ಪಾಲಿಕೆಗೆ ಚುನಾವಣೆ: ಕೊನೆಗೂ ಸರ್ಕಾರಕ್ಕೆ ಆಗಿದೆ ಜ್ಞಾನೋದಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಮೂರು ತಿಂಗಳ ಒಳಗೆ ಚುನಾವಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ವಾಗ್ದಾನ ಮಾಡಿದೆ. ಬಿಬಿಎಂಪಿಯನ್ನು ವಿಭಜಿಸುವ ಉಸಾಬರಿಗೆ ಈಗ ಹೋಗದೆ ಹಾಲಿ ಸ್ವರೂಪದಲ್ಲೇ ಚುನಾವಣೆ ನಡೆಸುವುದಾಗಿ ಒಪ್ಪಿಕೊಂಡಿದೆ. ದೇಶದ ಅತ್ಯುನ್ನತ ನ್ಯಾಯಸ್ಥಾನದಲ್ಲಿ ಆಗಬಹುದಾಗಿದ್ದ ಮುಜುಗರದಿಂದ ಸದ್ಯಕ್ಕೆ ತಪ್ಪಿಸಿಕೊಂಡಿದೆ. ಆದರೆ ಅದಕ್ಕಾಗಿ ಇಷ್ಟೆಲ್ಲ ಪ್ರಹಸನದ ಅಗತ್ಯ ಇರಲಿಲ್ಲ. ಕಾನೂನಿಗೆ ಅನುಗುಣವಾಗಿ ಸಕಾಲಕ್ಕೆ ಚುನಾವಣೆ ನಡೆಸುವ ಬದ್ಧತೆಯನ್ನು ಪ್ರದರ್ಶಿಸಿದ್ದರೆ ಸಾಕಿತ್ತು. ಅದನ್ನು ಬಿಟ್ಟು ಚುನಾವಣೆ ಮುಂದೂಡಲು ಅದು ನಾನಾ ತಂತ್ರಗಳ ಮೊರೆ ಹೋಯಿತು. ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಕೊನೆಗೊಳ್ಳಲು ಬರಿ ಐದು ದಿನ ಇದ್ದಾಗ ಪಾಲಿಕೆಯನ್ನೇ ವಜಾ ಮಾಡಿತು. ಆಡಳಿತಾಧಿಕಾರಿಯನ್ನು ನೇಮಿಸಿತು. ಬಿಬಿಎಂಪಿಯನ್ನು ಎರಡು ಅಥವಾ ಮೂರು ಭಾಗಗಳಾಗಿ ವಿಭಜಿಸುವುದಕ್ಕಾಗಿ ತರಾತುರಿಯಲ್ಲಿ ಮಸೂದೆಯೊಂದನ್ನು ಸಿದ್ಧಪಡಿಸಿ ಅದಕ್ಕೆ ಅನುಮೋದನೆ ಪಡೆಯಲು ವಿಧಾನ ಮಂಡಲದ ತುರ್ತು ಅಧಿವೇಶನ ಕರೆಯಿತು. ಆದರೆ ತಮಗಿರುವ ಬಹುಮತದ ಬಲದಿಂದ ವಿರೋಧ ಪಕ್ಷಗಳು ವಿಧಾನ ಪರಿಷತ್ತಿನಲ್ಲಿ ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಿದಾಗ ಸರ್ಕಾರದ ಆತುರಕ್ಕೆ ತಡೆ ಬಿದ್ದಂತಾಯಿತು. ಅಧಿವೇಶನಕ್ಕಾಗಿ ತೆರಿಗೆದಾರರ ಕೋಟಿಗಟ್ಟಲೆ ಹಣ ವಿನಾಕಾರಣ ಖರ್ಚಾಗಿದ್ದು ಬಿಟ್ಟರೆ ಅದರಿಂದ ಬಿಡಿಗಾಸಿನ ಪ್ರಯೋಜನವೂ ಆಗಲಿಲ್ಲ. ಅತ್ತ ಹೈಕೋರ್ಟ್‌ನಲ್ಲಿ ವಿಧಿಯಿಲ್ಲದೆ, ಆರು ತಿಂಗಳ ಒಳಗಾಗಿ ಚುನಾವಣೆ ನಡೆಸುವುದಾಗಿ ವಿಭಾಗೀಯ ಪೀಠಕ್ಕೆ ಭರವಸೆ ನೀಡುವ ಮೂಲಕ ಒಂದಿಷ್ಟು ಸಮಯ ಪಡೆದುಕೊಳ್ಳಲು ಸರ್ಕಾರ ಸಫಲವಾಗಿತ್ತು. ಈ ಎಲ್ಲ ಬೆಳವಣಿಗೆ ಮತ್ತು ಸರ್ಕಾರದ ಪ್ರತಿಯೊಂದು ಹೆಜ್ಜೆ ಕೂಡ ಅನುಮಾನಕ್ಕೆ ಎಡೆ ಮಾಡಿಕೊಡುವಂತೆಯೇ ಇತ್ತು. ಪಾಲಿಕೆ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಭಯಪಡುತ್ತಿದೆ ಎಂಬ ಭಾವನೆಯಂತೂ ಸಾರ್ವತ್ರಿಕವಾಗಿ ಬೆಳೆದಿತ್ತು. ಜತೆಗೆ ಇಲ್ಲಿ, ಚುನಾವಣೆ ನಡೆಸುವ ಹೊಣೆ ಹೊತ್ತ ರಾಜ್ಯ ಚುನಾವಣಾ ಆಯೋಗದ ನಡವಳಿಕೆ ಕೂಡ ಶಂಕಾಸ್ಪದವಾಗಿಯೇ ಇತ್ತು. ಮೇ 31ರೊಳಗೆ ಪಾಲಿಕೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ ತೀರ್ಪಿನ ಅಸ್ತ್ರ ಕೈಯಲ್ಲಿದ್ದರೂ ಬಳಸದೆ ಅದು ವಿಳಂಬ ತಂತ್ರ ಅನುಸರಿಸಿತು. ಸರ್ಕಾರದ ಮುಲಾಜು ಕಾಯುವ ರೀತಿ ನಡೆದುಕೊಂಡಿತು. ಪ್ರಜೆಗಳ ಹಕ್ಕು ಕಾಯುವುದು ಅದರ ಕರ್ತವ್ಯವೇ ಹೊರತು ಯಾರದೋ ಒತ್ತಡಕ್ಕೆ ಮಣಿಯುವುದಲ್ಲ. ಅದು ತನ್ನ ಕೆಲಸವನ್ನು ಸರಿಯಾಗಿ ನಿಭಾಯಿಸಿದ್ದರೆ ಜನ ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತುವ ಪರಿಸ್ಥಿತಿ ಬರುತ್ತಿರಲಿಲ್ಲ. ಈ ವಿಚಾರದಲ್ಲಿ ಆಯೋಗ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ಇದೇನೇ ಇದ್ದರೂ, ಇನ್ನು ಮೂರು ತಿಂಗಳಲ್ಲಿ ಬೆಂಗಳೂರು ಪಾಲಿಕೆಗೆ ಚುನಾವಣೆ ನಡೆದು ಜನಪ್ರತಿನಿಧಿಗಳ ಕೈಗೆ ಆಡಳಿತ ಬರುತ್ತದೆ ಎನ್ನುವುದು ಸ್ವಾಗತಾರ್ಹ ವಿದ್ಯಮಾನ. ಏಕೆಂದರೆ ‘ಸರಿಯೋ- ತಪ್ಪೋ, ಒಳ್ಳೆಯದೋ- ಕೆಟ್ಟದೋ’, ಚುನಾವಣೆ ಜನತಂತ್ರದ ಜೀವಾಳ. ಆದರೆ, ಲೋಕಸಭೆ, ವಿಧಾನಸಭೆಗಳ ಚುನಾವಣೆ ಬಗ್ಗೆ ಎಲ್ಲಿಲ್ಲದ ಆತುರ, ಅತ್ಯುತ್ಸಾಹ ತೋರಿಸುವ ಅಧಿಕಾರಾರೂಢ ರಾಜಕಾರಣಿಗಳು, ರಾಜಕೀಯ ಪಕ್ಷಗಳಿಗೆ ಮಾತ್ರ ಪಂಚಾಯತ್‌ರಾಜ್ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು, ಸಹಕಾರ ಸಂಘಗಳ ಚುನಾವಣೆ ಎಂದರೆ ಒಂದು ಬಗೆಯ ಅಲರ್ಜಿ. ಏನಾದರೂ ನೆಪ ಹುಡುಕಿ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಲೇ ಇರುವುದು ಹೊಸದೇನಲ್ಲ. ಸರ್ಕಾರಿ ಅಧಿಕಾರಿಗಳ ಮೂಲಕ ತಮ್ಮ ದರ್ಬಾರ್ ನಡೆಸುವುದು ಎಂದರೆ ಇವರಿಗೆಲ್ಲ ಪರಮ ಖುಷಿ. ಇಂಥ ಧೋರಣೆ ಸರಿಯಲ್ಲ. ಈ ಪ್ರವೃತ್ತಿಗೆ ಪರಿಣಾಮಕಾರಿ ಔಷಧ ಎಂದರೆ, ರಾಜ್ಯ ಚುನಾವಣಾ ಆಯೋಗಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಿ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂಪೂರ್ಣ ಅಧಿಕಾರವನ್ನು ಅದಕ್ಕೆ ಒಪ್ಪಿಸುವುದು. ಜತೆಗೆ, ಸಕಾಲಕ್ಕೆ ಚುನಾವಣೆ ನಡೆಸಲು ಸಹಕರಿಸದ ರಾಜ್ಯಗಳ ಅನುದಾನಕ್ಕೆ ಕತ್ತರಿ ಹಾಕುವುದು. ಇಂಥ ಭಯ ಇರುವುದರಿಂದಲೇ ಈಗ ಪಂಚಾಯಿತಿ ಚುನಾವಣೆಗಳನ್ನು ಮುಂದೂಡುವ ಸಾಹಸಕ್ಕೆ ಸರ್ಕಾರ ಕೈ ಹಾಕುತ್ತಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ವಿಷಯದಲ್ಲೂ ಅದು ಇಷ್ಟೇ ಪ್ರಬುದ್ಧವಾಗಿ ನಡೆದುಕೊಳ್ಳಬೇಕು. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನ ಸರ್ಕಾರಕ್ಕೆ ಎಚ್ಚರಿಕೆಯ ಪಾಠವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.