ರಾಜಕೀಯ ಭಿನ್ನಾಭಿಪ್ರಾಯ ಜಿಎಸ್‌ಟಿಗೆ ಅಡ್ಡಿಯಾಗದಿರಲಿ ಏಕರೂಪದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ (ಜಿಎಸ್‌ಟಿ) ಜಾರಿಗೆ ಸಂಬಂಧಿಸಿದ ಮಸೂದೆಯು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಭಾತ್ಯಾಗದ ಹೊರತಾಗಿಯೂ ಅಂಗೀಕಾರವಾಗುವುದರೊಂದಿಗೆ, ಪ್ರಮುಖ ತೆರಿಗೆ ಸುಧಾರಣೆಯ ಮಾರ್ಗದಲ್ಲಿ ಮೊದಲ ಯಶಸ್ಸು ದೊರೆತಿದೆ. ಈ ಮಹತ್ವಾಕಾಂಕ್ಷೆಯ ತೆರಿಗೆ ಸುಧಾರಣೆಗೆ 12 ವರ್ಷಗಳ ಹಿಂದೆಯೇ ಚಾಲನೆ ನೀಡಲಾಗಿತ್ತು. ಸಂವಿಧಾನದ 122ನೇ ತಿದ್ದುಪಡಿ ಮಸೂದೆಗೆ ಈಗ ರಾಜ್ಯಸಭೆಯ ಅನುಮೋದನೆ ಒಂದೇ ಬಾಕಿ ಉಳಿದಿದೆ. ಮೇ 13ಕ್ಕೆ ಕೊನೆಗೊಳ್ಳಲಿರುವ ಈ ಬಜೆಟ್ ಅಧಿವೇಶನದಲ್ಲೇ ಮಸೂದೆಗೆ ರಾಜ್ಯಸಭೆಯು ಒಪ್ಪಿಗೆ ನೀಡದಿದ್ದಲ್ಲಿ ಮುಂದಿನ ಹಣಕಾಸು ವರ್ಷದಿಂದ (2016-–17) ಈ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಮತ್ತೆ ದೂರವಾಗಲಿದೆ. ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಹೀಗಾಗಿ ಪ್ರತಿಪಕ್ಷಗಳು ರಾಜಕೀಯ ಭಿನ್ನಮತ ಮರೆತು, ಈ ಬಹು ಮುಖ್ಯ ತೆರಿಗೆ ಸುಧಾರಣೆಗೆ ಸಹಕರಿಸಬೇಕಿದೆ. ರಾಜ್ಯ ಸರ್ಕಾರಗಳೂ ಈ ಮಸೂದೆಯನ್ನು ಅಂಗೀಕರಿಸಬೇಕಾಗಿದ್ದು, ಬಹುತೇಕ ಬಿಜೆಪಿ ಸರ್ಕಾರಗಳೇ ಇರುವುದರಿಂದ ಅದೊಂದು ಸಮಸ್ಯೆಯಾಗಲಿಕ್ಕಿಲ್ಲ. ಸ್ವಾತಂತ್ರ್ಯಾ ನಂತರದ ಅತಿ ದೊಡ್ಡ ತೆರಿಗೆ ಸುಧಾರಣಾ ಕ್ರಮ ಇದಾಗಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ), ಜಿಎಸ್‌ಟಿಯು ಶೇ 2 ರಷ್ಟು ಕೊಡುಗೆ ನೀಡಲಿದ್ದು, 2017ರ ಹಣಕಾಸು ವರ್ಷದಲ್ಲಿ ಎರಡಂಕಿಯ ಆರ್ಥಿಕ ವೃದ್ಧಿ ದರ ಸಾಧನೆಗೆ ಸಹಕಾರಿಯಾಗಲಿದೆ. ಇದರಿಂದ ರಾಜ್ಯ ಸರ್ಕಾರಗಳ ಆರ್ಥಿಕತೆಯೂ ಬಲಗೊಳ್ಳಲಿದೆ. 2016ರ ಏಪ್ರಿಲ್ 1ರಿಂದ ಜಾರಿಗೆ ತರಲು ಉದ್ದೇಶಿಸಿರುವ ಈ ವ್ಯವಸ್ಥೆಗೆ ಅಡ್ಡಿಯಾಗಿದ್ದ ಒಂದೊಂದೆ ಕಂಟಕಗಳು ನಿವಾರಣೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಈ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಮುಂದಾಗಿತ್ತು. ಆಗ ಪ್ರಮುಖ ಪ್ರತಿಪಕ್ಷವಾಗಿದ್ದ ಬಿಜೆಪಿ ಮತ್ತು ಅದರ ಆಡಳಿತ ಇದ್ದ ರಾಜ್ಯ ಸರ್ಕಾರಗಳು ಅಸಹಕಾರ ಪ್ರದರ್ಶಿಸಿದ್ದವು. ಇದರಿಂದ ಈ ತೆರಿಗೆ ಸುಧಾರಣೆ ಕ್ರಮ ಜಾರಿ ವಿಳಂಬವಾಯಿತು. ಈಗ ಲೋಕಸಭೆ ಚುನಾವಣೆ ನಂತರ ದೇಶದ ರಾಜಕೀಯದ ಚಿತ್ರಣ ಬದಲಾಗಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಆರ್ಥಿಕ ಸುಧಾರಣಾ ಕ್ರಮಗಳ ಜಾರಿಗೆ ಬದ್ಧತೆ ಪ್ರಕಟಿಸಿದ್ದು ಜಿಎಸ್‌ಟಿ ಜಾರಿಗೂ ಉತ್ಸುಕತೆ ಪ್ರದರ್ಶಿಸುತ್ತಿದೆ. ದೇಶದಾದ್ಯಂತ ಸದ್ಯಕ್ಕೆ ಜಾರಿಯಲ್ಲಿ ಇರುವ ಎಲ್ಲ ಪರೋಕ್ಷ ತೆರಿಗೆಗಳಿಗೆ ಜಿಎಸ್‌ಟಿ ಪರ್ಯಾಯವಾಗಿರಲಿದೆ. ಒಂದಾದ ಮೇಲೊಂದು ತೆರಿಗೆ ವಿಧಿಸುವ ಸದ್ಯದ ಸಂಕೀರ್ಣಮಯ ತೆರಿಗೆ ವ್ಯವಸ್ಥೆ ಯನ್ನು ಹೊಸ ತೆರಿಗೆ ವ್ಯವಸ್ಥೆಯು ಆಮೂ­ಲಾಗ್ರ­ವಾಗಿ ಬದಲಿಸಲಿದೆ. ಜಿಎಸ್‌ಟಿ ಜಾರಿಗೆ ಬರುವುದರಿಂದ ದೇಶದಾದ್ಯಂತ ಗ್ರಾಹಕ ಸರಕು ಮತ್ತು ಸೇವೆಗಳಿಗೆ ಸಮಾನ ಮತ್ತು ಏಕರೂಪದ ಮಾರುಕಟ್ಟೆ ಸೃಷ್ಟಿಯಾಗಲಿದೆ. ಜತೆಗೆ, ಮಾರಾಟ ದರವೂ ಒಂದೇ ಮಟ್ಟದಲ್ಲಿ ಇರಲಿದೆ. ಇದರಿಂದ ವಾಣಿಜ್ಯ ವಹಿವಾಟಿಗೆ ಉತ್ತೇಜನ ದೊರೆತು ತೆರಿಗೆ ತಪ್ಪಿಸುವ ಚಾಳಿ ದೂರವಾಗಿ ತೆರಿಗೆ ಪಾವತಿಯೂ ಹೆಚ್ಚಲಿದೆ. ತೆರಿಗೆ ವ್ಯವಸ್ಥೆಯಲ್ಲಿ ಮನೆಮಾಡಿರುವ ಭ್ರಷ್ಟಾಚಾರಕ್ಕೂ ತಡೆ ಬೀಳಲಿದೆ. ಈ ವ್ಯವಸ್ಥೆಯು ಸರಕುಗಳ ತಯಾರಕರು, ಮಾರಾಟಗಾರರು, ಗ್ರಾಹ­­ಕರು ಮತ್ತು ಸರ್ಕಾರಕ್ಕೂ ಲಾಭದಾ­ಯಕ­ವಾಗಿ ಪರಿಣಮಿಸಲಿದೆ. ಹೊಸ ವ್ಯವಸ್ಥೆಯಡಿ ವರಮಾನ ನಷ್ಟವನ್ನು ತುಂಬಿ ಕೊಡುವ ಭರವಸೆ­ಯನ್ನು ಕೇಂದ್ರ ಸರ್ಕಾರವು ಸಂವಿಧಾನ ತಿದ್ದುಪಡಿಯಲ್ಲಿಯೇ ಸೇರಿ­ಸುವ ಮೂಲಕ ರಾಜ್ಯಗಳ ಶಂಕೆ ದೂರ ಮಾಡಿದೆ. ಈ ಹಿಂದೆ ಕೇಂದ್ರವು ಇಂತಹ ವಾಗ್ದಾನದಿಂದ ಹಿಂದೆ ಸರಿದಿದ್ದು ರಾಜ್ಯಗಳ ಆತಂಕಕ್ಕೆ ಕಾರಣವಾಗಿತ್ತು. ಹೊಸ ತೆರಿಗೆ ವ್ಯವಸ್ಥೆಯಡಿ ಎಲ್ಲ ಬಗೆಯ ಸರಕು ಮತ್ತು ಸೇವೆಗಳು ಬರ­ಲಿದ್ದರೂ, ತೈಲೋತ್ಪನ್ನಗಳು, ತಂಬಾಕು ಮತ್ತು ಆಲ್ಕೊಹಾಲ್‌ಗಳಿಗೆ ವಿನಾಯ್ತಿ ನೀಡಬೇಕು ಎಂಬುದು ರಾಜ್ಯಗಳ ಹಕ್ಕೊತ್ತಾಯವಾಗಿದೆ. ಈ ಸರಕುಗಳನ್ನು ಕೈಬಿಡುವುದರಿಂದ ಜಿಎಸ್‌ಟಿ ವ್ಯವಸ್ಥೆ ಪರಿ­ಪೂರ್ಣವಾಗ­ಲಾರದು. ಹಾಗೆಯೇ ಅಂತರ­ರಾಜ್ಯ ವಹಿವಾಟಿನ ಮೇಲೆ ಮೂಲ ತೆರಿಗೆ ವಿಧಿಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಡದಂತೆಯೂ ಎಚ್ಚರವಹಿ­ಸ­ಬೇಕಾಗಿದೆ. ಮೊದಲ 5 ವರ್ಷಗಳಿಗೆ ರಾಜ್ಯಗಳಿಗೆ ಪರಿಹಾರ ನೀಡುವ ಸಂವಿಧಾನಾತ್ಮಕ ಭರವಸೆಯು ರಾಜ್ಯ­ಗಳ ಆತಂಕ ನಿವಾರಣೆ ಮಾಡಲಿದೆ.ಈ ತೆರಿಗೆ ವ್ಯವಸ್ಥೆಯು ಯಶಸ್ವಿಯಾಗಿ ಜಾರಿಗೆ ಬಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಹೊಸ ರಾಜಕೀಯ ಮತ್ತು ವಿತ್ತೀಯ ಸಹಕಾರ ಏರ್ಪಡ­ಲಿದೆ. ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ವಿಳಂಬ ಮಾಡಿದಷ್ಟೂ ರಾಜ್ಯಗಳ ಹಣಕಾಸು ವ್ಯವಸ್ಥೆಗೆ ಧಕ್ಕೆ ಒದಗಲಿದೆ ಎನ್ನುವ ಕಟು ವಾಸ್ತವವನ್ನು ಕಾಂಗ್ರೆಸ್, ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತಿತರ ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯ ಸರ್ಕಾರಗಳು ಅರ್ಥ ಮಾಡಿಕೊಂಡು ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಸಹಕರಿಸಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.