ಯುರೇನಿಯಂ ಲಭ್ಯತೆ ಅನಿಶ್ಚಯ ಅಂತ್ಯಗೊಳ್ಳಲಿದೆ ಅಣು ವಿದ್ಯುತ್‌ ಸ್ಥಾವರಕ್ಕೆ ಅಗತ್ಯವಿರುವ ಯುರೇನಿಯಂ ಪೂರೈಕೆ ವಿಷಯದಲ್ಲಿ ಭಾರತವನ್ನು ಅಸ್ಪೃಶ್ಯವಾಗಿ ಕಾಣುತ್ತಿದ್ದ ಕೆಲ ದೇಶಗಳ ನಿಲುವಿನಲ್ಲಿ ಬದಲಾವಣೆಯಾಗುತ್ತಿದೆ. ತಾರತಮ್ಯದಿಂದ ಕೂಡಿದ್ದ ಮತ್ತು ರಾಷ್ಟ್ರೀಯ ಹಿತಕ್ಕೆ ಧಕ್ಕೆ ತರುತ್ತಿದ್ದ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಲು ಭಾರತ ನಿರಾಕರಣೆ ಹಾಗೂ 1974 ಮತ್ತು 1998ರಲ್ಲಿ ಪರಮಾಣು ಪರೀಕ್ಷೆ ನಡೆಸಿದ್ದನ್ನೇ ನೆಪ ಮಾಡಿಕೊಂಡು ಯುರೇನಿಯಂ ಪೂರೈಕೆ ದೇಶಗಳು ನಮ್ಮ ಮೇಲೆ ನಿರ್ಬಂಧ ಹೇರಿದ್ದವು. ನಮ್ಮದು ಶಾಂತಿಯುತ ಮತ್ತು ಸ್ವರಕ್ಷಣೆ ಉದ್ದೇಶದ ಪರಮಾಣು ಕಾರ್ಯಕ್ರಮ ಎಂಬ ವಿವರಣೆಯನ್ನೂ ಒಪ್ಪಿಕೊಂಡಿರಲಿಲ್ಲ. ಆದರೆ ಈಗ ಅವು ನಮ್ಮನ್ನು ಅರ್ಥ ಮಾಡಿಕೊಂಡಿವೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಈಚಿನ ಕೆನಡಾ ಭೇಟಿ ಕಾಲದಲ್ಲಿ ಆದ ಒಪ್ಪಂದವೇ ಸಾಕ್ಷಿ. ಇದರಿಂದಾಗಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕೆನಡಾದಿಂದ ಭಾರತಕ್ಕೆ 3 ಸಾವಿರ ಟನ್ ಯುರೇನಿಯಂ ಪೂರೈಕೆಯಾಗಲಿದೆ. ಇದಕ್ಕೂ ಮುನ್ನ ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದ ಆಸ್ಟ್ರೇಲಿಯಾ ಪ್ರಧಾನಿ ಸಮ್ಮುಖದಲ್ಲಿ ಆ ದೇಶ ಕೂಡ ನಮಗೆ ಯುರೇನಿಯಂ ಸರಬರಾಜು ಮಾಡುವ ಒಪ್ಪಂದಕ್ಕೆ ಸಹಿ ಹಾಕಿತ್ತು. ‘ಭಾರತ ವಿಶ್ವಕ್ಕೆ ಮಾದರಿಯಾದ ನಾಗರಿಕ ದೇಶ ಮತ್ತು ಅಣ್ವಸ್ತ್ರದ ವಿಷಯದಲ್ಲಿ ಕೆಡುಕಿಗೆ ಕೈಹಾಕದೆ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಂಡ ಇತಿಹಾಸ ಹೊಂದಿದೆ’ ಎಂದು ಆಸ್ಟ್ರೇಲಿಯಾ ಬಣ್ಣಿಸಿತ್ತು. ತಮ್ಮ ದೇಶದೊಳಗೆ ಸಾಕಷ್ಟು ಪ್ರತಿರೋಧ ಎದುರಾಗಿದ್ದರೂ ಈ ಒಪ್ಪಂದದ ಅನುಷ್ಠಾನ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ ಹೇಳಿರುವುದು ನಮಗೆ ಬಲ ತುಂಬಿದಂತೆ. ಕೆನಡಾ ಸಹ ಅದೇ ದಾರಿಯಲ್ಲಿ ಮುನ್ನಡೆದಿದೆ. ‘ಇದು ಪರಸ್ಪರರಲ್ಲಿನ ನಂಬಿಕೆಯ ಪ್ರತೀಕ’ ಎಂದು ಕೆನಡಾ ಪ್ರಧಾನಿ ವ್ಯಾಖ್ಯಾನಿಸಿದ್ದಾರೆ. ಅಣು ವಿದ್ಯುತ್ ಸ್ಥಾವರಗಳಲ್ಲಿ ಇಂಧನವಾಗಿ ಯುರೇನಿಯಂ ಬಳಸಿದ ನಂತರ ಬರುವ ಉಪ ಉತ್ಪನ್ನಗಳನ್ನು ಹೇಗೆ ಬೇಕಾದರೂ ಬಳಸುವ ಭಾರತದ ಹಕ್ಕಿಗೆ ಈ ಒಪ್ಪಂದ ಯಾವುದೇ ತಡೆ ವಿಧಿಸಿಲ್ಲ. ಏಕೆಂದರೆ ಈ ಉಪ ಉತ್ಪನ್ನಗಳೇ ರಕ್ಷಣಾ ಸಂಶೋಧನೆ, ಅಣ್ವಸ್ತ್ರ ಮತ್ತು ಬಾಂಬ್ ತಯಾರಿಕೆಯ ಮೂಲ ಸರಕುಗಳು. ಇದನ್ನೆಲ್ಲ ನೋಡಿದರೆ, ‘ಯಾವುದೇ ಪಕ್ಷದ ಸರ್ಕಾರ ಇದ್ದರೂ ಶಾಂತಿಯ ಮಾರ್ಗದಿಂದ ಭಾರತ ವಿಮುಖವಾಗುವುದಿಲ್ಲ, ಅದರ ಕೈಯಲ್ಲಿ ಪರಮಾಣು ಇಂಧನ ಸುರಕ್ಷಿತ’ ಎಂಬುದು ಅನ್ಯ ದೇಶಗಳಿಗೂ ಮನವರಿಕೆಯಾಗಿದೆ. ಅಷ್ಟಕ್ಕೂ ಯುರೇನಿಯಂ ಅಗತ್ಯ ಇರುವುದು ಮುಖ್ಯವಾಗಿ ನಮ್ಮ ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ. ಆದರೆ ಅದರ ಲಭ್ಯತೆ ನಮ್ಮಲ್ಲಿ ತುಂಬ ಕಡಿಮೆ. ಆಸ್ಟ್ರೇಲಿಯಾವೊಂದರಲ್ಲಿಯೇ ವಿಶ್ವದ ಶೇ 40ರಷ್ಟು ಯುರೇನಿಯಂ ಲಭ್ಯವಿದೆ. ಇತರ ಇಂಧನ ಮೂಲಗಳಿಗೆ ಹೋಲಿಸಿದರೆ ಕಡಿಮೆ ಯುರೇನಿಯಂ ಬಳಸಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಬಹುದು. ಹೀಗಾಗಿಯೇ ಇದಕ್ಕೆ ತುಂಬ ಮಹತ್ವ. ನಮ್ಮ ದೇಶದ 7 ಪರಮಾಣು ವಿದ್ಯುತ್ ಸ್ಥಾವರಗಳ 23 ಘಟಕಗಳು 2013-14ರಲ್ಲಿ 35 ಸಾವಿರ ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿವೆ. ನಮ್ಮ ಒಟ್ಟೂ ವಿದ್ಯುತ್ ಉತ್ಪಾದನೆಯಲ್ಲಿ ಇದು ಶೇ 2.2ರಷ್ಟು ಮಾತ್ರ. ಶೇ 60.7ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿರುವುದು ಕಲ್ಲಿದ್ದಲು ಆಧಾರಿತ ಸ್ಥಾವರಗಳಲ್ಲಿ. ಇದರಿಂದ ಪರಿಸರ ಮಾಲಿನ್ಯ ಹೆಚ್ಚುತ್ತದೆ, ಭೂಮಿ ಬಿಸಿಯೇರುತ್ತದೆ. ಈ ಕಾರಣಗಳಿಗಾಗಿಯೇ ಜಲ, ಪರಮಾಣು ಇಂಧನ, ಸೌರ, ಗಾಳಿ ಶಕ್ತಿ ಮತ್ತಿತರ ವಿದ್ಯುತ್ ಮೂಲಗಳತ್ತ ದೃಷ್ಟಿ ಹರಿಸಲಾಗುತ್ತಿದೆ. ಹೆಚ್ಚುತ್ತಿರುವ ಬೇಡಿಕೆ ಸರಿದೂಗಿಸಲು, ಕೈಗಾರಿಕೆ ಮತ್ತು ಕೃಷಿಯಲ್ಲಿ ಪ್ರಗತಿ ಸಾಧಿಸಲು ವಿದ್ಯುತ್ ಅತ್ಯಂತ ಅನಿವಾರ್ಯ. ಕಳೆದ ಏಪ್ರಿಲ್‌ನಿಂದ ಈ ಜನವರಿವರೆಗಿನ ಅವಧಿಯಲ್ಲಿ ವಿದ್ಯುತ್ ಬೇಡಿಕೆಗೆ ಹೋಲಿಸಿದರೆ ಪೂರೈಕೆಯಲ್ಲಿ ಶೇ 3.7ರಷ್ಟು ಕೊರತೆ ಉಂಟಾಗಿತ್ತು. ದೇಶದ 28 ಕೋಟಿ ಕುಟುಂಬಗಳ ಪೈಕಿ 5.6 ಕೋಟಿ ಕುಟುಂಬಗಳು ಈಗಲೂ ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿವೆ. ವಿಶ್ವದಲ್ಲಿ ಪ್ರತಿ ವ್ಯಕ್ತಿಯ ತಲಾ ಸರಾಸರಿ ವಾರ್ಷಿಕ ವಿದ್ಯುತ್ ಬಳಕೆ 2340 ಕಿಲೊವಾಟ್. ಆದರೆ ವಿದ್ಯುತ್ ಬಳಕೆಯಲ್ಲಿ ವಿಶ್ವದಲ್ಲಿ 6ನೇ ಸ್ಥಾನದಲ್ಲಿ ಇರುವ ನಮ್ಮಲ್ಲಿ ಈ ಪ್ರಮಾಣ ಕೇವಲ 733 ಕಿ.ವಾ. 2012ರ ಹೊತ್ತಿಗೆ ಎಲ್ಲರಿಗೂ ವಿದ್ಯುತ್ ಎಂಬ ಮಹತ್ವಾಕಾಂಕ್ಷಿ ಯೋಜನೆ 3 ವರ್ಷದ ನಂತರವೂ ಇನ್ನೂ ಈಡೇರಿಲ್ಲ. 2024ರ ಹೊತ್ತಿಗೆ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಆ ವೇಳೆಗೆ ಪರಮಾಣು ಇಂಧನ ಮೂಲಗಳ ವಿದ್ಯುತ್ ಉತ್ಪಾದನಾ ಪ್ರಮಾಣವನ್ನು ಶೇ 18ಕ್ಕೆ ಹೆಚ್ಚಿಸುವ ಗುರಿ ಸರ್ಕಾರದ್ದು. ಆ ದಿಸೆಯಲ್ಲಿ ಈ ಒಪ್ಪಂದಗಳು ಸಕಾರಾತ್ಮಕ ಹೆಜ್ಜೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.