ಕೆರೆ ಒತ್ತುವರಿ ತೆರವು ಒತ್ತಡಕ್ಕೆ ಮಣಿಯದಿರಿ ಬೆಂಗಳೂರು ನಗರದಲ್ಲಿ ಸರ್ಕಾರಿ ಕೆರೆಗಳ ಒತ್ತುವರಿ ತೆರವು ಕಾರ್ಯ ಬಿರುಸಾಗಿಯೇ ನಡೆದಿದೆ. ಅಲ್ಲಿ ತಲೆಯೆತ್ತಿದ್ದ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಗುರುವಾರ ಒಂದೇ ದಿನದಲ್ಲಿ ₨ 1500 ಕೋಟಿಗೂ ಹೆಚ್ಚು ಮೌಲ್ಯದ ಭೂಮಿಯನ್ನು ಜಿಲ್ಲಾ ಆಡಳಿತ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಬಹುಶಃ ನಗರದ ಭೂ ಒತ್ತುವರಿ ತೆರವು ವಿಷಯದಲ್ಲಿ ಇದೊಂದು ದಾಖಲೆ. ಸುಮಾರು 83 ಎಕರೆ ವಿಸ್ತೀರ್ಣದ ಕೆರೆ ಅಂಗಳದಲ್ಲಿ 33 ಎಕರೆಗಳನ್ನು ಭೂಗಳ್ಳರು ಕಬಳಿಸಿದ್ದರು ಎಂದರೆ ಒತ್ತುವರಿ ಯಾವ ಪ್ರಮಾಣದಲ್ಲಿ ನಡೆದಿದೆ ಎಂಬುದನ್ನು ಊಹಿಸಬಹುದು. ಆದರೆ ಯಾವುದೇ ಒತ್ತಡಕ್ಕೂ ಬಗ್ಗದೆ, ಮನೆ ಮಾಲೀಕರ ಕಣ್ಣೀರಿಗೂ ಜಗ್ಗದೆ ತೆರವು ಕಾರ್ಯಾಚರಣೆ ಮುಂದುವರಿಸಿದ ಜಿಲ್ಲಾಧಿಕಾರಿ ಮತ್ತು ಅವರ ಅಧೀನ ಸಿಬ್ಬಂದಿ ಅಭಿನಂದನೆಗೆ ಅರ್ಹರು. ಇಲ್ಲಿ ಅಧಿಕಾರಿಗಳ ದಿಟ್ಟ ಕ್ರಮಕ್ಕೆ ನ್ಯಾಯಾಂಗ ನಿಂದನೆಯ ತೂಗುಕತ್ತಿ ಕೂಡ ಕಾರಣ. ಸರ್ಕಾರಿ ಭೂಮಿ, ಕೆರೆಗಳನ್ನೆಲ್ಲ ಕಬಳಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಹೈಕೋರ್ಟ್‌ ಚಾಟಿ ಬೀಸದೇ ಹೋಗಿದ್ದರೆ ಅಧಿಕಾರಿಗಳು ಇಷ್ಟೊಂದು ಮುತುವರ್ಜಿ ವಹಿಸುತ್ತಿದ್ದರೋ ಇಲ್ಲವೋ? ಕೆರೆಯ ಒತ್ತುವರಿ ತೆರವಿಗಾಗಿ ‘ನೀರಿನ ಹಕ್ಕಿಗಾಗಿ ಜನಾಂದೋಲನ ವೇದಿಕೆ’ ಮತ್ತು ‘ಸಾರಕ್ಕಿ ಪ್ರದೇಶಾಭಿವೃದ್ಧಿ ಟ್ರಸ್ಟ್‌’ಗಳು ನಿರಂತರ ಹೋರಾಟ ನಡೆಸಿದ್ದವು. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದವು. ಕೋರ್ಟ್‌ ಆದೇಶದ ಗಡುವು ಮೀರಿದರೂ ಮೂಕ ಪ್ರೇಕ್ಷಕನಂತೆ ಕುಳಿತಿದ್ದ ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಿದ್ದವು. ಅವೆಲ್ಲವುಗಳ ಫಲ ಈ ಒತ್ತುವರಿ ತೆರವು. ನಗರಗಳನ್ನು ವಾಸಯೋಗ್ಯ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ, ಅಂತರ್ಜಲ ರಕ್ಷಣೆ ಮತ್ತು ಜೀವರಾಶಿಯನ್ನು ಸಾಕಿ ಸಲಹುವ ಕೆರೆಗಳ ಉಳಿವಿಗಾಗಿ ಟೊಂಕಕಟ್ಟಿ ನಿಂತ ಈ ಸಂಸ್ಥೆಗಳಿಗೆ, ಅವುಗಳಲ್ಲಿ ಸಕ್ರಿಯವಾಗಿ ತೊಗಿಸಿಕೊಂಡ ಪರಿಸರ ಪ್ರೇಮಿಗಳ ಶ್ರಮ ಫಲ ನೀಡಿದೆ. ಇಲ್ಲಿ ಮನೆ ಮಾರು ಕಳೆದುಕೊಂಡವರಲ್ಲಿ ಅನೇಕರು ಅಮಾಯಕರು. ಜೀವನದುದ್ದಕ್ಕೂ ದುಡಿದು ಕೂಡಿಟ್ಟ ಹಣದಲ್ಲಿ ನಿವೇಶನ ಕೊಂಡು ಮನೆ ಕಟ್ಟಿಸಿಕೊಂಡವರೂ ಇದ್ದಾರೆ. ಅವರ ಬದುಕೀಗ ಮೂರಾಬಟ್ಟೆಯಾಗಿದೆ. ವಂಚಕರ ಕರಾಮತ್ತು ತಿಳಿಯದೇ ಎಲ್ಲವನ್ನೂ ಕಳೆದುಕೊಂಡ ಇವರ ಬಗ್ಗೆ ಅನುಕಂಪ ಇರಬೇಕಾದುದು ಸರಿ. ಆದರೆ ಅನುಕಂಪಕ್ಕಿಂತ ಕಾನೂನು ದೊಡ್ಡದು. ಜಲಮೂಲಗಳ ಸಂರಕ್ಷಣೆ ದೀರ್ಘಾವಧಿ ಯೋಜನೆ­ಯಲ್ಲಿ ಮಹತ್ವದ್ದು. ನೀರಿಲ್ಲದಿದ್ದರೆ ಬದುಕೇ ಇಲ್ಲ. ಇದ್ದಬದ್ದ ಕೆರೆಗಳನ್ನು ನುಂಗಿ ನೀರು ಕುಡಿದರೆ ಆಗುವ ಅನಾಹುತ ಎಲ್ಲಕ್ಕಿಂತ ಭೀಕರ. ಆದ್ದರಿಂದ ಯಾವುದೇ ಬೆಲೆ ತೆತ್ತಾದರೂ ಕೆರೆಗಳನ್ನು, ನೀರಿನ ಮೂಲಗಳನ್ನು ಕಾಪಾಡಿಕೊಳ್ಳಲೇಬೇಕು. ಈ ಇಡೀ ಸಮಸ್ಯೆಗೆ ಇನ್ನೊಂದು ಮುಖವೂ ಇದೆ. ಬೆಂಗಳೂರಲ್ಲಿ ಭೂಮಿಗೆ ಬಂಗಾರಕ್ಕಿಂತಲೂ ಹೆಚ್ಚು ಬೆಲೆ. ಅದಕ್ಕಾಗಿಯೇ ಎಲ್ಲರ ಕಣ್ಣೂ ಭೂಮಿ ಮೇಲೆ. ಅಲ್ಲದೆ ತಲೆಮೇಲೊಂದು ಸೂರು ಬೇಕು ಎಂಬುದು ಎಲ್ಲರ ಕನಸು. ಜನರ ಈ ಆಸೆಯನ್ನೇ ಬಂಡವಾಳ ಮಾಡಿಕೊಂಡು ಕೆರೆ, ಸಾರ್ವಜನಿಕ ಭೂಮಿ, ಗೋಮಾಳ ಮುಂತಾದವನ್ನು ಕಬಳಿಸಿ ನಿವೇಶನ ಮಾಡಿ ಅಮಾಯಕರಿಗೆ ಟೋಪಿ ಹಾಕಿದವರಿದ್ದಾರೆ. ಅವರ ವಿರುದ್ಧ ಅತ್ಯಂತ ಕಠೋರವಾದ ಕ್ರಮ ತೆಗೆದುಕೊಳ್ಳಬೇಕು. ಅವರ ಆಸ್ತಿ ಜಪ್ತಿ ಮಾಡಿ ಸಂತ್ರಸ್ತರಿಗೆ ಹಂಚಬೇಕು. ಒತ್ತುವರಿಗೆ ಸಹಕರಿಸಿದ ಅಧಿಕಾರಿಗಳು, ನೋಂದಣಿ ಮಾಡಿದ ಸಬ್‌ ರಿಜಿಸ್ಟ್ರಾರ್‌ಗಳು, ಮನೆ ಕಟ್ಟಲು ಅನುಮತಿಸಿದ, ಖಾತಾ ಮಾಡಿಕೊಟ್ಟ ಪಾಲಿಕೆ ಸಿಬ್ಬಂದಿಯಂತೂ ಕ್ಷಮೆಗೆ ಅರ್ಹರಲ್ಲ. ಅವರನ್ನು ಗುರುತಿಸಿ ಕ್ರಿಮಿನಲ್‌ ಮೊಕದ್ದಮೆ ಹೂಡುವುದಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಹೇಳಿದ್ದಾರೆ. ಇದು ಬರೀ ಘೋಷಣೆಯ ರೂಪದಲ್ಲಿದ್ದರೆ ಸಾಲದು. ಒತ್ತುವರಿ ತೆರವಿಗೆ ತೋರಿಸಿದಷ್ಟೇ ಆಸಕ್ತಿ, ಶ್ರದ್ಧೆಯನ್ನು ಇಲ್ಲೂ ತೋರಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಬಲಿ ಹಾಕಿ ಜೈಲಿಗೆ ಕಳಿಸಿದರೆ ಮುಂದೆ ಯಾರೂ ಇಂಥ ವಂಚನೆಗೆ ಇಳಿಯುವುದಿಲ್ಲ. ಕೆರೆ ಅಂಗಳವನ್ನು ನಿವೇಶನ ಮಾಡಿ ಜನರಿಗೆ ಹಂಚಿದ ಆರೋಪ ಬಿಡಿಎ ಮೇಲೂ ಇದೆ. ಆದ್ದರಿಂದ ಇಲ್ಲಿ ಬರೀ ಜನರನ್ನಷ್ಟೇ ದೂರಿ ಪ್ರಯೋಜನ ಇಲ್ಲ. ಈಗೇನೋ ಕೆರೆಗಳನ್ನು ಕಾಪಾಡುವ ಕಾರ್ಯ ಆರಂಭವಂತೂ ಆಗಿದೆ. ಆದರೆ ಒತ್ತುವರಿಗೇ ಅವಕಾಶ ಇಲ್ಲದಿದ್ದರೆ ತೆರವಿನ ಅಗತ್ಯವೇ ಬೀಳುವುದಿಲ್ಲ ಎಂಬ ಪ್ರಜ್ಞೆ ಎಲ್ಲರಲ್ಲೂ ಬರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.