ಒಣ ಪ್ರತಿಷ್ಠೆ ಬಿಡಿ ಅಭಿವೃದ್ಧಿಗೆ ಗಮನ ಕೊಡಿ ಕೇಂದ್ರ ಸರ್ಕಾರ ಮತ್ತು ದೆಹಲಿಯ ಎಎಪಿ ಸರ್ಕಾರ ಪರಸ್ಪರ ಕೆಸರೆರಚಾಟ ಬಿಟ್ಟು ಅಭಿವೃದ್ಧಿ ಪರ ಆಡಳಿತಕ್ಕೆ ಗಮನ ನೀಡುವುದು ಅಗತ್ಯ. ದೆಹಲಿ ಸರ್ಕಾರದ ಕಾನೂನು ಸಚಿವ ಜಿತೇಂದರ್ ಸಿಂಗ್‌ ತೋಮರ್‌ ಅವರ ನಾಟಕೀಯ ಬಂಧನದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಣ ಸಂಘರ್ಷ ತಾರಕಕ್ಕೇರಿದೆ. ತೋಮರ್‌ ಅವರ ವಿರುದ್ಧದ ಪದವಿ, ಕಾನೂನು ಪದವಿ ದಾಖಲೆಗಳ ಫೋರ್ಜರಿ ಆರೋಪ ಗಂಭೀರ ಸ್ವರೂಪದ್ದಾಗಿದ್ದರೂ ಅವರನ್ನು ಬಂಧಿಸಿದ ಸಂದರ್ಭ ಹಾಗೂ ವಿಧಾನ ಸಂಶಯಕ್ಕೆ ಎಡೆಮಾಡಿದೆ. ಲೆಫ್ಟಿನೆಂಟ್‌ ಗವರ್ನರ್‌ ನಜೀಬ್ ಜಂಗ್‌ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನಡುವೆ ಅಧಿಕಾರಿಗಳ ನೇಮಕಾತಿ ವಿಷಯದಲ್ಲಿ ತೀವ್ರ ಜಟಾಪಟಿ ನಡೆಯುತ್ತಿರುವ ವೇಳೆಯಲ್ಲೇ ಸಚಿವರ ಬಂಧನವಾಗಿರುವುದರಿಂದ ಎನ್‌ಡಿಎ ಸರ್ಕಾರ, ಆಮ್‌ ಆದ್ಮಿ ಪಕ್ಷದ ವಿರುದ್ಧ ರಾಜಕೀಯ ಹಗೆ ತೀರಿಸಿಕೊಳ್ಳಲು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆಯೇನೊ ಎಂಬ ಅನುಮಾನ ಮೂಡುತ್ತದೆ. ಬಾರ್‌ ಕೌನ್ಸಿಲ್‌ ಮೇ 11ರಂದು ನೀಡಿರುವ ದೂರಿನ ಮೇರೆಗೆ ಮಂಗಳವಾರ ಬೆಳಗಿನ ಜಾವ ತರಾತುರಿಯಲ್ಲಿ ಪ್ರಥಮ ಮಾಹಿತಿ ವರದಿ ಸಿದ್ಧಪಡಿಸಿದ ಬಳಿಕ ಎರಡು ಡಜನ್‌ ಪೊಲೀಸರನ್ನು ಕಳುಹಿಸಿ ತೋಮರ್‌ ಅವರನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಲಾಗಿದೆ. ಈ ಬೆಳವಣಿಗೆ ದೆಹಲಿ ಪೊಲೀಸರ ಬಗ್ಗೆ ಅಪನಂಬಿಕೆ ಹುಟ್ಟಿಸಿದೆ. ಎಲ್ಲ ಕ್ರಿಮಿನಲ್‌ ಪ್ರಕರಣಗಳಲ್ಲೂ ಅವರು ಹೀಗೇ ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳುವರೇ ಎಂಬ ಪ್ರಶ್ನೆಗಳು ಎದ್ದಿವೆ. ಪೊಲೀಸರದ್ದು ಅನಗತ್ಯವಾದ, ಅರ್ಥಹೀನ ನಡವಳಿಕೆ ಎಂದು ನ್ಯಾಯಾಲಯವೇ ಆಕ್ಷೇಪಿಸಿದೆ. ಆದರೆ, ಕಾನೂನುಬದ್ಧವಾಗಿಯೇ ತೋಮರ್‌ ಅವರನ್ನು ಬಂಧಿಸಲಾಗಿದೆ ಎಂದು ಸಮರ್ಥಿಸಿಕೊಳ್ಳಲು ಹಿರಿಯ ಪೊಲೀಸ್‌ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿದ ಬಳಿಕ ಸಚಿವರನ್ನು ಬಂಧಿಸಲಾಗಿದೆ ಎಂದು ಸಮಜಾಯಿಷಿ ಕೊಡುವ ಮೂಲಕ ಪ್ರಮಾದವನ್ನು ಮುಚ್ಚಿಕೊಳ್ಳಲು ಯತ್ನಿಸಲಾಗುತ್ತಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮುಜುಗರ ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ತೋಮರ್‌ ಅವರಿಂದ ರಾಜೀನಾಮೆ ಪಡೆದಿದ್ದಾರೆ. ಆರೋಪ ಬಂದ ತಕ್ಷಣ ರಾಜೀನಾಮೆ ಪಡೆದಿದ್ದರೆ ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಮೇಲ್ಪಂಕ್ತಿ ಹಾಕಿದಂತಾಗುತ್ತಿತ್ತು. ಹಗರಣ, ಭ್ರಷ್ಟಾಚಾರಗಳನ್ನು ವಿರೋಧಿಸಿಕೊಂಡು ಹುಟ್ಟಿದ ಆಮ್‌ ಆದ್ಮಿ ಪಕ್ಷದ ಗೌರವ ಹೆಚ್ಚುತ್ತಿತ್ತು. ಕೇಜ್ರಿವಾಲ್‌ ಅವರು ತೋಮರ್‌ ವಿಷಯದಲ್ಲೂ ತಪ್ಪು ಹೆಜ್ಜೆ ಇಟ್ಟರು. ಅನಗತ್ಯವಾಗಿ ಹಟ ಮಾಡಿದರು. ಹಿಂದೆ–ಮುಂದೆ ಯೋಚಿಸದೆ ಸಹೋದ್ಯೋಗಿ ಬೆಂಬಲಕ್ಕೆ ನಿಂತು ಅವರೇ ಶಂಕೆಗೊಳಗಾದರು. ಸ್ಥಾನಮಾನದ ಘನತೆ ಅರ್ಥ ಮಾಡಿಕೊಂಡು ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕಾದ ಕೇಜ್ರಿವಾಲ್‌ ಹಾಗೂ ಅವರ ಸಚಿವ ಸಹೋದ್ಯೋಗಿಗಳು ಕೇಂದ್ರದ ವಿರುದ್ಧ ಕೆಸರು ಎರಚುವುದನ್ನು ಬಿಟ್ಟಿಲ್ಲ. ಬಿಜೆಪಿ ನಾಯಕರೂ ಅಷ್ಟೇ, ಸಿಕ್ಕಿದ ಅವಕಾಶ ಬಳಸಿಕೊಂಡು ಎಎಪಿ ನಾಯಕರ ಮೇಲೆ ಬೀಳುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನೆಲಕಚ್ಚಿರುವ ಕಾಂಗ್ರೆಸ್‌ ಪಕ್ಷದ ಮುಖಂಡರೂ ಬಿಜೆಪಿ ಜತೆ ಸೇರಿಕೊಂಡಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂಘರ್ಷ ಒಳ್ಳೆಯದಲ್ಲ. ದೆಹಲಿ ಯಾವುದೋ ಒಂದು ಪಕ್ಷಕ್ಕೆ ಅಥವಾ ಸರ್ಕಾರಕ್ಕೆ ಸೇರಿದ್ದಲ್ಲ. ಅದು ಎಲ್ಲರಿಗೂ ಸೇರಿದ್ದು. ದೇಶದ ರಾಜಧಾನಿಗೆ ಪೂರ್ಣ ರಾಜ್ಯ ಸ್ಥಾನಮಾನ ಇಲ್ಲದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾಗಿದೆ. ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲಾ ಒಂದು ವಿಷಯದಲ್ಲಿ ಕಾಲು ಕೆರೆದುಕೊಂಡು ಕೇಂದ್ರ ಸರ್ಕಾರದ ಜತೆ ತಂಟೆ ತೆಗೆಯುತ್ತಿರುವ ಎಎಪಿ ಮುಖಂಡರು ಇನ್ನಾದರೂ ಅಭಿವೃದ್ಧಿ ಕಡೆ ಗಮನ ಹರಿಸಬೇಕಾಗಿದೆ. ನಿರೀಕ್ಷೆ ಮೀರಿ ಎಎಪಿ ಬೆಂಬಲಿಸಿರುವ ಮತದಾರರಿಗೆ ರಾಜ್ಯ ಸರ್ಕಾರದ ಕಾರ್ಯವೈಖರಿ ಈಗಾಗಲೇ ಬೇಸರ ತರಿಸಿದೆ. ಮೋದಿ ನೇತೃತ್ವದ ಸರ್ಕಾರವೂ ಎಎಪಿ ಸರ್ಕಾರದ ವಿಷಯದಲ್ಲಿ ಸಂಯಮ ತೋರಿಸಬೇಕಾಗಿದೆ. ರಾಜ್ಯಗಳೊಂದಿಗೆ ಕೈಜೋಡಿಸಿ ಒಕ್ಕೂಟ ವ್ಯವಸ್ಥೆ ಬಲಪಡಿಸುವ ಮಾತನ್ನು ಆಡುತ್ತಿರುವ ಪ್ರಧಾನಿ ಅವರೂ ಎಲ್ಲ ರಾಜ್ಯಗಳು ಒಂದೇ ಎಂಬ ಭಾವನೆ ಬೆಳೆಸಿಕೊಂಡು ಉದಾರವಾಗಿ ನಡೆದುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಸಹಕಾರಾತ್ಮಕ ಒಕ್ಕೂಟ ವ್ಯವಸ್ಥೆ ಕೇವಲ ಬಾಯಿ ಮಾತಿಗೆ ಸೀಮಿತವಾಗಿಬಿಡುತ್ತದೆ. ಅಧಿಕಾರಿಗಳ ನೇಮಕದಂಥ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡುವ ಕ್ಷುಲ್ಲಕ ರಾಜಕಾರಣ ಬಿಡಬೇಕಾಗಿದೆ. ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳು ಮುನ್ನೆಲೆಗೆ ಬರಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.