ಕಾರ್ಪೊರೇಟ್ ಜಗತ್ತಿಗೆ ಎಚ್ಚರಿಕೆ ಗಂಟೆ ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿದ್ದ ಈ ಹಿಂದಿನ ಸತ್ಯಂ ಕಂಪ್ಯೂಟರ್‌ ಸರ್ವಿಸಸ್‌ನ ಸಂಸ್ಥಾಪಕ ಬಿ. ರಾಮಲಿಂಗರಾಜು ಮತ್ತು ಇತರ 9 ಮಂದಿಗೆ, ಬಹುಕೋಟಿ ವಂಚನೆ ಹಗರಣದಲ್ಲಿ ಸಿಬಿಐ ವಿಶೇಷ ಕೋರ್ಟ್ ಕೊನೆಗೂ ಶಿಕ್ಷೆ ವಿಧಿ ಸಿರುವುದು, ಕಾರ್ಪೊರೇಟ್‌ ಜಗತ್ತಿನಲ್ಲಿ ಆರ್ಥಿಕ ಅಪರಾಧ ಎಸಗುವವರಿಗೆ ಎಚ್ಚರಿಕೆಯ ಪಾಠವಾಗಿದೆ. ಆರು ವರ್ಷಗಳ ಹಿಂದೆ ಕಾರ್ಪೊರೇಟ್‌ ವಲಯ ಮತ್ತು ಸಾಮಾನ್ಯ ಹೂಡಿಕೆ ದಾರರನ್ನು ತಲ್ಲಣಗೊಳಿಸಿದ್ದ ದೇಶ ಕಂಡ ಬೃಹತ್‌ ಲೆಕ್ಕಪತ್ರ ಹಗರಣದ ಸಂಚುಕೋರರ ಅಪರಾಧ ಕೊನೆಗೂ ಸಾಬೀತಾಗಿದೆ. ರೂ. 7 ಸಾವಿರ ಕೋಟಿಗಳಷ್ಟು ಮೊತ್ತದ ಲೆಕ್ಕಪತ್ರ ವಂಚನೆ ಯಿಂದ ಸಂಸ್ಥೆಯ ಪ್ರವರ್ತಕರು ಅಕ್ರಮವಾಗಿ ರೂ. 1,900 ಕೋಟಿಗಳಷ್ಟು ಲಾಭ ಮಾಡಿಕೊಂಡಿದ್ದರು. ಹೂಡಿಕೆದಾರರಿಗೆ ರೂ. 14 ಸಾವಿರ ಕೋಟಿ ನಷ್ಟ ಉಂಟು ಮಾಡಿದ್ದ ಕಾರ್ಪೊರೇಟ್‌ ವಂಚನೆ ಪ್ರಕರಣ ಇದಾಗಿತ್ತು. ದೇಶದ ಮಾಹಿತಿ ತಂತ್ರಜ್ಞಾನ ರಂಗದ ಪ್ರತಿಭಾನ್ವಿತರಲ್ಲಿ ಒಬ್ಬರಾಗಿದ್ದ ರಾಮಲಿಂಗರಾಜು ತಮ್ಮ ಜ್ಞಾನವನ್ನು ದುರಾಸೆಗೆ ಬಳಸಿಕೊಂಡಿದ್ದಕ್ಕೆ ಬೆಲೆ ತೆರಬೇಕಾಗಿ ಬಂದಿದೆ. ಐ.ಟಿ ತಂತ್ರಜ್ಞರು, ಲೆಕ್ಕಪತ್ರ ತಪಾಸಿಗರು ಸೇರಿಕೊಂಡು ಎಸಗುವ ಆರ್ಥಿಕ ಅಪರಾಧ ಪ್ರಕರಣಗಳಿಗೂ ಶಿಕ್ಷೆ ಕಾದಿದೆ ಎನ್ನುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಹಣಕಾಸು ವಂಚನೆ ಎಸಗುವವರಿಗೆ ಶಿಕ್ಷೆ ಆಗುವ ಪ್ರಕರಣಗಳ ಸಂಖ್ಯೆಯೇ ನಮ್ಮಲ್ಲಿ ಕಡಿಮೆ ಇರುವಾಗ, ಈ ತೀರ್ಪು ಇಂತಹ ಆರ್ಥಿಕ ವಂಚಕರಿಗೊಂದು ಪಾಠ. ವಂಚನೆ ಎಸಗಿದ ರಾಮಲಿಂಗರಾಜು ಆರಂಭದಲ್ಲಿ ಸ್ವತಃ ತಾವೇ ಲಿಖಿತ ರೂಪದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರಿಂದ ಹಗರಣದ ವಿಚಾರಣೆಯನ್ನು ತ್ವರಿತವಾಗಿ ಮುಗಿಸಬೇಕಾಗಿತ್ತು. ವಿಚಾರಣೆ ಪೂರ್ಣಗೊಳ್ಳಲು 6 ವರ್ಷಗಳಷ್ಟು ದೀರ್ಘ ಕಾಲ ತೆಗೆದುಕೊಂಡಿರು ವುದು ನಮ್ಮ ನ್ಯಾಯದಾನದಲ್ಲಿನ ವಿಳಂಬಕ್ಕೂ ಕನ್ನಡಿ ಹಿಡಿಯುತ್ತದೆ. ತೀರ್ಪಿನ ವಿರುದ್ಧ ಮೇಲ್ಮನವಿಗೆ ಅವಕಾಶ ಇರುವುದರಿಂದ ವಿಚಾರಣೆಯು ಮುಂದುವರೆದು ಅಂತಿಮ ತೀರ್ಪು ಬರಲು ಇನ್ನಷ್ಟು ದೀರ್ಘ ಸಮಯ ಹಿಡಿಯಲಿದೆ. ಸಿಬಿಐ ವಿಶೇಷ ನ್ಯಾಯಾಲಯವು ಪ್ರಮುಖ ಆರೋಪಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 5.5 ಕೋಟಿ ದಂಡ ವಿಧಿಸಿದೆ. ಈ ಶಿಕ್ಷೆಯ ಪ್ರಮಾಣ ಅಲ್ಪ ವಾಯಿತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಇದಕ್ಕೆ ಕಾನೂನಿನ ಮಿತಿ ಕಾರಣವಾಗಿದ್ದರೆ ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಸರಿಪಡಿಸುವ ಅಗತ್ಯ ಇದೆ. ಈ ವಂಚನೆಯು 2003ರಿಂದ 2008ರವರೆಗೆ ಯಾರ ಗಮನಕ್ಕೂ ಬಾರದೇ ಮುಂದುವರೆದಿದ್ದಕ್ಕೆ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ), ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಗಳ ವೈಫಲ್ಯವೂ ಕಾರಣ. ಹಲವು ವರ್ಷಗಳಿಂದ ನಡೆಸುತ್ತಿದ್ದ ವಂಚನೆ ಮುಚ್ಚಿಹಾಕಲು, ತಮ್ಮ ಸಂಬಂಧಿಕರ ಒಡೆತನದ ಸಂಸ್ಥೆಗಳನ್ನು ಖರೀದಿಸುವ ರಾಜು ಅವರ ಯತ್ನ ವಿಫಲವಾಗುತ್ತಿದ್ದಂತೆ ಬಯ ಲಿಗೆ ಬಂದಿದ್ದ ಈ ಹಗರಣವು ಸಂಸ್ಥೆಯ ಪ್ರವರ್ತಕರೇ ಎಸಗುವ ಅಕ್ರಮಗಳಿಗೆ ಕನ್ನಡಿ ಹಿಡಿದಿತ್ತು. ಪಶ್ಚಿಮ ದೇಶಗಳಲ್ಲಿನ ಸಂಕೀರ್ಣ ಕಾರ್ಪೊರೇಟ್ ಹಗರಣಗಳಿಗೆ ಹೋಲಿಸಿದರೆ, ಸತ್ಯಂ ಹಗರಣ ತುಂಬ ಸರಳವಾದದ್ದು. ಸಂಸ್ಥೆಯ ಸ್ಥಾಪಕ ರಾಮಲಿಂಗರಾಜು ಅವರೇ ಆಡಳಿತ ಮಂಡಳಿ ಮತ್ತು ಲೆಕ್ಕಪತ್ರ ತಪಾಸಿಗರ ಜತೆ ಸೇರಿ ಗ್ರಾಹಕರ ಸಂಖ್ಯೆ, ವರಮಾನ ಮತ್ತು ಲಾಭದ ಬಗ್ಗೆ ಸುಳ್ಳು ಮಾಹಿತಿ ಸೃಷ್ಟಿಸಿ, ಸತ್ಯಂ ಕಂಪ್ಯೂಟರ್ ಕಂಪೆನಿಗೆ ಹೆಚ್ಚು ಲಾಭ ಬರುತ್ತಿರುವಂತೆ ಬಿಂಬಿಸಿದ್ದರು. ನಕಲಿ ಬ್ಯಾಂಕ್ ಹೇಳಿಕೆಗಳ ಮೂಲಕ ಸಂಸ್ಥೆಯು ಭಾರಿ ಲಾಭದಲ್ಲಿ ಮುನ್ನಡೆದಿದೆ ಎನ್ನುವ ತಪ್ಪು ನಂಬಿಕೆಯನ್ನು ಹೂಡಿಕೆದಾರರಲ್ಲಿ ಮೂಡಿಸಲಾಗಿತ್ತು. ಈ ಹಗರಣದಿಂದಾದ ಒಂದು ಒಳ್ಳೆಯ ಪರಿಣಾಮ ಎಂದರೆ, ಲೆಕ್ಕಪತ್ರ ಪರಿಶೀಲನೆ ಗುಣಮಟ್ಟದ ವಿಚಾರದಲ್ಲಿ ಮೂಡಿದಂತಹ ಹೊಸ ಎಚ್ಚರ. ಇದು ಕಾರ್ಪೊರೇಟ್ ಕಾನೂನು ಕುರಿತಂತೆ ಹೊಸ ಚಿಂತನೆಗೆ ಅವಕಾಶ ಕಲ್ಪಿಸಿತು. ಉದ್ದಿಮೆ ಸಂಸ್ಥೆಗಳ ಆಡಳಿತ ಮಂಡಳಿಗಳು, ಆಡಳಿತ ನಿರ್ವಹಣೆಯನ್ನು ತುಂಬ ಗಂಭೀರವಾಗಿ ಪರಿಗಣಿಸುವುದಕ್ಕೆ ಇದು ಪ್ರೇರಕವಾಯಿತು. ಹಗರಣ ಬೆಳಕಿಗೆ ಬಂದ ನಂತರ ಕಂಪೆನಿ ಕಾಯ್ದೆ ಮತ್ತು ಷೇರುಪೇಟೆ ವಹಿವಾಟಿನಲ್ಲಿ ಸಾಕಷ್ಟು ಬದಲಾವಣೆ ತರಲು ಸಾಧ್ಯವಾಗಿದೆ. ಕಂಪೆನಿಗಳ ಆಡಳಿತ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರು ಪ್ರಮುಖ ಪಾತ್ರ ನಿರ್ವಹಿಸಲು ಅವಕಾಶ ನೀಡಲಾಗಿದೆ. ಲೆಕ್ಕಪತ್ರ ತಪಾಸಿಗರು ಇಂತಹ ವಂಚನೆಗಳ ಬಗ್ಗೆ ಇನ್ನು ಮುಂದೆ ನಿರ್ಲಕ್ಷ್ಯ ಧೋರಣೆ ತಳೆಯುವಂತಿಲ್ಲ. ಲೆಕ್ಕಪಪತ್ರ ಪರಿಶೀಲನೆಯಲ್ಲಿ ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ಬಿಗಿ ನಿಯಂತ್ರಣ ಕಾಪಾಡಿಕೊಳ್ಳುವುದು ಸಾಧ್ಯವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.