ಪರಿಹಾರ ಕಾರ್ಯಾಚರಣೆ ಸವಾಲು ಎದುರಿಸಿ ನೈಸರ್ಗಿಕ ವಿಪತ್ತುಗಳನ್ನು ತಪ್ಪಿಸಲಾಗುವುದಿಲ್ಲ. ಆದರೆ ಅದರ ನಿರ್ವಹಣೆಯ ಸನ್ನದ್ಧತೆ ಮುಖ್ಯ. ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಅನೇಕ ಪುರಾತನ ದೇವಾಲಯ ಹಾಗೂ ಬೌದ್ಧ ಸ್ತೂಪಗಳಿಂದ ಸುತ್ತುವರಿದ ದೇಶ ನೇಪಾಳ. ಆದರೆ ಈಗ, ಬಿರುಕು ಬಿಟ್ಟ ನೆಲ ಹಾಗೂ ಕುಸಿದ ಕಟ್ಟಡಗಳ ಅವಶೇಷಗಳಿಂದಾಗಿ ನೇಪಾಳದ ಚಿತ್ರಣ ಸಂಪೂರ್ಣ ಬದಲಾಗಿದೆ. ಕಳೆದ 81 ವರ್ಷಗಳಲ್ಲಿ ಸಂಭವಿಸಿದ ಅತಿ ಭೀಕರವಾದ ಭೂಕಂಪದಲ್ಲಿ ನೇಪಾಳದ ಅನೇಕ ಐತಿಹಾಸಿಕ ಕಟ್ಟಡಗಳು ನಾಮಾವಶೇಷವಾಗಿಹೋಗಿವೆ. ಭಾರಿ ಪ್ರಮಾಣದ ಮರುಕಂಪನಗಳು ಮುಂದುವರಿದಿದ್ದು ಜನರ ಬದುಕು ಚೆಲ್ಲಾಪಿಲ್ಲಿಯಾಗಿರುವುದು ದುರದೃಷ್ಟಕರ. ಮರು ಕಂಪನಗಳ ಭೀತಿ ಇನ್ನೂ ಮುಂದುವರೆದಿದ್ದು ಜನ ಕಂಗೆಟ್ಟಿದ್ದಾರೆ. ಈಗಾಗಲೇ 2000ಕ್ಕಿಂತ ಹೆಚ್ಚು ಜನರು ಸತ್ತಿರುವುದು ಅಧಿಕೃತವಾಗಿದ್ದು ಈ ಸಂಖ್ಯೆ ಇನ್ನೂ ಏರುವ ಸಾಧ್ಯತೆ ಇದೆ. ಸಾವುನೋವು ಹಾಗೂ ಹಾನಿ ಪ್ರಮಾಣ ಇನ್ನೂ ನಿರ್ಧಾರವಾಗಬೇಕಿದೆ. ನೇಪಾಳದಲ್ಲಿ 1934ರಲ್ಲಿ ಸಂಭವಿಸಿದ ಭೂಕಂಪದಲ್ಲಿ 10 ಸಾವಿರ ಮಂದಿ ಸತ್ತಿದ್ದರು. ಈಗ ಮತ್ತೊಂದು ಕ್ಲಿಷ್ಟಕರ ಸನ್ನಿವೇಶವನ್ನು ರಾಷ್ಟ್ರ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಇರುವ ದೊಡ್ಡ ಸವಾಲು ಪರಿಹಾರ ಕಾರ್ಯಾಚರಣೆಯದ್ದು. ನೆರವಿನ ವಿಮಾನಗಳು ನೇಪಾಳದತ್ತ ಧಾವಿಸತೊಡಗಿವೆ. ಈ ಪರಿಹಾರ ಕಾರ್ಯಾಚರಣೆಯಲ್ಲಿ, ನೆರೆಯ ಮಿತ್ರ ರಾಷ್ಟ್ರವಾಗಿರುವ ಭಾರತ ಸಹಜವಾಗಿಯೇ ಸಕ್ರಿಯವಾಗಿ ಪಾಲ್ಗೊಂಡಿದೆ. ಪರಿಹಾರ ಕಾರ್ಯಾಚರಣೆಗಳಿಗೆ ಅಗತ್ಯವಾದ ಸಲಕರಣೆಗಳೊಂದಿಗೆ ಎನ್‌ಡಿಆರ್ಎಫ್ (ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ) ತಂಡಗಳು ನೇಪಾಳಕ್ಕೆ ಧಾವಿಸಿವೆ. ನೇಪಾಳ ಸರ್ಕಾರ, 2011ಲ್ಲಿ ಭಾರತದ ಜೊತೆ ರೂಪಿಸಿರುವ ಭೂಕಂಪ ಸನ್ನದ್ಧತೆ ಯೋಜನೆ ಪ್ರಕ್ರಿಯೆ ರಾಷ್ಟ್ರದಲ್ಲಿ ಜಾರಿಯಲ್ಲಿದೆ, ರಾಷ್ಟ್ರದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಭೂಕಂಪ ಸಮಿತಿಗಳನ್ನು ರಚಿಸಲಾಗಿದೆ. ಭೂಕಂಪದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಪ್ರಥಮ ಚಿಕಿತ್ಸೆ ಕೊಡಿಸುವುದು ಸೇರಿದಂತೆ ಪರಿಹಾರ ಅಣುಕು ಕಾರ್ಯಾಚರಣೆಗಳನ್ನು ಮಾಡಲಾಗಿದೆ. ಪೊಲೀಸ್, ಸೇನೆ ಹಾಗೂ ಸ್ಥಳೀಯ ರೆಡ್ ಕ್ರಾಸ್ ಸಂಸ್ಥೆಗಳು ಈ ಕಾರ್ಯಾಚರಣೆ ನಡೆಸಿವೆ. ಆದರೂ, ಈಗ ನೆಲೆ ಕಳೆದುಕೊಂಡಿರುವ ಜನರಿಗೆ, ರಾಷ್ಟ್ರದಲ್ಲಿ ಈಗಿರುವ ಸೌಕರ್ಯಗಳ ಕೊರತೆಯಲ್ಲಿ ಆಹಾರ, ನೆರಳು ಕಲ್ಪಿಸುವುದು ಸುಲಭದ ಮಾತೇನಲ್ಲ. ಅವಶೇಷಗಳಡಿ ಸಿಲುಕಿರಬಹುದಾದ ಸಾಕಷ್ಟು ಜನರನ್ನು ಜೀವಂತವಾಗಿ ರಕ್ಷಿಸುವುದು ತಕ್ಷಣದ ಅದ್ಯತೆಯಾಗಬೇಕಾಗಿದೆ. ಆದರೆ ಅನೇಕ ಕಡೆ ರಸ್ತೆಗಳು, ಪರಿಹಾರ ಯಂತ್ರಗಳು ಸಾಗುವಷ್ಟು ದೊಡ್ಡದಾಗಿಲ್ಲ. ಮೂಲ ಸೌಕರ್ಯಗಳ ಕೊರತೆ ಪರಿಹಾರ ಕಾರ್ಯಾಚರಣೆಗೆ ದೊಡ್ಡ ತೊಡಕಾಗಿರುವುದು ದುರದೃಷ್ಟಕರ. ಹಲವೆಡೆ ಕಲ್ಲುಮಣ್ಣಿನ ರಾಶಿಯನ್ನು ಬರಿಕೈಗಳಿಂದ ಬಗೆದು ಅವಶೇಷಗಳಡಿ ಸಿಲುಕಿಕೊಂಡವರನ್ನು ರಕ್ಷಿಸುವಂತಹ ಪ್ರಕರಣಗಳು ವರದಿಯಾಗಿರುವುದು ನಿಜಕ್ಕೂ ಹೃದಯವಿದ್ರಾವಕ. ಇಂತಹ ಸಂದರ್ಭದಲ್ಲಿ ಪ್ರತಿ ನಿಮಿಷವೂ ಪರಿಸ್ಥಿತಿ ಬಿಗಡಾಯಿಸುತ್ತಲೇ ಹೋಗುತ್ತದೆ ಎಂಬುದು ಗೊತ್ತಿರುವ ಸಂಗತಿ. ಮೊದಲೇ ವಿದ್ಯುತ್ ಸಮಸ್ಯೆ ಕಠ್ಮಂಡುವಿನಲ್ಲಿ ತೀವ್ರವಾಗಿದೆ. ಸುದೀರ್ಘ ವಿದ್ಯುತ್ ಕಡಿತ ಅಲ್ಲಿ ಮಾಮೂಲು. ಈಗಂತೂ ಭೂಕಂಪದಿಂದ ಜಲವಿದ್ಯುತ್ ಘಟಕಗಳಿಗೆ ಎಷ್ಟರ ಮಟ್ಟಿಗೆ ಹಾನಿಯಾಗಿದೆ ಎಂಬುದರ ಚಿತ್ರಣ ಸ್ಪಷ್ಟವಿಲ್ಲ. ಬೇಸಿಗೆಯಲ್ಲಿ ಸಾಂಕ್ರಾಮಿಕ ಕಾಲರಾ ಕಾಯಿಲೆಯೂ ಮಾಮೂಲು. ಈಗಿನ ಅತಂತ್ರ ಸನ್ನಿವೇಶದಲ್ಲಿ ಕಾಲರಾದ ಭೀತಿ ದೊಡ್ಡ ಪ್ರಮಾಣದಲ್ಲಿಯೇ ಇದೆ. ಆಹಾರ, ಬಟ್ಟೆ ಹಾಗೂ ಔಷಧಗಳಂತಹ ಮೂಲಭೂತ ಅಗತ್ಯ ವಸ್ತುಗಳ ಕೊರತೆಯ ಜೊತೆಗೆ ಇಂಧನ, ನೀರಿನ ಕೊರತೆ ಈ ವಿಪತ್ತಿನ ಕಷ್ಟವನ್ನು ಮತ್ತಷ್ಟು ತೀವ್ರವಾಗಿಸಲಿದೆ. ನೇಪಾಳಿ ಜನ ಗಟ್ಟಿಗರು. ಹೀಗಿದ್ದೂ ಅವರಿಗೀಗ ದೊಡ್ಡ ಅಗ್ನಿ ಪರೀಕ್ಷೆಯ ಸಮಯ. ನೈಸರ್ಗಿಕ ವಿಪತ್ತುಗಳನ್ನು ತಪ್ಪಿಸಲಾಗುವುದಿಲ್ಲ. ಆದರೆ ಅದರ ನಿರ್ವಹಣೆಯ ಸನ್ನದ್ಧತೆ ಎಷ್ಟೊಂದು ಮುಖ್ಯ ಎಂಬುದನ್ನು ಇಂತಹ ಸಂದರ್ಭಗಳಲ್ಲಿ ಮತ್ತೆ ನಮಗೆ ನೆನಪಾಗುತ್ತದೆ. ಅತಿ ಎತ್ತರದ ಕಟ್ಟಡಗಳ ನಿರ್ಮಾಣ, ಇಂದಿನ ನಗರೀಕರಣದ ಮುಖ್ಯ ಲಕ್ಷಣವಾಗಿದೆ. ಆದರೆ ಕಟ್ಟಡ ನಿರ್ಮಾಣ ಸಂಹಿತೆ ಪಾಲನೆ ಕಡ್ಡಾಯವಾಗಬೇಕು. ಭೂಕಂಪವನ್ನು ತಾಳಿಕೊಳ್ಳುವ ತಂತ್ರಜ್ಞಾನಗಳ ಅಳವಡಿಕೆಯೂ ಕಟ್ಟಡನಿರ್ಮಾಣದಲ್ಲಿ ಅಗತ್ಯ ಎಂಬುದು ನೇಪಾಳದ ಈ ದುರಂತ ನಮಗೆ ಮತ್ತೊಮ್ಮೆ ನೆನಪಿಸಿದೆ. ಭೂಕಂಪಕ್ಕಿಂತ, ಉರುಳುವ ಕಟ್ಟಡಗಳು ಜನರನ್ನು ಸಾಯಿಸುತ್ತವೆ ಎಂಬುದನ್ನು ನಾವು ಗಮನಿಸಬೇಕು. ವಿಪತ್ತು ಸದಾ ಎದುರಾಗುವುದಿಲ್ಲ. ಆದರೆ ಅದರ ಸಾಧ್ಯತೆಯನ್ನು ಅರಿಯುವ ಮುಂಗಾಣ್ಕೆ ಬೇಕು. ಆಧುನಿಕ ಅಭಿವೃದ್ಧಿಯ ಮಾದರಿಗಳು ಇಂತಹ ನೈಸರ್ಗಿಕ ವಿಪತ್ತುಗಳ ಸಂಭವನೀಯತೆಯನ್ನು ಗಮನದಲ್ಲಿರಿಸಿಕೊಂಡಿರ ಬೇಕೆಂಬುದಕ್ಕೆ ಇದು ಮತ್ತೊಂದು ಎಚ್ಚರಿಕೆಯ ಗಂಟೆ. ಇತ್ತೀಚಿನ ವರ್ಷಗಳಲ್ಲಿ ಅಸ್ಥಿರತೆಯ ಹಲವು ಬೆಳವಣಿಗೆಗಳನ್ನು ಎದುರಿಸಿರುವ ನೇಪಾಳದ ಇಂದಿನ ಕಠಿಣ ಸಮಯದಲ್ಲಿ ಪರಿಹಾರ ಹಾಗೂ ಪುನರ್ವಸತಿ ಕಾರ್ಯಾಚರಣೆಗೆ ಅಂತರರಾಷ್ಟ್ರೀಯ ಸಮುದಾಯ ಸ್ಪಂದಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.