ಸಂದಿಗ್ಧ ಕಾಲಘಟ್ಟದಲ್ಲಿ ಸಾರಥ್ಯದ ಬದಲಾವಣೆ ಭಾರತೀಯ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಪಕ್ಷದ (ಸಿಪಿಎಂ) ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ್‌ ಯೆಚೂರಿ ಆಯ್ಕೆಯಾಗಿದ್ದಾರೆ. ಕೆಲವೇ ವರ್ಷಗಳ ಹಿಂದೆ ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದ್ದ ಸಿಪಿಎಂ, ಈಗ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡಿದ್ದು, ತ್ರಿಪುರಾದಲ್ಲಿ ಮಾತ್ರ ಮೈತ್ರಿಕೂಟದ ನೇತೃತ್ವ ವಹಿಸಿ ಅಧಿಕಾರದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ನ ಅಬ್ಬರದ ಎದುರು ಸಿಪಿಎಂ ತೀರಾ ಮಂಕಾಗಿದ್ದು, ಬಿಜೆಪಿ ನಂತರದ ಮೂರನೇ ಸ್ಥಾನದಲ್ಲಿದೆ. 34 ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ನಡೆಸಿದ ಪಕ್ಷವೊಂದು ಹೀಗೆ ಮೂರನೇ ಸ್ಥಾನಕ್ಕೆ ಕುಸಿದಿರುವುದು ನಿಜಕ್ಕೂ ಚಿಂತನಾರ್ಹ ಸಂಗತಿಯೇ. ಕೇರಳದಲ್ಲಿ ವಿ.ಎಸ್‌.ಅಚ್ಯುತಾನಂದನ್‌ ಮತ್ತು ಪಿನರಾಯಿ ವಿಜಯನ್‌ ಅವರ ಬಣಗಳ ನಡುವಣ ಆಂತರಿಕ ಜಗಳದಿಂದಾಗಿ ಪಕ್ಷ ಸಾಕಷ್ಟು ಸೊರಗಿದೆ. 2005ರಲ್ಲಿ ಪ್ರಕಾಶ್‌ ಕರಾಟ್‌ ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದಾಗ ಲೋಕಸಭೆಯಲ್ಲಿ ಪಕ್ಷವು 60 ಸ್ಥಾನಗಳನ್ನು ಹೊಂದಿತ್ತು. ಆದರೆ ನಂತರದ ಚುನಾವಣೆಗಳಲ್ಲಿ ಪಕ್ಷದ ಬಲ ಸಾಕಷ್ಟು ಕುಂದಿದ್ದು, ಈಗ 10 ಸ್ಥಾನವಷ್ಟೇ ಉಳಿದುಕೊಂಡಿದೆ. ಇಂತಹ ಸಂದಿಗ್ಧ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ಸೀತಾರಾಮ್‌ ಯೆಚೂರಿ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಪಕ್ಷದ ಪುನಶ್ಚೇತನಕ್ಕೆ ಅವರು ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಕುತೂಹಲ ಮೂಡಿದೆ. ಪ್ರಕಾಶ್‌ ಕರಾಟ್‌ ಅವರ ಕಟ್ಟರ್‌ವಾದಿ ಕಮ್ಯುನಿಸ್ಟ್‌ ನಿಲುವುಗಳಿಗೆ ಹೋಲಿಸಿದರೆ, ಯೆಚೂರಿ ಹೆಚ್ಚು ಉದಾರವಾದಿ ಎನ್ನಬಹುದು. ಕೇರಳದಲ್ಲಿ ಹಿಂದಿನಿಂದಲೂ ಅಚ್ಯುತಾನಂದನ್‌ ಬಣಕ್ಕೆ ಹತ್ತಿರವಾಗಿದ್ದ ಯೆಚೂರಿಯವರು, ಪಿನರಾಯಿ ವಿಜಯನ್ ಬಣವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲಕರ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಂತೂ ಪಕ್ಷದ ಕಳೆದುಹೋದ ಪ್ರತಿಷ್ಠೆ ಮತ್ತು ಜನಪ್ರಿಯತೆಯನ್ನು ಮರಳಿ ಗಳಿಸುವ ಹಾದಿ ಬಹಳ ಕಠಿಣವಾಗಿದೆ.ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಸನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕಿಂತ ಮಿಗಿಲಾಗಿ, ಬಿಜೆಪಿಯನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಗಳಿಸುವ ಸವಾಲೇ ಸಿಪಿಎಂಗೆ ಹೆಚ್ಚು ಮುಖ್ಯವಾದದ್ದು ಅನ್ನಿಸುತ್ತಿದೆ. ಪಕ್ಷದ ಕಟ್ಟರ್‌ವಾದಿ, ಜಿಗುಟು ರಾಜಕೀಯ ನಿಲುವುಗಳನ್ನು ಸಡಿಲಗೊಳಿಸಿ, ತಳಮಟ್ಟದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ಮಾಡಿದರೆ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ಸುಲಭವಾಗ ಬಹುದು. ಈ ನಡೆಗೆ ಪಕ್ಷದ ಒಳಗೂ ಬೆಂಬಲವನ್ನು ಕ್ರೋಡೀಕರಿಸುವ ಸವಾಲುಗಳಿವೆ. ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳಿಗೆ ಕ್ಷಿಪ್ರವಾಗಿ ಪ್ರತಿಸ್ಪಂದಿಸುವ ಮತ್ತು ದೇಶದಾದ್ಯಂತ ಓಡಾಡಿ, ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬುವ ಸಾಮರ್ಥ್ಯ ಯೆಚೂರಿಯವರಲ್ಲಿ ಇದೆ ಎನ್ನುವುದೇನೋ ನಿಜ. ಆದರೆ ರಾಷ್ಟ್ರದಾದ್ಯಂತ ಬಲಪಂಥೀಯ ವಿಚಾರಧಾರೆ ಹೆಚ್ಚು ಜನಪ್ರಿಯವಾಗುತ್ತಿರುವ ಈ ಸಂದರ್ಭದಲ್ಲಿ, ಜನಮಾನಸದಲ್ಲಿ ಎಡಪಂಥೀಯ ಒಲವನ್ನು ಪಸರಿಸುವ ಕೆಲಸ ಅಷ್ಟು ಸುಲಭವಿಲ್ಲ. ಚುನಾವಣೆ ಗೆಲ್ಲುವುದನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು, ಬಲಪಂಥೀಯರು ರೂಪಿಸುತ್ತಿರುವ ರಾಜಕೀಯ ತಂತ್ರಗಳನ್ನು ಎದುರಿಸುವುದು ಈಗ ಹಿಂದಿಗಿಂತ ಹೆಚ್ಚು ಕಷ್ಟಕರ. ಹೊಸಕಾಲದ ರಾಜಕೀಯದ ಅಗತ್ಯಗಳಿಗೆ ತಕ್ಕಂತೆ ಪಕ್ಷವನ್ನು ತಳಮಟ್ಟದಿಂದ ಪುನರ್‌ರೂಪಿಸಿ, ಪಕ್ಷಕ್ಕೆ ಹೊಸ ದಿಕ್ಕು ತೋರಿಸುವುದು ಯೆಚೂರಿಯವರಿಗೆ ಸಾಧ್ಯವಾಗಬಹುದೆ? ಚೀನಾದ ಕಮ್ಯುನಿಸ್ಟ್‌ ಪಕ್ಷ ಕೂಡಾ, ಹೊಸ ಆರ್ಥಿಕ ನೀತಿ ಮತ್ತು ಬಂಡವಾಳ ಹೂಡಿಕೆಯ ಬಗ್ಗೆ ಹೆಚ್ಚು ಉದಾರವಾದಿ ನಿಲುವುಗಳನ್ನು ಹೊಂದಿರುವುದು ಈ ನಿಟ್ಟಿನಲ್ಲಿ ಹೊಸ ದಾರಿಯನ್ನು ತೋರಬಹುದು. ಇದರ ಜತೆಗೆ ವಿವಿಧ ರಾಜ್ಯಗಳಲ್ಲಿ ಹರಿದು ಹಂಚಿಹೋಗಿರುವ ಕಮ್ಯುನಿಸ್ಟ್‌ ಗುಂಪುಗಳನ್ನು ಸಮಾನ ಹಿತಾಸಕ್ತಿಗಳ ನೆಲೆಯಲ್ಲಿ ಒಗ್ಗೂಡಿಸುವ ಕೆಲಸವನ್ನೂ ಅವರು ಮಾಡಬಹುದು. ತೀವ್ರ ವೈಯಕ್ತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಬಲಪಂಥೀಯ ರಾಜಕೀಯ ಪಕ್ಷಗಳು ಇಂತಹ ಹೊಂದಾಣಿಕೆಯನ್ನು ಮಾಡಿಕೊಂಡು ರಾಜಕೀಯ ಬಲವರ್ಧನೆ ಮಾಡಿಕೊಂಡಿರುವ ವಿದ್ಯಮಾನಗಳಿಂದಲೂ ಯೆಚೂರಿಯವರು ಕಲಿಯಬೇಕಾದ ಹಲವು ಪಾಠಗಳಿವೆ. ಪಕ್ಷದಲ್ಲಿ ತಳಮಟ್ಟದ ಸಾಂಸ್ಥಿಕ ಬದಲಾವಣೆಗಳನ್ನು ಮಾಡಿ, ಹೊಸ ರಾಜಕೀಯ ಒಳನೋಟಗಳನ್ನು ರೂಪಿಸದಿದ್ದಲ್ಲಿ, ಈಗಾಗಲೆ ಆರಂಭವಾಗಿರುವ ಕಮ್ಯುನಿಸ್ಟ್‌ ಚಳವಳಿಯ ಅವಸಾನಕ್ಕೆ ಮೂಕಪ್ರೇಕ್ಷಕನಾಗುವ ಭಾಗ್ಯವಷ್ಟೇ ಯೆಚೂರಿ ಅವರದ್ದಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.