ಕಾಯ್ದೆಗೆ ತಿದ್ದುಪಡಿ ಕಾಲಕ್ಕೆ ತಕ್ಕಂತೆ ಸ್ಪಂದನೆ ಅತ್ಯಂತ ಹೀನ ಸ್ವರೂಪದ ದುಷ್ಕೃತ್ಯಗಳಲ್ಲಿ ಪಾಲ್ಗೊಳ್ಳುವ 16 ರಿಂದ 18 ವರ್ಷದ ಮಕ್ಕಳ ವಿಚಾರಣೆಗೆ ಸಂಬಂಧಪಟ್ಟಂತೆ ಇದುವರೆಗೆ ಕಾನೂನುಗಳ ಅಡಿ ಇದ್ದ ವಿನಾಯಿತಿಯನ್ನು ತೆಗೆದುಹಾಕುವ ಮಹತ್ವದ ತೀರ್ಮಾನವನ್ನು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡಿದೆ. ಈ ಉದ್ದೇಶಕ್ಕಾಗಿ 2000 ಇಸವಿಯ ಬಾಲ ನ್ಯಾಯ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ದೇಶದಲ್ಲಿ ಈಗಿರುವ ವಿವಿಧ ಕಾನೂನುಗಳ ಪ್ರಕಾರ 18 ವರ್ಷದ ಒಳಗಿರುವವರು ‘ಅಪ್ರಾಪ್ತ ವಯಸ್ಸಿನವರು’ ಅಥವಾ ‘ಪ್ರಬುದ್ಧರಲ್ಲದವರು’. ಹೀಗಾಗಿಯೇ ಇವರ ಹಕ್ಕು, ಸಂರಕ್ಷಣೆಯನ್ನು ವಿಶೇಷವಾಗಿಯೇ ಪರಿಗಣಿಸಲಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ 18 ವರ್ಷದೊಳಗಿನ ಮಕ್ಕಳು ಕೂಡ ಕೊಲೆ, ಅತ್ಯಾಚಾರ, ಡಕಾಯಿತಿ, ಆಸಿಡ್ ದಾಳಿಯಂತಹ ಹೇಯ ಕೃತ್ಯಗಳಲ್ಲಿ ತೊಡಗಿಕೊಂಡ ಪ್ರಕರಣಗಳನ್ನು ಕಂಡಿದ್ದೇವೆ. ಇಡೀ ದೇಶದ ಅಂತಃಸಾಕ್ಷಿಯನ್ನು ಕಲಕಿದ ದೆಹಲಿ ಯುವತಿ ಅತ್ಯಾಚಾರ, ಮುಂಬೈಯಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲಿನ ಅತ್ಯಾಚಾರದಲ್ಲಿ ಭಾಗಿಯಾದವರಲ್ಲಿ ಬಾಲಾರೋಪಿಗಳೂ ಇದ್ದರು. ಶಾಲೆಗೆ ಹೋಗುವ ಹುಡುಗ ಕೂಡ ಸಹಪಾಠಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಗಳು ನಡೆದಿವೆ. ಇವರಲ್ಲಿ ಅನೇಕರಿಗೆ ತಾವು ಎಸಗಿದ ದುಷ್ಕೃತ್ಯದ ಬಗ್ಗೆ ಕನಿಷ್ಠ ಪಶ್ಚಾತ್ತಾಪವೂ ಇಲ್ಲ. ಆದರೆ ಕಾಯ್ದೆಯಲ್ಲಿ ಇರುವ ರಕ್ಷಣೆಯಿಂದಾಗಿ ಶಿಕ್ಷೆಯಿಂದ ಪಾರಾಗುತ್ತ ಬಂದಿದ್ದಾರೆ. ಇವರಿಗೆ ಗಲ್ಲು, ಜೀವಾವಧಿ ಶಿಕ್ಷೆ ವಿಧಿಸುವಂತಿಲ್ಲ. ದಂಡ ತೆರದಿದ್ದರೂ ಜೈಲಿಗೂ ಕಳುಹಿಸುವಂತಿಲ್ಲ. ಹೆಚ್ಚೆಂದರೆ ಮೂರು ವರ್ಷ ಸುಧಾರಣಾ ಗೃಹದಲ್ಲಿ ಇಡಬಹುದು. ಆದರೆ ಅಲ್ಲಿಂದ ಹೊರಬಂದ ನಂತರವೂ ಹಲವರು ಸುಧಾರಿಸದೆ ಮತ್ತೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ನಿದರ್ಶನಗಳು ಇವೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಸಣ್ಣ ವಯಸ್ಸಿನಲ್ಲಿಯೇ ಇವರನ್ನು ಸರಿದಾರಿಗೆ ತರದೇ ಹೋದರೆ ದೊಡ್ಡವರಾದ ನಂತರ ಸಮಾಜಕ್ಕೆ ಶಾಪವಾಗಲಿದ್ದಾರೆ, ಇಂಥವರ ಬಗ್ಗೆ ತಳೆಯುವ ಮೃದು ಧೋರಣೆಯಿಂದ ಅನಾಹುತವೇ ಹೆಚ್ಚು ಎಂಬುದು ನಾಗರಿಕ ಸಮಾಜದ ಆತಂಕ. ಆದರೆ ಪ್ರೌಢಾವಸ್ಥೆ ತಲುಪದ ಮಕ್ಕಳ ಹಕ್ಕು ಮತ್ತು ಮಾನಸಿಕ ಸ್ಥಿತಿಗತಿಗಳ ಬಗ್ಗೆಯೂ ಕಾಳಜಿ ತೋರಬೇಕು; ತಪ್ಪು ಮಾಡುವ ಮಕ್ಕಳಿಗೆ ಶಿಕ್ಷೆಯ ಭಯವೂ ಇರಬೇಕು. ಇವೆರಡರ ನಡುವೆ ಸಮತೋಲನ ಕಾಯುವ ಪ್ರಯತ್ನ ತಿದ್ದುಪಡಿ ಮಸೂದೆಯಲ್ಲಿದೆ. ಇಂತಹ ಬದಲಾವಣೆಯೊಂದರ ಅಗತ್ಯ ಇತ್ತು. ಈಗ ಸಾಮಾಜಿಕ ವಾತಾವರಣ ಬಹಳಷ್ಟು ಬದಲಾಗಿದೆ. ಮಾಹಿತಿ ತಂತ್ರಜ್ಞಾನ, ದೃಶ್ಯ ಮಾಧ್ಯಮ ಕ್ರಾಂತಿಯ ಪರಿಣಾಮವಾಗಿ ಇಡೀ ವಿಶ್ವದ ಆಗುಹೋಗುಗಳು ಕ್ಷಣಾರ್ಧದಲ್ಲಿ ಎಲ್ಲರ ಗಮನಕ್ಕೂ ಬರುತ್ತಿವೆ. ದೊಡ್ಡವರಷ್ಟೇ ಅಲ್ಲ, ಮಕ್ಕಳ ಮೇಲೂ ಇವು ಪ್ರಭಾವ ಬೀರುತ್ತಿವೆ. ಟಿ.ವಿ, ಮೊಬೈಲ್, ಇಂಟರ್‌ನೆಟ್ ಪ್ರಪಂಚದಲ್ಲಿ ಮುಳುಗಿದ ಮಕ್ಕಳ ಜ್ಞಾನ, ಅರಿವಿನ ಪರಿಧಿ ವಿಸ್ತಾರವಾಗುತ್ತಿದೆ. ಅದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನೆ ಇಲ್ಲದೇ ಹೋದರೂ ಅವರ ಚಿಂತನೆ ಮತ್ತು ಆಲೋಚನಾ ವಿಧಾನದ ಮೇಲೆ ಇವು ಪರಿಣಾಮ ಬೀರುತ್ತವೆ. ಈಗಂತೂ ಮಕ್ಕಳ ಮನಸ್ಥಿತಿಯಲ್ಲಿ ಸಾಕಷ್ಟು ಮಾರ್ಪಾಡುಗಳಾಗಿವೆ. ಹೀಗಿರುವಾಗ 18 ವರ್ಷದವರೆಗಿನವರು ಪ್ರೌಢರಲ್ಲ ಎಂಬ ಕಾನೂನಿನ ವ್ಯಾಖ್ಯೆ ಈ ಕಾಲಕ್ಕೂ ಹೇಗೆ ಸರಿ ಎನ್ನುವ ಪ್ರಶ್ನೆ ಸಹಜ. ಕಾಯ್ದೆ ತಿದ್ದುಪಡಿ ಪ್ರಸ್ತಾವ ಈ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡಿರುವುದು ಸ್ವಾಗತಾರ್ಹ. ಕ್ಷುಲ್ಲಕ ಅಪರಾಧ ಯಾವುದು, ಸಾಧಾರಣ ಯಾವುದು, ಹೀನ ಕೃತ್ಯ ಯಾವುದು ಎಂಬುದು ಸ್ಪಷ್ಟವಾಗಿ ವಿಂಗಡಣೆಯಾಗಲಿದೆ. ಹೀನ ಅಪರಾಧ ಎಸಗಿದ 16 ರಿಂದ 18 ವರ್ಷದವರೆಗಿನ ಬಾಲಾರೋಪಿಗಳು ಮಾನಸಿಕವಾಗಿ ‘ಮಗುವಾಗಿ ಈ ಕೃತ್ಯ ಎಸಗಿದ್ದಾರೋ ಅಥವಾ ಪ್ರೌಢರಾಗಿ ಎಸಗಿದ್ದಾರೋ’ ಎಂಬುದನ್ನು ಸಮಾಜಶಾಸ್ತ್ರಜ್ಞರು, ಮನೋತಜ್ಞರನ್ನು ಒಳಗೊಂಡ ಬಾಲ ನ್ಯಾಯ ಮಂಡಳಿ ನಿರ್ಧರಿಸುತ್ತದೆ. ಅದರ ಆಧಾರದ ಮೇಲೆ ಇಂಥ ಮಕ್ಕಳನ್ನು ಇತರ ವಯಸ್ಕರಂತೆ ಭಾರತೀಯ ದಂಡ ಸಂಹಿತೆಯಡಿ (ಐಪಿಸಿ) ವಿಚಾರಣೆ ಗುರಿಪಡಿಸಬೇಕೇ ಬೇಡವೇ ಎಂಬುದು ತೀರ್ಮಾನವಾಗಲಿದೆ. ಪೂರ್ವಯೋಜಿತ ಸಂಚಿನ ಭಾಗವಾಗಿ ಹೇಯ ಕೃತ್ಯದಲ್ಲಿ ಭಾಗಿಯಾಗುವ ಆರೋಪಿಯ ವಯಸ್ಸು ಕಡಿಮೆ, ಆತನಿಗೆ ಪ್ರೌಢಿಮೆ ಬಂದಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಅನುಕಂಪ, ಮರುಕ ತೋರುವುದು ನ್ಯಾಯ ವ್ಯವಸ್ಥೆಗೇ ಅಪಚಾರ ಮಾಡಿದಂತೆ. ಸುಪ್ರೀಂ ಕೋರ್ಟ್‌ ಕೂಡ ಬಾಲ ನ್ಯಾಯ ಕಾಯ್ದೆಯ ಕೆಲ ಅಂಶಗಳ ಮರುಪರಿಶೀಲನೆಗೆ ಸಲಹೆ ಮಾಡಿತ್ತು. ಈ ಬದಲಾವಣೆಯನ್ನು ಸಂಸದೀಯ ಸ್ಥಾಯಿ ಸಮಿತಿ ವಿರೋಧಿಸಿದರೂ ಸಂಪುಟ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಸಮಾಜದ ಆಶಯಗಳಿಗೆ ಸ್ಪಂದಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.