ಸ್ಮಾರ್ಟ್‌ ಸಿಟಿ ಕನಸು ಜಾರಿಗೆ ಬೇಕು ಬದ್ಧತೆ ಮುಂದಿನ ಕೆಲವು ವರ್ಷಗಳಲ್ಲಿ ದೇಶದಾದ್ಯಂತ ಒಟ್ಟು 100 ‘ಸ್ಮಾರ್ಟ್ ಸಿಟಿ’ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರತಿಯೊಂದು ರಾಜ್ಯದಲ್ಲೂ ಕನಿಷ್ಠ ಒಂದು ನಗರವಾದರೂ ಒಳಗೊಳ್ಳುವಂತೆ, ಪ್ರತಿಯೊಂದು ಸ್ಮಾರ್ಟ್‌ ಸಿಟಿ ನಿರ್ಮಾಣಕ್ಕೆ ಪ್ರತಿವರ್ಷ ₹ 100 ಕೋಟಿ ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಸರ್ಕಾರಿ ಮತ್ತು ಖಾಸಗಿ ಜಂಟಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಈ ಸ್ಮಾರ್ಟ್‌ ಸಿಟಿಗಳಲ್ಲಿ ಸಾರಿಗೆ, ದೂರಸಂಪರ್ಕ, ತ್ಯಾಜ್ಯ ನಿರ್ವಹಣೆ ಸಹಿತ ಎಲ್ಲ ಮೂಲ ಸೌಕರ್ಯಗಳನ್ನೂ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ನಿರ್ವಹಿಸಲಾಗುವುದು. ಈಗ ಇರುವ ಎರಡನೇ ಹಂತದ ನಗರಗಳನ್ನೇ ಇದಕ್ಕಾಗಿ ಆಯ್ಕೆ ಮಾಡಿಕೊಂಡು, ಸ್ವಚ್ಛ, ಸುರಕ್ಷಿತ ಮತ್ತು ಆರೋಗ್ಯಕರ ಪರಿಸರವನ್ನು ಆ ನಗರಗಳ ಜನರಿಗೆ ಒದಗಿಸಲಾಗುವುದು ಎಂದು ಕೇಂದ್ರ ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದೆ. ಈ ವರ್ಷ 20 ಹಾಗೂ ಮುಂದಿನ ಎರಡು ವರ್ಷಗಳಲ್ಲಿ ಪ್ರತಿವರ್ಷ 40 ನಗರಗಳನ್ನು ಇದಕ್ಕಾಗಿ ಗುರುತಿಸಬೇಕಿದೆ. ಕೇಂದ್ರ ಸರ್ಕಾರ ಈ ನಗರಗಳನ್ನು ಆಯ್ಕೆ ಮಾಡಿದ ಬಳಿಕ ಸ್ಮಾರ್ಟ್‌ ಸಿಟಿ ಯೋಜನೆಯನ್ನು ಜಾರಿಗೊಳಿಸುವ ಪೂರ್ಣ ಹೊಣೆಗಾರಿಕೆ ರಾಜ್ಯ ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳದ್ದು. ಈ ಸ್ಮಾರ್ಟ್‌ ಸಿಟಿಗಳಿಗೆ ಬಂಡವಾಳ ಹೂಡುವ ಖಾಸಗಿ ಸಂಸ್ಥೆಗಳ ಜತೆಗೆ ರಾಜ್ಯ ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳೇ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಸ್ಮಾರ್ಟ್‌ ಸಿಟಿ ನಿರ್ಮಾಣಕ್ಕೆ ಬೇಕಾದ ಉಳಿದ ಬಂಡವಾಳವನ್ನು ಖಾಸಗಿ ಸಂಸ್ಥೆಗಳು ಹೂಡಬೇಕಿದೆ. ಈಗಾಗಲೆ ಸಿಂಗಪುರ, ಜಪಾನ್‌, ಅಮೆರಿಕ, ಸ್ಪೇನ್‌, ಚೀನಾ ಮತ್ತು ಜರ್ಮನಿ ಮುಂತಾದ ದೇಶಗಳು ಹಾಗೂ ಅಲ್ಲಿನ ಖಾಸಗಿ ಸಂಸ್ಥೆಗಳು ಈ ಯೋಜನೆಯ ಜಾರಿಯಲ್ಲಿ ಆಸಕ್ತಿ ತೋರಿಸಿರುವುದು ಮಹತ್ವದ ಸಂಗತಿ. ದಿನೇ ದಿನೇ ಹೆಚ್ಚುತ್ತಿರುವ ಜನರ ವಲಸೆಯಿಂದಾಗಿ, ನಗರಗಳ ಜನಸಂಖ್ಯೆ ತೀವ್ರವಾಗಿ ಏರುತ್ತಿದ್ದು, ಕನಿಷ್ಠ ನಾಗರಿಕ ಸೌಲಭ್ಯಗಳಿಲ್ಲದೆ ಜನಜೀವನ ಅಸಹನೀಯವಾಗುತ್ತಿದೆ. ಸಾರಿಗೆ ಸಂಪರ್ಕ ಮತ್ತು ಮೂಲ ಸೌಕರ್ಯಗಳ ಕೊರತೆಯಲ್ಲದೆ, ಅತೀವ ಒತ್ತಡದ ಬದುಕು ನಗರದ ಜನರ ಆರೋಗ್ಯವನ್ನೂ ನುಂಗಿ ನೊಣೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಸಿಟಿಗಳನ್ನು ಸ್ಥಾಪಿಸುವ ಯೋಜನೆ ಸ್ವಾಗತಾರ್ಹ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ‘ಜೆನರ್ಮ್‌’ ಯೋಜನೆಯ ಮೂಲಕ ಆಯ್ದ ನಗರಗಳ ಮೂಲಸೌಲಭ್ಯಗಳನ್ನು ಉನ್ನತೀಕರಿಸುವ ಕೆಲಸ ನಡೆದಿತ್ತು. ಈಗಿನ ಸ್ಮಾರ್ಟ್‌ ಸಿಟಿ ಯೋಜನೆ ಅದರದ್ದೇ ಮುಂದುವರಿದ ಭಾಗವಾದರೂ, ಹೆಚ್ಚು ಸುಧಾರಿತ ಮತ್ತು ಆಕರ್ಷಕವಾದ ಯೋಜನೆ ಎನ್ನಬಹುದು. ಆದರೆ ವಿಳಂಬ ನೀತಿಯಿಂದಾಗಿ ಜೆನರ್ಮ್‌ ಯೋಜನೆಯ ಜಾರಿ ನಿರೀಕ್ಷಿಸಿದಷ್ಟು ಸಮರ್ಪಕವಾಗಿ ನಡೆಯಲಿಲ್ಲ. ಈಗ ಎನ್‌ಡಿಎ ಸರ್ಕಾರ ತನ್ನ ಬಜೆಟ್‌ನಲ್ಲಿ 100 ಸ್ಮಾರ್ಟ್‌ ಸಿಟಿಗಳ ನಿರ್ಮಾಣಕ್ಕೆ ಒಟ್ಟು 48 ಸಾವಿರ ಕೋಟಿ ರೂಪಾಯಿಗಳ ವೆಚ್ಚವನ್ನು ನಿಗದಿ ಮಾಡಿದೆ. ಯೋಜನೆಗೆ ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮಗಳನ್ನೂ ಸಡಿಲಿಸಿದೆ. ಪ್ರಸಕ್ತ ದೇಶದ ಜನಸಂಖ್ಯೆಯಲ್ಲಿ ಶೇಕಡ 32ರಷ್ಟು ಮಂದಿ ನಗರಗಳಲ್ಲೇ ವಾಸಿಸುತ್ತಿದ್ದಾರೆ. 2050ರ ಹೊತ್ತಿಗೆ ಈ ಪ್ರಮಾಣ ಶೇಕಡ 50ಕ್ಕೆ ಏರಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ನಗರ ಜೀವನದ ಒತ್ತಡಗಳನ್ನು ಸಹ್ಯವಾಗಿಸಬಲ್ಲ ಯೋಜನೆಯ ಜಾರಿ ಅತ್ಯಂತ ತುರ್ತಾಗಿ ಆಗಬೇಕಿದೆ. ದೇಶದ ಒಟ್ಟು ಆಂತರಿಕ ಉತ್ಪಾದನೆಯಲ್ಲಿ ನಗರಗಳ ಪಾಲು ಶೇಕಡ 60ರಷ್ಟು ಇದ್ದರೂ, ನಗರಗಳ ಅಭಿವೃದ್ಧಿಗೆ ಒಟ್ಟು ಆಂತರಿಕ ಉತ್ಪಾದನೆಯ ಶೇಕಡ 0.7ರಷ್ಟನ್ನು ಮಾತ್ರ ನಾವು ಬಳಸುತ್ತಿದ್ದೇವೆ ಎನ್ನುವುದು ಪರಿಸ್ಥಿತಿಯ ವ್ಯಂಗ್ಯವೂ ಹೌದು. ಸ್ಮಾರ್ಟ್‌ ಸಿಟಿಗಳ ನಿರ್ಮಾಣದ ಮೂಲಕ, ಮಹಾನಗರಗಳ ಮೇಲಿನ ಅನಾರೋಗ್ಯಕರ ಒತ್ತಡವನ್ನೂ ಕಡಿಮೆ ಮಾಡಬಹುದು. ಜಾರಿಯ ಹಂತದಲ್ಲಿ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ಪಾತ್ರವನ್ನು ಎಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲಿವೆ ಎನ್ನುವುದರ ಮೇಲೆ ಈ ಮಹತ್ವಾಕಾಂಕ್ಷೆಯ ಯೋಜನೆಯ ಯಶಸ್ಸು ನಿಂತಿದೆ. ಹೆಚ್ಚುತ್ತಿರುವ ನಗರೀಕರಣ ಸುಸ್ಥಿರ ಅಭಿವೃದ್ಧಿಗೆ ಒಡ್ಡಿರುವ ಸವಾಲುಗಳನ್ನು ಎದುರಿಸುವಲ್ಲಿ ಅಲ್ಲಿನ ನಾಗರಿಕರ ಪಾತ್ರವೂ ಮಹತ್ವದ್ದು. ಅವರನ್ನೂ ಈ ಯೋಜನೆಯ ಜಾರಿಯಲ್ಲಿ ಒಗ್ಗೂಡಿಸಿ ದುಡಿಸಬೇಕಾದ ಹೊಣೆ ಸರ್ಕಾರದ್ದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.