ರಫೆಲ್ ಯುದ್ಧವಿಮಾನ ಖರೀದಿ ಅನಿವಾರ್ಯವಾಗಿದ್ದ ತುರ್ತು ಕ್ರಮ ಫ್ರಾನ್ಸ್‌ನಿಂದ 36 ರಫೆಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಫ್ರಾನ್ಸ್ ಪ್ರವಾಸ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಫ್ರಾಂಕಾಯಿಸ್ ಹಾಲನ್ ಅವರು ಸಹಿ ಹಾಕಿದ್ದಾರೆ. ಹಾರುವುದಕ್ಕೆ ಸನ್ನದ್ಧವಾಗಿರುವ ಹಂತದಲ್ಲಿರುವ ಈ ಯುದ್ಧ ವಿಮಾನಗಳ ಖರೀದಿ ಸಕಾಲಿಕ ಅಥವಾ ಅನಿವಾರ್ಯವಾಗಿದ್ದಂತಹ ತುರ್ತು ಹೆಜ್ಜೆ ಎಂದು ವ್ಯಾಖ್ಯಾನಿಸಬಹುದು. ಯುದ್ಧವಿಮಾನಗಳ ಕೊರತೆಯನ್ನು ಅನುಭವಿಸುತ್ತಿರುವ ಭಾರತೀಯ ವಾಯುಪಡೆಗೆ ಇದು ತೀರಾ ಅಗತ್ಯವಾಗಿದ್ದಂತಹ ಕ್ರಮ. ‘ಇದರಿಂದ ವಾಯುಪಡೆಗೆ ಆಮ್ಲಜನಕ ಸಿಕ್ಕಿದಂತಾಗಿದೆ’ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಹೇಳಿರು ವುದು ಇದಕ್ಕೆ ಸಾಕ್ಷಿ. ಫ್ರೆಂಚ್ ತಯಾರಿಕಾ ಸಂಸ್ಥೆ ಡಸ್ಸಾಲ್ಟ್‌ನಿಂದ 126 ರಫೆಲ್ ವಿಮಾನಗಳ ಖರೀದಿಗೆ ಈ ಹಿಂದಿನ ಯುಪಿಎ ಸರ್ಕಾರವೇ ಪ್ರಕ್ರಿಯೆ ಆರಂಭಿಸಿತ್ತು. ವಿಮಾನ ಖರೀದಿ ಹಾಗೂ ತಯಾರಿಕೆಗಾಗಿ ಮಾತುಕತೆಗಳು ಅನೇಕ ವರ್ಷಗಳಿಂದ ನಡೆದಿದ್ದವು. ಡಸ್ಸಾಲ್ಟ್ ಜೊತೆಗೆ ಆರಂಭದ ಒಪ್ಪಂದವೂ ಆಗಿತ್ತು. ಆದರೆ ಒಪ್ಪಂದ ಅಂತಿಮಗೊಳ್ಳಲು ಕೆಲವೊಂದು ವಿಚಾರಗಳಲ್ಲಿ ತಡೆಯಾಗಿತ್ತು. ಇದರಿಂದಾಗಿ ಸಹಜವಾಗಿಯೇ ವೆಚ್ಚ ಹೆಚ್ಚಳ ಹಾಗೂ ಅನಿಶ್ಚಯಗಳು ಇದರ ಸುತ್ತ ಸುತ್ತಿಕೊಂಡಿತ್ತು. ಇಂತಹ ಸಂದರ್ಭದಲ್ಲಿ ಭಾರತ ಹಾಗೂ ಫ್ರಾನ್ಸ್ ಮಧ್ಯೆ ಸರ್ಕಾರಗಳ ಹಂತದಲ್ಲಿ ಆಗಿರುವ ಈ ಒಪ್ಪಂದ ತಕ್ಷಣದ ಪರಿಹಾರ ಎಂಬುದರಲ್ಲಿ ಎರಡು ಮಾತಿಲ್ಲ. ನೇರವಾಗಿ ಸರ್ಕಾರಗಳ ಮಧ್ಯೆಯೇ ನಡೆದಿರುವ ಒಪ್ಪಂದದಿಂದಾಗಿ ವಿಳಂಬದ ಸಾಧ್ಯತೆ ತಪ್ಪಿದಂತಾಗಿದೆ. ಹಾಗೆಯೇ ಭ್ರಷ್ಟಾಚಾರ ಆರೋಪಗಳಿಗೂ ಅವಕಾಶವಿರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ವಾಯುಪಡೆಯ ತಕ್ಷಣದ ಅಗತ್ಯ ಪೂರೈಕೆಯಾಗಿರುವುದು ಮುಖ್ಯ. ಆದರೆ ಮತ್ತೊಂದು ಕೋನದಿಂದ ನೋಡಿದಲ್ಲಿ ಇದು ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ಹಾಸುಹೊಕ್ಕಾಗಿರುವ ಸಮಸ್ಯೆ ಹಾಗೂ ದೌರ್ಬಲ್ಯಗಳಿಗೂ ಕನ್ನಡಿ ಹಿಡಿದಿದೆ. ರಕ್ಷಣಾ ಖರೀದಿಗೆ ಸಂಬಂಧಿಸಿದಂತೆ ಸರ್ಕಾರ ಹೊಂದಿರುವಂತಹ ದೀರ್ಘಾವಧಿ ನೀತಿಗಳೇನು ಎಂಬಂಥ ಪ್ರಶ್ನೆಗಳನ್ನೂ ಇದು ಎತ್ತಿದೆ. ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಆಗುವ ವಿಳಂಬಗಳಿಂದ ಅನೇಕ ಸಂದರ್ಭಗಳಲ್ಲಿ ಉತ್ತಮ ಆಯ್ಕೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳ ಅನುಕೂಲಗಳನ್ನು ಉತ್ಪನ್ನ ಸಬರಾಜುದಾರರು ಪಡೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸಬೇಕು. ತಂತ್ರಜ್ಞಾನ ವರ್ಗಾವಣೆ ಹಾಗೂ ಭಾರತದಲ್ಲಿ ಯುದ್ಧವಿಮಾನ ತಯಾರಿಕೆ ಗುಣಮಟ್ಟ ಕುರಿತಾದ ಭಿನ್ನಾಭಿಪ್ರಾಯಗಳು ಡಸ್ಸಾಲ್ಟ್ ಸಂಸ್ಥೆ ಜೊತೆ ಒಪ್ಪಂದ ಅಂತಿಮಗೊಳಿಸುವಲ್ಲಾದ ವಿಳಂಬಕ್ಕೆ ಮುಖ್ಯ ಕಾರಣವಾಗಿತ್ತು. ಭಾರತದಲ್ಲಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ನಂತಹ (ಎಚ್ಎಎಲ್) ಸಂಸ್ಥೆಗಳಲ್ಲಿ ತಯಾರಿಸಲಾದ ಯುದ್ಧ ವಿಮಾನದ ಗುಣಮಟ್ಟದ ಖಾತರಿ ನೀಡಲು ಕಂಪೆನಿ ಸಿದ್ಧವಿರಲಿಲ್ಲ. ಏಕೆಂದರೆ ಭಾರತದಲ್ಲಿನ ತಯಾರಿಕಾ ಸೌಲಭ್ಯ ಉತ್ಕೃಷ್ಟ ಗುಣಮಟ್ಟದ್ದಲ್ಲ ಎಂಬುದು ಅದರ ಭಾವನೆ. ಭಾರತದ ಕೈಗಾರಿಕೋದ್ಯಮದ ಕೆಲಸದ ಸಂಸ್ಕೃತಿ ಸುಧಾರಿಸಬೇಕಾಗಿರುವ ಅಗತ್ಯದತ್ತ ಇದು ಬೆರಳು ಮಾಡುತ್ತದೆ. ಜೊತೆಗೆ ಸೌಲಭ್ಯಗಳನ್ನು ಉನ್ನತೀಕರಿಸಬೇಕಾದ ಅಗತ್ಯವನ್ನೂ ಪ್ರತಿಪಾದಿಸುತ್ತದೆ. ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿಗೆ ಹೆಚ್ಚಿನ ಪಾತ್ರ ನೀಡಲು ಸರ್ಕಾರ ಈಗಾಗಲೇ ನಿರ್ಧರಿಸಿದೆ. ಇದಕ್ಕಾಗಿ ವಿಮಾನಗಳ ಜಂಟಿ ತಯಾರಿಕೆಯಂತಹ ಯೋಜನೆಗಳನ್ನು ಪರಿಶೀಲಿಸುವುದು ಅಗತ್ಯ. ರಫೆಲ್ ಒಪ್ಪಂದ ಎನ್‌ಡಿಎ ಸರ್ಕಾರ ಪ್ರತಿಪಾದಿಸುತ್ತಿರುವ ‘ಭಾರತ ದಲ್ಲೇ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಆಶಯಕ್ಕೂ ವಿರುದ್ಧವಾದದ್ದು. ಆದರೆ ಭಾರತಕ್ಕೆ ಹೊರಗುತ್ತಿಗೆ ಕಾರ್ಯಗಳನ್ನು ನೀಡುವ ಕುರಿತಾಗಿ ‘ಏರ್ ಬಸ್’ ಸಂಸ್ಥೆ ಪ್ರಕಟಿಸಿರುವ ನಿರ್ಧಾರ ‘ಭಾರತದಲ್ಲೇ ತಯಾರಿಸಿ’ ಕಾರ್ಯಕ್ರಮಕ್ಕೆ ಹೆಚ್ಚಿನ ಪುಷ್ಟಿ ನೀಡುವಂತಹದ್ದು. ಈಗಿರುವ ಮಟ್ಟಕ್ಕಿಂತ ಐದುಪಟ್ಟು ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ವಿಚಾರವನ್ನು ‘ಏರ್ ಬಸ್’ ಸಂಸ್ಥೆ ಪ್ರಸ್ತಾಪಿಸಿದೆ. ಇಲ್ಲೂ ಕೂಡ ‘ಏರ್ ಬಸ್’, ಸರ್ಕಾರಿ ಕ್ಷೇತ್ರದ ಸಂಸ್ಥೆ ಜೊತೆ ಕೆಲಸ ಮಾಡಲು ಉತ್ಸುಕತೆ ತೋರಿಲ್ಲ. ಖಾಸಗಿ ಸಂಸ್ಥೆಗಳ ಜೊತೆ ಜಂಟಿ ಸಹಭಾಗಿತ್ವವನ್ನು ಅದು ಎದುರು ನೋಡುತ್ತಿದೆ ಎಂಬುದನ್ನು ಗಮನಿಸಬೇಕು. ‘ಭಾರತದಲ್ಲೇ ತಯಾರಿಸಿ’ ಪರಿಕಲ್ಪನೆಗೆ, ಮೋದಿಯವರು ಭೇಟಿ ನೀಡಿದ ಮತ್ತೊಂದು ಯುರೋಪಿಯನ್ ರಾಷ್ಟ್ರ ಜರ್ಮನಿಯಲ್ಲಿ ಹೆಚ್ಚಿನ ಸ್ಪಂದನ ವ್ಯಕ್ತವಾಗಿದೆ. ಯುರೋಪ್‌ನಲ್ಲಿ ಭಾರತಕ್ಕೆ ಅತಿ ದೊಡ್ಡ ವ್ಯಾಪಾರಿ ಪಾಲುದಾರ ರಾಷ್ಟ್ರವಾಗಿದೆ ಜರ್ಮನಿ. ಇಂತಹ ಸನ್ನಿವೇಶದಲ್ಲಿ, ತಯಾರಿಕಾ ನೆಲೆಯಾಗಿ ಚೀನಾಗಿ ಪರ್ಯಾಯವಾಗಿ ಭಾರತವನ್ನು ಪರಿಗಣಿಸಲು ಜರ್ಮನಿ ಉತ್ಸುಕತೆ ತೋರಿರುವುದು ಆಶಾದಾಯಕ ಬೆಳವಣಿಗೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.