ಪಿಯುಸಿ ಫಲಿತಾಂಶ: ಅನಗತ್ಯ ಗೊಂದಲ ತಪ್ಪಿಸಬಹುದಿತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎನ್ನುವುದು ಸರ್ಕಾರಕ್ಕೆ ಅಥವಾ ಅಧಿಕಾರಿಗಳಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಹಾಗಿದ್ದೂ ಪ್ರತಿವರ್ಷ ಈ ಪರೀಕ್ಷೆಗಳ ಫಲಿತಾಂಶದ ಹೊತ್ತಿಗೆ ಅನಗತ್ಯ ಗೊಂದಲಗಳು ಉಂಟಾಗುವುದೇಕೆ? ಈ ಸಲವೂ ಪಿಯುಸಿ ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿ ಹಲವು ಗೊಂದಲಗಳು ಉಂಟಾಗಿವೆ. ಈ ಗೊಂದಲಗಳನ್ನು ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಪದವಿಪೂರ್ವ ಶಿಕ್ಷಣ ಇಲಾಖೆಯ ಕಚೇರಿ ಮುಂದೆ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಾಗ, ಫಲಿತಾಂಶ ಪ್ರಕಟಣೆಯಲ್ಲಿ ಸಣ್ಣ ಪುಟ್ಟ ಗೊಂದಲಗಳು ಉಂಟಾಗುವುದು ಸಹಜವೇ ಎನ್ನಬಹುದಾದರೂ, ಈ ಗೊಂದಲಗಳನ್ನು ನಿವಾರಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಮೂರು ದಿನಗಳು ಬೇಕಾಯಿತೇಕೆ? ಪಿಯುಸಿ ಫಲಿತಾಂಶ ಪ್ರಕಟವಾಗುವ ಸಂದರ್ಭಕ್ಕೆ ಸರಿಯಾಗಿ ಸಿಇಟಿ ಫಲಿತಾಂಶವೂ ಪ್ರಕಟವಾಗುತ್ತದೆ. ಬಹುತೇಕ ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕೆ ಸಂಬಂಧಿಸಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಸಿಇಟಿ ಫಲಿತಾಂಶದಲ್ಲಿ ಬರುವ ರ್‍ಯಾಂಕಿಂಗ್‌ಗೆ ಕಾಯುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ತಮಗೆ ಸಿಕ್ಕಿರುವ ಅಂಕಗಳನ್ನು ಪರಿಶೀಲಿಸಲು ಉತ್ತರ ಪತ್ರಿಕೆಯ ಛಾಯಾಪ್ರತಿಗಳನ್ನು ತಕ್ಷಣ ಬಯಸುವುದು ಸಹಜವೇ. ಛಾಯಾಪ್ರತಿಗಳಲ್ಲಿ ನೀಡಲಾಗಿರುವ ಅಂಕಗಳನ್ನು ಪರಿಶೀಲಿಸಿದ ಬಳಿಕ ಮರುಮೌಲ್ಯಮಾಪನಕ್ಕೋ ಅಥವಾ ಮರುಎಣಿಕೆಗೋ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ತಡವಾದಷ್ಟೂ ಸಿಇಟಿಯಲ್ಲಿ ಪಡೆಯುವ ಸ್ಥಾನಮಾನದ ಬಗ್ಗೆ ಗೊಂದಲ ಹೆಚ್ಚಾಗುತ್ತದೆ. ಉತ್ತರಪತ್ರಿಕೆಯ ಛಾಯಾಪ್ರತಿಗಳನ್ನು ಪ್ರತಿ ವರ್ಷವೂ ಸಾವಿರಾರು ವಿದ್ಯಾರ್ಥಿಗಳು ಕೇಳುತ್ತಾರೆ ಎನ್ನುವುದು ಅಧಿಕಾರಿಗಳಿಗೆ ಗೊತ್ತೇ ಇರುತ್ತದೆ. ಈ ಸಲ ಸುಮಾರು 15 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಛಾಯಾಪ್ರತಿಗಳನ್ನು ತಕ್ಷಣಕ್ಕೆ ಒದಗಿಸಲು ಸೂಕ್ತ ಪೂರ್ವಸಿದ್ಧತೆಗಳನ್ನು ಮಾಡುವುದಕ್ಕೆ ಅಡ್ಡಿ ಏನಿತ್ತು? ಅದಕ್ಕಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಪದವಿಪೂರ್ವ ಶಿಕ್ಷಣ ಇಲಾಖೆಯ ಕಚೇರಿಗೆ ಎಡತಾಕಿ ಧರಣಿ ಮಾಡುವವರೆಗೆ, ಕೂಗಾಡುವವರೆಗೆ, ಕಣ್ಣೀರು ಹಾಕುವವರೆಗೆ ಕಾಯಬೇಕಿತ್ತೆ? ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಯಲ್ಲಿ ಗೊಂದಲಗಳು ಉಂಟಾಗಿವೆ ಎನ್ನುವುದು ಗೊತ್ತಾದ ಮರುದಿನವೇ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸೂಕ್ತ ಸಮಾಧಾನ ಹೇಳಿ, ಗೊಂದಲಗಳನ್ನು ಪರಿಹರಿಸುವ ಕೆಲಸವನ್ನು ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಏಕೆ ಮಾಡಲಿಲ್ಲ? ‘ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಮರುಮೌಲ್ಯಮಾಪನದಲ್ಲಿ ಅಥವಾ ಮರುಎಣಿಕೆಯಲ್ಲಿ ಆರಕ್ಕಿಂತ ಹೆಚ್ಚು ಅಂಕಗಳು ವ್ಯತ್ಯಾಸವಾಗಿದ್ದರೆ ಶುಲ್ಕ ಹಿಂದಿರುಗಿಸಲಾಗುವುದು. ಲೋಪ ಮಾಡಿದ ಮೌಲ್ಯಮಾಪಕರ ವಿರುದ್ಧ ಕಾನೂನುಕ್ರಮ ಜರುಗಿಸಲಾಗುವುದು’ ಎಂದು ಪಿಯು ಮಂಡಳಿ ನಿರ್ದೇಶಕಿ ಕೊನೆಗೂ ಹೇಳಿರುವುದು ಸ್ವಾಗತಾರ್ಹ. ‘ವೃತ್ತಿ ಶಿಕ್ಷಣ ಸೀಟು ಹಂಚಿಕೆಯಲ್ಲೂ ಅನ್ಯಾಯವಾಗುವುದಿಲ್ಲ. ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದ ನಂತರ ಬಂದ ಅಂಕಗಳಿಗೆ ಸರಿಯಾಗಿ ಸಿಇಟಿ ರ‍್ಯಾಂಕಿಂಗ್‌‌ ನೀಡಲಾಗುವುದು’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಈ ಸ್ಪಷ್ಟನೆಯನ್ನು ಗೊಂದಲ ಉಂಟಾದ ಮೊದಲ ದಿನವೇ ಎಲ್ಲರಿಗೂ ಅರ್ಥವಾಗುವಂತೆ ಸಿಬ್ಬಂದಿಯೇ ತಿಳಿಹೇಳಿದ್ದರೆ ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲ. ಅದನ್ನು ಬಿಟ್ಟು ಉದ್ಧಟತನದಿಂದ ಉತ್ತರಗಳನ್ನು ನೀಡಿದ್ದರಿಂದಲೇ ಗೊಂದಲ ಹೆಚ್ಚಾಗಿದೆ. ಅದೂ ಅಲ್ಲದೆ, ಪಿಯುಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ತಯಾರಿಸುವಾಗಲೇ ತಪ್ಪುಪ್ರಶ್ನೆಗಳನ್ನು ಕೊಟ್ಟದ್ದು ಈ ಸಲ ಆರಂಭದಲ್ಲೇ ಗೊಂದಲ ಮೂಡಿಸಿತ್ತು. ತಪ್ಪು ಪ್ರಶ್ನೆಗೆ ಸಂಬಂಧಿಸಿ ಕೃಪಾಂಕ ಕೊಡುವ ಮಂಡಳಿಯ ನಿರ್ಧಾರವೂ ವಿದ್ಯಾರ್ಥಿಗಳಲ್ಲಿ ಅಸಮಾಧಾನ ಉಂಟು ಮಾಡಿತ್ತು. ಈಗ ವೆಬ್‌ಸೈಟ್‌ನಲ್ಲಿ ಫಲಿತಾಂಶಗಳನ್ನು ಪ್ರಕಟಿಸುವಾಗ ವ್ಯತ್ಯಾಸಗಳು ಕಂಡುಬಂದಿರುವುದು ಇಲಾಖೆ ಅಧಿಕಾರಿಗಳ ಅಪಕ್ವ ಕಾರ್ಯನಿರ್ವಹಣೆಗೆ ನಿದರ್ಶನ ಎನ್ನಬಹುದು. ಇಲಾಖೆಯಲ್ಲಿ ಅದಕ್ಷತೆ ಮತ್ತು ಉಡಾಫೆತನ ತೋರುವ ಸಿಬ್ಬಂದಿಯನ್ನು ಹದ್ದುಬಸ್ತಿನಲ್ಲಿಡಲು ಶಿಕ್ಷಣ ಸಚಿವರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆಯೇ ಮೌಲ್ಯಮಾಪಕರು ತಪ್ಪಿತಸ್ಥರೆಂದು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ತೀರಾ ದುಬಾರಿಯೂ, ಅತ್ಯಂತ ಸ್ಪರ್ಧಾತ್ಮಕವೂ ಆಗಿರುವ ಶಿಕ್ಷಣ ವ್ಯವಸ್ಥೆ ಪೋಷಕರಲ್ಲಿ ನೂರೆಂಟು ಆತಂಕಗಳನ್ನು ಉಂಟುಮಾಡಿದೆ. ಅದೇ ಹೊತ್ತಲ್ಲಿ ಅನಗತ್ಯ ಗೊಂದಲಗಳ ಮೂಲಕ ಪಿಯು ಮಂಡಳಿಯೂ ಪೋಷಕರ ಆತಂಕಗಳನ್ನು ದುಪ್ಪಟ್ಟುಗೊಳಿಸುವುದು ಸರಿಯಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.