ಕಬ್ಬು ಬೆಳೆಗಾರರ ಸಂಕಷ್ಟ ಇಚ್ಛಾಶಕ್ತಿ ಪ್ರದರ್ಶಿಸಿ ವಿವಿಧ ರಾಜ್ಯಗಳಲ್ಲಿನ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು 2014-15ನೇ ಹಣಕಾಸು ವರ್ಷದ ಅಂತ್ಯಕ್ಕೆ ಅಂದಾಜು ₨ 20 ಸಾವಿರ ಕೋಟಿಗಳಷ್ಟು ಬಾಕಿ ಉಳಿಸಿಕೊಂಡಿರುವುದು ದೇಶಿ ಸಕ್ಕರೆ ಉದ್ದಿಮೆ ಎದುರಿಸುತ್ತಿರುವ ಬಿಕ್ಕಟ್ಟಿಗೆ ಕನ್ನಡಿ ಹಿಡಿಯುತ್ತದೆ. ಫಸಲಿನ ಇಳುವರಿ ಹಾಗೂ ಸಕ್ಕರೆ ಬೆಲೆಯಲ್ಲಿನ ಏರಿಳಿತ, ರೈತರಿಗೆ ಸಕಾಲಕ್ಕೆ ಹಣ ಪಾವತಿ ಮಾಡದ– ನ್ಯಾಯಯುತ ಬೆಲೆ ನೀಡದ ಸಕ್ಕರೆ ಕಾರ್ಖಾನೆ ಮಾಲೀಕರ ಜಿಗುಟುತನ ಮತ್ತು ಬೆಳೆಗಾರರ ಪರವಾಗಿ ದಿಟ್ಟ ನಿರ್ಧಾರ ಕೈಗೊಳ್ಳದ ರಾಜ್ಯ ಸರ್ಕಾರಗಳಿಂದಾಗಿ ಕಬ್ಬು ಬೆಳೆಗಾರರು ಹಣಕಾಸಿನ ತೀವ್ರ ಮುಗ್ಗಟ್ಟು ಎದುರಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಸಕ್ಕರೆ ಕಾರ್ಖಾನೆಗಳು ರೈತರಿಗೆ ಉಳಿಸಿಕೊಂಡಿರುವ ಬಾಕಿ ಮೊತ್ತವು ಕೂಡ ₨ 2,402 ಕೋಟಿಗಳಷ್ಟಿದೆ. ಬಾಕಿ ಹಣ ಬಿಡುಗಡೆ ಮತ್ತು ನ್ಯಾಯಯುತ ಬೆಲೆಗೆ ಒತ್ತಾಯಿಸಿ ಬೆಳೆಗಾರರು ನಡೆಸಿದ ಧರಣಿ, ಸತ್ಯಾಗ್ರಹ, ಪ್ರತಿಭಟನೆ, ಆತ್ಮಹತ್ಯೆಗಳಿಗೆ ಸದ್ಯದ ವ್ಯವಸ್ಥೆಯಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತಾಗಿರುವುದು ನಿಜಕ್ಕೂ ಶೋಚನೀಯ ಸಂಗತಿ. ಜೀವನೋಪಾಯಕ್ಕೆ ಅಗತ್ಯವಾದ ಹಣ ಸಕಾಲಕ್ಕೆ ಕೈಸೇರದೇ ಬೆಳೆಗಾರರು ಸಹಜವಾಗಿಯೇ ಕಂಗಾಲಾಗಿದ್ದಾರೆ. ಬಾಕಿ ಹಣ ಉಳಿಸಿಕೊಂಡ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮುಂಚೂಣಿಯಲ್ಲಿ (₨ 9,716 ಕೋಟಿ) ಇದ್ದರೆ, ಕರ್ನಾಟಕ ತೃತೀಯ ಸ್ಥಾನದಲ್ಲಿ ಇದೆ. ಇದು ಬರೀ ರೈತರ ಸಮಸ್ಯೆಯಷ್ಟೇ ಅಲ್ಲ. ಒಟ್ಟಾರೆ ಸಕ್ಕರೆ ಉದ್ದಿಮೆಯ ಸಮಸ್ಯೆಯಾಗಿರುವುದರಿಂದ ಇದಕ್ಕೆ ಕಂಡುಕೊಳ್ಳುವ ಪರಿಹಾರವೂ ಸಾಕಷ್ಟು ಸಂಕೀರ್ಣವಾದದ್ದು. ಪ್ರತಿ ವರ್ಷ ಈ ಉದ್ದಿಮೆ ಒಂದಲ್ಲ ಒಂದು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿರುತ್ತದೆ. ಸಕ್ಕರೆ ಉದ್ದಿಮೆಯ ಸಮಸ್ಯೆಗಳು ರಾಜ್ಯದಿಂದ ರಾಜ್ಯಕ್ಕೂ ಭಿನ್ನವಾಗಿರುತ್ತವೆ. ಸಕ್ಕರೆ ಕಾರ್ಖಾನೆಗಳು ಮತ್ತು ಸರ್ಕಾರದಿಂದ ನ್ಯಾಯ ಪಡೆಯಲು ಕಬ್ಬು ಬೆಳೆಗಾರರು ಪ್ರತಿ ವರ್ಷ ಬೀದಿಗಳಿದು ಹೋರಾಟ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸಕ್ಕರೆ ಉದ್ದಿಮೆಯಲ್ಲಿ ರಾಜಕಾರಣಿಗಳು ನೇರವಾಗಿ ತೊಡಗಿಸಿಕೊಂಡಿರುವುದರಿಂದ ಈ ಸಮಸ್ಯೆ ಇನ್ನಷ್ಟು ಜಟಿಲಗೊಂಡಿದೆ. ಸಕ್ಕರೆ ಕಾರ್ಖಾನೆ ಮಾಲೀಕರೂ ಆಗಿರುವ ಪ್ರಭಾವಿ ರಾಜಕಾರಣಿಗಳು ರಾಜ್ಯ ಸರ್ಕಾರಗಳ ಮೇಲೆ ಪ್ರಭಾವ ಬೀರಿ ಬೆಳೆಗಾರರಿಗೆ ನ್ಯಾಯಯುತ ಬೆಲೆ, ಬಾಕಿ ಹಣ ಸಕಾಲಕ್ಕೆ ದೊರೆಯಲು ಅಡ್ಡಿಯಾಗಿದ್ದಾರೆ. ಯಾವುದೇ ಪಕ್ಷದ ಸರ್ಕಾರ ಇದ್ದರೂ ಬೆಳೆಗಾರರಿಗೆ ನಿರಂತರವಾಗಿ ಅನ್ಯಾಯ ಆಗುತ್ತಿದೆ. ಸರ್ಕಾರಗಳು ನಿಗದಿ ಮಾಡಿರುವ ಕಬ್ಬಿನ ಬೆಲೆ ನೀಡಲು ಸಾಧ್ಯವಿಲ್ಲವೆಂಬ ಅಸಹಾಯಕತೆಯನ್ನು ಸಕ್ಕರೆ ಕಾರ್ಖಾನೆ ಮಾಲೀಕರೂ ಆಗಾಗ್ಗೆ ವ್ಯಕ್ತಪಡಿಸುತ್ತಿರುತ್ತಾರೆ. ‘ಒಂದೆಡೆ ಸಕ್ಕರೆ ಬೆಲೆ ಕುಸಿದಿದೆ, ಮತ್ತೊಂದೆಡೆ ಉತ್ಪಾದನಾ ವೆಚ್ಚ ಹೆಚ್ಚಿದೆ’ ಎಂಬುದು ಅವರ ಅಳಲು. ದೇಶಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಬಿಕ್ಕಟ್ಟಿನ ವಿಚಾರವನ್ನು ಲೋಕಸಭೆಯಲ್ಲಿ ಕೇಂದ್ರ ಆಹಾರ ಸಚಿವರು ಪ್ರಸ್ತಾಪಿಸಿದ್ದಾರೆ. ಬೆಳೆಗಾರರಿಗೆ ಸಕಾಲಕ್ಕೆ ಹಣ ಪಾವತಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ರಾಜ್ಯ ಸರ್ಕಾರಗಳಿಗೆ ಸೇರಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆಗಾರರ ಹಿತಾಸಕ್ತಿ ರಕ್ಷಣೆ ಹೊಣೆಗಾರಿಕೆಯನ್ನು ಇನ್ನೊಬ್ಬರ ಮೇಲೆ ಹಾಕಿ ನುಣುಚಿಕೊಳ್ಳಲು ಹವಣಿಸುವುದರಿಂದ ಬಿಕ್ಕಟ್ಟಿಗೆ ಪರಿಹಾರವಾಗಲಿ, ಬೆಳೆಗಾರರಿಗೆ ನ್ಯಾಯವಾಗಲಿ ಸಿಗಲಾರದು ಎಂಬುದನ್ನು ನಾವು ತಿಳಿಯಬೇಕು. ಸಕ್ಕರೆ ತಯಾರಿಕೆಯಲ್ಲಿ ಭಾರತ, ವಿಶ್ವದ 2ನೆ ಅತಿದೊಡ್ಡ ದೇಶವಾಗಿದ್ದರೂ, ಉದ್ದಿಮೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿರುವುದು ವ್ಯವಸ್ಥೆಯ ವೈಫಲ್ಯವೇ ಸರಿ. ಕೇಂದ್ರ ಸರ್ಕಾರವು ಸಕ್ಕರೆ ಉದ್ದಿಮೆ ಪಡೆದಿರುವ ಸಾಲದ (₨ 36 ಸಾವಿರ ಕೋಟಿ) ಪುನರ್‌ ಹೊಂದಾಣಿಕೆಗೆ ಅವಕಾಶ ಮಾಡಿಕೊಟ್ಟು, ಸಕ್ಕರೆ ಬೆಲೆ ಏರಿಳಿತಕ್ಕೂ ಕಡಿವಾಣ ವಿಧಿಸಬೇಕಾಗಿದೆ. ರಾಜ್ಯ ಸರ್ಕಾರಗಳೂ ರೈತರನ್ನು ಸಂಪ್ರೀತಗೊಳಿಸಲು ಕಬ್ಬಿನ ಬೆಲೆಯನ್ನು ಏಕಪಕ್ಷೀಯವಾಗಿ ಗರಿಷ್ಠ ಮಟ್ಟದಲ್ಲಿ ನಿಗದಿ ಮಾಡದೇ, ಒಟ್ಟಾರೆ ಉದ್ದಿಮೆಯ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಬೆಳೆಗಾರರಿಗೆ ಕಿಂಚಿತ್ತೂ ಅನ್ಯಾಯವಾಗದಂತೆ ಬೆಲೆ ನಿಗದಿ ಮಾಡಬೇಕಾಗಿದೆ. ಕಬ್ಬಿನ ಬೆಲೆಯನ್ನು ಸಕ್ಕರೆ ಬೆಲೆಗೆ ತಳಕು ಹಾಕುವ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳ ನಿರ್ಧಾರವು ಇತರ ರಾಜ್ಯಗಳಿಗೆ ಮಾದರಿಯಾಗಿರಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯ ಸರ್ಕಾರಗಳು ಕಬ್ಬು ಬೆಳೆಗಾರರ ಹಿತರಕ್ಷಣೆಗೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರೆ ಮಾತ್ರ ರೈತರ ಬವಣೆಗೆ ಕೊನೆ ಹಾಡಲು ಸಾಧ್ಯವಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.