ಭ್ರಷ್ಟಾಚಾರ ತಡೆ ಕಾಯಿದೆ ತಿದ್ದುಪಡಿ ಸ್ವಾಗತಾರ್ಹ ದೇಶವನ್ನು ಕಿತ್ತು ತಿನ್ನುತ್ತಿರುವ ಸಾಮಾಜಿಕ ಪಿಡುಗುಗಳಲ್ಲಿ ಅಗ್ರಸ್ಥಾನದಲ್ಲಿರುವ ಭ್ರಷ್ಟಾಚಾರ ತಡೆಗೆ ಕೊನೆಗೂ ಮಹತ್ವದ ಕ್ರಮವೊಂದನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. 1988ರ ಭ್ರಷ್ಟಾಚಾರ ತಡೆ ಕಾಯಿದೆಗೆ ತಿದ್ದುಪಡಿ ತರುವ ಮೂಲಕ, ಭ್ರಷ್ಟಾಚಾರ ನಿಗ್ರಹಕ್ಕೆ ಕೈಗೊಳ್ಳಬಹುದಾದ ಕ್ರಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳ್ಳುವ ನಿಟ್ಟಿನಲ್ಲಿ ಈ ಕಾಯಿದೆ ತಿದ್ದುಪಡಿ ಮಹತ್ವದ ಪಾತ್ರ ವಹಿಸಬಹುದೆಂಬ ಆಶಾಭಾವ ಇದೆ. ಕಾಯಿದೆಗೆ ಮಾಡಿರುವ ಹೊಸ ತಿದ್ದುಪಡಿಯಂತೆ ಇನ್ನು ಮುಂದೆ ಲಂಚ ತೆಗೆದುಕೊಳ್ಳುವವರು ಮಾತ್ರವಲ್ಲ, ಕೊಟ್ಟವರು ಕೂಡಾ ಕಠಿಣ ಶಿಕ್ಷೆಗೆ ಅರ್ಹರಾಗುತ್ತಾರೆ. ಭ್ರಷ್ಟಾಚಾರ ನಡೆಸಿದ್ದು ಸಾಬೀತಾದರೆ ಆರೋಪಿಗಳಿಗೆ ಇನ್ನು ಮುಂದೆ ಕನಿಷ್ಠ 3 ವರ್ಷದಿಂದ ಗರಿಷ್ಠ 7 ವರ್ಷಗಳವರೆಗೆ ಕಠಿಣ ಶಿಕ್ಷೆ ವಿಧಿಸಬಹುದು. ರಾಜ್ಯಗಳಲ್ಲಿ ಭ್ರಷ್ಟರ ಸದ್ದಡಗಿಸಲು ಕೆಲಸ ಮಾಡುತ್ತಿರುವ ಲೋಕಾಯುಕ್ತರು ನಡೆಸುತ್ತಿರುವ ದಾಳಿಗಳನ್ನು ನೋಡಿದರೆ, ನಮ್ಮಲ್ಲಿ ಇವತ್ತಿಗೂ ಭ್ರಷ್ಟಾಚಾರ ಎಷ್ಟೊಂದು ವ್ಯಾಪಕವಾಗಿ ಬೇರುಬಿಟ್ಟಿದೆ ಎನ್ನುವುದರ ಅರಿವಾಗುತ್ತದೆ. ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಕಣ್ಣಿಟ್ಟು, ಸಾಕಷ್ಟು ಸಮೀಕ್ಷೆಗಳನ್ನು ಪ್ರಕಟಿಸುತ್ತಿರುವ ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌’ ಸಂಸ್ಥೆಯ ಪ್ರಕಾರ, ಭ್ರಷ್ಟಾಚಾರದಲ್ಲಿ ಭಾರತವು 175 ದೇಶಗಳ ಪಟ್ಟಿಯಲ್ಲಿ 85ನೇ ಸ್ಥಾನವನ್ನು ಪಡೆದುಕೊಂಡಿದೆ. ದೇಶದಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ಈಗಾಗಲೆ ಹಲವಾರು ಕಾಯಿದೆಗಳಿವೆ. ಭಾರತೀಯ ದಂಡ ಸಂಹಿತೆ (1860), ಆದಾಯ ತೆರಿಗೆ ಕಾಯಿದೆ (1961), ಭ್ರಷ್ಟಾಚಾರ ತಡೆ ಕಾಯಿದೆ (1988), ಬೇನಾಮಿ ವಹಿವಾಟು ತಡೆ ಕಾಯಿದೆ (1988) ಮತ್ತು ಹಣಕಾಸು ಅಕ್ರಮ ವಹಿವಾಟು ನಿಯಂತ್ರಣ ಕಾಯಿದೆ (2002) ಇವುಗಳಲ್ಲಿ ಮುಖ್ಯವಾದದ್ದು. ಈ ಮಧ್ಯೆ ಲೋಕಪಾಲ ಮತ್ತು ಲೋಕಾಯುಕ್ತ ಕಾಯಿದೆಯೂ ಭ್ರಷ್ಟರ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸಲು ಸರ್ಕಾರಗಳ ಕೈ ಬಲಪಡಿಸಿದೆ. ಇಷ್ಟೆಲ್ಲ ಕಾಯಿದೆಗಳಿದ್ದೂ ನಮ್ಮಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲವೇಕೆ ಎನ್ನುವುದು ಚಿಂತನಾರ್ಹ ವಿಷಯ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಬಹುತೇಕ ಪ್ರಕರಣಗಳು ಸರ್ಕಾರಿ ವಲಯದಲ್ಲೇ ವರದಿಯಾಗುತ್ತಿವೆ. ವ್ಯಕ್ತಿಯೊಬ್ಬ ವಾಹನ ಚಾಲನಾ ಪರವಾನಗಿ ಪಡೆಯುವುದರಿಂದ ಹಿಡಿದು, ಬೃಹತ್‌ ಕಂಪೆನಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಕಲ್ಲಿದ್ದಲು ಗಣಿ ಲೈಸೆನ್ಸ್‌ ಪಡೆಯುವವರೆಗೆ ಭ್ರಷ್ಟಚಾರದ ಕಬಂಧಬಾಹುಗಳು ಎಲ್ಲೆಡೆ ಚಾಚಿಕೊಂಡಿವೆ. ಸರ್ಕಾರದ ಮಟ್ಟದಲ್ಲಿ ಪಾರದರ್ಶಕವಾಗಿ ಕೆಲಸ ನಡೆಯುವಂತೆ ವಿದ್ಯುನ್ಮಾನ ಆಡಳಿತವನ್ನು ಜಾರಿಗೆ ತಂದಿದ್ದರೂ, ನೌಕರರು ಮತ್ತು ಅಧಿಕಾರಿಗಳು ಇ-ಆಡಳಿತ ವ್ಯವಸ್ಥೆಯನ್ನೂ ದುರ್ಬಳಕೆ ಮಾಡಿಕೊಳ್ಳುವುದು ವಿಪರ್ಯಾಸದ ಸಂಗತಿ. ಯುಪಿಎ ಸರ್ಕಾರದ ಅವಧಿಯಲ್ಲಿ ಬಯಲಿಗೆ ಬಂದ 2ಜಿ ತರಂಗಾಂತರ ಹಂಚಿಕೆ ಹಗರಣ, ಕಲ್ಲಿದ್ದಲು ಗಣಿ ಲೈಸೆನ್ಸ್‌, ಆದರ್ಶ ವಸತಿ ಹಗರಣ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟದ ಭ್ರಷ್ಟಾಚಾರ ಹಗರಣಗಳೇ ಕೊನೆಗೆ ಯುಪಿಎ ಚುನಾವಣೆಯಲ್ಲಿ ಸೋಲಲು ಪ್ರಮುಖ ಕಾರಣಗಳಾದವು ಎನ್ನುವುದು ವಾಸ್ತವ. ಹಾಗೆಯೇ ಕರ್ನಾಟಕದಲ್ಲಿ ಗಣಿ ಹಗರಣಗಳ ಸಹಿತ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟತೆಯ ಬಗ್ಗೆ ರೋಸಿಹೋಗಿ ಜನರು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದರು ಎನ್ನುವುದನ್ನೂ ಮರೆಯಬಾರದು. ಸರ್ಕಾರದ ಯೋಜನೆಗಳ ಜಾರಿಯಲ್ಲಿ ಭ್ರಷ್ಟಾಚಾರ ನಡೆಯುವುದರಿಂದ ಅಭಿವೃದ್ಧಿಯ ವೇಗ ಕುಂಠಿತಗೊಳ್ಳುವುದು ಮಾತ್ರವಲ್ಲ, ಯೋಜನೆಯ ಅಸಮರ್ಪಕ ಜಾರಿಗೂ ಕಾರಣವಾಗುತ್ತದೆ. ಈಗ 1988ರ ಭ್ರಷ್ಟಾಚಾರ ತಡೆ ಕಾಯಿದೆಗೆ ತಂದಿರುವ ತಿದ್ದುಪಡಿಯಲ್ಲಿ ಲಂಚ ಕೊಡುವ ವ್ಯಕ್ತಿ ಮತ್ತು ಕಂಪೆನಿಗಳಿಗೂ ಶಿಕ್ಷೆ ವಿಧಿಸುವ ಕ್ರಮಗಳನ್ನು ಸೇರಿಸಿರುವುದು ಸ್ವಾಗತಾರ್ಹ. ಲಂಚ ಕೊಡುವವರು ಇರುವವರೆಗೂ ತೆಗೆದುಕೊಳ್ಳುವವರೂ ಇರುತ್ತಾರೆ. ಲಂಚ ಕೇಳುವವರಿಗೆ ಮಾತ್ರ ಕಾಯಿದೆ ಭಯ ಇದ್ದರೆ ಸಾಲದು; ಕೊಡುವವರಿಗೂ ಶಿಕ್ಷೆಯ ಭಯ ಉಂಟಾದರೆ ಈ ನಿಟ್ಟಿನಲ್ಲಿ ಗಮನಾರ್ಹ ಬದಲಾವಣೆ ಆಗಬಹುದು. ಹಾಗೆಂದು ಕಾಯಿದೆ ತಿದ್ದುಪಡಿ ಮಾಡಿದಾಕ್ಷಣ ಎಲ್ಲವೂ ಸರಿಯಾಗುತ್ತದೆ ಎನ್ನಲಾಗದು. ಭ್ರಷ್ಟಾಚಾರ ತಡೆ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಇಚ್ಛಾಶಕ್ತಿಯೂ ಇರಬೇಕಾಗುತ್ತದೆ. ಸರ್ಕಾರ ಮಾತ್ರವಲ್ಲ ಸಾರ್ವಜನಿಕರೂ ಈ ಕಾಯಿದೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಲಂಚ ಪಡೆದ ಪ್ರಕರಣಗಳಲ್ಲಿ ಉಭಯತ್ರರಿಗೂ ಶಿಕ್ಷೆಯಾಗುವುದು ಖಚಿತವಾದಲ್ಲಿ ಲಂಚರಹಿತ ಸಮಾಜದ ಕನಸು ನನಸಾಗಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.