ರೈತರ ಬದುಕಿನ ವಿಷಯದಲ್ಲಿ ರಾಜಕೀಯ ಸಲ್ಲದು ಮುಖ್ಯಮಂತ್ರಿಯೊಬ್ಬರು ವೇದಿಕೆಯ ಮೇಲೆ ನಿಂತು ರೈತರ ಸಮಸ್ಯೆಗಳ ಬಗ್ಗೆ ಭಾಷಣ ಮಾಡುತ್ತಿದ್ದರೆ, ಅಲ್ಲೇ ಕಣ್ಣಳತೆಯ ದೂರದಲ್ಲಿ ಮರವೇರಿ ಕುಳಿತು ಭಾಷಣ ಕೇಳುತ್ತಿದ್ದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ! ರೈತರ ಸಂಕಟವನ್ನು ವರ್ಣಿಸಲು ಇದಕ್ಕಿಂತ ಭೀಕರ ಹಾಗೂ ವಿಪರ್ಯಾಸಕರ ಘಟನೆ ಇನ್ಯಾವುದೂ ಇರಲಿಕ್ಕಿಲ್ಲ. ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಕಿಸಾನ್‌ ರ್‌್್ಯಾಲಿಯಲ್ಲಿ ನಡೆದ ರೈತನ ಆತ್ಮಹತ್ಯೆ, ದೇಶದ ರಾಜಕಾರಣಿಗಳು ರೈತರಿಗೆ ತಂದಿತ್ತಿರುವ ದುಃಸ್ಥಿತಿಯ ಸಂಕೇತವೂ ಹೌದು. ರಾಜಸ್ತಾನದಿಂದ ಬಂದ ಗಜೇಂದ್ರ ಸಿಂಗ್‌ ಎಂಬ ಆ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಮರ ಏರಿರಲಿಕ್ಕಿಲ್ಲ, ನಿಜ. ಆದರೆ ಆತ್ಮಹತ್ಯೆಯ ಮೂಲಕ ತನ್ನ ರೈತಾಪಿ ಬದುಕಿನ ಸಂಕಷ್ಟಗಳನ್ನು ದೇಶದ ಗಮನಕ್ಕೆ ತರುವ ಉದ್ದೇಶವಂತೂ ಅವರಿಗೆ ಇತ್ತು. ಸಾಲ ಸೋಲ ಮಾಡಿ, ವರ್ಷವಿಡೀ ದುಡಿದು ಬೆಳೆದ ಬೆಳೆ ನೈಸರ್ಗಿಕ ವಿಕೋಪಕ್ಕೆ ಬಲಿಯಾದರೆ ಗಜೇಂದ್ರ ಸಿಂಗ್‌ ಏನು ಮಾಡಿಯಾರು? ಇದು ಅವರೊಬ್ಬರ ವ್ಯಥೆಯಲ್ಲ; ದೇಶದ ಬಹುತೇಕ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ರೈತನೊಬ್ಬನ ಮೊದಲ ಆತ್ಮಹತ್ಯೆಯೂ ಇದಲ್ಲ; ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ನೂರಾರು ರೈತರು ಸಾಲಬಾಧೆ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಇಂತಹ ಅತಿಭಾವುಕತೆಯ ನಿರ್ಧಾರಗಳನ್ನು ಕೈಗೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಯಾವ ರಾಜ್ಯ ಸರ್ಕಾರವೂ ದೂರದೃಷ್ಟಿಯ ಸಮಗ್ರ ವಿಮಾ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಎಲ್ಲಕ್ಕಿಂತ ದುರಂತದ ಸಂಗತಿಯೆಂದರೆ, ರೈತ ಇವತ್ತು ರಾಜಕೀಯ ಪಕ್ಷಗಳ ಚದುರಂಗದಾಟದ ದಾಳವಾಗಿರುವುದು. ಗಜೇಂದ್ರ ಸಿಂಗ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಬೆನ್ನಲ್ಲೇ ಆಮ್‌ ಆದ್ಮಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿವೆ. ಈ ಘಟನೆಯಿಂದ ಗರಿಷ್ಠ ರಾಜಕೀಯ ಲಾಭ ಮಾಡಿಕೊಳ್ಳುವುದೇ ಎಲ್ಲ ಪಕ್ಷಗಳ ಮುಖ್ಯ ಉದ್ದೇಶವಾಗಿದೆ. ರೈತರ ಸಭೆಯಲ್ಲೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭಾಷಣದ ಮಧ್ಯೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರೆ, ಆ ಪಕ್ಷದ ವಕ್ತಾರರು ‘ಮುಖ್ಯಮಂತ್ರಿಯವರು ಮರ ಹತ್ತಿ ರೈತನನ್ನು ತಡೆಯಬೇಕಿತ್ತೆ?’ ಎಂಬ ಉದ್ಧಟತನದ ಮರುಪ್ರಶ್ನೆ ಹಾಕುತ್ತಾರೆ. ಬಳಿಕ ಈ ಬಗ್ಗೆ ಕ್ಷಮೆ ಕೇಳಿದರೂ, ರೈತರ ಬಗ್ಗೆ ಆಮ್‌ ಆದ್ಮಿ ಪಕ್ಷಕ್ಕೆ ಇರುವ ಕಾಳಜಿಯ ಪ್ರಾಮಾಣಿಕತೆಯನ್ನು ಈ ಪ್ರತಿಕ್ರಿಯೆ ಪ್ರಶ್ನಾರ್ಹವಾಗಿಸಿದೆ. ಆಮ್‌ ಆದ್ಮಿ ಪಕ್ಷದ ಬಗ್ಗೆ ಟೀಕೆಗಳ ಮಳೆ ಸುರಿಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೂ ರೈತರ ಸಮಸ್ಯೆಗಳನ್ನು ನಿವಾರಿಸಲು ಮಹಾ ಘನಂದಾರಿ ಕೆಲಸಗಳನ್ನೇನೂ ಮಾಡಿಲ್ಲ. ಬಿಜೆಪಿ, ಕಾಂಗ್ರೆಸ್‌ ಮತ್ತು ಜನತಾದಳ ಆಳುತ್ತಿರುವ ರಾಜ್ಯಗಳಲ್ಲೂ ರೈತರ ಆತ್ಮಹತ್ಯೆಗಳು ಬಹಳಷ್ಟು ನಡೆದಿವೆ. ಭೂಸ್ವಾಧೀನ ಕಾನೂನನ್ನು ಸರಳಗೊಳಿ ಸಲು ಹೊರಟಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ತನ್ನ ನಿರ್ಧಾರವನ್ನು ಮರುಪರಿಶೀಲಿಸುವ ಸಾಧ್ಯತೆಯೂ ಇಲ್ಲ. ರೈತರ ಸಮಸ್ಯೆಗಳ ನಿವಾರಣೆಗಿಂತ, ಅತ್ಯಧಿಕ ರಾಜಕೀಯ ಲಾಭ ಗಳಿಸುವುದಕ್ಕಷ್ಟೇ ಈ ಪಕ್ಷಗಳ ಮಧ್ಯೆ ಪೈಪೋಟಿ ನಡೆಯುತ್ತದೆ. ರಾಜಕೀಯ ಪಕ್ಷಗಳ ಈ ಮೊಸಳೆಕಣ್ಣೀರಿನಿಂದ ರೈತರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಬೆಳೆನಷ್ಟವಾದ ಬಳಿಕ ಚಿಕ್ಕಾಸಿನ ಪರಿಹಾರವನ್ನು ಪ್ರಕಟಿಸುವುದು, ಆ ಪರಿಹಾರಕ್ಕೂ ಅಧಿಕಾರಿಗಳು ಕಲ್ಲು ಹಾಕುವುದು ಹಿಂದಿನಿಂದಲೂ ನಡೆದುಬಂದಿದೆ. ಅಂತಹ ಪರಿಹಾರಕ್ಕಿಂತ ಪರಿಣಾಮಕಾರಿ ಬೆಳೆ ವಿಮೆ ಯೋಜನೆಯ ಜಾರಿ ಮುಖ್ಯ ಎನ್ನುವುದು ನಮ್ಮ ರಾಜಕಾರಣಿಗಳಿಗೇಕೆ ಗೊತ್ತಾಗುವುದಿಲ್ಲ? ರೈತರ ಆತ್ಮಹತ್ಯೆ ಎನ್ನುವುದು ರಾಜಕೀಯ ಲಾಭ ಗಳಿಕೆಯ ಅವಕಾಶವಲ್ಲ; ಅದೊಂದು ಮಾನವೀಯ ಸಮಸ್ಯೆ. ಸರ್ಕಾರದ ವಿಫಲ ಕೃಷಿ ನೀತಿಗಳ ಕುರಿತು ಕಣ್ತೆರೆಸುವ ದುರಂತ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಾಕಷ್ಟು ನೀರಾವರಿ ವ್ಯವಸ್ಥೆ, ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತಹ ವಾತಾವರಣ, ಕೃಷಿಯ ಉಪ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ನೆರವಾಗುವ ಸಮಗ್ರ ಯೋಜನೆಗಳ ಜಾರಿಯ ಬಗ್ಗೆ ಸರ್ಕಾರಗಳು ಗಮನ ಹರಿಸದಿದ್ದರೆ, ರೈತರ ಆತ್ಮಹತ್ಯೆಗಳು ನಿಲ್ಲುವುದೂ ಇಲ್ಲವೇನೊ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.