ಬಿಜೆಪಿ ಹಾದಿ ಕಠಿಣಗೊಳಿಸಿದ ಜನತಾ ಪರಿವಾರದ ಮೈತ್ರಿ ಜನತಾ ಪರಿವಾರದ ಮಧ್ಯೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಕೊನೆಗೂ ಒಂದು ತಾರ್ಕಿಕ ಅಂತ್ಯ ಕಂಡಂತಾಗಿದೆ. ಬಿಹಾರ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರೇ ಜೆಡಿಯು ಮತ್ತು ಆರ್‌ಜೆಡಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್‌ ಯಾದವ್‌ ಘೋಷಿಸಿದ್ದಾರೆ. ‘ನಾನು ಚುನಾವಣೆಗೆ ನಿಲ್ಲುವುದಿಲ್ಲ. ನನ್ನ ಕುಟುಂಬ ಅಥವಾ ಪಕ್ಷದಲ್ಲಿ ಬೇರೆ ಯಾರೂ ಮುಖ್ಯಮಂತ್ರಿ ಅಭ್ಯರ್ಥಿಗಳಿಲ್ಲ’ ಎಂದು ಹೇಳುವ ಮೂಲಕ ಆರ್‌ಜೆಡಿ ಅಧ್ಯಕ್ಷ ಲಾಲುಪ್ರಸಾದ್‌, ಮೈತ್ರಿ ಬಲಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ಜನತಾ ಪರಿವಾರದ ಎಲ್ಲ ಪಕ್ಷಗಳೂ ಒಂದುಗೂಡಿ ಬಿಹಾರದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕೆಂದು ಹಿಂದೆ ನಿರ್ಧರಿಸಿದಾಗ, ನಿತೀಶ್‌ಕುಮಾರ್‌ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಲಾಲುಪ್ರಸಾದ್‌ ಒಪ್ಪಿಕೊಂಡಿರಲಿಲ್ಲ. ‘ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲೇ ನಿರ್ಧರಿಸಿದರೆ ನಮ್ಮ ಪಕ್ಷದ ಕಾರ್ಯಕರ್ತರನ್ನು ನಿರುತ್ಸಾಹಗೊಳಿಸಿದಂತಾಗುತ್ತದೆ’ ಎಂದು ಅವರು ಅಪಸ್ವರ ಎತ್ತಿದ್ದರು. ಆದರೆ ನಿತೀಶ್‌ಕುಮಾರ್‌ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಭೇಟಿಯಾಗಿ ಜೆಡಿಯು ಮತ್ತು ಕಾಂಗ್ರೆಸ್‌ ನಡುವಣ ಚುನಾವಣಾ ಮೈತ್ರಿಯ ಬಗ್ಗೆ ಚರ್ಚಿಸಿದ ಬಳಿಕ ಲಾಲುಪ್ರಸಾದ್‌ ಅನಿವಾರ್ಯವಾಗಿ ತಮ್ಮ ಬಿಗಿ ನಿಲುವನ್ನು ಸಡಿಲಿಸಬೇಕಾಯಿತು. ಮೈತ್ರಿಗೆ ಲಾಲುಪ್ರಸಾದ್‌‌ ಮತ್ತು ನಿತೀಶ್‌ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಬೇಕಾಗಿ ಬಂದರೆ, ಕಾಂಗ್ರೆಸ್‌ನ ಆಯ್ಕೆ ನಿತೀಶ್‌ಕುಮಾರ್‌‌ ಎಂಬ ಸಂದೇಶವನ್ನು ಅನುಮಾನಕ್ಕೆಡೆ ಇಲ್ಲದಂತೆ ರಾಹುಲ್‌ ರವಾನಿಸಿದ್ದೂ ಲಾಲುಪ್ರಸಾದ್‌ ಮೆದುವಾಗಲು ಕಾರಣವಾದಂತಿದೆ. ಒಳತಂತ್ರಗಳು ಏನೇ ಇದ್ದರೂ, ಜನತಾ ಪರಿವಾರ, ಬಿಹಾರದ ಚುನಾವಣೆಯಲ್ಲಿ ಸ್ಪರ್ಧಿಸಲು ಮಹಾಮೈತ್ರಿ ಮಾಡಿಕೊಂಡಿರುವುದು ನಿಜಕ್ಕೂ ಸ್ವಾಗತಾರ್ಹ. ಹಾಗೆ ನೋಡಿದರೆ ಆರ್‌ಜೆಡಿ ಮತ್ತು ಜೆಡಿಯು ನಡುವೆ ಅಂತಹ ಸೈದ್ಧಾಂತಿಕವಾದ ಭಿನ್ನಮತಗಳೇನೂ ಇಲ್ಲ. ಸೀಟು ಹೊಂದಾಣಿಕೆಯ ಕುರಿತು ಚರ್ಚಿಸಲು ಉಭಯ ಪಕ್ಷಗಳ ಆರು ಮಂದಿಯ ಸಮಿತಿಯೊಂದನ್ನು ರಚಿಸಿರುವುದೂ ಈ ನಿಟ್ಟಿನಲ್ಲಿ ಪ್ರಾಯೋಗಿಕ ಹೆಜ್ಜೆಯೇ. ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ಬಿಹಾರದಲ್ಲಿ 40ರ ಪೈಕಿ 22 ಸ್ಥಾನಗಳನ್ನು ಗೆದ್ದುಕೊಳ್ಳಲು ಜನತಾ ಪರಿವಾರದ ಮತಗಳು ಹರಿದು ಹಂಚಿಹೋದದ್ದೇ ಕಾರಣ ಎನ್ನುವುದು ಉಭಯ ನಾಯಕರಿಗೂ ಗೊತ್ತಿಲ್ಲದ ಸಂಗತಿಯೇನಲ್ಲ. ಚುನಾವಣೆಯಲ್ಲಿ ಜೆಡಿಯು, ಆರ್‌ಜೆಡಿ ಜತೆಗೆ ಕಾಂಗ್ರೆಸ್‌, ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಮತ್ತು ಎಡಪಕ್ಷಗಳು ಕೂಡಾ ಕೈ ಜೋಡಿಸುವುದರಿಂದ, ಬಿಜೆಪಿಯ ಗೆಲುವಿನ ಹಾದಿ ಇನ್ನಷ್ಟು ದುರ್ಗಮಗೊಂಡಿದೆ. ಈಗಾಗಲೆ ರಾಮ್‌ವಿಲಾಸ್‌ ಪಾಸ್ವಾನ್‌ರ ಲೋಕಜನಸತ್ತಾ ಜೊತೆಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದು, ಜೆಡಿಯು ಸಖ್ಯ ತೊರೆದು ಹೊರಬಂದ ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್‌ರಾಂ‌ ಮಾಂಝಿ ಅವರ ಹೊಸ ಪಕ್ಷವನ್ನೂ ತನ್ನೆಡೆಗೆ ಸೆಳೆದುಕೊಂಡಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮಾಂಝಿ ಅವರನ್ನು ಕರೆಸಿಕೊಂಡು ಮಾತನಾಡಿದ್ದಾರೆ. ಇಷ್ಟಾಗಿಯೂ ನಿತೀಶ್‌ ನೇತೃತ್ವದ ಮೈತ್ರಿಕೂಟವನ್ನು ಎದುರಿಸುವ ಬಿಜೆಪಿ ಹಾದಿ ಖಂಡಿತಾ ಸುಲಭವಿಲ್ಲ. ಬಿಹಾರದಲ್ಲಿ ಬಿಜೆಪಿ ಇದುವರೆಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ ಎನ್ನುವುದು ಕುತೂಹಲಕರ ಸಂಗತಿ. ಬಿಹಾರದ ರಾಜಕೀಯ ಹಿನ್ನೆಲೆಯನ್ನು ಗಮನಿಸಿದರೆ, ಆ ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಿದ ಹಲವು ರಾಜಕೀಯ ಫಲಿತಾಂಶಗಳಿಗೆ ದಾರಿ ಮಾಡಿಕೊಟ್ಟದ್ದಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಸಮರ್ಥವಾಗಿ ಎದುರಿಸುವ ಹೊಸ ರಾಜಕೀಯ ಆಂದೋಲನ ಹುಟ್ಟಿದ್ದೂ ಬಿಹಾರದಲ್ಲೇ. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿರುವ ಬೆನ್ನಲ್ಲೇ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವು ದೂರಗಾಮಿ ಪರಿಣಾಮ ಬೀರುವುದು ನಿಶ್ಚಿತ. ‘ಜಂಗಲ್‌ರಾಜ್’ ಪರಿಸ್ಥಿತಿಯಿದ್ದ ಬಿಹಾರದಲ್ಲಿ ನಿತೀಶ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು- ಸುವ್ಯವಸ್ಥೆ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಅಭಿವೃದ್ಧಿ ಕಾರ್ಯಗಳಿಗೂ ತಕ್ಕಮಟ್ಟಿಗೆ ಚಾಲನೆ ಸಿಕ್ಕಿದೆ. ಈ ಗುಣಾತ್ಮಕ ಪರಿಸ್ಥಿತಿಯನ್ನು ತನ್ನ ಮೈತ್ರಿಕೂಟದ ಪರವಾದ ಮತಗಳನ್ನಾಗಿ ಪರಿವರ್ತಿಸಲು ನಿತೀಶ್‌ ಅವರಿಗೆ ಈಗ ಅವಕಾಶಗಳು ಹೆಚ್ಚಿವೆ. ಚುನಾವಣಾಪೂರ್ವ ರಾಜಕೀಯ ತಂತ್ರಗಾರಿಕೆಯಲ್ಲಿ ನಿತೀಶ್‌ಕುಮಾರ್‌, ನರೇಂದ್ರ ಮೋದಿಯವರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎನ್ನುವುದಂತೂ ಸ್ಪಷ್ಟವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.