ಪಲ್‌ಮೈರಾ ವಿನಾಶ ತಡೆ ವಿಶ್ವ ಸಮುದಾಯದ ಹೊಣೆ ವಿಶ್ವದ ಶಾಂತಿಪ್ರಿಯ ಜನರಲ್ಲಿ ಆತಂಕ ಮೂಡಿಸಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಕೆಂಗಣ್ಣು ಈಗ ಪಾರಂಪರಿಕ ಸ್ಮಾರಕಗಳುಳ್ಳ ಸಿರಿಯಾದ ಪ್ರಾಚೀನ ನಗರ ಪಲ್‌ಮೈರಾ ಮೇಲೆ ಬಿದ್ದಿದೆ. ಅಲ್ಲಿನ ವಸ್ತುಸಂಗ್ರಹಾಲಯದಲ್ಲಿ ಇರುವ ಕೆಲವು ಕಲಾಕೃತಿಗಳನ್ನು ಉಗ್ರರು ಈಗಾಗಲೆ ಹಾಳುಗೆಡವಿದ್ದಾರೆ. ಕಲಾತ್ಮಕ ಕಂಬಗಳು, ರಂಗಮಂದಿರ, ಸಮಾಧಿಗಳು ಮತ್ತು ಪುರಾತನ ಮಂದಿರಗಳು ಅವರ ಕೋಪಕ್ಕೆ ಸಿಲುಕಿ ಯಾವುದೇ ಕ್ಷಣದಲ್ಲಿ ನಿರ್ನಾಮವಾಗುವ ಭೀತಿ ಆವರಿಸಿದೆ. ಇದೇನಾದರೂ ನಿಜವಾಗಿಬಿಟ್ಟರೆ ಜಗತ್ತು ಅಮೂಲ್ಯ ಸ್ಮಾರಕಗಳನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. ಎರಡು ಸಾವಿರ ವರ್ಷಗಳಷ್ಟು ಹಳೆಯ ಮತ್ತು ರೋಮನ್ನರ ಕಾಲದ ಈ ಸ್ಮಾರಕಗಳು ವರ್ಷಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದವು. 2013ರಲ್ಲಿ ಇವನ್ನು ಅಪಾಯದಲ್ಲಿ ಇರುವ ಪಾರಂಪರಿಕ ತಾಣಗಳ ಪಟ್ಟಿಗೆ ಯುನೆಸ್ಕೊ ಸೇರಿಸಿತ್ತು. ಇವನ್ನು ಕಾಪಾಡುವುದಕ್ಕಾಗಿ ವಸ್ತುಸಂಗ್ರಹಾಲಯದಲ್ಲಿನ ಅನೇಕ ಅಮೂಲ್ಯ ಕಲಾಕೃತಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆದರೆ ಸಾಗಿಸಲು ಸಾಧ್ಯವಿಲ್ಲದ ಅನೇಕ ಕಲಾಕೃತಿಗಳು ಈಗಲೂ ಅಲ್ಲಿಯೇ ಇವೆ. ಇವನ್ನು ರಕ್ಷಿಸಲು ಇಡೀ ವಿಶ್ವ ಏನಾದರೂ ಮಾಡಬೇಕು ಎಂದು ಸಿರಿಯಾ ಪ್ರಾಚ್ಯವಸ್ತು ಇಲಾಖೆ ಮುಖ್ಯಸ್ಥರು ಮೊರೆ ಇಟ್ಟಿದ್ದಾರೆ. ‘ಇದು ಇಡೀ ಜಗತ್ತಿನ ಹೊಣೆ ಮತ್ತು ಕರ್ತವ್ಯ’ ಎಂಬ ಅವರ ಮಾತಿನಲ್ಲಿ ಕಳಕಳಿ, ಆತಂಕ ಎರಡೂ ಕಾಣುತ್ತವೆ. ಆದರೆ ಉಗ್ರರಿಗೆ ಇವೆಲ್ಲ ರುಚಿಸುವಂತೆ ಕಾಣುತ್ತಿಲ್ಲ. ಈ ಹಿಂದೆ ತಮ್ಮ ಪ್ರಾಬಲ್ಯದ ಪ್ರದೇಶಗಳಲ್ಲಿನ ಪ್ರಾಚೀನ ಸ್ಮಾರಕಗಳನ್ನು ಉಗ್ರರು ಕರುಣೆಯಿಲ್ಲದೆ ನಿರ್ನಾಮ ಮಾಡಿದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಸುಮಾರು 14 ವರ್ಷಗಳ ಹಿಂದೆ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಆಡಳಿತ ಇದ್ದಾಗ ಬಾಮಿಯಾನ್ ಪರ್ವತ ಶ್ರೇಣಿಯಲ್ಲಿ ಕೆತ್ತಲಾಗಿದ್ದ ವಿಶ್ವದ ಅತಿ ಎತ್ತರದ ಮತ್ತು ಸುಮಾರು 1500 ವರ್ಷಗಳಷ್ಟು ಹಳೆಯ ಬುದ್ಧನ ಶಿಲಾ ಪ್ರತಿಮೆಯನ್ನು ಯುದ್ಧ ಟ್ಯಾಂಕ್ ಬಳಸಿ ನಾಶಪಡಿಸಲಾಗಿತ್ತು. 2012ರಲ್ಲಿ ಅಲ್ ಕೈದಾ ಬೆಂಬಲಿತ ಉಗ್ರರು ಟಿಂಬುಕ್ಟು ಪಟ್ಟಣದಲ್ಲಿ ಪಾರಂಪರಿಕ ಸ್ಥಳಗಳನ್ನು ಹಾಳುಗೆಡವಿದ್ದರು. ಅದೇ ವರ್ಷ ಲಿಬಿಯಾದಲ್ಲಿ ಅಲ್ ಶಾಬ್ ಅಲ್ ದಹಮನ್‌ ಸಮಾಧಿಯನ್ನು ನೆಲಸಮ ಮಾಡಲಾಗಿತ್ತು. ಕಳೆದ ವರ್ಷ ಇರಾಕ್‌ನ ಮೋಸುಲ್ ಪಟ್ಟಣದ ನಬಿ ಯುನುಸ್ ಮಂದಿರ, ಕಳೆದ ಮಾರ್ಚ್‌ನಲ್ಲಿ ಅಸ್ಸೀರಿಯನ್ ನಾಗರಿಕತೆಗೆ ಸೇರಿದ ನಿಮ್ರುದ್ ಪಟ್ಟಣ ಇದೇ ರೀತಿ ಉಗ್ರರ ಅಸಹನೆಗೆ ಸಿಲುಕಿ ನಿರ್ನಾಮವಾಗಿದ್ದವು. ಇವು ಮೂರ್ತಿ ಪೂಜಾ ಸ್ಥಳಗಳಾಗಲೀ, ವಿಗ್ರಹ ಆರಾಧನಾ ಕೇಂದ್ರಗಳಾಗಲೀ ಅಲ್ಲ. ನಮ್ಮ ಪೂರ್ವಿಕರ ಕಲಾ ಸಾಮರ್ಥ್ಯದ ಪ್ರತೀಕಗಳು ಮಾತ್ರ. ಇವನ್ನೆಲ್ಲ ಇಸ್ಲಾಂ ವಿರೋಧಿ ಎಂದು ಭಾವಿಸುವುದು ತಪ್ಪು. ಏಕೆಂದರೆ ವಿಶ್ವದ ಅನೇಕ ಪ್ರಮುಖ ಪಾರಂಪರಿಕ ತಾಣಗಳನ್ನು ಕಾಪಾಡಿಕೊಂಡು ಬಂದಿರುವುದು ಅರಬ್ ಮತ್ತು ಇಸ್ಲಾಮಿಕ್ ದೇಶಗಳು. ಈ ಸತ್ಯವನ್ನು ಉಗ್ರಗಾಮಿಗಳು ಮನದಟ್ಟು ಮಾಡಿಕೊಂಡಿದ್ದರೆ ಪರಂಪರೆಯ ನಾಶಕ್ಕೆ ಕೈಹಾಕುತ್ತಿರಲಿಲ್ಲ. ಅವರಿಗೆ ವಿವೇಕ ಮೂಡಿದರೆ ಇಂಥ ವಿನಾಶಕ್ಕೆ ತೆರೆಬೀಳಬಹುದು. ಅಂಥ ವಿವೇಕ ಮೂಡಿಸುವ ಪ್ರಯತ್ನಗಳು ನಿರಂತರವಾಗಿ ಆಗಬೇಕು. ಸುನ್ನಿ ಪ್ರಾಬಲ್ಯದ ಇಸ್ಲಾಮಿಕ್ ಸ್ಟೇಟ್‌ ಉಗ್ರಗಾಮಿಗಳ ಮೂಲ ಉದ್ದೇಶ ಇರಾಕ್ ಮತ್ತು ಸಿರಿಯಾ ಸೇರಿದಂತೆ ಮಧ್ಯಪ್ರಾಚ್ಯದ ಮೇಲೆ ನಿಯಂತ್ರಣ ಸಾಧಿಸುವುದು. ಆದರೆ ಆ ಉತ್ಸಾಹದಲ್ಲಿ ಪರಂಪರೆಯ ನಾಶಕ್ಕೆ ಕೈ ಹಾಕುವುದು ಸಲ್ಲದ ನಡವಳಿಕೆ. ಏಕೆಂದರೆ ನಮ್ಮ ಹಿಂದಿನ ನಾಗರಿಕತೆಗಳ ಶ್ರೀಮಂತ ಪರಂಪರೆ, ಜ್ಞಾನ, ಕಲಾಪ್ರೀತಿ, ತಾಂತ್ರಿಕ ಕೌಶಲವನ್ನು ಬಿಂಬಿಸುವ ಪಾರಂಪರಿಕ ಸ್ಥಳಗಳು ಇಡೀ ವಿಶ್ವದ ಆಸ್ತಿ. ಈ ರೀತಿ ಕಣ್ಣೆದುರೇ ಸಂಸ್ಕೃತಿ ನಾಶ ಎಗ್ಗಿಲ್ಲದೇ ನಡೆಯುವುದು ಕಾಣುತ್ತಿದ್ದರೂ ಜಗತ್ತು ಅಸಹಾಯಕವಾಗಿರುವುದು ದೊಡ್ಡ ದುರಂತ. ವಿವಿಧ ಭಯೋತ್ಪಾದನಾ ಸಂಘಟನೆಗಳನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿರುವ ಅಮೆರಿಕ ನೇತೃತ್ವದ ಪಾಶ್ಚಾತ್ಯ ದೇಶಗಳು ಸಹ ಈ ಉಸಾಬರಿ ತಮಗೇಕೆ ಎಂಬಂತೆ ಮೌನ ವಹಿಸಿರುವುದು ಸರಿಯಲ್ಲ. ಇಡೀ ವಿಶ್ವ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಹಿರಿಯರಿಂದ ಬಳುವಳಿಯಾಗಿ ಬಂದ ತಾಣಗಳ ರಕ್ಷಣೆಗೆ ಜಾಗತಿಕ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸಬೇಕು. ನೇಪಾಳದಲ್ಲಿ ನಡೆದಂತೆ ಪ್ರಾಕೃತಿಕ ವಿಕೋಪಗಳಿಂದ ಪಾರಂಪರಿಕ ತಾಣಗಳು ನೆಲಸಮವಾದರೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಪೂರ್ವಗ್ರಹಪೀಡಿತ ವ್ಯಕ್ತಿಗಳು, ಸಂಘಟನೆಗಳು ನಾಶಕ್ಕೆ ಇಳಿದರೆ ತಕ್ಕ ಪಾಠ ಕಲಿಸಬೇಕು. ಆಗ ಮಾತ್ರ ಇಂಥ ವಿನಾಶ ತಡೆಯಲು ಸಾಧ್ಯವಾಗಬಹುದೇನೋ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.