಜ್ಯದಲ್ಲಿ ‘ಕೈಗಾರಿಕಾ ಸ್ನೇಹಿ’ ವಾತಾವರಣವೇ ಇಲ್ಲ ಎನ್ನುವ ಅಭಿಪ್ರಾಯಕ್ಕೂ ಎಡೆ ಮಾಡಿಕೊಡುತ್ತದೆ. ‘ರಾಜ್ಯ ಸರ್ಕಾರದ ಅಸಹಕಾರದ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ವರ್ತನೆ ತೀವ್ರ ನಿರಾಶೆ ಮೂಡಿಸಿದೆ. ಸರ್ಕಾರದ ತೆರಿಗೆ ಮತ್ತಿತರ ನೀತಿಗಳು ಇ–ವಾಣಿಜ್ಯ ವಹಿವಾಟಿಗೆ ಪೂರಕವಾಗಿಲ್ಲ’ ಎಂದು ಅಮೆಜಾನ್‌ ಇಂಡಿಯಾದ ಉಪಾಧ್ಯಕ್ಷರು ಅಭಿಪ್ರಾಯಪಟ್ಟಿರುವುದು ಸರ್ಕಾರದ ಕಣ್ತೆರೆಸಬೇಕಾಗಿದೆ. ಭಾರತದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿರುವ ಅಂದಾಜು ₹12 ಸಾವಿರ ಕೋಟಿಗಳಲ್ಲಿ ದೊಡ್ಡ ಮೊತ್ತವನ್ನು ಕರ್ನಾಟಕಕ್ಕೆ ಮೀಸಲಿಡಲು ನಿರ್ಧರಿಸಿದ್ದ ಸಂಸ್ಥೆ ಈಗ ಅಂತಹ ನಿರ್ಧಾರದಿಂದ ಹಿಂದೆ ಸರಿದಿರುವುದರಿಂದ ರಾಜ್ಯಕ್ಕೆ ಬರೀ ಬಂಡವಾಳ ಹೂಡಿಕೆಯಷ್ಟೇ ನಷ್ಟವಾಗದು. ಈ ವಿದ್ಯಮಾನಕ್ಕೆ ಇನ್ನೂ ಹಲವು ಆಯಾಮಗಳಿವೆ. ಸರಕುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಗ್ರಾಹಕರ ಮನೆ ಬಾಗಿಲಿಗೆ ವಿತರಿಸುವ ಅಮೆಜಾನ್‌ನಂತಹ ಉದ್ದಿಮೆ ಸಂಸ್ಥೆಗಳು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ವಹಿವಾಟು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಉದ್ದಿಮೆ ಸಂಸ್ಥೆಯೊಂದು ಬಂಡವಾಳ ಹೂಡಿಕೆಯನ್ನೇ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರುವುದು ದೂರಗಾಮಿ ಪರಿಣಾಮ ಬೀರಲಿದೆ. ನೆರೆಹೊರೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಕೈಗಾರಿಕೆಗಳಿಗೆ ಆಹ್ವಾನ ನೀಡಲು ತೀವ್ರ ಪೈಪೋಟಿ ನಡೆಸುತ್ತಿವೆ. ಇದೇ ಕಾರಣಕ್ಕೆ ಭೂಮಿ, ನೀರು, ವಿದ್ಯುತ್‌ ಮತ್ತಿತರ ಮೂಲ ಸೌಕರ್ಯಗಳನ್ನು ಭಾರಿ ರಿಯಾಯ್ತಿಯಲ್ಲಿ ನೀಡುವುದರ ಜತೆಗೆ ತೆರಿಗೆ ವಿಷಯದಲ್ಲಿಯೂ ತುಂಬ ಔದಾರ್ಯದಿಂದ ನಡೆದುಕೊಳ್ಳುತ್ತಿವೆ. ಧಾರವಾಡದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದ ಹೀರೊ ಮೋಟೊಕಾರ್ಪ್‌‌ ಸಂಸ್ಥೆಯೂ ಇದೇ ಕಾರಣಕ್ಕೆ ನೆರೆ ರಾಜ್ಯದ ಪಾಲಾಗಿದೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ರಾಜ್ಯ ಸರ್ಕಾರವು ತೆರಿಗೆ ಪಾವತಿಯಂತಹ ವಿಷಯಗಳನ್ನು ದೊಡ್ಡದು ಮಾಡಬಾರದು. ಅಮೆಜಾನ್‌ ಮತ್ತು ಇಂತಹ ಇತರ ಸಂಸ್ಥೆಗಳ ಕೋರಿಕೆಯಂತೆ ರಾಜ್ಯ ಸರ್ಕಾರವು ಮೌಲ್ಯವರ್ಧಿತ ತೆರಿಗೆ ಪಾವತಿಗೆ ಸಂಬಂಧಿಸಿದ ಅನಿಶ್ಚಿತತೆ ದೂರ ಮಾಡಲು ತುರ್ತಾಗಿ ಕಾರ್ಯೋನ್ಮುಖವಾಗಬೇಕಾಗಿದೆ. ರಾಜ್ಯಗಳ ಮಧ್ಯೆ ಪೈಪೋಟಿ ಹೆಚ್ಚುತ್ತಿರುವುದರಿಂದ ಕರ್ನಾಟಕ ಸರ್ಕಾರವೂ ತನ್ನ ಕೈಗಾರಿಕಾ ನೀತಿಯಲ್ಲಿನ ಕೆಲ ನಿಬಂಧನೆಗಳನ್ನು ಸಡಿಲಿಸುವ ಅಗತ್ಯ ಇದೆ. ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗಿ ಭವಿಷ್ಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಅಗತ್ಯಬಿದ್ದರೆ ಕಾಯ್ದೆಗೆ ತಿದ್ದುಪಡಿಗಳನ್ನೂ ತರಬೇಕು. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪ್ರಸ್ತಾಪವಾಗಿದ್ದ ಅನೇಕ ಯೋಜನೆಗಳು ಇದುವರೆಗೂ ಕಾರ್ಯರೂಪಕ್ಕೆ ಬಾರದಿರುವುದರ ಬಗ್ಗೆಯೂ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.