ಜನತಾ ಪರಿವಾರದ ವಿಲೀನ ಅನಿವಾರ್ಯವಾದ ನಡೆ ಎರಡು ದಶಕಗಳ ಬಳಿಕ ಜನತಾ ಪರಿವಾರದ ಆರು ಪಕ್ಷಗಳು ಒಗ್ಗೂಡಿವೆ. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ಎಚ್ಚೆತ್ತುಕೊಂಡಿರುವ ಜನತಾ ಬಣಗಳ ನಾಯಕರು, ಕಾಂಗ್ರೆಸ್‌ ಹಾಗೂ ಬಿಜೆಪಿ ವಿರೋಧಿ ಮತಗಳ ವಿಭಜನೆ ತಪ್ಪಿಸುವ ಉದ್ದೇಶದಿಂದ ಜತೆಗೂಡಿದ್ದಾರೆ. ಒಂದು ರಾಜ್ಯಕ್ಕೋ ಅಥವಾ ಪ್ರದೇಶಕ್ಕೋ ಸೀಮಿತವಾದ ಪಕ್ಷಗಳ ನೆಲೆ ಕಬಳಿಸುತ್ತಿರುವ ಬಿಜೆಪಿ ವೇಗಕ್ಕೆ ಕಡಿವಾಣ ಹಾಕದಿದ್ದರೆ ತಮಗೆ ಉಳಿಗಾಲ ಇಲ್ಲವೆಂದು ಅವರಿಗೆ ಅನಿಸಿರುವುದೇ ಈ ವಿಲೀನಕ್ಕೆ ಪ್ರಮುಖ ಕಾರಣವಾಗಿರಬಹುದು. ಈ ವರ್ಷದ ಅಂತ್ಯಕ್ಕೆ ನಡೆಯುವ ಬಿಹಾರ ವಿಧಾನಸಭೆ ಚುನಾವಣೆ ಗೆಲ್ಲುವುದು ಜನತಾ ಪರಿವಾರದ ನಾಯಕರ ಮುಂದಿರುವ ಸವಾಲು. ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಉತ್ತರ ಪ್ರದೇಶ ಮತ್ತು ಬಿಹಾರದ ಒಟ್ಟು 120 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು 104 ಸ್ಥಾನಗಳನ್ನು ಗೆದ್ದುಕೊಂಡಿವೆ. ಜನತಾ ಪರಿವಾರದ ಬಣಗಳು ನೆಲಕಚ್ಚಿವೆ. ಇದಾದ ಮೂರೇ ತಿಂಗಳಲ್ಲಿ ಬಿಹಾರದ 10 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ನಿತೀಶ್‌ ಕುಮಾರ್ ಮತ್ತು ಲಾಲುಪ್ರಸಾದ್‌, ಕಾಂಗ್ರೆಸ್‌ ಜತೆ ಸೇರಿ ಆರು ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಎರಡು ಸ್ಥಾನಗಳು ಅತ್ಯಲ್ಪ ಮತಗಳ ಅಂತರದಲ್ಲಿ ಕೈತಪ್ಪಿವೆ. ಬಿಜೆಪಿಗೆ ದಕ್ಕಿದ್ದು ನಾಲ್ಕು ಸ್ಥಾನ ಮಾತ್ರ. ಉಪಚುನಾವಣೆಯಲ್ಲಿ ಮೂರೂ ಪಕ್ಷಗಳ ನಡುವಣ ಸೀಟು ಹಂಚಿಕೆ ಒಪ್ಪಂದ ಫಲ ಕೊಟ್ಟಿದೆ. ಇದರಿಂದ ಉತ್ತೇಜಿತರಾಗಿರುವ ಜನತಾ ಪರಿವಾರದ ನಾಯಕರು ಒಗ್ಗೂಡಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮುಜುಗರ ಅನುಭವಿಸಿರುವ ಬಿಜೆಪಿಯೂ, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂದು ಪಣ ತೊಟ್ಟಿದೆ. ಆದರೆ, ಅದರ ಪರಿಸ್ಥಿತಿ ಮೊದಲಿನಂತಿಲ್ಲ. ವರ್ಚಸ್ಸು ಕುಗ್ಗುತ್ತಿದೆ. ಹಿಂದುತ್ವ, ಘರ್‌ ವಾಪಸಿಯಂಥ ಕಾರ್ಯಕ್ರಮಗಳು, ಬಿಜೆಪಿ ಮಂತ್ರಿಗಳು– ನಾಯಕರ ವಿವಾದಾತ್ಮಕ ಹೇಳಿಕೆಗಳು ಅದರ ಹಾದಿಗೆ ತೊಡರುಗಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುತ್ತಿರುವ ಲಾಲು, ಮುಲಾಯಂ ಮತ್ತು ನಿತೀಶ್‌ ಅವರನ್ನು ನಿಯಂತ್ರಿಸಲು ಅಮಿತ್‌ ಷಾ, ದಲಿತರ ಮತಗಳಿಗೆ ಕೈಹಾಕುವ ಪ್ರತಿತಂತ್ರ ರೂಪಿಸಿದ್ದಾರೆ. ದಲಿತ ಮುಖಂಡರಾದ ಕೇಂದ್ರ ಸಚಿವ ರಾಂವಿಲಾಸ್‌ ಪಾಸ್ವಾನ್‌, ಬಿಹಾರ ಮಾಜಿ ಮುಖ್ಯಮಂತ್ರಿ ಜೀತನ್‌ರಾಂ ಮಾಂಝಿ ಅವರನ್ನು ಬಳಸಿಕೊಳ್ಳುವ ಯೋಜನೆ ರೂಪಿಸುತ್ತಿದ್ದಾರೆ. ಡಾ. ಅಂಬೇಡ್ಕರ್‌ ಅವರ ಸಿದ್ಧಾಂತವನ್ನು ಮುಂದಿಟ್ಟುಕೊಂಡು ದಲಿತರ ಕಾಲೋನಿಗಳಿಗೂ ಹೋಗುತ್ತಿದ್ದಾರೆ. ಅವರ ಈ ಯೋಜನೆ ಎಷ್ಟರಮಟ್ಟಿಗೆ ಸಫಲ ಆಗಲಿದೆ ಎಂದು ಈಗಲೇ ಹೇಳುವುದು ಕಷ್ಟ. ಜನತಾ ಬಣಗಳು ಒಗ್ಗೂಡಿರುವುದು ಇದೇ ಮೊದಲಲ್ಲ. 1977ರಲ್ಲಿ ಕಾಂಗ್ರೆಸ್‌ ವಿರುದ್ಧ ನಡೆದ ಮೊದಲ ರಾಜಕೀಯ ಪ್ರಯೋಗ ಯಶಸ್ವಿಯಾದ ಬಳಿಕ ಅನೇಕ ಸಲ ಒಗ್ಗೂಡಿವೆ, ಬೇರೆಯಾಗಿವೆ. ಜನತಾ ನಾಯಕರ ಕೂಡುವ– ಪಕ್ಷ ಒಡೆಯುವ ರಾಜಕಾರಣ ನಿರಂತರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಂದುಗೂಡುವುದು ಜನತಾ ಬಣಗಳಿಗೆ ಅನಿವಾರ್ಯವೂ ಆಗಿದೆ. ಏಕೆಂದರೆ ಲೋಕಸಭೆ, ಆ ನಂತರ ನಡೆದಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಸೋತು ಸೊರಗಿದೆ. ದಿನದಿಂದ ದಿನಕ್ಕೆ ಅದರ ಶಕ್ತಿ ಕ್ಷೀಣಿಸುತ್ತಿದೆ. ಕಾಂಗ್ರೆಸ್‌ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವ ಬಿಜೆಪಿಗೆ ಜನತಾ ಪರಿವಾರದ ಪಕ್ಷಗಳೂ ಸುಲಭದ ತುತ್ತಾಗುವ ಅಪಾಯವಿದೆ. ಹೀಗಾಗಿ ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿಷ್ಠೆಗಳನ್ನು ಬದಿಗೊತ್ತಿ ಜನತಾ ಪರಿವಾರದ ಆರು ಪಕ್ಷಗಳ ನಾಯಕರು ಒಂದಾಗಿದ್ದಾರೆ. ಪರಸ್ಪರರ ಕಾಲು ಎಳೆಯುವುದರಲ್ಲಿ ನಿಸ್ಸೀಮರಾದ ಈ ನಾಯಕರ ಒಗ್ಗಟ್ಟು ಉಳಿಯುವುದೇ ಎಂಬ ಪ್ರಶ್ನೆ ಇದ್ದೇ ಇದೆ. ‘ದೇಶದ ಜನರ ಭಾವನೆ ಗೌರವಿಸುವ ಉದ್ದೇಶದಿಂದ ನಾವು ಒಗ್ಗೂಡಿದ್ದೇವೆ. ನಮ್ಮ ಸಂಬಂಧ ಗಟ್ಟಿಯಾಗಿ ಉಳಿಯಲಿದೆ’ ಎಂದು ಹೊಸ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್‌ ಯಾದವ್‌ ಬುಧವಾರ ಹೇಳಿದ್ದಾರೆ. ಈ ವಿಲೀನ ಎಷ್ಟು ದಿನ ಉಳಿಯಲಿದೆ. ಇದಕ್ಕೆ ಮತದಾರರು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎನ್ನುವುದು ಸದ್ಯದ ಮಟ್ಟಿಗೆ ಕುತೂಹಲದ ಸಂಗತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.