ಸೇನಾಕಾರ್ಯಾಚರಣೆ ಯಶಸ್ಸು ಪ್ರಚೋದನಕಾರಿ ಹೇಳಿಕೆ ಬೇಡ ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ಎನ್ಎಸ್‌ಸಿಎನ್‌ (ಕೆ) ಬಣಕ್ಕೆ ಸೇರಿದ ನಾಗಾ ಉಗ್ರರ ಮೇಲೆ ಭಾರತ ಯೋಧರು ನಡೆಸಿದ ದಾಳಿ ಹಲವು ಕಾರಣಗಳಿಗೆ ಮುಖ್ಯವಾದದ್ದು. ಕ್ಷಿಪ್ರಗತಿಯಲ್ಲಿ ಸರ್ಕಾರ ಕೈಗೊಂಡ ಪ್ರತೀಕಾರದ ಕ್ರಮ ಇದು. ಅಗತ್ಯ ಬಿದ್ದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ತಾನು ಸನ್ನದ್ಧ ಎಂಬಂಥ ಸಂದೇಶವನ್ನು ಈ ಕಾರ್ಯಾಚರಣೆ ರವಾನಿಸಿದೆ. ಜೂನ್ 4ರಂದು 18 ಭಾರತೀಯ ಯೋಧರನ್ನು ನಾಗಾ ಉಗ್ರರು ಹತ್ಯೆ ಮಾಡಿದ್ದರು. ಈ ಆಕ್ರಮಣಕ್ಕೆ ಪ್ರತಿಯಾಗಿ ನಡೆಸಲಾದ ಯಶಸ್ವಿ ಕಾರ್ಯಾಚರಣೆ ಇದು. ಈ ವೃತ್ತಿಪರ ಕೆಲಸಕ್ಕಾಗಿ ಸೇನಾ ನಾಯಕತ್ವ ಪ್ರಶಂಸೆಗೆ ಅರ್ಹ. ಇದರಲ್ಲಿ ಭಿನ್ನಮತ ಇಲ್ಲ. ಆದರೆ ಯಾವುದೇ ಕಾರ್ಯಾಚರಣೆಯ ಯಶಸ್ಸು ತಿಳಿಯಲು ಒಂದಷ್ಟು ಕಾಲ ಬೇಕು. ಅಷ್ಟರಲ್ಲೇ ಸೇನಾ ಕಾರ್ಯಾಚರಣೆ ಕುರಿತು ಕೇಂದ್ರದ ಪ್ರತಿನಿಧಿಗಳು ಅತಿರೇಕದ ಹೇಳಿಕೆಗಳನ್ನು ನೀಡುತ್ತಿರುವುದು ಬಾಲಿಶ. ಭಾರತದ ಶಕ್ತಿ ಪ್ರದರ್ಶನದ ಕಾರ್ಯಾಚರಣೆಯಾಗಿ ಇದನ್ನು ಬಿಂಬಿಸುವ ಪ್ರಯತ್ನಗಳಿಗೆ ತಡೆ ಒಡ್ಡುವಂತೆ ‘ನಮ್ಮ ನೆಲೆಯಲ್ಲಿ ದಾಳಿ ನಡೆದಿಲ್ಲ’ ಎಂದು ಮ್ಯಾನ್ಮಾರ್ ಸೇನೆ ಪ್ರತಿಕ್ರಿಯಿಸಿದೆ. ಹಾಗೆಯೇ ‘ಭಾರತ –ಮ್ಯಾನ್ಮಾರ್ ಗಡಿಯಲ್ಲಿ ಎರಡು ನೆಲೆಗಳಲ್ಲಿ ಉಗ್ರರ ಮೇಲೆ ದಾಳಿ ನಡೆಸಲಾಯಿತು’ ಎಂಬುದು ಭಾರತೀಯ ಸೇನೆಯ ಅಧಿಕೃತ ಹೇಳಿಕೆ. ಈ ಹೇಳಿಕೆಯಲ್ಲಿ ಗಡಿ ದಾಟಿದ ಪ್ರಸ್ತಾಪವಿಲ್ಲ ಎಂಬುದನ್ನು ಗಮನಿಸ ಬೇಕು. ಸೇನಾ ಕಾರ್ಯಾಚರಣೆಯ ಯಶಸ್ಸನ್ನು ಸಂಭ್ರಮಿಸುವ ಹೊತ್ತಿನಲ್ಲಿ ಪಾಕಿಸ್ತಾನದ ವಿರುದ್ಧವೂ ಇಂತಹದೇ ಕ್ರಮ ಕೈಗೊಳ್ಳಲಾಗುವುದೆಂಬಂಥ ಮಾತುಗಳು ಹೊರಬಿದ್ದಿದ್ದು ಅತಿರೇಕದ್ದು. ‘ಮ್ಯಾನ್ಮಾರ್ ಕಾರ್ಯಾಚರಣೆ ಬದಲಾದ ಮನಸ್ಥಿತಿಗೆ ದ್ಯೋತಕ. ಭಾರತದ ಹೊಸ ನಿಲುವಿಗೆ ಹೆದರುವವರು ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ’ ಎಂದು ಕೇಂದ್ರ ರಕ್ಷಣಾ ಸಚಿವರೂ ಹೇಳಿದ್ದಾರೆ. ಇಂತಹ ಭಾವೋದ್ರೇಕದ ಹೇಳಿಕೆಗಳ ಮಧ್ಯೆಯೇ ವಾಸ್ತವವನ್ನು ಸರಿಯಾದ ನೆಲೆಯಲ್ಲಿ ಗ್ರಹಿಸುವುದೂ ಅಷ್ಟೇ ಮುಖ್ಯ. ಮ್ಯಾನ್ಮಾರ್ ಹಾಗೂ ಪಾಕಿಸ್ತಾನದ ಪರಿಸ್ಥಿತಿ ಬೇರೆ ಬೇರೆ ಎಂಬುದನ್ನು ಅರ್ಥ ಮಾಡಿ ಕೊಳ್ಳುವುದು ಇಲ್ಲಿ ಮುಖ್ಯ. ಭಾರತದಲ್ಲಿನ ಬಂಡು ಕೋರರ ಗುಂಪುಗಳನ್ನು ನಿಗ್ರಹಿಸುವ ವಿಚಾರದಲ್ಲಿ ಭಾರತ ಹಾಗೂ ಮ್ಯಾನ್ಮಾರ್ ಸರ್ಕಾರಗಳು ನಿಕಟ ಸಮಾ ಲೋಚನೆಗಳನ್ನು ಹಿಂದಿನಿಂದಲೂ ನಡೆಸಿ ಕೊಂಡೇ ಬಂದಿವೆ. ಆದರೆ ತನ್ನ ನೆಲೆಯಲ್ಲಿ ಭಯೋ ತ್ಪಾದನಾ ಜಾಲಗಳು ಕಾರ್ಯಾಚರಣೆ ನಡೆಸುತ್ತಿ ರುವ ಬಗ್ಗೆ ತನಗೇನೂ ತಿಳಿದಿಲ್ಲ ಎಂಬಂತೆ ಪಾಕಿ ಸ್ತಾನ ವರ್ತಿಸುತ್ತದೆ ಎಂಬುದು ಗೊತ್ತಿರುವ ಸಂಗತಿ. ನವದೆಹಲಿ ಹಾಗೂ ಮ್ಯಾನ್ಮಾರ್ ಮಧ್ಯೆ ಇರುವ ಬಾಂಧವ್ಯಕ್ಕೂ ಪಾಕಿಸ್ತಾನ ಹಾಗೂ ಭಾರ ತದ ನಡುವೆ ಇರುವ ಬಾಂಧವ್ಯಕ್ಕೂ ವ್ಯತ್ಯಾಸವಿದೆ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು. ಭಾರತ – ಪಾಕ್ ಗಡಿ, ವಿಶ್ವದಲ್ಲೇ ಅತಿ ಹೆಚ್ಚು ಸೇನಾಚಟುವಟಿಕೆ ಹೊಂದಿರುವ ಪ್ರದೇಶ. ಇಂತಹ ಸಂದರ್ಭದಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ದಾಳಿ ಯನ್ನು ಪಾಕಿಸ್ತಾನಿ ನೆಲೆಯಲ್ಲಿ ನಡೆಸಬಹುದಾದ ಕಾರ್ಯಾಚರಣೆಗಳಿಗೆ ಮುನ್ಸೂಚನೆ ಎಂಬಂತೆ ಭಾವಿಸುವುದು ಅಪ್ರಬುದ್ಧತನದ್ದು. ಅಲ್ಲದೆ ಭಾರತ ಹಾಗೂ ಪಾಕಿಸ್ತಾನ ಅಣ್ವಸ್ತ್ರ ಹೊಂದಿದ ರಾಷ್ಟ್ರಗಳು. ಸಣ್ಣ ಸಣ್ಣ ಪ್ರಚೋದನೆಗಳು ಪೂರ್ಣ ಪ್ರಮಾಣದ ಶತ್ರುತ್ವವಾಗಿ ಪರಿವರ್ತನೆಗೊಳ್ಳುವ ಬಗ್ಗೆ ವಿಶ್ವ ಸಮುದಾಯಕ್ಕೆ ಆತಂಕ ಇರುವುದೂ ಸಹಜ. ಭಯೋತ್ಪಾದನಾ ಗುಂಪುಗಳನ್ನು ನಾಶಪಡಿಸು ವುದು ಅಗತ್ಯ ಎಂಬುದನ್ನು ಉಭಯ ರಾಷ್ಟ್ರಗಳೂ ಅಂಗೀಕರಿಸಿದಲ್ಲಿ ಮಾತ್ರ ಪಾಕಿಸ್ತಾನ ನೆಲದಲ್ಲಿ ಇಂತಹ ಕ್ಷಿಪ್ರ ಕಾರ್ಯಾಚರಣೆಗಳನ್ನು ನಡೆಸುವುದು ಸಾಧ್ಯ. ಅಲ್ಲದೆ ಭಾರತಕ್ಕೆ ಬೆದರಿಕೆ ಒಡ್ಡುವ ಬಂಡುಕೋರರ ವಿರುದ್ಧ ‘ಸರ್ಜಿಕಲ್’ ಕಾರ್ಯಾಚರಣೆಗಳನ್ನು ನಡೆಸುವ ಮಿಲಿಟರಿ ಸಾಮರ್ಥ್ಯಗಳನ್ನು ಭಾರತ ಬೆಳೆಸಿಕೊಳ್ಳುವುದೂ ಅವಶ್ಯ. ಆದರೆ ಭಯೋತ್ಪಾದನೆ ಹಾಗೂ ಬಂಡುಕೋರರನ್ನು ನಿಗ್ರಹಿಸಲು ಬಹು ಆಯಾಮಗಳಲ್ಲಿ ಕಾರ್ಯತಂತ್ರಗಳನ್ನು ರೂಪಿಸುವುದೂ ಅಷ್ಟೇ ಅಗತ್ಯ. ಯುದ್ಧೋನ್ಮಾದದ ಮಾತುಗಳಿಗಿಂತ ರಾಜತಾಂತ್ರಿಕ ಮಾರ್ಗಗಳನ್ನೂ ಪರಿಣಾಮಕಾರಿಯಾಗಿ ಬಳಸಬೇಕು. ಮಿಲಿಟರಿ ಪರಿಹಾರವೇ ಎಲ್ಲದಕ್ಕೂ ಸೂತ್ರವಾಗದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.