ಬದ್ಧತೆ ಕೊರತೆಗೆ ಕನ್ನಡಿ ಶಾಂತಿ ಯತ್ನಗಳಿಗೆ ಹಿನ್ನಡೆ ಮುಂಬೈ ಮೇಲೆ 2008ರಲ್ಲಿ ನಡೆದ ದಾಳಿಯ ಪ್ರಮುಖ ಆರೋಪಿ ಝಕಿ– ಉರ್ ರೆಹಮಾನ್ ಲಖ್ವಿ ಬಿಡುಗಡೆಗೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ. ಈ ಭಯೋತ್ಪಾದನಾ ದಾಳಿಯಲ್ಲಿ ಹಲವು ರಾಷ್ಟ್ರಗಳ 166 ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ದಾಳಿಯಲ್ಲಿ ಸಾವಿಗೀಡಾದ ಅಮಾಯಕರ ಕುಟುಂಬಗಳಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುವ ವಿಚಾರದಲ್ಲಿ ಪಾಕಿಸ್ತಾನ ತನ್ನ ಬದ್ಧತೆ ಉಳಿಸಿಕೊಳ್ಳಬೇಕು ಎಂದು ಅಮೆರಿಕ, ಫ್ರಾನ್ಸ್ ಹಾಗೂ ಇಸ್ರೇಲ್ ಹೇಳಿವೆ. ಲಖ್ವಿಯನ್ನು ಜಾಮೀನಿನ ಮೇಲೆ ಲಾಹೋರ್ ಕೋರ್ಟ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್ ಪ್ರವಾಸದಲ್ಲಿದ್ದರು. ಹೀಗಾಗಿ ಪ್ಯಾರಿಸ್‌ನಲ್ಲೂ ಪ್ರಧಾನಿ ಮೋದಿ ಹಾಗೂ ಫ್ರೆಂಚ್ ಅಧ್ಯಕ್ಷ ಫ್ರಾಂಕ್ವಾ ಹಾಲನ್ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಈ ವಿಚಾರ ಪ್ರಸ್ತಾಪವಾಗಿದೆ. ಅಂತರರಾಷ್ಟ್ರೀಯ ಸಂಸ್ಥೆಗಳ ಕಣ್ಗಾವಲು ಇದ್ದರೂ ಈ ಉಗ್ರನಿಗೆ ಜಾಮೀನು ಸಿಕ್ಕಿರುವುದು ವಿಶೇಷ. ಎಂದರೆ ಪಾಕಿಸ್ತಾನದಲ್ಲಿ ಭಯೋತ್ಪಾದಕರು ಸರ್ವಸ್ವತಂತ್ರರಾಗಿದ್ದಾರೆ. ಅದೂ ಭಾರತದ ಮೇಲೆ ಪರಿಣಾಮ ಬೀರುವಂತಹ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗುವವರಿಗೆ ಈ ಅನುಕೂಲ ಇದೆ ಎಂಬ ಭಾವನೆಯನ್ನು ಈಗಿನ ಈ ಬೆಳವಣಿಗೆ ಮತ್ತೊಮ್ಮೆ ಪುಷ್ಟೀಕರಿಸಿದೆ. ಮುಂಬೈ ದಾಳಿ ವ್ಯವಸ್ಥಿತವಾಗಿ ಯೋಜಿತಗೊಂಡು ಪಾಕಿಸ್ತಾನದಿಂದಲೇ ನಡೆದಿದೆ ಎಂಬುದಕ್ಕೆ ಅಂತರರಾಷ್ಟ್ರೀಯ ಮೂಲಗಳಿಂದ ಸಾಕಷ್ಟು ಸಾಕ್ಷ್ಯಗಳು ಒದಗಿದ್ದವು. ಆದರೆ ಆರಂಭದಲ್ಲಿ ಇದನ್ನು ಇಸ್ಲಾಮಾಬಾದ್ ತಳ್ಳಿಹಾಕಿತ್ತು. ಆ ನಂತರ ಒಪ್ಪಿಕೊಳ್ಳದೇ ಇರುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಬಂದಾಗ ಕೆಲವರ ಒಳಗೊಳ್ಳುವಿಕೆ ಇದೆ ಎಂದು ಅರೆಮನಸ್ಸಿನಿಂದಲೇ ಒಪ್ಪಿಕೊಂಡಿತ್ತು. ಆದರೆ ವಾಸ್ತವ ಸಂಗತಿ ಎಂದರೆ, ಪಾಕ್‌ ಗೂಢಚರ್ಯೆ ಸಂಸ್ಥೆಗಳ ಸಕ್ರಿಯ ಬೆಂಬಲ ವಿಲ್ಲದೆ ಪಾಕಿಸ್ತಾನದ ಈ ಕಾರ್ಯಾಚರಣೆ ನಡೆಯುವುದು ಸಾಧ್ಯವಿರಲಿಲ್ಲ. ಮುಂಬೈ ದಾಳಿಗೆ ಒಂದು ವರ್ಷ ತುಂಬಲು ಇನ್ನೂ ಒಂದು ದಿನ ಬಾಕಿ ಇದೆ ಎನ್ನುವಾಗಷ್ಟೇ ಪಾಕಿಸ್ತಾನದ ಭಯೋತ್ಪಾದನೆ ವಿರೋಧಿ ನ್ಯಾಯಾಲಯ ಲಖ್ವಿ ಸೇರಿದಂತೆ ಏಳು ಶಂಕಿತರ ವಿರುದ್ಧ ಔಪಚಾರಿಕವಾಗಿ ಆರೋಪ ಹೊರಿಸಿತ್ತು ಎಂಬುದನ್ನು ಸ್ಮರಿಸಬಹುದು. ಹೀಗಾಗಿ, 2009ರಿಂದ ಲಖ್ವಿ ಬಂಧನದಲ್ಲಿದ್ದ. ಆದರೆ ಆತ ಸೆರೆಯಲ್ಲಿದ್ದದ್ದು ನೆಪ ಮಾತ್ರಕ್ಕೆ. ಸ್ವತಂತ್ರ ವ್ಯಕ್ತಿ ಅನುಭವಿಸುವ ಎಲ್ಲಾ ಸ್ವಾತಂತ್ರ್ಯಗಳನ್ನೂ ಆತ ಜೈಲಿನಲ್ಲಿದ್ದುಕೊಂಡೇ ಅನುಭವಿಸುತ್ತಿದ್ದ. ಎಲ್ಲಾ ಸವಲತ್ತುಗಳೂ ಆತನಿಗಿದ್ದವು. ಸಂದರ್ಶಕರನ್ನು ಭೇಟಿಯಾಗಲು ಯಾವುದೇ ಅಡೆತಡೆಗಳಿರಲಿಲ್ಲ. ಆತನಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಪಾಕಿಸ್ತಾನದ ಅನೇಕ ಸಂಸ್ಥೆಗಳ ಬೆಂಬಲ ಆತನಿಗಿದ್ದೇ ಇದೆ. ಆದರೆ, ನ್ಯಾಯಾಂಗ ನ್ಯಾಯ ಒದಗಿಸಬಹುದೆಂಬ ನಿರೀಕ್ಷೆ ಹುಸಿಯಾಗಿರುವುದು ದುರದೃಷ್ಟಕರ. ಈ ಪ್ರಕರಣವನ್ನು ನಿರ್ವಹಿಸುವಲ್ಲಿ ಪಾಕಿಸ್ತಾನ ತೋರಿದ ಬೇಜವಾಬ್ದಾರಿತನವೂ, ಲಷ್ಕರ್‌ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಕಮಾಂಡರ್‌ ಕೂಡ ಆಗಿರುವ ಲಖ್ವಿ ಬಿಡುಗಡೆಗೆ ಹಾದಿ ಸುಗಮ ಮಾಡಿಕೊಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅಭಿಯೋಜಕರು ಬೆದರಿಕೆಗಳಿಗೆ ಒಳಗಾಗಿದ್ದರು. ವಿಶೇಷ ಅಭಿಯೋಜಕರೊಬ್ಬರ ಹತ್ಯೆಯೂ ಆಗಿತ್ತು. ಸಾಕ್ಷಿಗಳಿಗೂ ರಕ್ಷಣೆ ಇರಲಿಲ್ಲ. ಈ ಪ್ರಕರಣದ ವಿಚಾರಣೆಯೇ ಒಂದು ದೊಡ್ಡ ಅಣಕದಂತಾಗಿತ್ತು ಎಂಬುದು ಕಹಿ ವಾಸ್ತವ. ವಿಪರ್ಯಾಸ ಎಂದರೆ, ಪಾಕಿಸ್ತಾನದ ಜೊತೆ ಬಾಂಧವ್ಯ ಬಲವರ್ಧನೆಯ ಕಾರ್ಯ ನಡೆಯುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ನಮ್ಮ ಕಾಲದ ಅತ್ಯಂತ ಬರ್ಬರ ದಾಳಿಯ ಪ್ರಮುಖ ಆರೋಪಿಗೆ ಶಿಕ್ಷೆ ವಿಧಿಸುವ ಕಾನೂನು ಪ್ರಕ್ರಿಯೆಯ ವಿಚಾರದಲ್ಲಿ ಇಸ್ಲಾಮಾಬಾದ್ ಹೆಚ್ಚಿನ ಕಾಳಜಿ ವಹಿಸದೆ ಇದ್ದದ್ದು ದುರದೃಷ್ಟಕರ. ಈ ಮೂಲಕ ಭಾರತದ ವಿರುದ್ಧ ಪರೋಕ್ಷ ಯುದ್ಧ ನಡೆಸುವ ಐಎಸ್ಐ ಶಕ್ತಿಗಳನ್ನು ಇಸ್ಲಾಮಾಬಾದ್ ರಕ್ಷಿಸಿಕೊಳ್ಳುತ್ತಿರುವುದು ಸ್ಪಷ್ಟ. ಯಾವುದೇ ಭಯೋತ್ಪಾದನಾ ದಾಳಿಗಳು ಎಲ್ಲಾ ರಾಷ್ಟ್ರಗಳ ಸುರಕ್ಷತೆ ಹಾಗೂ ಭದ್ರತೆಯ ಮೇಲಿನ ಸಾಮೂಹಿಕ ಹಲ್ಲೆಗಳು ಎಂದು ನಾವು ಪರಿಭಾವಿಸಬೇಕು. ಈಗ ಲಖ್ವಿಯ ಪ್ರಕರಣ ಭಾರತ– ಪಾಕಿಸ್ತಾನ ಸಂಬಂಧದಲ್ಲಿ ಪ್ರಮುಖ ವಿಚಾರವಾಗಿ ಪರಿಣಮಿಸಿದೆ. ಇದರಿಂದ ಎರಡೂ ರಾಷ್ಟ್ರಗಳ ಮಧ್ಯದ ಶಾಂತಿ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ನೆರೆ ರಾಷ್ಟ್ರಗಳ ಮೇಲೆ ಅದೂ ವಿಶೇಷವಾಗಿ ಭಾರತದ ವಿರುದ್ಧ ಭಯೋತ್ಪಾದನೆಯನ್ನು ನೀತಿಯಾಗಿ ಬಳಸುವುದರ ವಿರುದ್ಧ ಅಂತರರಾಷ್ಟ್ರೀಯ ಅಭಿಪ್ರಾಯ ಮೂಡಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.