ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತೆ ಕಾಪಾಡಿ ರಾಜಕೀಯ ವಾದ–ವಿವಾದಗಳಲ್ಲಿ ಮಹಿಳೆಯ ಸುರಕ್ಷತೆಯ ಪ್ರಶ್ನೆ ಗೌಣವಾಗಬಾರದು. ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಚರ್ಚಾ ವಲಯಕ್ಕೆ ಬಂದಿದೆ. ಪಂಜಾಬ್‌ನ ಮೋಗಾದಲ್ಲಿ ಚಲಿಸುವ ಬಸ್‌ನಲ್ಲಿ ಹದಿಹರೆಯದ ಬಾಲಕಿಯ ಜೊತೆ ಬಸ್ ಸಿಬ್ಬಂದಿ ಲೈಂಗಿಕ ದುರ್ವರ್ತನೆ ತೋರಿ ಬಸ್‌ನಿಂದ ಕೆಳಕ್ಕೆ ದೂಡಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಜೊತೆಗಿದ್ದ ಬಾಲಕಿಯ ತಾಯಿಯನ್ನೂ ಹೊರಕ್ಕೆ ದಬ್ಬಿದ್ದರಿಂದ ಗಾಯಗೊಂಡಿರುವ ಆಕೆ ಆಸ್ಪತ್ರೆಯಲ್ಲಿದ್ದಾರೆ. ‘ಉತ್ತಮ ಆಡಳಿತ’ ಉಪಕ್ರಮಗಳಿಗಾಗಿ ಪಂಜಾಬ್ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಶಸ್ತಿ ನೀಡಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ವಿಪರ್ಯಾಸ. ಅದೂ ಪಂಜಾಬ್ ಉಪಮುಖ್ಯಮಂತ್ರಿಗೆ ಸೇರಿದ ಬಸ್‌ನಲ್ಲಿ ಈ ಹೇಯ ಘಟನೆ ನಡೆದಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಪಂಜಾಬ್ ಉಪಮುಖ್ಯಮಂತ್ರಿಯ ಪತ್ನಿ ಹರ್ ಸಿಮ್ರತ್ ಕೌರ್ ಬಾದಲ್ ಅವರು, ಕೇಂದ್ರ ಸರ್ಕಾರದ ಸಚಿವೆಯಾಗಿದ್ದಾರೆ. ‘ಬಸ್ ಯಾರಿಗೆ ಸೇರಿದ್ದು’ ಎಂಬಂಥ ಪತ್ರಕರ್ತರ ಪ್ರಶ್ನೆಗೆ ‘ಗೊತ್ತಿಲ್ಲ ಪರಿಶೀಲಿಸಬೇಕು’ ಎಂದು ಹರ್ ಸಿಮ್ರತ್ ಕೌರ್ ಬಾದಲ್ ಹೇಳಿದ ಮಾತುಗಳು ಮತ್ತಷ್ಟು ವಿವಾದ ಹುಟ್ಟುಹಾಕಿದವು. ಮತ್ತೊಂದು ವಿಪರ್ಯಾಸ ಎಂದರೆ ಈ ಸಚಿವೆಯೂ ಸ್ವತಃ ‘ಹೆಣ್ಣು ಮಗು ರಕ್ಷಿಸಿ’ (ನನ್ಹೀ ಚಾನ್) ಪ್ರಚಾರಾಂದೋಲನವನ್ನು ರಾಜ್ಯದಲ್ಲಿ ಮುನ್ನಡೆಸುತ್ತಿದ್ದಾರೆ. ಜೊತೆಗೆ, ಬಾಲಕಿಯ ಸಾವು, ‘ದೇವರ ಇಚ್ಛೆ’ ಎಂಬಂಥ ಅಕಾಲಿ ಸಚಿವರೊಬ್ಬರ ಮಾತು ಹಾಗೂ ‘ಯಾವುದೇ ಬಸ್‌ನಲ್ಲಿ ಸಂಭವಿಸಬಹುದಾದ ಅಪಘಾತ ಇದು’ ಎಂಬಂಥ ಮೋಗಾ ಶಾಸಕರ ಹೇಳಿಕೆ ಈ ಘಟನೆಯ ಸುತ್ತಲ ವಿವಾದವನ್ನು ತೀವ್ರವಾಗಿಸಿದೆ. ಈಗ ಇಷ್ಟೆಲ್ಲಾ ವಿವಾದಗಳ ನಂತರ, ತಮ್ಮ ಕಂಪೆನಿ, ಆರ್ಬಿಟ್ ಏವಿಯೇಷನ್‌ನ ಎಲ್ಲಾ ಬಸ್‌ಗಳ ಸಂಚಾರವನ್ನು ನಿರ್ಬಂಧಿಸುವುದು ಪಂಜಾಬ್ ಉಪ ಮುಖ್ಯಮಂತ್ರಿ ಸುಖಬೀರ್ ಬಾದಲ್ ಅವರಿಗೆ ಅಂತೂ ಅನಿವಾರ್ಯವಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಲು ಪೊಲೀಸರಿಂದ ಆದ ವಿಳಂಬಕ್ಕೆ ಇರುವ ರಾಜಕೀಯ ಕಾರಣಗಳು ಸ್ಪಷ್ಟ. ಆದರೆ ಈ ರಾಜಕೀಯ ಕುಟುಂಬದ ಪ್ರಭಾವ ಕಾನೂನು ಪ್ರಕ್ರಿಯೆಗೆ ತೊಡಕಾಗಬಾರದು. ಹಾಗೆಯೇ ಈಗ ಈ ಘಟನೆ ಪಡೆದುಕೊಂಡಿರುವ ರಾಜಕೀಯ ಆಯಾಮದಲ್ಲಿ ಮಹಿಳೆಯ ಸುರಕ್ಷತೆ ಪ್ರಶ್ನೆಯ ಚರ್ಚೆ ಮಂಕಾಗಬಾರದು ಎಂಬುದು ಎಲ್ಲರ ಕಾಳಜಿಯಾಗಬೇಕು. 2012ರಲ್ಲಿ ದೆಹಲಿಯಲ್ಲಿ ಚಲಿಸುವ ಬಸ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ರಾಷ್ಟ್ರದ ಪ್ರಜ್ಞೆಯನ್ನು ಕಲಕಿತ್ತು. ಇದೂ ಕೂಡ ಅಂತಹದೇ ಪ್ರಕರಣ. ಆದರೆ ಸಾರ್ವಜನಿಕ ಆಕ್ರೋಶ ಪಂಜಾಬ್‌ಗೆ ಸೀಮಿತವಾದಂತಿದೆ. ದೆಹಲಿ ಪ್ರಕರಣದ ನಂತರವೂ ಸಾರ್ವಜನಿಕ ಸಾರಿಗೆಗಳಲ್ಲಿ ಮಹಿಳೆಯರ ಮೇಲೆ ಕಿರುಕುಳ ಪ್ರಕರಣಗಳು ಮುಂದುವರಿದೇ ಇವೆ. ರೈಲುಗಳಿಂದ ಹೊರದಬ್ಬುವ ಪ್ರಕರಣಗಳೂ ನಡೆದಿವೆ. ಈ ಸರಣಿಯಲ್ಲಿ , ದೆಹಲಿಯ ಉಬರ್ ಕ್ಯಾಬ್ ಚಾಲಕನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣ ಇತ್ತೀಚಿನದು. ಈ ಪ್ರಕರಣದಲ್ಲಿ ಉಬರ್ ಕ್ಯಾಬ್ ಸೇವೆಯನ್ನೇ ದೆಹಲಿ ಸರ್ಕಾರ ನಿಷೇಧಿಸಿತು. ಆದರೆ ಇಂತಹದ್ದೇ ಕಾನೂನು ಕ್ರಮವನ್ನು ಬಾದಲ್ ಕುಟುಂಬದ ಸಾರಿಗೆ ಸಂಸ್ಥೆ ವಿರುದ್ಧವೂ ಏಕೆ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿರುವುದು ಸಹಜವಾದದ್ದು. ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗಬೇಕು. ಸಂತ್ರಸ್ತರಿಗೆ ಹಾನಿ ತುಂಬಿಕೊಡಲು ನೀಡಬೇಕಾದ ಭಾರಿ ಮೊತ್ತದಿಂದಾಗಿ ಅಪರಾಧ ಎಸಗುವ ಕಂಪೆನಿಗಳು ಅತ್ಯಂತ ಮುಂದುವರಿದ ರಾಷ್ಟ್ರಗಳಲ್ಲಿ ಮುಳುಗಿಹೋದಂತಹ ನಿದರ್ಶನಗಳನ್ನು ನಾವು ನೆನಪಿಸಿಕೊಳ್ಳಬೇಕು. ಇಂತಹ ಪ್ರಕರಣಗಳು ಮರುಕಳಿಸದಿರಲು ಕಠಿಣ ಕಾನೂನು ಕ್ರಮಗಳು ಅಗತ್ಯ. ಇಲ್ಲಿ ಅನ್ಯಾಯಕ್ಕೊಳಗಾಗಿರುವ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡಲು ಸರ್ಕಾರ ಕಾಳಜಿಯನ್ನು ಪ್ರದರ್ಶಿಸಬೇಕು. ಹಾಗೆಯೇ ಇಂತಹ ಪ್ರಕರಣಗಳನ್ನು ತಡೆಯಲು ಕಂಡಕ್ಟರ್, ಚಾಲಕ ಹಾಗೂ ಕ್ಲೀನರ್‌ಗಳ ನೇಮಕ ಮಾಡಿಕೊಳ್ಳುವಾಗಲೇ ಅವರ ಹಿನ್ನೆಲೆಗಳ ಸೂಕ್ತ ಪರಾಮರ್ಶೆ ಹಾಗೂ ಮೌಲ್ಯಮಾಪನ ಅಗತ್ಯ. ಸೂಕ್ತ ತರಬೇತಿ ನೀಡುವುದೂ ಕಡ್ಡಾಯವಾಗಬೇಕು. ಜೊತೆಗೆ ಇಂತಹ ಘಟನೆಗಳು ಕಣ್ಣೆದುರೇ ನಡೆದಾಗ ಸಾರ್ವಜನಿಕರು ಮೂಕಪ್ರೇಕ್ಷಕರಾಗಿ ಉಳಿಯಬಾರದು. ಆಧುನಿಕ ಸಮಾಜದಲ್ಲಿ ಕಡಿಮೆಯಾಗುತ್ತಿರುವ ಸಮುದಾಯ ಪ್ರಜ್ಞೆ ಜಾಗೃತಗೊಳ್ಳಬೇಕಾದುದು ಅತ್ಯವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.