ಪುನರ್ನಿರ್ಮಾಣದ ಸವಾಲು ಸಂವೇದನಾಶೀಲತೆ ಇರಲಿ ಭೂಕಂಪದಿಂದ ನಲುಗಿರುವ ನೇಪಾಳದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿರುವ ವಿದೇಶಿ ಪರಿಹಾರ ತಂಡಗಳು ಅವರವರ ರಾಷ್ಟ್ರಗಳಿಗೆ ಹಿಂದಿರುಗಬೇಕೆಂದು ನೇಪಾಳದ ವಾರ್ತಾ ಸಚಿವರು ತಾಕೀತು ಮಾಡಿದ್ದಾರೆ. ಏಪ್ರಿಲ್ 25ರಂದು ನೇಪಾಳದಲ್ಲಿ ಸಂಭವಿಸಿದ ಭಾರಿ ಭೂಕಂಪದ ನಂತರ 34 ದೇಶಗಳ 4599 ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದಾರೆ. ತುರ್ತು ವೈದ್ಯಕೀಯ ಚಿಕಿತ್ಸೆ, ಆಹಾರ ಮತ್ತಿತರ ಅಗತ್ಯ ವಸ್ತುಗಳ ವಿತರಣೆ ಕಾರ್ಯಗಳು ನಡೆದಿವೆ. ಬದುಕಿರುವವರಿಗಾಗಿ ಶೋಧ ಹಾಗೂ ರಕ್ಷಣೆ ಕಾರ್ಯಾಚರಣೆ ಈಗ ಆದ್ಯತೆಯ ಸಂಗತಿಯಲ್ಲ. ಈಗೇನಿದ್ದರೂ ಪರಿಹಾರ ಹಾಗೂ ಪುನರ್ ನಿರ್ಮಾಣದ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯಬೇಕಿದೆ. ದೂರದ ಗುಡ್ಡಗಾಡು ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಬೇಕಾದ ಸವಾಲು ನೇಪಾಳ ಸರ್ಕಾರದ ಮುಂದಿದೆ. ಈಗ ಭಾರತದ ‘ಆಪರೇಷನ್ ಮೈತ್ರಿ’ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದೆ. ಆದರೆ ಈ ಪರಿಹಾರ ಕಾರ್ಯಾಚರಣೆ ಭಾರತದ ಬಲ ಪ್ರದರ್ಶನದ ಕಾರ್ಯಾಚರಣೆಯಾಯಿತು ಎಂಬಂಥ ಟೀಕೆಗಳಿಗೂ ಗುರಿಯಾಗಬೇಕಾದದ್ದು ವಿಪರ್ಯಾಸ. ನಿಜವಾದ ಕೆಲಸಕ್ಕಿಂತ ಪ್ರಚಾರವೇ ಮೇಲುಗೈ ಪಡೆದ ಬಗ್ಗೆ ಅಸಮಾಧಾನಗಳು ವ್ಯಕ್ತವಾಗಿವೆ. ಭಾರತದ ‘ದೊಡ್ಡಣ್ಣನ ಧೋರಣೆ’, ನೇಪಾಳಿಗರ ಆತ್ಮಾಭಿಮಾನಕ್ಕೆ ಪೆಟ್ಟು ನೀಡಿದೆ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟ ಭಾವನೆಗಳಲ್ಲಿ ವ್ಯಕ್ತವಾಗಿರುವುದು ಸ್ಪಷ್ಟ. ನೇಪಾಳಕ್ಕೆ ಪರಿಹಾರ ತಂಡಗಳನ್ನು ಕಳಿಸಿದ ಭಾರತದ ಉದ್ದೇಶಗಳನ್ನು ಸಂಶಯಿಸಲಾಗುವುದಿಲ್ಲ. ಹಾಗೆಯೇ ಭಾರತದ ಸಶಸ್ತ್ರಪಡೆಗಳು ನೀಡಿದ ನೆರವು ಕೂಡ ದೊಡ್ಡದೇ. ಆದರೆ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ರೀತಿಯಲ್ಲಿ ಇವು ಬಿಂಬಿತವಾದದ್ದು ಅಸೂಕ್ಷ್ಮವಾದದ್ದು. ಅದೂ ಎಷ್ಟರಮಟ್ಟಿಗೆ ಎಂದರೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕವೇ ನೇಪಾಳಿ ಪ್ರಧಾನಿಗೆ ಭೂಕಂಪದ ಬಗ್ಗೆ ಅರಿವಾಗಿದ್ದು ಎಂಬಷ್ಟು ಮಟ್ಟಿಗೆ ಭಾರತೀಯ ಮಾಧ್ಯಮಗಳು ಈ ದುರಂತದ ಕುರಿತಾಗಿ ವರದಿ ಮಾಡಿದ್ದವು. ಆದರೆ 34 ದೇಶಗಳ ರಕ್ಷಣಾ ಕಾರ್ಯಕರ್ತರು ನೇಪಾಳದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬಂತಹ ವಾಸ್ತವ ಸಂಗತಿಯನ್ನು ನಾವು ಮರೆಯುವಂತಿಲ್ಲ. ದುರಂತದ ಸಂದರ್ಭದಲ್ಲೂ ದೊಡ್ಡಣ್ಣನ ರೀತಿಯಲ್ಲಿ ಅನುಗ್ರಹಪೂರ್ವಕವಾದ ಮಾತುಗಳು ಘನತೆಯನ್ನು ಕುಗ್ಗಿಸುವಂತಹದ್ದು. ಭಾರತದ ನೆರವು ಸಕಾಲಿಕವಾದುದಾಗಿತ್ತು. ಸದುದ್ದೇಶದಿಂದಲೂ ಕೂಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ವಿವರವಾದ ವರದಿಗಳನ್ನು ನೀಡುವುದು ಮಾಧ್ಯಮದ ಕೆಲಸವೂ ಹೌದು. ಆದರೆ, ದಿನದ 24 ಗಂಟೆಯೂ ಎಲೆಕ್ಟ್ರಾನಿಕ್ ಮಾಧ್ಯಮಗಳು ವರದಿ ನೀಡುವ ಈ ಕಾಲದಲ್ಲಿ ಸಂಯಮದ ಎಲ್ಲೆಗಳನ್ನು ಮೀರುವುದೂ ಮಾಮೂಲಾಗಿಬಿಟ್ಟಿದೆ. ವಿನಾಶದ ವರದಿಗಾರಿಕೆ ‘ರಿಯಾಲಿಟಿ ಷೋ’ಗಳಂತಾಗುವುದು ಅಸೂಕ್ಷ್ಮತೆಯ ಪ್ರತೀಕ. ಇದು ಉದ್ದೇಶಪೂರ್ವಕವಾಗಿಲ್ಲದಿರಬಹುದು. ಆದರೆ ಸಂವೇದನಾಶೀಲತೆಯ ಕೊರತೆಯನ್ನು ಇಂತಹ ವರದಿಗಾರಿಕೆ ವ್ಯಕ್ತಪಡಿಸುತ್ತದೆ. 7500ಕ್ಕೂ ಹೆಚ್ಚು ಜನರ ಜೀವಗಳನ್ನು ಬಲಿ ತೆಗೆದುಕೊಂಡ ನೇಪಾಳದ ಭೂಕಂಪದಿಂದಾಗಿರುವ ಹಾನಿ ಬಹು ದೊಡ್ಡದು ಎಂಬುದನ್ನು ಮರೆಯುವಂತಿಲ್ಲ. ಹಾಗೆಯೇ ಮನೆಮಠ, ಆಸ್ತಿಪಾಸ್ತಿ ಕಳೆದುಕೊಂಡವರು ಭಾವನಾತ್ಮಕವಾಗಿ ಅನುಭವಿಸುವ ಸಂಕಷ್ಟವೂ ಅಪಾರ. ಭಾರಿ ಮಿಲಿಟರಿ ಹಾಗೂ ಸರಕು ಸಾಗಣೆ ವಿಮಾನಗಳನ್ನು ನಿರ್ವಹಿಸುವಷ್ಟೂ ಕಠ್ಮಂಡು ವಿಮಾನ ನಿಲ್ದಾಣ ಸಶಕ್ತವಾಗಿಲ್ಲ. ನಿರ್ವಹಣೆಯ ಸಾಮರ್ಥ್ಯವೂ ಸೀಮಿತವಾದದ್ದು. ಇಷ್ಟೆಲ್ಲಾ ಮಿತಿಗಳ ನಡುವೆ, ನೆರವಿನ ಸಾಮಗ್ರಿಗಳ ವಿಲೇವಾರಿಗೂ ಇದ್ದಂತಹ ಅಡೆತಡೆಗಳ ನಿವಾರಣೆಗೆ ಯತ್ನಿಸಲಾಗುತ್ತಿದೆ. ವಿಶ್ವಸಂಸ್ಥೆಯ ದೂರುಗಳ ನಂತರ ಕಸ್ಟಮ್ಸ್ ಮತ್ತಿತರ ಅಧಿಕಾರಶಾಹಿ ಅಡೆತಡೆಗಳನ್ನು ಸರಿಪಡಿಸುವ ಪ್ರಯತ್ನ ಸಾಗಿದೆ. ದಕ್ಷ ಆಡಳಿತದ ಕೊರತೆಯಿಂದಾಗಿ ಸ್ಥಳೀಯ ಮಟ್ಟಗಳಲ್ಲಿ ಮೂಲ ಸೌಕರ್ಯಗಳು ಸೃಷ್ಟಿಯಾಗಿಲ್ಲ. ಇನ್ನು ನೇಪಾಳದಲ್ಲಿ ಸಂವಿಧಾನ ಬರವಣಿಗೆ ಯೋಜನೆ ಆರಂಭವಾದದ್ದು 2008ರಲ್ಲಿ. ಈಗಲೂ ಈ ಕಾರ್ಯ ಪೂರ್ಣಗೊಳಿಸಲಾಗಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲೇ ಭೂಕಂಪದಿಂದ ವಿನಾಶವಾಗಿರುವುದನ್ನೆಲ್ಲಾ ಮರಳಿ ಕಟ್ಟಬೇಕಿದೆ. ಈ ಪುನರ್ನಿರ್ಮಾಣ ಹಾಗೂ ಪುನರ್ವಸತಿಯ ಹಂತ ಅಲ್ಪಾವಧಿಯ ಪ್ರಕ್ರಿಯೆಯಲ್ಲ. ದೀರ್ಘಾವಧಿಯ, ಯೋಜಿತ ಪ್ರಕ್ರಿಯೆಗಾಗಿ ಈಗಲೇ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂದರ್ಭದಲ್ಲಿ ನೆರವು ನೀಡುವ ರಾಷ್ಟ್ರಗಳು ಸಂವೇದನಾಶೀಲತೆ ಪ್ರದರ್ಶಿಸುವುದು ಅಗತ್ಯ. ‘ಬಳಸಿ ಬಿಸಾಡಿದ ವಸ್ತುಗಳನ್ನು ನೆರವಿನ ರೂಪದಲ್ಲಿ ನಮಗೆ ಕಳುಹಿಸುವುದು ಬೇಡ’ ಎಂದು ಭಾರತೀಯ ಅಧಿಕಾರಿಗಳಿಗೆ ನೇಪಾಳದ ಅಧಿಕಾರಿಗಳು ಹೇಳಿದ್ದಾರೆ. ಸಂತ್ರಸ್ತರಿಗೆ ನೆರವು ನೀಡುವಂತಹದ್ದು ಮಾನವೀಯ ಕೆಲಸ ಎಂಬುದನ್ನು ಭಾರತದ ಮಾಧ್ಯಮಗಳು ಹಾಗೂ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.