ಅಕ್ರಮ ಲಾಟರಿ ದಂಧೆ ಎಲ್ಲರ ಹೆಸರೂ ಬಯಲಾಗಲಿ ಒಂಬತ್ತು ವರ್ಷಗಳ ಹಿಂದೆ ಸರ್ಕಾರ ನಿಷೇಧಿಸಿದ್ದ ಒಂದಂಕಿ ಲಾಟರಿ, ರಾಜ್ಯದಲ್ಲಿ ಗುಟ್ಟಾಗಿ ಅಕ್ರಮವಾಗಿ ಮುಂದುವರಿದಿರುವುದು ಇದೀಗ ಬಯಲಾಗಿದೆ. ಈ ಅಕ್ರಮ ಲಾಟರಿ ದಂಧೆಗೆ ಹಿರಿ-ಕಿರಿಯ ಪೊಲೀಸ್‌ ಅಧಿಕಾರಿಗಳೇ ಶ್ರೀರಕ್ಷೆ ಒದಗಿಸಿದ್ದರು ಎನ್ನುವ ಆತಂಕಕಾರಿ ಸಂಗತಿಯೂ ಗೊತ್ತಾಗಿದೆ. ಒಂದಂಕಿ ಲಾಟರಿ ದಂಧೆಯ ರೂವಾರಿ ಪಾರಿ ರಾಜನ್‌ ಎಂಬಾತನ ಬಂಧನದ ಬಳಿಕ, ಆತನ ಜತೆಗೆ ಶಾಮೀಲಾಗಿದ್ದ ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳ ಹೆಸರು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಅಕ್ರಮ ಲಾಟರಿ ದಂಧೆಯ ಆಳ-ಅಗಲಗಳ ಬಗ್ಗೆ ಸಮಗ್ರ ವಿವರಗಳನ್ನು ತಿಳಿದುಕೊಳ್ಳಲು ಮುಖ್ಯಮಂತ್ರಿ ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಸಿಐಡಿ ನೀಡಿದ ಮಧ್ಯಂತರ ವರದಿಯ ಆಧಾರದಲ್ಲಿ ಅಕ್ರಮ ಲಾಟರಿ ದಂಧೆಯ ರೂವಾರಿ ಜತೆಗೆ ಸಂಪರ್ಕ ಇಟ್ಟುಕೊಂಡಿದ್ದ ಇಬ್ಬರು ಉನ್ನತ ಪೊಲೀಸ್‌ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ ತನಿಖೆ ಕೈಗೊಂಡಿರುವುದೂ ಸ್ವಾಗತಾರ್ಹ. ಅದರಲ್ಲೂ ಹಲವು ಮಹತ್ವದ ಹುದ್ದೆಗಳನ್ನು ನಿಭಾಯಿಸಿರುವ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಅವರು ಅಮಾನತಾಗಿರುವುದನ್ನು ಗಮನಿಸಿದರೆ, ಈ ಕಳ್ಳದಂಧೆಯ ಆಳ-ಅಗಲದ ಬಗ್ಗೆ ಆತಂಕ ಮೂಡುತ್ತದೆ. ಸುಮಾರು 35 ಮಂದಿ ಹಿರಿ-ಕಿರಿಯ ಪೊಲೀಸ್‌ ಅಧಿಕಾರಿಗಳು ಈ ಕಳ್ಳಜಾಲದ ಬೆಂಬಲಕ್ಕೆ ನಿಂತಿದ್ದರು; ಅವರಲ್ಲಿ ಹಲವು ನಿವೃತ್ತ ಉನ್ನತ ಅಧಿಕಾರಿಗಳೂ ಸೇರಿದ್ದಾರೆ ಎನ್ನುವ ವದಂತಿಯೂ ಇದೆ. ಅಮಾನತಾಗಿರುವ ಅಲೋಕ್‌ ಕುಮಾರ್‌ ಅವರು ಪಾರಿ ರಾಜನ್‌ಗೆ ಸೇರಿದ ಅತಿಥಿಗೃಹದಲ್ಲಿ ಸಾಕಷ್ಟು ಸಲ ತಂಗಿದ್ದರು, ತಮ್ಮ ಕಚೇರಿಯಲ್ಲೇ ಆತನನ್ನು ಭೇಟಿಯಾಗಿದ್ದರು, ಆತ ಏರ್ಪಡಿಸಿದ ಔತಣಕೂಟಗಳಲ್ಲಿ ಭಾಗವಹಿಸಿದ್ದರು ಎನ್ನುವುದು ಏನನ್ನು ಸೂಚಿಸುತ್ತದೆ? ‘ಆತ ನನ್ನ ಹಿತೈಷಿ; ಆದರೆ ಆತ ಈ ಕಳ್ಳದಂಧೆ ನಡೆಸುತ್ತಿದ್ದಾನೆಂದು ನನಗೆ ಗೊತ್ತಿರಲಿಲ್ಲ’ ಎಂದು ಅಲೋಕ್‌ ಕುಮಾರ್‌ ಹೇಳಿರುವುದು ಹಾಸ್ಯಾಸ್ಪದವೆಂಬಂತೆ ಕಾಣಿಸುತ್ತಿದೆ. ಉನ್ನತ ಪೊಲೀಸ್‌ ಹುದ್ದೆಯಲ್ಲಿರುವವರಿಗೆ ಯಾರಾದರೂ ಸುಖಾಸುಮ್ಮನೆ ಬೆಲೆಬಾಳುವ ಉಡುಗೊರೆಗಳನ್ನು ಕೊಡುತ್ತಾರೆಯೆ? ಅಂತಹ ಉಡುಗೊರೆಗಳನ್ನೂ, ಔತಣಕೂಟಗಳನ್ನೂ ಒಪ್ಪಿಕೊಳ್ಳುವಾಗ, ಈ ವ್ಯಕ್ತಿಯ ಶ್ರೀಮಂತಿಕೆಯ ಹಿನ್ನೆಲೆ ಏನಿರಬಹುದು ಎಂಬ ಸಣ್ಣ ಅನುಮಾನವೂ ಆ ಅಧಿಕಾರಿಗೆ ಬರಲಿಲ್ಲವೆ? ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿದಾಕ್ಷಣ ಸರ್ಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ. ಈ ಕಳ್ಳದಂಧೆಗೆ ಬೆಂಬಲವಾಗಿ ನಿಂತಿರುವ ಎಲ್ಲ ಉನ್ನತ ಅಧಿಕಾರಿಗಳ ಹೆಸರೂ ಬಯಲಾಗಬೇಕು. ಅವರು ನಿವೃತ್ತರಾಗಿದ್ದರೂ, ಎಷ್ಟೇ ಪ್ರಭಾವ ಶಾಲಿಗಳಾಗಿದ್ದರೂ ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡಬಾರದು. ಸಿಐಡಿ ನೀಡಿರುವ ಮಧ್ಯಂತರ ವರದಿಯನ್ನು ಏಕೆ ಬಹಿರಂಗಪಡಿಸಬಾರದು? ಈ ಕಳ್ಳ ಲಾಟರಿ ಜಾಲದ ಬೇರುಗಳು ನೆರೆಯ ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರಗಳಲ್ಲೂ ಹಬ್ಬಿರುವ ಶಂಕೆ ಇದೆ. ಅಗತ್ಯಬಿದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲೂ ರಾಜ್ಯ ಸರ್ಕಾರ ಹಿಂಜರಿಯಬಾರದು. ಒಂದು ಹಂತದಲ್ಲಿ ಸಾಮಾಜಿಕ ಜಾಡ್ಯವಾಗಿ ಬೆಳೆದು, ಸಾವಿರಾರು ಕುಟುಂಬಗಳನ್ನು ಬೀದಿಪಾಲು ಮಾಡಿದ್ದ ಒಂದಂಕಿ ಲಾಟರಿಯನ್ನು ನಿಷೇಧಿಸುವುದರ ಮೂಲಕ ಸರ್ಕಾರ ಜನರಿಗೆ ಒಳ್ಳೆಯದನ್ನೇ ಮಾಡಿದೆ. ಆದರೆ ಲಾಟರಿ, ಜೂಜು ಮತ್ತಿತರ ವ್ಯಸನಗಳು ಕೇವಲ ನಿಷೇಧದಿಂದ ಸಂಪೂರ್ಣ ನಿಲ್ಲುತ್ತವೆ ಎಂದುಕೊಳ್ಳುವುದೂ ತಪ್ಪು. ಸರ್ಕಾರ ನಿಷೇಧ ಹೇರಿದರೆ ಅದು ಗುಟ್ಟಾಗಿ ಅಕ್ರಮದ ರೂಪದಲ್ಲಿ ಬೆಳೆಯುತ್ತದೆ. ಅದರಲ್ಲೂ ಕಾನೂನು- ಶಿಸ್ತು ಕಾಪಾಡಬೇಕಾದ ಉನ್ನತ ಪೊಲೀಸ್‌ ಅಧಿಕಾರಿಗಳೇ ಈ ಕಳ್ಳದಂಧೆಗೆ ಬೆಂಬಲವಾಗಿ ನಿಂತಿರುವುದು ಆಳುವ ಅಧಿಕಾರಸ್ಥರಿಗೆ ಇಷ್ಟು ವರ್ಷಗಳ ಕಾಲ ಗೊತ್ತಾಗಲಿಲ್ಲವೆಂದರೆ, ಚಿಂತಿಸಬೇಕಾದ ವಿಷಯವೇ. ಜೆಡಿ(ಎಸ್‌) ಮುಖಂಡ ಎಚ್‌.ಡಿ. ಕುಮಾರಸ್ವಾಮಿ ಈ ಕುರಿತು ಸುಳಿವು ನೀಡಿದ್ದರೂ ಎಚ್ಚರಗೊಳ್ಳದಿದ್ದುದು ಲೋಪವೇ ಸರಿ. ಆಡಳಿತದಲ್ಲಿ ಬಿಗಿ ನೀತಿಯನ್ನು ಅನುಸರಿಸಿ, ಅಧಿಕಾರಿಗಳನ್ನೂ ಹದ್ದುಬಸ್ತಿನಲ್ಲಿ ಇಡದಿದ್ದರೆ ಯಾವ ನಿಷೇಧದಿಂದಲೂ ಫಲವಿಲ್ಲ. ನಿಷೇಧ ವಿಧಿಸುವುದರ ಜತೆಗೇ, ಸಮಾಜದಲ್ಲಿ ಅನಾರೋಗ್ಯಕರ ವ್ಯಸನಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸವನ್ನೂ ಸರ್ಕಾರ ಮಾಡಬೇಕಿದೆ. ಸಾಮಾಜಿಕ ಕಾರ್ಯಕ್ರಮಗಳ ಮೂಲಕ ವ್ಯಸನಗಳ ಬಗ್ಗೆ ಎಚ್ಚರ ಮೂಡಿಸಿ, ಆರೋಗ್ಯಪೂರ್ಣ ಸಮಾಜವನ್ನು ರೂಪಿಸುವ ಶಿಕ್ಷಣ ನೀಡುವುದು ಸರ್ಕಾರದ ನೈತಿಕ ಕರ್ತವ್ಯವೂ ಹೌದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.