ಮಕ್ಕಳಿಗೆ ಪೌಷ್ಟಿಕ ಆಹಾರ ಮಡಿವಂತಿಕೆ ಅನಗತ್ಯ ಪೌಷ್ಟಿಕಾಂಶದ ಕೊರತೆಯಿಂದ ದೇಶದಲ್ಲಿ ಲಕ್ಷಾಂತರ ಮಕ್ಕಳು ಬಳಲುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟದ ಜತೆಗೆ ಬೇಯಿಸಿದ ಮೊಟ್ಟೆ ಅಥವಾ ಮೊಟ್ಟೆ ಕರಿ ನೀಡುವುದು ಪೌಷ್ಟಿಕಾಂಶ ತುಂಬಲು ಅತ್ಯಂತ ಸುಲಭದ ದಾರಿ ಎನ್ನುವುದನ್ನು ಹಲವು ರಾಜ್ಯಗಳು ಈಗಾಗಲೇ ಮನಗಂಡಿವೆ. ಕೇಂದ್ರ ಸರ್ಕಾರವು ಮಕ್ಕಳ ರಕ್ತಹೀನತೆ ಮತ್ತು ಪೌಷ್ಟಿಕಾಂಶ ಕೊರತೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಲೆಂದೇ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್‌) ಜಾರಿಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು, ತಮ್ಮ ರಾಜ್ಯದಲ್ಲಿ ಅಂಗನವಾಡಿಯ ಮಕ್ಕಳಿಗೆ ಬೇಯಿಸಿದ ಮೊಟ್ಟೆ ಒದಗಿಸಲು ಸಾಧ್ಯವಿಲ್ಲ ಎಂದು ಹಟ ಹಿಡಿದಿದ್ದಾರೆ. ಮಧ್ಯಪ್ರದೇಶದ ಹಿಂದುಳಿದ ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ಅಲಿರಾಜ್‌ಪುರ್‌, ಮಾಂಡ್ಲಾ ಮತ್ತು ಹೊಶಾಂಗಾಬಾದ್‌ ಜಿಲ್ಲೆಗಳಲ್ಲಿ 3ರಿಂದ 6 ವರ್ಷದ ವಯಸ್ಸಿನ ಮಕ್ಕಳಿಗೆ ಐಸಿಡಿಎಸ್‌ ಅಡಿಯಲ್ಲಿ ಬೇಯಿಸಿದ ಮೊಟ್ಟೆ ಒದಗಿಸಲು ಕೇಂದ್ರ ಸರ್ಕಾರ ಸೂಚಿಸಿದ್ದರೂ, ಮುಖ್ಯಮಂತ್ರಿ ಚೌಹಾಣ್‌ ಅದಕ್ಕೆ ಅಡ್ಡಿಯಾಗಿದ್ದಾರೆ. ಚೌಹಾಣ್‌ ಅವರು ಸ್ವತಃ ಸಸ್ಯಾಹಾರಿಯಾಗಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಜತೆಗೇ ಅವರ ಪಕ್ಷವಾದ ಬಿಜೆಪಿಯ ಬಲಪಂಥೀಯ ಸಿದ್ಧಾಂತಗಳಿಗೆ ಈ ನಿಲುವು ಪೂರಕವಾಗಿರಲೂಬಹುದು. ಪೋಷಕಾಂಶಗಳ ಅತ್ಯಂತ ಸಮೃದ್ಧ ಆಹಾರ ಮೊಟ್ಟೆ ಎನ್ನುವುದು ಎಲ್ಲ ಆಹಾರತಜ್ಞರಿಗೂ ಗೊತ್ತಿರುವ ಸತ್ಯ. ವೈಯಕ್ತಿಕವಾಗಿ ತಾನು ಇಷ್ಟಪಡದ ಆಹಾರವನ್ನು ರಾಜ್ಯದ ಶಾಲಾಮಕ್ಕಳು ತಿನ್ನಬಾರದು ಎಂಬ ಧೋರಣೆ ಮುಖ್ಯಮಂತ್ರಿಗಳಿಗೆ ಇದ್ದರೆ, ಅದು ಅವರ ಸಂಕುಚಿತ ಮನಸ್ಸನ್ನಷ್ಟೇ ತೋರಿಸುತ್ತದೆ. ದೇಶದಲ್ಲೇ ಅತ್ಯಂತ ಹೆಚ್ಚು ಹಸಿವು ಮತ್ತು ಪೌಷ್ಟಿಕಾಂಶ ಕೊರತೆಯಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ ಮುಂಚೂಣಿಯಲ್ಲಿದೆ. ಮಧ್ಯಪ್ರದೇಶದಲ್ಲಿ ಶೇಕಡ 20ಕ್ಕೂ ಹೆಚ್ಚು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿದ್ದಾರೆ. 5 ವರ್ಷಕ್ಕಿಂತ ಕೆಳಗಿನ ವಯಸ್ಸಿನವರಲ್ಲಿ ಶೇಕಡ 51.9ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದವರು. ಬುಡಕಟ್ಟು ಜನಾಂಗದ ಮಕ್ಕಳಲ್ಲಂತೂ ಶೇ 48.9ರಷ್ಟು ಮಕ್ಕಳು ಈ ಎರಡೂ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲೆಂದೇ ಅಂಗನವಾಡಿ ಮಕ್ಕಳಿಗೆ ಬೇಯಿ ಸಿದ ಮೊಟ್ಟೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿ ಸಿದೆ. ರಾಜ್ಯದ ಮಕ್ಕಳು ಎದುರಿಸುತ್ತಿರುವ ನೈಜ ಸಮಸ್ಯೆಗಳೇನು ಎನ್ನುವುದನ್ನು ಗ್ರಹಿಸಲು ಮುಖ್ಯ ಮಂತ್ರಿಯೊಬ್ಬರಿಗೆ ಅವರ ವೈಯಕ್ತಿಕ ಇಷ್ಟಾನಿಷ್ಟ ಗಳು ಅಡ್ಡ ಬರುತ್ತವೆ ಎಂದಾದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ತಾನು ತಿನ್ನಲಾಗದ್ದನ್ನು ರಾಜ್ಯದ ಪ್ರಜೆಗಳೂ ತಿನ್ನಬಾರದು ಎಂದು ಬಯಸುವುದು ಪೂರ್ವಗ್ರಹದ ಪರಮಾವಧಿ ಎನ್ನದೇ ನಿರ್ವಾಹವಿಲ್ಲ. ಬುಡಕಟ್ಟು ಸಮುದಾಯದ ಮಕ್ಕಳ ಆಹಾರದ ಆಯ್ಕೆ ಮತ್ತು ಹಕ್ಕಿನ ಮೇಲೆ ತನ್ನ ವೈಯಕ್ತಿಕ ಇಷ್ಟಗಳನ್ನು ಹೇರುವುದು ಮುಖ್ಯಮಂತ್ರಿ ಯಂತಹ ಗೌರವಾನ್ವಿತ ಹುದ್ದೆಯಲ್ಲಿ ಕುಳಿತವರಿಗೆ ಘನತೆ ತರುವ ಕೆಲಸವೂ ಅಲ್ಲ. ಚೌಹಾಣ್‌ ಅವರ ಈ ನಿಲುವನ್ನು ಸಮರ್ಥಿಸಿ ರುವ ಕೆಲವರು, ಅಂಗನವಾಡಿಗಳಲ್ಲಿ ಮೊಟ್ಟೆಯ ಬದಲಿಗೆ ಹಾಲು ಅಥವಾ ಬಾಳೆಹಣ್ಣು ನೀಡಿದರೆ ಅದಕ್ಕಿಂತ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗು ತ್ತವೆ ಎನ್ನುವ ಅಡ್ಡವಾದ ಮಂಡಿಸಿದ್ದಾರೆ. ಆಹಾರ ತಜ್ಞರ ಪ್ರಕಾರ, ಮೊಟ್ಟೆಯಲ್ಲಿ 13 ಗ್ರಾಮ್‌ಗಳಷ್ಟು ಪ್ರೊಟೀನ್‌ ಇದ್ದರೆ, ಒಂದು ಗ್ಲಾಸ್‌ ಹಾಲಿನಲ್ಲಿ 3.4 ಗ್ರಾಮ್‌ ಮತ್ತು ಒಂದು ಬಾಳೆಹಣ್ಣಿನಲ್ಲಿ 1.1 ಗ್ರಾಮ್‌ನಷ್ಟು ಪ್ರೊಟೀನ್‌ ಮಾತ್ರ ಇರುತ್ತದೆ. ವಿಟಮಿನ್‌ ಸಿ ಒಂದನ್ನು ಹೊರತುಪಡಿಸಿ, ಬೆಳೆಯುವ ಮಕ್ಕಳಿಗೆ ಬೇಕಾದ ಎಲ್ಲ ರೀತಿಯ ಪೌಷ್ಟಿಕಾಂಶಗಳೂ ಮೊಟ್ಟೆಯಲ್ಲಿವೆ. ಮೊಟ್ಟೆ ಸೇವಿಸುವ ಮೂಲಕ ಮಕ್ಕಳು ಆರೋಗ್ಯಕರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಶೀಘ್ರವಾಗಿ ಸಾಧಿಸಬಹುದು. ದೇಶದ ಬಹುತೇಕ ರಾಜ್ಯಗಳಲ್ಲಿ ಮಕ್ಕಳ ಪೌಷ್ಟಿಕಾಂಶ ಕೊರತೆಯನ್ನು ನೀಗಿಸಲು ಅಂಗನವಾಡಿಗಳಲ್ಲಿ ಮೊಟ್ಟೆ ಗಳನ್ನು ಕೊಡಲಾಗುತ್ತಿದೆ. ಯಾರು ಮೊಟ್ಟೆ ತಿನ್ನಲು ಬಯಸುವುದಿಲ್ಲವೋ ಅವರಿಗೆ ಎಲ್ಲೂ ಬಲವಂತ ಮಾಡಿ ತಿನ್ನಿಸುತ್ತಿಲ್ಲ. ಆಹಾರದ ಆಯ್ಕೆ ಆಯಾ ವ್ಯಕ್ತಿಯ ವ್ಯಕ್ತಿಗತ ನಿರ್ಧಾರ. ದೇಶ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಸಂಘಟಿತ ಶಿಶು ಅಭಿವೃದ್ಧಿ ಯೋಜನೆಯ ಯಶಸ್ಸಿಗೆ ಎಲ್ಲ ರಾಜ್ಯಗಳೂ ಒಟ್ಟಾಗಿ ಶ್ರಮಿಸಬೇಕಿದೆ. ಅದನ್ನು ಬಿಟ್ಟು ಸಂಕುಚಿತ ಮನಸ್ಸಿನಿಂದ ವರ್ತಿಸುವುದು ಎಳ್ಳಷ್ಟೂ ಸರಿಯಲ್ಲ. ಚೌಹಾಣ್‌ ಅವರು ನಿರ್ಮೋಹದಿಂದ ವಿಷಯಗಳನ್ನು ಪರಿಶೀಲಿಸಿದರೆ ಅವರಿಗೆ ಆಹಾರ ತಜ್ಞರ ವಾದ ಅರ್ಥವಾಗುತ್ತದೆ. ತಮ್ಮ ನಿರ್ಧಾರವನ್ನು ಅವರು ಶೀಘ್ರ ಮರುಪರಿಶೀಲಿಸಲಿ. ಪೌಷ್ಟಿಕಾಂಶ ಕೊರತೆಯ ಮಕ್ಕಳನ್ನು ಅನಾರೋಗ್ಯದಿಂದ ರಕ್ಷಿಸಲು ಮನಸ್ಸು ಮಾಡಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.