ಭಾರತ –ಬಾಂಗ್ಲಾ ಬಾಂಧವ್ಯ ಬಲವರ್ಧನೆಗೆ ಹೊಸ ಹೆಜ್ಜೆ ಎರಡು ದಿನಗಳ ಬಾಂಗ್ಲಾದೇಶದ ಭೇಟಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಐತಿಹಾಸಿಕ ಭೂ ಗಡಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 41 ವರ್ಷಗಳಿಂದ ನನೆಗುದಿಗೆ ಸಿಲುಕಿದ್ದ ಉಭಯ ದೇಶಗಳ ಗಡಿ ವಿವಾದಕ್ಕೆ ಕಡೆಗೂ ತೆರೆ ಬಿದ್ದಿದೆ ಎಂಬುದು ಮುಖ್ಯವಾದದ್ದು. 1974ರಲ್ಲೇ ಭೂಪ್ರದೇಶಗಳ ವಿನಿಮಯಕ್ಕಾಗಿ ಇಂದಿರಾ– ಮುಜೀಬ್ ಒಪ್ಪಂದವಾಗಿತ್ತು. ಆದರೆ ಭಾರತದೊಳಗಿನ ಆಂತರಿಕ ರಾಜಕಾರಣದಿಂದ ಇದು ಜಾರಿಗೆ ಬಂದಿರಲಿಲ್ಲ. ಆದರೆ ಈಗ ಈ ಒಪ್ಪಂದ ಅನುಷ್ಠಾನಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ಸಂವಿಧಾನದ 119ನೇ ತಿದ್ದುಪಡಿ ಮಸೂದೆ ಅಥವಾ ಭಾರತ –ಬಾಂಗ್ಲಾದೇಶ ಭೂ ಗಡಿರೇಖೆ ಒಪ್ಪಂದ (ಎಲ್‌ಬಿಎ) ಜಾರಿಗೆ ಸಂಬಂಧಿಸಿದ ಐತಿಹಾಸಿಕ ಮಸೂದೆಗೆ ಕಳೆದ ತಿಂಗಳಷ್ಟೇ ಸಂಸತ್ ಅನುಮೋದನೆ ನೀಡಿತ್ತು. 1947ರಲ್ಲಿ ರಾಷ್ಟ್ರ ವಿಭಜನೆಯೊಂದಿಗೇ ಆರಂಭವಾಗಿದ್ದ ಈ ಸಮಸ್ಯೆ ಅಂತೂ ಪರಿಹಾರ ಕಾಣುತ್ತಿರುವುದು ಸಮಾಧಾನಕರ. ಈ ಒಪ್ಪಂದದ ಪ್ರಕಾರ, 10 ಸಾವಿರ ಎಕರೆ ಭೂಪ್ರದೇಶ ಬಾಂಗ್ಲಾದೇಶಕ್ಕೆ ಹಾಗೂ 510 ಎಕರೆ ಪ್ರದೇಶ ಭಾರತಕ್ಕೆ ವಿನಿಮಯಗೊಳ್ಳಲಿವೆ. ಆದರೆ ಇವು ಕೇವಲ ಸೈದ್ಧಾಂತಿಕ ಅಂಕಿಅಂಶಗಳು. ಎರಡೂ ರಾಷ್ಟ್ರಗಳ ತೀರಾ ಒಳಭಾಗಗಳಲ್ಲಿ ಪರದೇಶದ ನೆಲದಿಂದ ಆವೃತವಾದಂತಹ ಈ ಭೂಪ್ರದೇಶದ ನೆಲೆಗಳಿವೆ. ಭಾರತದೊಳಗೆ 51 ಬಾಂಗ್ಲಾದೇಶ ನೆಲೆಗಳು ಹಾಗೂ ಬಾಂಗ್ಲಾದೇಶದೊಳಗೆ 111 ಭಾರತೀಯ ನೆಲೆಗಳಿವೆ. ಈ ಒಂದು ಒಪ್ಪಂದದಿಂದ ಪ್ರಮುಖ ಮಾನವೀಯ ಸಮಸ್ಯೆಯೊಂದು ಇತ್ಯರ್ಥವಾದಂತಿದೆ ಎಂಬುದು ಬಹಳ ಮುಖ್ಯವಾದ ಸಂಗತಿ. ಜೊತೆಗೆ ಈ ಪರಾವೃತ ನೆಲೆಗಳಲ್ಲಿದ್ದ 51,549 ಜನರು ತಾವಿರುವಲ್ಲೇ ಇರಲು ಬಯಸಿದ್ದರು ಎಂಬುದೂ ಮುಖ್ಯ. ಭಾರತದೊಳಗಿರುವ ಪರಾವೃತ ನೆಲೆಗಳಲ್ಲಿ 37,334 ಹಾಗೂ ಬಾಂಗ್ಲಾದೇಶದೊಳಗಿರುವ ಭಾರತೀಯ ನೆಲೆಗಳಲ್ಲಿ 14,215 ಜನರಿದ್ದಾರೆ. ಈ ನೆಲೆಗಳಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ಸರ್ಕಾರಿ ವ್ಯವಸ್ಥೆ ಇಲ್ಲ. ಪೂರ್ಣಪ್ರಮಾಣದ ನಾಗರಿಕ ಹಕ್ಕುಗಳಾಗಲಿ, ಮೂಲಸೌಕರ್ಯಗಳಾಗಲಿ ಇಲ್ಲದಂತಹ ಸ್ಥಿತಿಯಲ್ಲಿ ಈ ಜನರ ಬದುಕು ಅತಂತ್ರ ಸ್ಥಿತಿಯದಾಗಿತ್ತು. ಅಪರಾಧ ಹಾಗೂ ವಿಧ್ವಂಸಕ ಕೃತ್ಯಗಳ ತಾಣವಾಗಿ ಭದ್ರತೆಗೂ ಬೆದರಿಕೆ ಒಡ್ಡುವಂತಹದ್ದಾಗಿತ್ತು. ಈಗ ಈ ಒಪ್ಪಂದದಿಂದಾಗಿ ಗಡಿವಿವಾದದ ಜೊತೆ ಒಳನುಸುಳುವಿಕೆಯಂತಹ ಸಮಸ್ಯೆಗಳಿಗೂ ಕಡಿವಾಣ ಬೀಳಬಹುದೆಂಬ ಆಶಯ ಇದೆ. 2011ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಢಾಕಾ ಭೇಟಿ ಪೂರ್ಣ ಯಶಸ್ವಿಯಾಗಲಿಲ್ಲ. ತೀಸ್ತಾ ನದಿ ನೀರು ಹಂಚಿಕೆಯ ಪ್ರಯತ್ನಗಳಿಗೆ ಕಡೆಗಳಿಗೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿರೋಧ ತೋರಿ ಪ್ರಧಾನಿ ಜೊತೆ ಢಾಕಾಗೆ ತೆರಳಿರಲಿಲ್ಲ. ಮಮತಾರ ಈ ನಡೆ ಆಗಿನ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು. ಆದರೆ ಈ ಬಾರಿ, ರಾಜಕೀಯ ಚತುರತೆಯನ್ನು ಬಳಸಿ ಬಾಂಗ್ಲಾ ಪ್ರವಾಸಕ್ಕೆ ಮಮತಾ ಅವರನ್ನು ತಮ್ಮೊಟ್ಟಿಗೆ ಪ್ರಧಾನಿಯವರು ಕರೆದೊಯ್ದಿದ್ದೂ ಗಮನಾರ್ಹ. ಉಭಯ ದೇಶಗಳ ನಡುವಿನ ಒಪ್ಪಂದಗಳ ಅನುಷ್ಠಾನಕ್ಕೆ ಇದು ಬಲ ತುಂಬುವಂತಹದ್ದು. ಹಾಗೆಯೇ ಉಭಯ ದೇಶಗಳ ನಡುವೆ ಸಂಪರ್ಕ ಹೆಚ್ಚಿಸುವ ಸಾಧ್ಯತೆಗಳಿಗೆ ಅವಕಾಶ ತೆರೆದುಕೊಂಡಿರುವುದೂ ಮಹತ್ವದ ಸಂಗತಿ. ಉಭಯ ದೇಶಗಳ ಮಧ್ಯೆ ಬಸ್ ಸೇವೆಗೆ ಚಾಲನೆ ದೊರೆತಿದೆ. ಇನ್ನು ಮುಂದೆ ಬಸ್, ರೈಲು, ಜಲ ಸಾರಿಗೆ ಹಾಗೂ ಸಮುದ್ರ ಮಾರ್ಗದ ಸಂಪರ್ಕಗಳು ಹೆಚ್ಚುವ ಸಾಧ್ಯತೆಗಳಿಗೆ ಇದು ಮುನ್ನುಡಿಯಾಗಲಿದೆ. ಬಾಂಗ್ಲಾದೇಶಕ್ಕೆ ಹೊಸದಾಗಿ ₹12,822 ಕೋಟಿ ನೀಡುವುದೂ ಸೇರಿದಂತೆ ಒಟ್ಟು 22 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಆದರೆ ಈ ಒಪ್ಪಂದಗಳು ಸಮರ್ಪಕವಾಗಿ ಜಾರಿಯಾಗಬೇಕು. ಉಭಯ ದೇಶಗಳು ಒಪ್ಪಂದಕ್ಕೆ ಬರಲು ಸಾಧ್ಯವಾಗದ ವಿಚಾರ ಎಂದರೆ ನೀರು ಹಂಚಿಕೆ. ಎರಡೂ ರಾಷ್ಟ್ರಗಳು 54 ನದಿಗಳನ್ನು ಹಂಚಿಕೊಂಡಿವೆ. ಆದರೆ ಗಂಗಾ ನದಿ ಬಿಟ್ಟರೆ ಬೇರೆ ಯಾವ ನದಿ ನೀರಿನ ಹಂಚಿಕೆ ವಿಚಾರದಲ್ಲಿಯೂ ಒಪ್ಪಂದವಾಗಿಲ್ಲ. ಬಾಂಗ್ಲಾದ ಶೇಖ್ ಹಸೀನಾ ನೇತೃತ್ವದ ಸರ್ಕಾರ ಭಾರತದ ಜೊತೆ ಸ್ನೇಹಪರ ನಿಲುವು ಹೊಂದಿದೆ. ಹೀಗಾಗಿ, ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆಗೆ ಸಹಕಾರಿಯಾಗುವ ಇನ್ನೂ ಹೆಚ್ಚಿನ ಕ್ರಮಗಳಿಗೆ ಅನುವು ಮಾಡಿಕೊಡುವಂತಹ ವಿಶ್ವಾಸದ ಪಾಲುದಾರಿಕೆ ಹೆಚ್ಚಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.